ಮಳೆ: ರೈತನ ಮೊಗದಲ್ಲಿ ಹೊಸ ಕಳೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 29
ಕಳೆದೆರೆಡ್ಮೂರು ದಿನಗಳಿಂದ ಧಾರವಾಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ರೈತರಿಗೆ ಬೀಜ ವಿತರಿಸುವ ಕಾರ್ಯಕ್ಕೆ ಕೃಷಿ ಇಲಾಖೆ ಚಾಲನೆ ನೀಡಿದೆ.
ಈಗಾಗಲೇ ರೈತಾಪಿ ವರ್ಗ ಹೊಲ ಹದಗೊಳಿಸುವ ಕಾರ್ಯ ಪ್ರಾರಂಭಿಸಿದ್ದು, ಬಹುತೇಕ ಕೃಷಿ ಜಮೀನು ಬಿತ್ತನೆಗೆ ಸಜ್ಜಾಗಿದೆ. ಸದ್ಯ ಸುರಿದಿರುವ ಮಳೆಯಿಂದಾಗಿ ಜಿಲ್ಲೆಯ ಬಹುತೇಕ ಕೃಷಿ ಪ್ರದೇಶ ಬಿತ್ತನೆಗೆ ಹದವಾಗಿದೆ. ಕಳೆದ ಮೇ 21ರವರೆಗೆ ಜಿಲ್ಲೆಯಾದ್ಯಂತ 76.6ಮಿ.ಮೀ. ಮಳೆಯಾಗಿತ್ತು. ಈ ಮಧ್ಯೆ ಮೇ 27ರಂದು ಭರ್ಜರಿ ಮಳೆ ಸುರಿದಿರುವುದು ರೈತರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಧಾರವಾಡ ತಾಲೂಕಿನಲ್ಲಿ 44.2 ಮಿ.ಮೀ., ಹುಬ್ಬಳ್ಳಿ ತಾಲೂಕಿನಲ್ಲಿ 29 ಮಿ.ಮೀ., ಕಲಘಟಗಿ ತಾಲೂಕಿನಲ್ಲಿ 31.5 ಮಿ.ಮೀ., ಕುಂದಗೋಳ ತಾಲೂಕಿನಲ್ಲಿ 25 ಮಿ.ಮೀ. ಹಾಗೂ ನವಲಗುಂದ ತಾಲೂಕಿನಲ್ಲಿ 23.9 ಮಿ.ಮೀ. ಮಳೆ ಸುರಿದಿದೆ.
ಸದ್ಯ ಸುರಿಯುತ್ತಿರುವ ಮಳೆಯಿಂದಾಗಿ ಮುಂದಿನ ಮಳೆಯೂ ಕೈಕೊಡುವುದಿಲ್ಲವೆಂಬ ಆಶಾವಾದದಿಂದ ರೈತರು ಹೊಲ ಹದಗೊಳಿಸುತ್ತಿದ್ದು, ಬೀಜ ಹಾಗೂ ಗೊಬ್ಬರ ಖರೀದಿಗೂ ತಯಾರಿ ನಡೆಸಿದ್ದಾರೆ.
ಕೃಷಿ ಇಲಾಖೆ ಸಹ ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರ ಹಾಗೂ 14 ಹೆಚ್ಚುವರಿ ಬೀಜ ವಿತರಣಾ ಕೇಂದ್ರದಲ್ಲಿ ಮಂಗಳವಾರದಿಂದಲೇ (ಮೇ 28) ಬೀಜ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದೆ. ಸೋಯಾಬಿನ್, ಬತ್ತ, ಜೋಳ, ಗೋವಿನಜೋಳ, ಶೇಂಗಾ, ಹೆಸರು ಸೇರಿದಂತೆ ಪ್ರಮುಖ ಬಿತ್ತನೆ ಬೀಜಗಳ ವಿತರಣೆ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಬೀಜ ವಿತರಣಾ ಕೇಂದ್ರಕ್ಕೆ ಕಾಲಿಟ್ಟಿವೆ.
ಸದ್ಯ ಸುರಿಯುತ್ತಿರುವ ಮಳೆ ಆಧಾರದ ಮೇಲೆ ಮುಂಗಾರು ಹಂಗಾಮಿನಲ್ಲಿ 2,08,900 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬಹುದೆಂಬ ಅಂದಾಜು ಗುರಿ ಕೃಷಿ ಇಲಾಖೆಯದ್ದು. ಇದರಲ್ಲಿ ಶೇಂಗಾ 29,100 ಹೆಕ್ಟೇರ್, ಮೆಕ್ಕೆಜೋಳ 42,900 ಹೆಕ್ಟೇರ್, ಹೆಸರು 25,075 ಹೆಕ್ಟೇರ್, ಸೋಯಾಬಿನ್ 34,530 ಹೆಕ್ಟೇರ್, ಹತ್ತಿ 36,100 ಹೆಕ್ಟೇರ್, ಬತ್ತ 27,600 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬಹುದೆಂಬುದು ಕೃಷಿ ಇಲಾಖೆಯ ಅಂದಾಜು.
ಬೀಜದ ಜೊತೆಗೆ ಗೊಬ್ಬರ ವಿತರಿಸಲು ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಮುಂಗಾರು ಹಾಗೂ ಹಿಂಗಾರು ಬಿತ್ತನೆ ನಂತರ ಜಿಲ್ಲೆಯ ಕೃಷಿ ಭೂಮಿಗೆ ವಿವಿಧ ರೀತಿಯ ಒಟ್ಟು 63,400 ಮೆಟ್ರಿಕ್ ಟನ್ ಗೊಬ್ಬರದ ಅವಶ್ಯಕತೆ ಇದೆ. ಸೆಪ್ಟೆಂಬರ್ವರೆಗೆ ಬೇಕಾಗಬಹುದಾದ 35,098 ಮೆಟ್ರಿಕ್ ಟನ್ ಗೊಬ್ಬರ ಈಗಾಗಲೇ ಕೃಷಿ ಇಲಾಖೆಯ ಗೋದಾಮಿನಲ್ಲಿ ಸಂಗ್ರಹವಿದೆ. ಅಂದರೆ ಮುಂಗಾರು ಹಂಗಾಮಿಗೆ ಬೇಕಾಗುವ ಅರ್ಧಕ್ಕೂ ಹೆಚ್ಚು ಗೊಬ್ಬರದ ದಾಸ್ತಾನು ಗೋದಾಮಿನಲ್ಲಿ ಸಂಗ್ರಹಗೊಂಡಿದೆ. ನಂತರದ ದಿನಗಳಲ್ಲಿ ಅಥವಾ ಹಿಂಗಾರು ಹಂಗಾಮಿಗೆ ಅವಶ್ಯವಿರುವ ಗೊಬ್ಬರ ಮುಂದಿನ ತಿಂಗಳುಗಳಲ್ಲಿ ಗೋದಾಮಿಗೆ ಆಗಮಿಸುತ್ತದೆ ಎಂಬುದು ಕೃಷಿ ಇಲಾಖೆಯಿಂದ ತಿಳಿದುಬಂದ ಮಾಹಿತಿ.
ಬಾಡಿಗೆ ಹೆಚ್ಚಳ: ಕೃಷಿ ಉಪಕರಣಗಳು ಇಲ್ಲದ ರೈತರು ದಿನವೊಂದಕ್ಕೆ 600ರಿಂದ 800ರವರೆಗೆ ಗಳೆ ಹಾಗೂ ಮತ್ತಿತರ ಬಿತ್ತನೆಗೆ ಬೇಕಾಗುವ ಕೃಷಿ ಉಪಕರಣಗಳನ್ನು ಬಾಡಿಗೆ ಹಣ ನೀಡಿ ಪಡೆಯುತ್ತಿದ್ದಾರೆ. ನಿತ್ಯ ಒಂದರಿಂದ ಒಂದೂವರೆ ಎಕರೆ ಹೊಲ ಬಾಡಿಗೆ ಕೃಷಿ ಉಪಕರಣಗಳಿಂದ ಹದಗೊಳಿಸಲಾಗುತ್ತಿದ್ದು, ಉಪಕರಣಗಳಿಲ್ಲದ ರೈತರಿಗೆ ಹೊರೆಯಾಗಿದೆ. ಈ ಮಧ್ಯೆ ಕಸ ತೆಗೆಯಲು ಹಾಗೂ ಮತ್ತಿತರ ಕಾರ್ಯಗಳಿಗೆ ಕೂಲಿಗಳೂ ಸಿಗುತ್ತಿಲ್ಲ. ಪಕ್ಕದ ಗ್ರಾಮಗಳಿಂದ ಕೂಲಿ ಕಾರ್ಮಿಕರನ್ನು ಮೂರ್ನಾಲ್ಕು ಪಟ್ಟು ಕೂಲಿ ನೀಡಿ ಕರೆತರುವ ಅನಿವಾರ್ಯತೆ ರೈತರದ್ದು.
ಒಂದೆಡೆ ಮಳೆ ಸುರಿದು ಈ ಬಾರಿಯಾದರೂ ಉತ್ತಮ ಫಸಲು ತೆಗೆಯಬಹುದೆಂಬ ರೈತನ ಲೆಕ್ಕಾಚಾರಕ್ಕೆ ಕೂಲಿ ಕಾರ್ಮಿಕರಿಗೆ ನೀಡುತ್ತಿರುವ ಕೂಲಿ ಹಣ ದೊಡ್ಡ ತಲೆನೋವಾಗಿದೆ. ಮತ್ತೊಂದೆಡೆ ಉತ್ತಮ ಮಳೆ ಸುರಿದಿದ್ದರಿಂದ ಹೆಚ್ಚಿನ ಕೂಲಿ ಹಣ ತೆತ್ತೂ ಬಿತ್ತಿದ ಬೀಜದಿಂದ ಬರುವ ಫಸಲಿಗೆ ಬೆಲೆ ಬಂದೀತೇ ಎಂಬ ಚಿಂತೆಯೂ ಕಾಡುತ್ತಿದೆ.
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

