ಕೃಷಿ ಉತ್ಪನ್ನ ಸಂಗ್ರಹಿಸಲು ಗೋದಾಮಿಲ್ಲ!
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 19
ಸರ್ಕಾರ ಪ್ರತಿ ವರ್ಷ ಆಹಾರೋತ್ಪಾದನೆ ಹೆಚ್ಚಿಸಲು ಏನೇನೋ ಕಸರತ್ತು ಮಾಡುತ್ತದೆ. ಅನೇಕ ಯೋಜನೆಗಳನ್ನು ಪ್ರಕಟಿಸಿ ಜಾರಿ ಮಾಡಿದೆ. ಕೃಷಿ ಉತ್ಪನ್ನ ಹೆಚ್ಚುತ್ತಿದೆ. ಅವುಗಳನ್ನು ಶೇಖರಿಸಿಡಲು ಬೇಕಾದ ಗೋದಾಮು ವ್ಯವಸ್ಥೆ ಸರಿಯಾಗಿಲ್ಲದ ಕಾರಣ ರೈತರ ಆರ್ಥಿಕ ಮಟ್ಟ ಸುಧಾರಿಸುತ್ತಿಲ್ಲ.
ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡದಲ್ಲಿ ಅತಿ ಕಡಿಮೆ ಸಂಖ್ಯೆಯ ಗೋದಾಮುಗಳಿದ್ದು, ರೈತರು ಬೆಳೆ ಕೈಗೆ ಬಂದ ಕೂಡಲೇ ದಲ್ಲಾಳಿಗಳಿಗೆ ಮಾರಾಟ ಮಾಡಿ ಖಾಲಿಯಾಗುತ್ತಾರೆ. ಇದರಿಂದ ದಲ್ಲಾಳಿಗಳು ಹಣವಂತರಾಗುತ್ತಿದ್ದು, ರೈತರು ಬಡವರಾಗಿಯೇ ಉಳಿಯುತ್ತಿದ್ದಾರೆ.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಅಂಕಿ ಅಂಶಗಳ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಒಟ್ಟು 25 ಕೃಷಿ ಉತ್ಪನ್ನ ಶೇಖರಣಾ ಗೋದಾಮುಗಳಿದ್ದು, ಅವುಗಳ ಸಾಮರ್ಥ್ಯ 50,100 ಮೆಟ್ರಿಕ್ ಟನ್ ಮಾತ್ರ. ಕೃಷಿ ಇಲಾಖೆ ಅಂಕಿ ಅಂಶಗಳ ಪ್ರಕಾರ, ಪ್ರತಿ ವರ್ಷ ಅಂದಾಜು 2.50 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪಾದನಾ ಗುರಿ ಇದೆ. ಇದರಲ್ಲಿ 2.30 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ಉತ್ಪಾದನೆ ನಿರೀಕ್ಷೆ ಇರುತ್ತದೆ. ಉಳಿದ 1.79 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪಾದನೆಗೆ ಶೇಖರಣಾ ಸೌಲಭ್ಯ ಇಲ್ಲದಂತಾಗಿದೆ. ರೈತರು ಸ್ವಂತ ವ್ಯವಸ್ಥೆ ಹೊಂದಿದ್ದು, ಅದು ಸಮರ್ಪಕ ಆಗಿರುವುದಿಲ್ಲ. ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಧಾರವಾಡ ಜಿಲ್ಲೆಯಲ್ಲಿ ಅತಿ ಕಡಿಮೆ ಸಾಮರ್ಥ್ಯದ ಗೋದಾಮುಗಳಿರುವುದು ಬೇಸರದ ಸಂಗತಿ.
ಹೆಸರಿಗೆ ಮಾತ್ರ ಯೋಜನೆ: ನಬಾರ್ಡ್ ವತಿಯಿಂದ 2002ರಿಂದ ಗ್ರಾಮೀಣ ಗೋದಾಮು ಯೋಜನೆಯಡಿಯಲ್ಲಿ ಕೃಷಿ ಮಾರುಕಟ್ಟೆ ಸೌಕರ್ಯ ಅಭಿವೃದ್ಧಿ ಯೋಜನೆ ಜಾರಿಯಾಗಿದ್ದು, ಅದರ ಮೂಲಕ ಎಲ್ಲ ಕಂದಾಯ ಗ್ರಾಮಗಳಿಗೆ ಗೋದಾಮುಗಳನ್ನು ನಿರ್ಮಿಸಲು ಅವಕಾಶವಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಶೇಖರಣಾ ಸೌಲಭ್ಯ ನೀಡಲು ಗೋದಾಮು ವ್ಯವಸ್ಥೆ ಕಲ್ಪಿಸುವುದು ಹಾಗೂ ಉತ್ತಮ ಬೆಲೆ ಬಂದಾಗ ಆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಿ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳುವುದೇ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆ ಅಡಿ ರೈತ ಕೂಟಗಳು, ಒಕ್ಕೂಟಗಳಿಗೆ ನಬಾರ್ಡ್ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತದೆ. ಆದರೆ, ತಿಳಿವಳಿಕೆ ಇಲ್ಲದ ಕಾರಣ ಯೋಜನೆ ಹೆಸರಿಗೆ ಮಾತ್ರ ಉಳಿದುಕೊಂಡಿದೆ. ರೈತ ಕೂಟಗಳಾಗಲಿ ಅಥವಾ ರೈತರ ಸಹಕಾರಿ ಸಂಘಗಳಾಗಲಿ ಈ ಯೋಜನೆ ಕುರಿತು ಸರಿಯಾಗಿ ಸ್ಪಂದನೆ ನೀಡುತ್ತಿಲ್ಲ ಎಂದು ನಬಾರ್ಡ್ ಸಹಾಯಕ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಕೃಷಿ ಗೋದಾಮು ಇಲ್ಲದಿರುವುದು ದಲ್ಲಾಳಿಗಳಿಗೆ ಹೆಚ್ಚಿನ ಪ್ರಯೋಜನವಾಗಿದ್ದು, ರೈತರು ಬೆಳೆದ ಬೆಳೆಯನ್ನು ಕಡಿಮೆ ಬೆಲೆಗೆ ಖರೀದಿಸಿ, ಶೇಖರಿಸಿಟ್ಟು, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಗೋದಾಮಿಲ್ಲದ ಕಾರಣ ರೈತರು ಎಷ್ಟೇ ಉತ್ತಮ ಬೆಳೆ ಬೆಳೆದರೂ ಪ್ರತಿ ವರ್ಷ ಹೆಚ್ಚಿನ ಬೆಲೆ ನಿರೀಕ್ಷಿಸುವ ಗೋಜಿಗೆ ಹೋಗುತ್ತಿಲ್ಲ. ಸಾಲ ಸೋಲ ಮಾಡಿ ಬೆಳೆ ಬೆಳೆದ ರೈತರು ಗೋದಾಮುಗಳಲ್ಲಿ ಬೆಳೆ ಶೇಖರಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವಷ್ಟು ಸಹನೆ ಇಲ್ಲದಂತಾಗಿದ್ದಾರೆ. ಕೃಷಿ ಉತ್ಪನ್ನಗಳನ್ನು ಶೇಖರಿಸಿಡಲು ಗೋದಾಮುಗಳ ಕೊರತೆ ಇದ್ದು, ಈ ಸಮಸ್ಯೆ ಬಗೆಹರಿದರೆ ಮಾತ್ರ ರೈತರು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು ಎಂಬುವುದು ಕೃಷಿ ತಜ್ಞರ ಅಭಿಪ್ರಾಯ.
ಕೃಷಿ ಉತ್ಪನ್ನಗಳು ಸಂಗ್ರಹಿಸಿಟ್ಟು ಉತ್ತಮ ಬೆಲೆಗೆ ಮಾರಾಟ ಮಾಡುವವನೇ ನಿಜವಾಗಿ ಆರ್ಥಿಕವಾಗಿ ಸಬಲ ರೈತ. ಆದರೆ, ಈ ಭಾಗದ ಎಷ್ಟೋ ದೊಡ್ಡ ರೈತರು ಸಹ ಉತ್ಪನ್ನ ಬಂದ ತಕ್ಷಣ ಇದ್ದ ಬೆಲೆಗೆ ಮಾರಾಟ ಮಾಡಿ ಬಿಡುತ್ತಾರೆ. ಆದರೆ, ರಾಯಚೂರು ಭಾಗದ ಹೆಚ್ಚಾನು ಹೆಚ್ಚು ರೈತರು ತಮ್ಮ ತಮ್ಮ ಹೊಲ ಅಥವಾ ಜಾಗದಲ್ಲಿ ಗೋದಾಮ ನಿರ್ಮಿಸಿಕೊಂಡು ಉತ್ತಮ ಬೆಲೆ ಬಂದಾಗಲೇ ಮಾರಾಟ ಮಾಡುತ್ತಾರೆ. ಗೋದಾಮು ನಿರ್ಮಾಣಕ್ಕೆ ನಬಾರ್ಡ್‌ನಿಂದ ಸಾಕಷ್ಟು ಆರ್ಥಿಕ ಸಹಾಯವಿದ್ದು, ರೈತರು ಮುಂದಾಗಿ ಗೋದಾಮು ನಿರ್ಮಿಸಿ ಕೃಷಿ ಉತ್ಪನ್ನಗಳನ್ನು ಶೇಖರಿಸಿಡುವ ಪದ್ಧತಿ ರೂಢಿಸಿಕೊಳ್ಳಬೇಕು. ಎಪಿಎಂಸಿಗಳು ಈ ಕುರಿತು ರೈತರಿಗೆ ಮಾಹಿತಿ ನೀಡಲು ಮುಂದಾಗಬೇಕು.
- ಸಂಗಮೇಶ ಎಂ. ಗಡಾದ
ಜಂಟಿ ನಿರ್ದೇಶಕರು, ಕೃಷಿ ಇಲಾಖೆ
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

