ಕೆಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆ
ಕನ್ನಡಪ್ರಭ ವಾರ್ತೆ, ಧಾರವಾಡ, ನ. 10
ಅವಿಭಜಿತ ಧಾರವಾಡ (ಧಾರವಾಡ, ಹಾವೇರಿ ಹಾಗೂ ಗದಗ) ಜಿಲ್ಲೆಯ ವ್ಯಾಪ್ತಿ ಹೊಂದಿರುವ ಇಲ್ಲಿನ ಕೆಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 20 ಜನ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಇಲ್ಲಿಗೆ ಸಮೀಪದ ಮುರುಘಾಮಠದ ಮೃತ್ಯುಂಜಯ ಪ್ರೌಢಶಾಲೆಯಲ್ಲಿ ಬೆಳಗ್ಗೆ 9ರಿಂದ ಆರಂಭವಾದ ಚುನಾವಣೆಯಲ್ಲಿ ನಿರ್ದೇಶಕರ ಆಯ್ಕೆಯಾಗಿದ್ದು, ಮಲ್ಲಿಕಾರ್ಜುನ ಹೊನಕೇರಿ, ಮುಂಡರಗಿಯಿಂದ ಶಿವಕುಮಾರಗೌಡ ಪಾಟೀಲ, ರೋಣದಿಂದ ಐ.ಎಸ್. ಪಾಟೀಲ, ಶಿರಹಟ್ಟಿಯಿಂದ ಸುನೀಲ ಮಹಾಂತಶೆಟ್ಟರ್ ಹಾಗೂ ನರಗುಂದದಿಂದ ಎಂ.ಎಚ್. ಅರವಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನುಳಿದ 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಲಘಟಗಿ- ಮಂಜುನಾಥ ಮುರಳ್ಳಿ, ಧಾರವಾಡ- ಬಸವಣ್ಣೆಪ್ಪ ನವಲಗುಂದ, ನವಲಗುಂದ- ಬಾಪುಗೌಡ ಪಾಟೀಲ, ಕುಂದಗೋಳ-ಯಲ್ಲಪ್ಪ ಹೆಬಸೂರು, ಗದಗ- ಮಲ್ಲಪ್ಪ ಕಲಗುಡಿ, ಹಾವೇರಿ- ಕೊಟ್ರೇಶಪ್ಪ ಬಸಗಣ್ಣಿ, ಹಾನಗಲ್- ಮಾಲತೇಶ ಸೊಪ್ಪಿನ, ಹಿರೇಕೇರೂರು- ಲಿಂಗರಾಜ ಚಪ್ಪರದಳ್ಳಿ, ರಾಣಿಬೆನ್ನೂರು- ಮಳ್ಳಪ್ಪ ನಿಂಗಜ್ಜನವರ, ಶಿಗ್ಗಾಂವಿ- ಗಂಗಾಧರ ಸಾತಣ್ಣವರ, ಬ್ಯಾಡಗಿ- ಶಿವಪ್ಪ ಮರಡಿ, ಸವಣೂರು- ಶೇಖರಗೌಡಯ್ಯ ಪಾಟೀಲ ನಿರ್ದೇಶಕರಾಗಿ ಆಯ್ಕೆಯಾದರು.
ತಾಲೂಕು ಕೃಷಿ ಉತ್ಪನ್ನ ಮತ್ತು ಮಾರಾಟ ಸಹಕಾರಿ ಸಂಘಗಳ ಒಂದು ಸ್ಥಾನಕ್ಕಾಗಿ ಶಿವಾನಂದ ನೆಲವಗಿ 17 ಮತಗಳಲ್ಲಿ 10 ಮತಗಳನ್ನು ಪಡೆದು ಎಸ್.ವಿ. ಮುಗದ ಅವರನ್ನು ಹಿಂದಿಕ್ಕಿದರು. ಅದೇ ರೀತಿ ಪಟ್ಟಣ ಸಹಕಾರಿ ಬ್ಯಾಂಕ್ ಮತ್ತು ಕೃಷಿಯೇತರ ಪತ್ತಿನ ಸಂಘದ ಒಂದು ಸ್ಥಾನಕ್ಕೆ ಅವಿಭಜಿತ ಜಿಲ್ಲೆಯ ಒಟ್ಟು 151 ಮತಗಳಲ್ಲಿ 48 ಮತಗಳನ್ನು ಪಡೆಯುವ ಮೂಲಕ ಪಾಲಿಕೆ ಮಾಜಿ ಸದಸ್ಯ ಪ್ರತಾಪ ಚವ್ಹಾಣ ಜಯ ಸಾಧಿಸಿದರು. ಇತರೆ ಸಹಕಾರಿ ಸಂಘಗಳ ಒಟ್ಟು 146 ಮತಗಳಲ್ಲಿ ಚನ್ನಬಸಪ್ಪ ಮಾಳಶೆಟ್ಟಿ 88 ಮತಗಳನ್ನು ಪಡೆದು ವಿಜಯಶಾಲಿಯಾದರು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಮೂರು ಜಿಲ್ಲೆಗಳ ಹತ್ತಾರು ಅಭ್ಯರ್ಥಿಗಳು, ಮುಖಂಡರು ಮತ್ತು ಭಾರೀ ಪ್ರಮಾಣದ ಹಿತೈಷಿಗಳು ರಸ್ತೆಯುದ್ದಗಲಕ್ಕೂ ಸೇರಿದ್ದು ಸಾಮಾನ್ಯವಾಗಿತ್ತು. ಅನವಶ್ಯಕ ಗೊಂದಲ ಸೃಷ್ಟಿಯಾಗಬಾರದೆಂದು ಮತದಾನದ ಹಕ್ಕು ಹೊಂದಿರುವವರನ್ನು ಅವರು ಕಡ್ಡಾಯವಾಗಿ ತರಬೇಕಿದ್ದ ಠರಾವು ಪತ್ರ ಪರಿಶೀಲಿಸಿಯೇ ಮತ ಕೇಂದ್ರಕ್ಕೆ ಪ್ರವೇಶಿಸಲು ಪೊಲೀಸರು ಅನುಮತಿ ನೀಡುತ್ತಿದ್ದರು. ಉಪ ವಿಭಾಗಾಧಿಕಾರಿ ಮಹೇಶ ಕರ್ಜಗಿ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಎಂ.ಪಿ. ಶೆಲ್ಲಿಕೇರಿ, ಕೆಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಅಶೋಕ ಮೊರಬ, ಪ್ರಧಾನ ವ್ಯವಸ್ಥಾಪಕ ಆರ್.ಬಿ. ಮಾತರಂಗಿಮಠ ಇದ್ದರು.
ತಮಗೆ ಮತದಾನದ ಹಕ್ಕು ನೀಡಲಿಲ್ಲ ಎಂಬ ಕಾರಣದಿಂದ ಕೆಲವು ಸಹಕಾರ ಸಂಘಗಳ ಪ್ರತಿನಿಧಿಗಳು ಮತ ಚಲಾವಣೆಗೆ ಅವಕಾಶ ಕೋರಿ ಚುನಾವಣಾ ಅಧಿಕಾರಿಗಳಿಗೆ ಅರ್ಜಿ ಕೂಡ ಸಲ್ಲಿಸಿದ ಘಟನೆ ನಡೆಯಿತು. ಪೊಲೀಸ್ ಅಧಿಕಾರಿಗಳಾದ ರಾಮನಗೌಡ ಹಟ್ಟಿ, ಬಸವೇಶ್ವರ, ಬಿ.ಟಿ. ಚನ್ನಕೇಶ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

