ತಾಕತ್ತಿದ್ದರೆ ಸಮಾವೇಶ ತಡೆದು ತೋರಿಸಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 6
ಹಳೇಹುಬ್ಬಳ್ಳಿ ಠಾಣೆ ವ್ಯಾಪ್ತಿಯಲ್ಲಿ ನ. 8ರಿಂದ ಮೂರು ದಿನಗಳ ಕಾಲ ಹಿಂದೂ ಸಮಾವೇಶ ನಡೆಸಲು ಅನುಮತಿ ನಿರಾಕರಿಸಿರುವ ಪೊಲೀಸ್ ಆಯುಕ್ತರ ಕ್ರಮವನ್ನು ಖಂಡಿಸಿರುವ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ, ತಾವು ಸಮಾವೇಶ ಮಾಡಿಯೇ ತೀರುತ್ತೇವೆ. ತಾಕತ್ತಿದ್ದರೆ ತಡೆದುತೋರಿಸಿ ಎಂದು ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೂ ಸಮಾವೇಶದಲ್ಲಿ ಮತೀಯ ಭಾವನೆಗೆ ಧಕ್ಕೆ ತರುವಂತೆ ಪ್ರಚೋದನಕಾರಿ ಭಾಷಣ ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತರುತ್ತದೆಯೆಂಬ ಕುಂಟು ನೆಪವೊಡ್ಡಿ ಆಯುಕ್ತ ಪದ್ಮನಯನ ಅನುಮತಿ ನೀಡಲು ನಿರಾಕರಿಸಿದ್ದು ಹಾಸ್ಯಾಸ್ಪದವಾಗಿದೆ ಎಂದರು.
ಆಕ್ರೋಶ: ಶಾಂತಿಯುತವಾಗಿ ನಡೆಯುವ ಈ ಸಮಾವೇಶಕ್ಕೆ ರಾಜಕೀಯ ಮುಖಂಡರು, ವಿವಿಧ ಮಠಾಧೀಶರು, ಗಣ್ಯರು ಆಗಮಿಸಲಿದ್ದು, ಸಮಾವೇಶಕ್ಕೆ ಅನುಮತಿ ನಿರಾಕರಿಸುವ ಮೂಲಕ ಇವರೆಲ್ಲರೂ ಗಲಭೆಕೋರರೆಂದು ಬಿಂಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಾವೇಶಕ್ಕೆ ಆಯುಕ್ತರ ವರದಿ ಆಧರಿಸಿ ಆಯುಕ್ತರು ನ. 7ರಂದು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಇದನ್ನು ಧಿಕ್ಕರಿಸುವುದಾಗಿ ತಿಳಿಸಿದರು.
ಸಮಸ್ತ ಹಿಂದೂಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಶಾಂತಿಯುತ ಸಮಾವೇಶವನ್ನು ನಿಗದಿತ ದಿನಗಳಂದೇ ನಡೆಸಲಾಗುವುದು. ತಾಕತ್ತಿದ್ದರೆ ಈ ಸಮಾವೇಶ ತಡೆಯಲಿ ಎಂದು ಸವಾಲು ಹಾಕಿದರು. ನ. 8ರಂದು ನಡೆಯುವ ಸಮಾವೇಶದಲ್ಲಿ ಪೊಲೀಸ್ ಆಯುಕ್ತ ಪದ್ಮನಯನ ಹಾಗೂ ಬೀದರ್ ಜಿಲ್ಲಾಧಿಕಾರಿ ವಿರುದ್ಧ ಖಂಡನಾ ನಿರ್ಣಯ ಕೈಗೊಂಡು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು. ರಮೇಶ ಶಿಂಧೆ, ಗಂಗಾಧರ ಕುಲಕರ್ಣಿ, ಕುಮಾರ ಹಕಾರಿ ಹಾಜರಿದ್ದರು.
ಶ್ರೀರಾಮ ಸೇನೆ ನಡೆಸಲುದ್ದೇಶಿಸಿರುವ ಸಮಾವೇಶಕ್ಕೆ ಅನುಮತಿ ನಿರಾಕರಿಸಿಲ್ಲ. ಬದಲಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲವೆಂಬ ಮುಚ್ಚಳಿಕೆ ಪತ್ರವನ್ನು ತಹಸೀಲ್ದಾರರಿಗೆ ಬರೆದುಕೊಡುವಂತೆ ಸೂಚನೆ ನೀಡಲಾಗಿತ್ತು ಎಂದು ಮಹಾನಗರ ಪೊಲೀಸ್ ಆಯುಕ್ತ ಪದ್ಮನಯನ ಹೇಳಿದ್ದಾರೆ. 'ಕನ್ನಡಪ್ರಭ' ದೊಂದಿಗೆ ಮಾತನಾಡಿದ ಅವರು, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರದಂತೆ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಶಾಂತಿಯುತವಾಗಿ ಸಮಾವೇಶ ನಡೆಸಿದರೆ ಅನುಮತಿ ನೀಡಲು ತಮ್ಮ ಅಭ್ಯಂತರ ಇಲ್ಲ. ಸಮಾವೇಶ ನಡೆಸುವುದು ಬೇಡ ಎಂದು ನಾನು ಹೇಳಿಯೇ ಇಲ್ಲ. ಮುತಾಲಿಕರು ಈ ರೀತಿ ಏಕೆ ಹೇಳಿಕೆ ನೀಡಿದ್ದಾರೆ ತಿಳಿಯದಾಗಿದೆ. ಶಾಂತಿಯುತವಾಗಿ ಸಮಾವೇಶ ನಡೆಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದಿಲ್ಲವೆಂದು ಶ್ರೀರಾಮ ಸೇನೆಯವರು ತಹಸೀಲ್ದಾರರಿಗೆ ಮುಚ್ಚಳಿಕೆ ಪತ್ರ ಬರೆದುಕೊಡಲಿ ಎಂದಿದ್ದಾರೆ.
ಸೇನೆ ನಿಷೇಧಿಸಿ
ಪ್ರಮೋದ ಮುತಾಲಿಕ ನೇತೃತ್ವದ ಶ್ರೀರಾಮ ಸೇನೆ ಸಂಘಟನೆಯನ್ನು ನಿಷೇಧಿಸಬೇಕೆಂದು ಬಹುಜನ ಸಮಾಜ ಪಕ್ಷ ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಉಪಾಧ್ಯಕ್ಷ ನಿಂಗಪ್ಪ ಮರಗಾನೂರ, ಶ್ರೀರಾಮ ಸೇನೆ ಕೋಮುವಾದದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ದೇಶ ಭಕ್ತರ ಸೋಗಿನಲ್ಲಿ ದೇಶ ದ್ರೋಹಿ ಕೆಲಸವನ್ನು ಶ್ರೀರಾಮ ಸೇನೆ ಮಾಡುತ್ತಿದೆ. ಮಂಗಳೂರಿನ ಹಲ್ಲೆ, ಹುಬ್ಬಳ್ಳಿ ನ್ಯಾಯಾಲಯದಲ್ಲಿ ಬಾಂಬ್ ಸ್ಪೋಟ್, ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸುವ ಮೂಲಕ ಶ್ರೀರಾಮ ಸೇನೆಯ ಅಸಲಿ ದೇಶಭಕ್ತಿ ಬಯಲಿಗೆ ಬಂದಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶ್ರೀರಾಮ ಸೇನೆಯನ್ನು ಈ ಕೂಡಲೇ ನಿಷೇಧಿಸಬೇಕೆಂದು ಈರಪ್ಪ ಮಾದರ, ಫಕ್ಕಣ್ಣ ದೊಡ್ಡಮನಿ, ಭರಮಣ್ಣ ಮಂಕಣಿ, ಅರವಿಂದ ಭೋಸಲೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

