10 ಶುಲ್ಕ ಕೊಟ್ಟರೆ ವರ್ಷ ಪೂರ್ತಿ ಪಿಯು ಶಿಕ್ಷಣ
ಕ.ಪ್ರ. ವಾರ್ತೆ ಹುಬ್ಬಳ್ಳಿ ಮೇ 27-
10 ಕೊಟ್ಟರೆ ಒಂದು ಕಪ್ ಕಾಫಿ ಸಿಗದಿರುವ ಕಾಲವಿದು. ಅಂತಹುದರಲ್ಲಿ ವರ್ಷ ಪೂರ್ತಿ ಶಿಕ್ಷಣ ಕೇವಲ ರು. 10ಕ್ಕೆ ಸಿಕ್ಕರೆ!
ಅದ್ಹೇಗೆ ಸಾಧ್ಯ? ಎಂದು ಮೂಗು ಮುರಿಯಬೇಡಿ. ಕೆಎಲ್ಇ ಶಿಕ್ಷಣ ಸಂಸ್ಥೆಯ ಹುಬ್ಬಳ್ಳಿಯ ಪಿ.ಸಿ. ಜಾಬೀನ ಹಾಗೂ ಕಾಡಸಿದ್ಧೇಶ್ವರ ಕೋತಂಬ್ರಿ ವಿಜ್ಞಾನ ಕಾಲೇಜು ಇಂಥದ್ದೊಂದು ಸುವರ್ಣಾವಕಾಶವನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಲ್ಪಿಸಿಕೊಟ್ಟಿದೆ. ಕೇವಲ 10 ನೀಡಿದರೆ ಪ್ರಥಮ ವರ್ಷ ಪಿಯು ವಿದ್ಯಾರ್ಥಿಗಳಿಗೆ ವರ್ಷ ಪೂರ್ತಿ ಶಿಕ್ಷಣ ನೀಡುತ್ತದೆ.
ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ವಿಜ್ಞಾನದಂತಹ ವಿಷಯವನ್ನು ಆಯ್ದುಕೊಂಡು ಶಿಕ್ಷಣ ಪಡೆಯಬೇಕೆಂದು ಬಯಸುತ್ತಾರೆ. ಆದರೆ, ಆರ್ಥಿಕ ಹೊರೆಯಿಂದಾಗಿ ಕೆಲವು ವಿದ್ಯಾರ್ಥಿಗಳಿಗೆ ಈ ಆಸೆ ಈಡೇರಿಸಿಕೊಳ್ಳಲು ಆಗುವುದಿಲ್ಲ. ಅದರಲ್ಲಿಯೂ ಪ್ರತಿಷ್ಠಿತ ಕಾಲೇಜುಗಳಿಗೆ ಸೇರುವುದಂತೂ ಕಷ್ಟ ಸಾಧ್ಯ.
ಬಡ ವಿದ್ಯಾರ್ಥಿಗಳ ಆರ್ಥಿಕ ಪರಿಸ್ಥಿತಿಯನ್ನು ಮನಗೊಂಡಿರುವ ಕೆಎಲ್ಇ ಶಿಕ್ಷಣ ಸಂಸ್ಥೆಯ ಪಿ.ಸಿ. ಜಾಬೀನ ಹಾಗೂ ಕಾಡಸಿದ್ಧೇಶ್ವರ ಕೋತಂಬ್ರಿ ವಿಜ್ಞಾನ ಕಾಲೇಜ್, ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ನೆರವಾಗಲು ಮುಂದಾಗಿದೆ.
10 ಶುಲ್ಕ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು 10 ಶುಲ್ಕ ನೀಡುವ ಮೂಲಕ ಕಾಲೇಜಿನಲ್ಲಿ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಬಹುದು. ಇದಾದ ಬಳಿಕ ವಿದ್ಯಾರ್ಥಿಗಳಿಗೆ ಅಗತ್ಯ ಪುಠ್ಯಪುಸ್ತಕ, ಅಧ್ಯಯನ ಪರಿಕರಗಳು, ಪರೀಕ್ಷಾ ಶುಲ್ಕ ಸೇರಿದಂತೆ ಪಿಯುಸಿ ಪ್ರಥಮ ವರ್ಷದ ಅಧ್ಯಯನಕ್ಕೆ ತಗಲುವ ಎಲ್ಲ ಶುಲ್ಕವನ್ನು ಸಂಸ್ಥೆಯೇ ಭರಿಸುತ್ತದೆ.
ಕೆಎಲ್ಇ ಆಡಳಿತ ಮಂಡಳಿ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಇಂಥದ್ದೊಂದು ಅವಕಾಶ ಕಲ್ಪಿಸಿ ಕೊಡಬೇಕೆಂದು ಮಂಡಳಿಯ ಸದಸ್ಯರು ಅಭಿಪ್ರಾಯ ಪಟ್ಟಿದ್ದರು. ಇದಕ್ಕೆ ಸಂಸ್ಥೆಯ ಚೇರ್ಮನ್ ಡಾ. ಪ್ರಭಾಕರ ಕೋರೆಯವರೂ ಸಹಮತ ವ್ಯಕ್ತ ಪಡಿಸಿದರು. ಈ ಯೋಜನೆಯಡಿಯಲ್ಲಿ ಈಗಾಗಲೇ ಪಿ.ಸಿ. ಜಾಬೀನನಲ್ಲಿ 6 ಹಾಗೂ ಕಾಡಸಿದ್ಧೇಶ್ವರದಲ್ಲಿ 5 ವಿದ್ಯಾರ್ಥಿಗಳು 10 ಶುಲ್ಕ ನೀಡಿ ಪ್ರವೇಶ ಗಿಟ್ಟಿಸಿಕೊಂಡಿದ್ದಾರೆ. ಮತ್ತಷ್ಟು ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಪಡೆದು ಕೊಂಡಿದ್ದಾರೆ.
ದುಡ್ಡು ಮಾಡುವ ಉದ್ದೇಶದಿಂದಾಗಿಯೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕೆಎಲ್ಇಯಂಥ ಸಂಸ್ಥೆ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಕೇವಲ 10 ಶುಲ್ಕದಲ್ಲಿ ವರ್ಷ ಪೂರ್ತಿಯ ಶಿಕ್ಷಣ ನೀಡಲು ಮುಂದಾಗಿರುವುದು ಇತರೆ ಶಿಕ್ಷಣ ಸಂಸ್ಥೆಗಳಿಗೆ ಮಾದರಿಯಾಗಿದೆ.
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಕೇವಲ 10 ಶುಲ್ಕ ತುಂಬಿಸಿಕೊಂಡು ವರ್ಷ ಪೂರ್ತಿ ಶಿಕ್ಷಣ ನೀಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಪರೀಕ್ಷಾ ಶುಲ್ಕ ಸೇರಿದಂತೆ ವಿದ್ಯಾರ್ಥಿಯ ಅಧ್ಯಯನಕ್ಕೆ ಬೇಕಾಗುವ ಎಲ್ಲ ವ್ಯವಸ್ಥೆಯನ್ನೂ ಸಂಸ್ಥೆಯೇ ಮಾಡಲಿದೆ.
- ಎಸ್. ಬಿ. ಹಿರೇಮಠ, ಪ್ರಾಂಶುಪಾಲ, ಪಿ. ಸಿ. ಜಾಬೀನ ಕಾಲೇಜ್, ಹುಬ್ಬಳಿ
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

