ಧಾರವಾಡ

ಅಕ್ರಮ ಗಣಿಗಾರಿಕೆಗೆ ಕರಗುತ್ತಿದೆ ಗುಡ್ಡ

Published On :

ಕನ್ನಡಪ್ರಭ ವಾರ್ತೆ, ನರಗುಂದ, ನ. 3
ಪಟ್ಟಣದ ಮುಕುಟದಂತಿರುವ ಗುಡ್ಡದ ಭಾಗದಲ್ಲಿ ಅವ್ಯಾಹತವಾಗಿ ಕಲ್ಲು ಮತ್ತು ಮಣ್ಣು ಗಣಿಗಾರಿಕೆ ನಡೆಯುತ್ತಿದ್ದರೂ ತಾಲೂಕು ಮಟ್ಟದ ಯಾವೊಬ್ಬ ಅಧಿಕಾರಿಯೂ ಗಮನಹರಿಸದೇ ನಿರ್ಲಕ್ಷ್ಯವಹಿಸಿರುವುದರಿಂದ ನಿತ್ಯ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ.
1857ರಲ್ಲಿ ನರಗುಂದ ಸಂಸ್ಥಾನ ಆಳ್ವಿಕೆ ಮಾಡಿದ ವೀರ ಬಾಬಾಸಾಹೇಬರು ಈ ಪಟ್ಟಣವನ್ನು ಸುಂದರವಾಗಿ ಮಾಡಲು ಸಾಕಷ್ಟು ಶ್ರಮಪಟ್ಟಿದ್ದರು ಎಂದು ಇತಿಹಾಸದಿಂದ ತಿಳಿಯುತ್ತದೆ. ಆದರೆ ಅಂತಹ ನೆಲದಲ್ಲಿ ಇಂದು ಹಗಲು ರಾತ್ರಿ ಎನ್ನದೇ ಕಲ್ಲು, ಮಣ್ಣನ್ನು ಅಗೆದು ವ್ಯಾಪಕವಾಗಿ ವಾಹನಗಳ ಮೂಲಕ ಸಾಗಾಣಿಕೆ ಮಾಡುತ್ತಿದ್ದು, ಗುಡ್ಡವಿಂದು ಅಕ್ರಮ ಕಲ್ಲು ಮತ್ತು ಮಣ್ಣು ಗಣಿಗಾರಿಕೆಗೆ ಸಿಕ್ಕು ಕರಗುವ ಹಂತಕ್ಕೆ ಬಂದು ತಲುಪಿದ್ದು ಹೋರಾಟದ ನೆಲವೀಗ ಬರಡಾಗುತ್ತಿದೆ.
ಗುಂಡಿಗಳು ತುಂಬಿವೆ: ಗುಡ್ಡದ ಪಕ್ಕದ ವಿಶಾಲವಾದ ಪುರಸಭೆ ಜಾಗೆಯಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು ಗಣಿಗಾರಿಕೆಯಿಂದ ಗುಡ್ಡದ ಸುತ್ತಲೆಲ್ಲ ಎಲ್ಲಿ ನೋಡಿದರೂ ಅಲ್ಲಿ ದೊಡ್ಡ ದೊಡ್ಡ ತೆಗ್ಗುಗಳು (ಗುಂಡಿಗಳು) ಬಿದ್ದಿವೆ. ಈ ಗುಡ್ಡದ ಸ್ಥಳದಲ್ಲಿ ನಿತ್ಯವೂ ಸಾರ್ವಜನಿಕರು ತಮ್ಮ ಜಾನುವಾರುಗಳನ್ನು ಮೇಯಿಸಲು ಹೋಗುವುದು ಸಾಮಾನ್ಯ. ಈ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೂ ಜೀವ ಕಳೆದುಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದಕ್ಕಿಂತ ಆತಂಕದ ವಿಷಯವೆಂದರೆ ಈ ದೊಡ್ಡ, ದೊಡ್ಡ ಗುಂಡಿಗಳ ಸುತ್ತಲೂ ಸಾಕಷ್ಟು ಮನೆಗಳಿವೆ. ಮಕ್ಕಳು ಮನೆ ಬಿಟ್ಟು ಹೊರಗೆ ಆಟ ಆಡಲು ಬಂದರೆ ಅಪಾಯ ಖಂಡಿತ ಎನ್ನುವಂತಾಗಿದೆ.
ಅಕ್ರಮ ಕಟ್ಟಡಗಳು: ಪುರಸಭೆಗೆ ಸಂಬಂಧಿಸಿದ ಈ ಗುಡ್ಡದ ಜಾಗೆಯಲ್ಲಿ ಯಾವುದೇ ಪರವಾನಗಿ ಪಡೆಯದೇ ಕೆಲವರು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡು ಪುರಸಭೆಯ ಕೋಟ್ಯಂತರ ಬೆಲೆ ಬಾಳುವ ಸ್ಥಳದಲ್ಲಿ ಮನೆ ನಿರ್ಮಿಸಿಕೊಂಡಿದ್ದು, ಈ ಬಗ್ಗೆ ಪುರಸಭೆ ಅಧಿಕಾರಿಯೋರ್ವರು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ಕೆಲ ರಾಜಕೀಯ ಮುಖಂಡರ ಒತ್ತಡದಿಂದ ಅಕ್ರಮ ಕಟ್ಟಡಗಳ ನೆಲಸಮ ಕಾರ್ಯ ಸ್ಥಗಿತಗೊಂಡಿದ್ದಲ್ಲದೇ ಈ ಕುರಿತು ಅಧಿಕಾರಿಗಳಲ್ಲಿಯೂ ಕೆಲವರು ಆತಂಕವನ್ನೇ ಸೃಷ್ಟಿಸಿದ್ದಾರೆ.
ಸರ್ಕಾರಕ್ಕೆ ನಷ್ಟ: ಪ್ರತಿ ದಿನ ಈ ಗುಡ್ಡದಲ್ಲಿ ಅಕ್ರಮವಾಗಿ ಕಲ್ಲು, ಮಣ್ಣು ಗಣಿಗಾರಿಕೆ ನಡೆಯುತ್ತಿದ್ದು ಇದರಿಂದ ಸರ್ಕಾರಕ್ಕೆ ಲಕ್ಷಾಂತರ ಹಣ ನಷ್ಟವಾಗುತ್ತದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು  ರಾತ್ರಿ ಸಮಯದಲ್ಲಿ ನಡೆಯುವ ಕಲ್ಲು, ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗಮನ ನೀಡಬೇಕಿದೆ. ಇಲ್ಲವಾದಲ್ಲಿ ನಾಲ್ಕೈದು ವರ್ಷಗಳಲ್ಲಿ ಗುಡ್ಡವೇ ಬರಿದಾಗಲಿದೆ. ಇನ್ನೊಂದೆಡೆ ಸರ್ಕಾರಕ್ಕೆ ಬರಬೇಕಾದ ಲಕ್ಷಾಂತರ ಹಣ ಇನ್ಯಾರದ್ದೋ ಪಾಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮಕೈಗೊಳ್ಳಬೇಕಿದೆ.


- ಎಸ್.ಜಿ. ತೆಗ್ಗಿನಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.