ಪ್ರವೇಶ ಶುಲ್ಕ ಹೆಚ್ಚಳ ಖಂಡಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 16
ಮಕ್ಕಳ ಪ್ರವೇಶಾತಿ ಶುಲ್ಕ ಇಳಿಸಬೇಕೆಂದು ಆಗ್ರಹಿಸಿ ಗುರುವಾರ ಕೆಲಗೇರಿ ಜೆಎಸ್ಸೆಸ್ ಪಬ್ಲಿಕ್ ಸ್ಕೂಲ್ನ ಪಾಲಕರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಮೂರು ವರ್ಷಗಳಲ್ಲಿಯೇ ಶೇ. 50ರಷ್ಟು ಪ್ರವೇಶಾತಿ ಶುಲ್ಕ ಹೆಚ್ಚಿಸಲಾಗಿದೆ. ಹೆಚ್ಚಿದ ಶುಲ್ಕಕ್ಕೆ ತಕ್ಕಂತೆ ಸೌಲಭ್ಯ ನೀಡುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪಠ್ಯಕ್ರಮ ತೆಗೆದುಕೊಳ್ಳಲು ಸಂಸ್ಥೆಯವರು ನಿಗದಿಪಡಿಸಿದ ಅಂಗಡಿಗಳಿಗೆ ಹೋದರೆ ಅಲ್ಲಿ ಇದ್ದ ದರಕ್ಕಿಂತ ಹೆಚ್ಚಿನ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡುತ್ತಾರೆ. ಈ ಕುರಿತು ಪ್ರಕಾಶಕರಿಗೆ ಸಂಪರ್ಕಿಸಿದಾಗ ಶಾಲೆಯವರು ಕಮೀಶನ್ ತೆಗೆದುಕೊಳ್ಳುತ್ತಾರೆಂದು ನೇರವಾಗಿಯೇ ಹೇಳುತ್ತಾರೆ ಎಂದು ಪಾಲಕರು ಆರೋಪಿಸಿದರು.
ಮಕ್ಕಳಿಗೆ ಸಮರ್ಪಕ ಗುರುತಿನ ಚೀಟಿ, ಯುನಿಫಾರ್ಮ ಸೇರಿದಂತೆ ಮುಂತಾದವುಗಳನ್ನು ಪೂರೈಸುವಲ್ಲಿ ಶಾಲಾ ಆಡಳಿತ ಮಂಡಳಿ ವಿಫಲವಾಗಿದೆ. ಈ ಕುರಿತು ಹಲವಾರು ಬಾರಿ ಪ್ರಾಂಶುಪಾಲರಿಗೆ ಹಾಗೂ ಶಾಲಾ ಸಂಸ್ಥೆಗೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ.
ಆದ್ದರಿಂದ ಸರ್ಕಾರ ಶಾಲೆಗೆ ನೀಡಿರುವ ಜಾಗೆಯನ್ನು ವಶಪಡಿಸಿಕೊಂಡು ಶಾಲೆ ಮುಚ್ಚಬೇಕು. ಇಲ್ಲದಿದ್ದಲ್ಲಿ ಸೂಕ್ತ ರೀತಿಯ ಸೌಲಭ್ಯ ಒದಗಿಸುವಂತೆ ಶಾಲೆ ಆಡಳಿತ ಮಂಡಳಿಗೆ ಸೂಚಿಸಬೇಕೆಂದು ಪಾಲಕರು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪಾಲಕರಾದ ಆರ್.ಎಸ್. ಪಾಟೀಲಕುಲಕರ್ಣಿ, ಸುರೇಶಬಾಬು, ಬೃಂದಾ ಮೆಳವಂಕಿ, ಅಮೃತ ಬೆಳ್ಳೊಳ್ಳಿ, ಕೆಂಪೆಗೌಡ ಪಾಟೀಲ, ವಿಜಯ ದೊಡ್ಡವಾಡ, ದ್ರಾಕ್ಷಾಯಣಿ ರಾಮನಗೌಡರ, ಶಿಲ್ಪಾ ಕಲಾಲ, ವಿಜಯಲಕ್ಷ್ಮಿ ನಲವಡಿ, ಶ್ಯಾಮ ಮಲ್ಲನಗೌಡರ, ಜಿ.ಕೆ. ಸಂಕನಗೌಡರ, ಡಿ.ಜಿ. ಬಾಡಕರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

