ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಕಷ್ಟ!
ವಿಶೇಷ ವರದಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗದ್ದುಗೆ ಏರಬೇಕಾದರೆ ಬಿಜೆಪಿ ಹಾಗೂ ಕಾಂಗ್ರೆಸ್ಗೆ ಪಕ್ಷೇತರ ಅಭ್ಯರ್ಥಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಅಥವಾ ಜೆಡಿಎಸ್ನೊಂದಿಗೆ ಷರತ್ತುಬದ್ಧ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೀಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿರುವ ವಾರ್ಡ್ ನಂ. 63ರ ಸದಸ್ಯ ಮಕ್ತುಮಹುಸೇನ ಯರಗಟ್ಟಿ ಹಾಗೂ ಜೆಡಿಎಸ್ನ 9 ಸದಸ್ಯರಿಗೆ ಎಲ್ಲಿಲ್ಲದ ಬೇಡಿಕೆ. ಕಳೆದ ಅವಧಿಯಲ್ಲಿ ಹು-ಧಾ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫಲವಾಯಿತು. 67 ಸದಸ್ಯರ ಸಂಖ್ಯಾಬಲ ಇರುವ ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುಕ್ಕಾಣಿ ಹಿಡಿಯಲು ಸ್ಪಷ್ಟ ಬಹುಮತಕ್ಕೆ 34 ಸ್ಥಾನಗಳ ಅವಶ್ಯಕತೆ ಇದ್ದು, ಬಿಜೆಪಿ 33 ಸ್ಥಾನಗಳನ್ನು ಮಾತ್ರ ಪಡೆಯುವ ಮೂಲಕ ಅತಂತ್ರ ಸ್ಥಿತಿ ಎದುರಿಸುತ್ತಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪಕ್ಷಗಳಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿಯೇ ಚುನಾಯಿತ ದೊಡ್ಡ ಪಕ್ಷವಾಗಿದ್ದರೂ, ಮೇಯರ್-ಉಪಮೇಯರ್ ಆಯ್ಕೆ ಸಂದರ್ಭದಲ್ಲಿ ಹೆಚ್ಚು ಮತ ಪಡೆಯುವ ಪಕ್ಷದ ಅಭ್ಯರ್ಥಿಗಳು ಅಧಿಕಾರದ ಗದ್ದುಗೆ ಏರುತ್ತಾರೆ. ಹೀಗಾಗಿ ಬಿಜೆಪಿ 33 ಸ್ಥಾನಗಳನ್ನು ಗಳಿಸಿದ್ದರೂ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ಸುಲಭವಾಗಿಲ್ಲ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ?: ಇನ್ನೂ ಕಾಂಗ್ರೆಸ್ 22 ಹಾಗೂ ಜೆಡಿಎಸ್ 9 ಸ್ಥಾನಗಳನ್ನು ಗೆಲುವಲ್ಲಿ ಸಫಲವಾಗಿವೆ. ಒಬ್ಬರು ಕೆಜೆಪಿ ಅಭ್ಯರ್ಥಿ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಕೈ ಜೋಡಿಸಿದಲ್ಲಿ ಪಾಲಿಕೆ ಚುಕ್ಕಾಣಿ ಈ ಪಕ್ಷಗಳ ಹಿಡಿತಕ್ಕೆ ಬರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಕಾಂಗ್ರೆಸ್ ಹಾಗೂ ಜೆಡಿಎಸ್ ಕೈಜೋಡಿಸಿದರೆ ಆ ಪಕ್ಷಗಳ ಸಂಖ್ಯಾಬಲ 31ಕ್ಕೆ ಏರುತ್ತದೆ. ಕೆಜೆಪಿಯ ಒಬ್ಬ ಅಭ್ಯರ್ಥಿಯಿಂದ ಈ ಪಕ್ಷಗಳು 32 ಸ್ಥಾನ ಗಳಿಸಲಿದ್ದು, ಇಬ್ಬರು ಪಕ್ಷೇತರ ಅಭ್ಯರ್ಥಿಗಳಲ್ಲಿ ಒಬ್ಬರು ಸಹಕಾರ ನೀಡಿದರೂ ಸಂಖ್ಯಾಬಲ 33ಕ್ಕೆ ತಲುಪುವುದು. ಇದರೊಂದಿಗೆ ಕಾಂಗ್ರೆಸ್ನ ವಿಧಾನಪರಿಷತ್ ಸದಸ್ಯರಾದ ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಶಾಸಕರಾದ ವಿನಯ ಕುಲಕರ್ಣಿ, ಪ್ರಸಾದ ಅಬ್ಬಯ್ಯ ಹಾಗೂ ವಿಧಾನಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರ ಮತಗಳಿಂದ ಈ ಪಕ್ಷಗಳ ಸಂಖ್ಯಾಬಲ 38ಕ್ಕೆ ಏರುತ್ತದೆ.
ಬಿಜೆಪಿಗೆ 37 ಮತಗಳು: 33 ಸ್ಥಾನಗಳನ್ನು ಗಳಿಸಿರುವ ಬಿಜೆಪಿಗೆ ಆ ಪಕ್ಷದ ಬಂಡುಕೋರ ಅಭ್ಯರ್ಥಿ ಮಲ್ಲಿಕಾರ್ಜುನ ಹೊರಕೇರಿ ಈಗಾಗಲೇ ಮಾತೃ ಪಕ್ಷಕ್ಕೆ ಮರಳಿದ್ದರಿಂದ ಬಿಜೆಪಿ ಬಲ 34ಕ್ಕೆ ತಲುಪಿದೆ. ಕಳೆದ ಬಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನಾಲ್ಕೂ ವಿಧಾನಸಭೆ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದ ಬಿಜೆಪಿ, ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲವು ಸಾಧಿಸುವಲ್ಲಿ ತಿಣುಕಾಡಿತು.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಮತ್ತು ಸಂಸದ ಪ್ರಹ್ಲಾದ ಜೋಶಿ ಅವರ ಮತಗಳು ಸೇರಿದಂತೆ ಬಿಜೆಪಿಗೆ 37 ಮತಗಳು ಮಾತ್ರ ಲಭಿಸುವುದು ನಿಶ್ಚಿತ.
ಬಿಜೆಪಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಇದ್ದ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲೇಬೇಕಿದ್ದಲ್ಲಿ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಮಕ್ತುಮಹುಸೇನ ಯರಗಟ್ಟಿಯನ್ನು ಬುಟ್ಟಿಗೆ ಹಾಕಿಕೊಳ್ಳಲೇಬೇಕು. ಆ ಮೂಲಕ ತನ್ನ ಅದೃಷ್ಟದ ಬಲವನ್ನು 38ಕ್ಕೇರಿಸಿಕೊಂಡು, ಕಾಂಗ್ರೆಸ್-ಜೆಡಿಎಸ್ ಬಲವನ್ನು 37ಕ್ಕೆ ಕುಗ್ಗಿಸಬೇಕು. ಈ ಪ್ರಯತ್ನ ಯಶಸ್ವಿಯಾಗಿ ನಡೆದಾಗ ಮಾತ್ರ ಬಿಜೆಪಿ ಈ ಬಾರಿಯೂ ಪಾಲಿಕೆಯಲ್ಲಿ ತನ್ನ ಅಧಿಕಾರ ಮುಂದುವರೆಸಿಕೊಂಡು ಹೋಗಬಹುದು. ಇಲ್ಲದಿದ್ದರೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಆಡಳಿತ ಬರುವುದರಲ್ಲಿ ಎರಡು ಮಾತಿಲ್ಲ.
ಜೆಡಿಎಸ್ನೊಂದಿಗೆ ಅವಕಾಶ: ಜೆಡಿಎಸ್ನೊಂದಿಗೆ ನೇರ ಮಾತುಕತೆ ನಡೆಸುವ ಮೂಲಕ ಸುಲಭವಾಗಿ ಪಾಲಿಕೆ ಅಧಿಕಾರವನ್ನು ಬಿಜೆಪಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಅವಕಾಶವೂ ಇದೆ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಹೊರಕೇರಿ, ಶಾಸಕ ಹಾಗೂ ಸಂಸದರ ಬೆಂಬಲ ಸೇರಿದಂತೆ 37 ಸಂಖ್ಯಾಬಲ ಪಡೆಯುವಲ್ಲಿ ಸಫಲವಾಗಿರುವ ಬಿಜೆಪಿ ಜೆಡಿಎಸ್ನೊಂದಿಗೆ ಕೈ ಜೋಡಿಸಿದರೆ, ಜೆಡಿಎಸ್ನ 9 ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಮತ ಸೇರಿದಂತೆ 47 ಸಂಖ್ಯಾಬಲವನ್ನು ಸುಲಭವಾಗಿ ತಲುಪತ್ತದೆ. ಆಗ ಕಾಂಗ್ರೆಸ್ ಬಲ 27ಕ್ಕೆ ಕುಸಿಯುತ್ತದೆ. ಈ ಮೂಲಕ ಬಿಜೆಪಿ ಸುಲಭವಾಗಿ ಪಾಲಿಕೆ ಚುಕ್ಕಾಣಿಯನ್ನು ಈ ಬಾರಿಯೂ ತನ್ನ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮೀಸಲಾತಿ: ಇನ್ನೂ ಕೆಲವೇ ದಿನಗಳಲ್ಲಿ ಮೇಯರ್-ಉಪಮೇಯರ್ ಮೀಸಲಾತಿ ಪ್ರಕಟಗೊಳ್ಳಲಿದೆ. ಮಹಾನಗರ ಪಾಲಿಕೆ ಚುಕ್ಕಾಣೆಯನ್ನು ಸರಳವಾಗಿ ಹಿಡಿಯಲು ಅನುಕೂಲವಾಗುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗನುಕೂಲವಾಗುವ ದಿಕ್ಕಿನಲ್ಲಿ ಮೀಸಲಾತಿ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲು ಬೇಕಾದ ಬಹುಮತಕ್ಕಾಗಿ ಜೆಡಿಎಸ್ ಬೆಂಬಲ ಕೋರಿ ಇದುವರೆಗೆ ಕಾಂಗ್ರೆಸ್ನ ಯಾವ ಮುಖಂಡರೂ ಮಾತುಕತೆ ನಡೆಸಿಲ್ಲ. ಬಿಜೆಪಿ ಮುಖಂಡರು ಬೆಂಬಲ ಕೇಳಿದರೂ ಆ ಬಗ್ಗೆ ಯೋಚಿಸಲಾಗುವುದು. ನಮಗೆ ಅವಳಿ ನಗರದ ಅಭಿವೃದ್ಧಿ ಮುಖ್ಯ. ಹೆಚ್ಚು ಅನುದಾನ ತರುವ ಅದರಲ್ಲಿಯೂ ನೂರಂ ಯೋಜನೆ ಜಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವ ಪಕ್ಷಕ್ಕೆ ಜೆಡಿಎಸ್ ಬೆಂಬಲ ನೀಡುತ್ತದೆ.
- ರಾಜಣ್ಣ ಕೊರವಿ,
ಮಹಾನಗರ ಜಿಲ್ಲಾ ಜೆಡಿಎಸ್ ಅಧ್ಯಕ್ಷ
ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯುವ ಅಧಿಕಾರವನ್ನು ಮತದಾರ ಈ ಬಾರಿಯೂ ಬಿಜೆಪಿಗೆ ನೀಡಿದ್ದಾನಾದರೂ, ಸ್ವಲ್ಪ ಪ್ರಮಾಣದಲ್ಲಿ ಅತಂತ್ರ ಸೃಷ್ಟಿಸಿದ್ದಾನೆ. ಸ್ಪಷ್ಟ ಬಹುಮತಕ್ಕೆ ಪಕ್ಷೇತರ ಅಭ್ಯರ್ಥಿ ಜೊತೆಗಾಗಲಿ ಅಥವಾ ಜೆಡಿಎಸ್ ಜೊತೆಗಾಗಲಿ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶವನ್ನು ಇನ್ನೂ ಮುಕ್ತವಾಗಿಯೇ ಇಟ್ಟಿದ್ದೇವೆ. ಇನ್ನೂ ಕೆಲ ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ಮಾಡಲಾಗುವುದು.
- ಮಹೇಶ ಟೆಂಗಿನಕಾಯಿ
ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ
ಮಹಾನಗರ ಪಾಲಿಕೆ ಗದ್ದುಗೆ ಏರುವ ಬಗ್ಗೆ ಇದುವರೆಗೆ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಿಲ್ಲ. ಕೆಪಿಸಿಸಿ ಅಧ್ಯಕ್ಷರೊಂದಿಗೆ ಈ ಕುರಿತು ಮೊದಲು ಚರ್ಚಿಸಲಾಗುವುದು. ಕೆಪಿಸಿಸಿ ಅಧ್ಯಕ್ಷರ ಮಾರ್ಗದರ್ಶನದಂತೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
- ಎ.ಎಂ. ಹಿಂಡಸಗೇರಿ
ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

