ಹು-ಧಾ ಪಾಲಿಕೆಗೆ ಜನಗಣತಿ ಹೊರೆ
ಕನ್ನಡಪ್ರಭ ವಾರ್ತೆ, ಧಾರವಾಡ, ಮೇ 24
ಮೊದಲೇ ಸಿಬ್ಬಂದಿ ಕೊರತೆಯಿಂದ ನರಳುತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ತಿಂಗಳವರೆಗೆ ನಡೆಯಲಿರುವ ಆರ್ಥಿಕ ಜನಗಣತಿ ಕಾರ್ಯ ಮತ್ತಷ್ಟು ಕೆಲಸದೊತ್ತಡ ಹೇರಲಿದೆ.
ಜೂ. 1ರಿಂದ 30ರ ವರೆಗೆ ದೇಶದಾದ್ಯಂತ 6ನೇ ಆರ್ಥಿಕ ಜನಗಣತಿ ಕಾರ್ಯ ನಡೆಯಲಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಆರ್ಥಿಕ ಜನಗಣತಿಯ ಮೇಲ್ವಿಚಾರಣೆ (ಸುಪ್ರವೈಸಿಂಗ್) ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತ ಮಹಾನಗರ ಪಾಲಿಕೆ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದೆ. ಪಾಲಿಕೆಯಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದು, ಈಗಿರುವ ಸಿಬ್ಬಂದಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಇದರಿಂದ ನಿತ್ಯದ ಕೆಲಸದ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದು, ಅನೇಕ ಕೆಲಸಗಳು ಆಮೆ ಗತಿಯಲ್ಲಿ ಸಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಪಾಲಿಕೆ ಸಿಬ್ಬಂದಿಯನ್ನು ಆರ್ಥಿಕ ಜನಗಣತಿಯ ಮೇಲ್ವಿಚಾರಣೆ ಕಾರ್ಯಕ್ಕೆ ಬಳಸಿಕೊಳ್ಳುವ ಮೂಲಕ ಪಾಲಿಕೆ ಕಾರ್ಯವೈಖರಿಗೆ ಮತ್ತಷ್ಟು ಅಡ್ಡಿ ಮಾಡಿದಂತಾಗಿದೆ.
ಭರ್ತಿಗೆ ಮುಂದಾಗಿಲ್ಲ: 6ನೇ ಆರ್ಥಿಕ ಜನಗಣತಿಯ ಸಮೀಕ್ಷೆಯನ್ನು ಕಿಯೋನಿಕ್ಸ್ ಖಾಸಗಿ ಸಂಸ್ಥೆಗೆ ವಹಿಸಲಾಗಿದೆಯಾದರೂ ಮೇಲ್ವಿಚಾರಣೆ ಕಾರ್ಯಕ್ಕೆ ಪ್ರೌಢಶಾಲಾ ಶಿಕ್ಷಕರು ಹಾಗೂ ಮಹಾನಗರ ಪಾಲಿಕೆಯ ಸಿಬ್ಬಂದಿಯನ್ನು ಜಿಲ್ಲಾಡಳಿತ ಬಳಸಿಕೊಳ್ಳುತ್ತಿದೆ. ಒಟ್ಟು 270 ಸಿಬ್ಬಂದಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಮಹಾನಗರ ಪಾಲಿಕೆಯ 17 ಅಧಿಕಾರಿಗಳೂ ಸೇರಿದ್ದಾರೆ. ಮಹಾನಗರ ಪಾಲಿಕೆಯ ಸಹಾಯಕ ಆಯುಕ್ತರೂ ಆಗಿರುವ 12 ಜನ ವಲಯ ಅಧಿಕಾರಿಗಳು, 4 ಜನ ಸಹಾಯಕ ಅಭಿಯಂತರರು ಹಾಗೂ ಒಬ್ಬರು ಪಾಲಿಕೆ ವಿಶೇಷ ಅಧಿಕಾರಿಯೂ ಆಗಿರುವ ಸಾರ್ವಜನಿಕ ಸಂಪರ್ಕ ಅಧಿಕಾರಿಯೂ ಸೇರಿದ್ದಾರೆ.
ಪಾಲಿಕೆಯಲ್ಲಿ 2,500 ಹುದ್ದೆಗಳಿದ್ದರೂ ಕೇವಲ 1,550 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಪ್ರತಿಯೊಬ್ಬ ಅಧಿಕಾರಿ ಕನಿಷ್ಠ ಎರಡರಿಂದ ಮೂರು ಹುದ್ದೆಗಳ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕೆಲ ಹಿರಿಯ ಅಧಿಕಾರಿಗಳಂತೂ ಐದಾರು ಜವಾಬ್ದಾರಿಗಳನ್ನು ಒಟ್ಟೊಟ್ಟಿಗೆ ನಿರ್ವಹಿಸುತ್ತಿದ್ದಾರೆ. ಪ್ರತಿ ತಿಂಗಳು ಅಥವಾ ಎರಡ್ಮೂರು ತಿಂಗಳಿಗೊಮ್ಮೆ ಸೇವೆಯಿಂದ ನಿವೃತ್ತಿಗೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೂ ನಗರಾಭಿವೃದ್ಧಿ ಇಲಾಖೆ ಹು-ಧಾ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಮುಂದಾಗಿಲ್ಲ.
ನಿತ್ಯದ ಕಾರ್ಯಕ್ಕೆ ತೊಂದರೆ: ಇಂತಹ ಪರಿಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳನ್ನು ಆರ್ಥಿಕ ಜನ ಗಣತಿಯ ಮೇಲ್ವಿಚಾರಣೆ ಕಾರ್ಯಕ್ಕೆ ಬಳಸಿಕೊಳ್ಳುವುದರಿಂದ ನಿತ್ಯದ ಕಾರ್ಯಕ್ಕೆ ಸಾಕಷ್ಟು ತೊಂದರೆಯಾಗಲಿದೆ. ಆರ್ಥಿಕ ಜನಗಣತಿಯ ಮೇಲ್ವಿಚಾರಣೆ ಕಾರ್ಯವನ್ನು ಪಾಲಿಕೆಯ ನಿತ್ಯದ ಕಾರ್ಯದ ಜತೆಗೆ ಮಾಡಬೇಕು ಹಾಗೂ ಈ ಅವಧಿಯಲ್ಲಿ ಪಾಲಿಕೆಯ ಕಾರ್ಯಕ್ಕೆ ಯಾವುದೇ ಅಡಚಣೆಯಾಗಬಾರದೆಂಬ ಸೂಚನೆ ಇದ್ದರೂ, ಪಾಲಿಕೆ ಕೆಲಸಕ್ಕೆ ಸಹಜವಾಗಿಯೇ ಅಡಚಣೆ ಎದುರಾಗುತ್ತದೆ. ಹೀಗಾಗಿ ಜಿಲ್ಲಾಡಳಿತ 6ನೇ ಆರ್ಥಿಕ ಜನಗಣತಿ ಕಾರ್ಯಕ್ಕೆ ಪಾಲಿಕೆ ಅಧಿಕಾರಿಗಳನ್ನು ಮೇಲ್ವಿಚಾರಣೆ ಕಾರ್ಯಕ್ಕೆ ಬಳಸಿಕೊಳ್ಳದೇ, ಬೇರೆ ಇಲಾಖೆ ಅಧಿಕಾರಿಗಳನ್ನು ಬಳಸಿಕೊಂಡಲ್ಲಿ ಮೊದಲೇ ಕುಂಟುತ್ತ ಸಾಗಿರುವ ಪಾಲಿಕೆ ಅಭಿವೃದ್ಧಿ ಕಾರ್ಯಗಳಿಗೆ ಒಂದಿಷ್ಟು ವೇಗವಾದರೂ ದೊರಕೀತು.
ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

