ಧಾರವಾಡ

ರೊಕ್ಕ ತಂದ್ರೂ ಕೆಲಸ ಮಾಡ್ತಿಲ್ಲಂದ್ರ ಹೆಂಗ?

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮೇ 31
'ಕೆಲಸ ಮಾಡ್ರಿ ಎಂದು ರೊಕ್ಕಾ ತಂದು ಕೊಟ್ಟಿವಿ ನೀವು ಕೆಲಸ ಮಾಡಲಿಲ್ಲಾ ಅಂದ್ರ ಹೆಂಗ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದು ಸಂಸದ ಪ್ರಹ್ಲಾದ ಜೋಶಿ.
ಸಂದರ್ಭ, ಶುಕ್ರವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಅವಳಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎರಡು ಹಂತದಲ್ಲಿ ಬಿಡುಗಡೆ ಮಾಡಿದ ನೂರು ಕೋಟಿ ರು.ಗಳ ವಿಶೇಷ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಳಚರಂಡಿ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಇಡೀ ನಗರದಾದ್ಯಂತ ತಗ್ಗು ಗುಂಡಿಗಳು ಕಾಣಿಸಿಕೊಂಡಿವೆ. ಒಳಚರಂಡಿ ಪೈಪ್‌ಲೈನ್ ಅಳವಡಿಸಿದ ಗುತ್ತಿಗೆದಾರರು ಡಾಂಬರೀಕರಣ ಮಾಡುತ್ತಿಲ್ಲ. ಒಳಚರಂಡಿ ನಿರ್ಮಾಣ ಕಾಮಗಾರಿ ಪ್ರಗತಿಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ಕು ಬಾರಿ ಪ್ರಗತಿ ಪರಿಶೀಲನೆ ಸಭೆ ಮಾಡಲಾಗಿತ್ತು. ಆದರೂ ಇದರಿಂದ ಏನೊಂದು ಉಪಯೋಗವಾಗಿಲ್ಲ ಎಂದರು.
ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಹೇಳಿ ಪ್ರಯೋಜನವಿಲ್ಲ. ಸೆಪ್ಟಂಬರ್ 2012ರಲ್ಲಿ ಎಲ್ಲ ಒಳಚರಂಡಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಮಳೆಗಾಲ ಆರಂಭವಾಗುವ ಹಂತದಲ್ಲಿದ್ದು, ಅಗೆದಿರುವ ರಸ್ತೆಗಳು ಮಳೆಗಾಲದಲ್ಲಿ ತೆಗ್ಗು ಗುಂಡಿಗಳ ರೂಪ ಪಡೆಯುತ್ತವೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಾದ ಗುತ್ತಿಗೆದಾರರಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಆಸಕ್ತಿ ಇಲ್ಲ. ಅಧಿಕಾರಿಗಳಲ್ಲಿ ಕೆಲಸ ಮುಗಿಸಬೇಕು ಎಂಬ ದಾವಂತ ಇಲ್ಲ. ಒಳಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಗುತ್ತಿಗೆದಾರರಿಗೆ ಲಿಕ್ವಿಡೇಷನ್ ಡ್ಯಾಮೇಜ್ ಆಧಾರದ ಮೇಲೆ ದಂಡ ವಿಧಿಸಿ ಆ ಮೊತ್ತ ವಸೂಲಿ ಮಾಡಬೇಕು ಎನ್ನುವ ಪರಿಜ್ಞಾನ ಕೂಡ ಅಧಿಕಾರಗಳಲ್ಲಿ ಇಲ್ಲ ಎಂದು ಸಭೆಯಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಗುತ್ತಿಗೆದಾರರ ಮೇಲೆ ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಮಾಹಿತಿ ಇಲ್ಲ. ಕನಿಷ್ಠ ಕಾಮಗಾರಿ ನಡೆಯುತ್ತಿರುವ ಸ್ಥಳದ ಸುತ್ತ ಬ್ಯಾರಿಕೇಡ್ ಹಾಕುವುದು, ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಬೋರ್ಡ್‌ಗಳು ಕೂಡ ಕಾಣಿಸುವುದಿಲ್ಲ ಈ ಕುರಿತು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ಅವಳಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಳಚರಂಡಿ ಕಾಮಗಾರಿಗೆ ವೇಗ ನೀಡಬೇಕು. ಈ ನಿಟ್ಟಿನಲ್ಲಿ ವಾರಕ್ಕೊಂದು ಬಾರಿ ಅಧಿಕಾರಿಗಳು ಕಾಮಗಾರಿಯ ಪ್ರಗತಿ ವಿವರವನ್ನು ಮಹಾನಗರ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಅವರಿಗೆ ಸಲ್ಲಿಸಬೇಕು ಮತ್ತು ಅದೇ ಸಂದರ್ಭ ಮುಂದಿನ ಒಂದು ವಾರದ ಅವಧಿಯಲ್ಲಿ ಆಗಬೇಕಿರುವ ಕೆಲಸವನ್ನು ನಿರ್ಧರಿಸಲಾಗುವುದು. ಇದು ಅಧಿಕಾರಿಗಳಿಗೆ ಕೊನೆ ಅವಕಾಶ ಎಂದರು.
ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರು ಕೇಳಿದ ಮಾಹಿತಿಗೆ ಅಧಿಕಾರಿಗಳಿಂದ ಸರಿಯಾದ ಉತ್ತರ ನೀಡಲಿಕ್ಕಾಗದೇ ಪರದಾಡಬೇಕಾಯಿತು. ಜನವರಿ 2013ರ ವರೆಗೆ ಕೇವಲ 12 ಕಿ.ಮೀ ಒಳಚರಂಡಿ ನಿರ್ಮಿಸಲಾಗಿದ್ದರೆ, ಜನವರಿಯಿಂದ ಮೇವರೆಗೆ 7 ಕಿ.ಮೀ. ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಮಾಜಿ ಮಹಾಪೌರ ಡಾ. ಪಾಂಡುರಂಗ ಪಾಟೀಲ ಸೇರಿದಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.