ನಿಗಮ-ಮಂಡಳಿಗಳಿಗೆ ಭಾರಿ ಪೈಪೋಟಿ
ಹುಬ್ಬಳ್ಳಿ: ಬೆಳಗಾವಿಯ ಚಳಿಗಾಲ ಅಧಿವೇಶನದ ನಂತರ ನಿಗಮ-ಮಂಡಳಿಗಳಿಗೆ ನೇಮಕಾತಿ ನಡೆಯುವ ಸಾಧ್ಯತೆ ಹೆಚ್ಚಿರುವುದರಿಂದ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಲಾಬಿ ತೀವ್ರಗೊಂಡಿದೆ.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಸದಸ್ಯತ್ವಕ್ಕೆ ನಾಮನಿರ್ದೇಶನ, ಎನ್‌ಜಿಇಎಫ್ ಅಧ್ಯಕ್ಷ, ವಾಯವ್ಯ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯತ್ವ, ಕೆಎಂಎಫ್ ನಿರ್ದೇಶಕ, ಆಶ್ರಯ ಸಮಿತಿಗೆ ನಾಮನಿರ್ದೇಶಿತ ಸದಸ್ಯತ್ವ, ಕಾಡಾ ಅಧ್ಯಕ್ಷ ಹಾಗೂ ಮತ್ತಿತರ ನಿಗಮಗಳಲ್ಲಿ ಅಧಿಕಾರ ಪಡೆದುಕೊಳ್ಳಲು ಜಿಲ್ಲೆಯ ಕಾಂಗ್ರೆಸ್ಸಿಗರಲ್ಲಿ ಪೈಪೋಟೆ ತೀವ್ರಗೊಂಡಿದೆ.
ಜಿಲ್ಲೆಯಲ್ಲಿರುವ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಹಾಗೂ ನಾಮನಿರ್ದೇಶಿತ ಸದಸ್ಯತ್ವಕ್ಕೆ ಆಕಾಂಕ್ಷಿಗಳಾಗಿರುವವರ ಹೆಸರುಗಳ ಪಟ್ಟಿಗಳನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಧಾರವಾಡ ಗ್ರಾಮೀಣ ಕಾಂಗ್ರೆಸ್ ಸಮಿತಿಗಳು ಕೆಪಿಸಿಸಿಗೆ ಈಗಾಗಲೇ ಕಳುಹಿಸಿವೆ.
ಈ ಬಾರಿ ಹೊಸಬರಿಗೆ ಅವಕಾಶ ಕೊಡಬೇಕೆಂಬ ಒತ್ತಡ ಹೆಚ್ಚಿರುವುದರಿಂದ ಹಿಂದೆ ಅಧಿಕಾರ ಅನುಭವಿಸಿರುವವರು ಹಾಗೂ ಹೊಸಬರ ಮಧ್ಯೆ ಸ್ಪರ್ಧೆ ಏರ್ಪಟ್ಟಿದೆ. ವಾಯವ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಧಾರವಾಡ, ಬೆಳಗಾವಿ, ಕಾರವಾರ, ಗದಗ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲೆಗಳೂ ಸೇರಿರುವುದರಿಂದ ಧಾರವಾಡ ಜಿಲ್ಲೆಯ ಕಾಂಗ್ರೆಸ್ಸಿಗರೊಂದಿಗೆ ಇತರ ಜಿಲ್ಲೆಗಳ ಆಕಾಂಕ್ಷಿಗಳೂ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ. ಹಿಂದೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಾರವಾರದ ನಾಗರಾಜ ನಾರ್ವೇಕರ ಎಂಬುವವರಿಗೆ ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ಒಲಿದಿತ್ತು.
ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಅಧ್ಯಕ್ಷ ಸ್ಥಾನಕ್ಕೆ ಹುಡಾ ಮಾಜಿ ಅಧ್ಯಕ್ಷ ರಾಜಾ ದೇಸಾಯಿ ಹೆಸರು ಮತ್ತೊಮ್ಮೆ ಕೇಳಿ ಬರುತ್ತಿದೆ. ಇದರೊಂದಿಗೆ ಎಪಿಎಂಸಿ ಸದಸ್ಯ ರಾಜಶೇಖರ ಮೆಣಸಿನಕಾಯಿ, ಬುರಾನ ಗೌಳಿ, ಮಹೇಶ ಶೆಟ್ಟಿ, ಎಂ.ಎನ್. ಮೋರೆ, ಅಲ್ತಾಫ ಕಿತ್ತೂರ ಹೆಸರುಗಳೂ ಮುಂಚೂಣಿಯಲ್ಲಿವೆ.
ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ 1992ರಲ್ಲಿ ಹುಡಾ ಅಧ್ಯಕ್ಷ ಸ್ಥಾನ ಧಾರವಾಡದ ಕಾಂಗ್ರೆಸ್ ಮುಖಂಡ ಸೂರಪಾಲಿ ಎಂಬುವರಿಗೆ ಲಭಿಸಿತ್ತು. ನಂತರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಧಾರವಾಡದವರಿಗೆ ಅಧ್ಯಕ್ಷಗಿರಿ ಒಲಿದಿಲ್ಲ. ಹೀಗಾಗಿ ಈ ಬಾರಿ ಧಾರವಾಡದವರಿಗೇ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಇನ್ನೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಾಮನಿರ್ದೇಶನದ ಒಟ್ಟು 5 ಸ್ಥಾನಗಳನ್ನು 7ಕ್ಕೆ ಏರಿಸಬೇಕೆಂಬ ಬೇಡಿಕೆಯೂ ಇದೆ. ಸದ್ಯ ಇರುವ 5 ಸ್ಥಾನಗಳಲ್ಲಿ ಎರಡು ಸ್ಥಾನಗಳನ್ನು ಧಾರವಾಡದವರಿಗೆ ಹಾಗೂ ಮೂರು ಸ್ಥಾನಗಳನ್ನು ಹುಬ್ಬಳ್ಳಿಯವರಿಗೆ ನೀಡಲಾಗುತ್ತಿದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೆ ತಲಾ ಒಂದು ಮತ್ತು ಎರಡು ಸ್ಥಾನಗಳನ್ನು ಸಾಮಾನ್ಯರಿಗೆ ಮೀಸಲಿಡಲಾಗಿದೆ. ಆಶ್ರಯ ಸಮಿತಿಯಲ್ಲಿ ಧಾರವಾಡ ಶಹರ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಗ್ರಾಮೀಣದಿಂದ ತಲಾ 4 ಸ್ಥಾನಗಳಿವೆ.
ಭರ್ಜರಿ ಪೈಪೋಟಿ: ಪ್ರತಿ ನಿಗಮ-ಮಂಡಳಿಗಳ ಸದಸ್ಯತ್ವಕ್ಕಾಗಿ 40-50 ಆಕಾಂಕ್ಷಿಗಳ ಹೆಸರುಗಳು ಕೇಳಿಬರುತ್ತಿವೆ. ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಆಕಾಂಕ್ಷಿಗಳು ಅಧ್ಯಕ್ಷ, ನಾಮನಿರ್ದೇಶನ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗಳನ್ನು ಕ್ರೋಡೀಕರಿಸಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಳುಹಿಸಲಾಗಿದೆ. ಕೆಲ ಆಕಾಂಕ್ಷಿಗಳು ನೇರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೇ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ನಡೆಸಿರುವ ಲಾಬಿ ಎಷ್ಟರ ಮಟ್ಟಿಗೆ ಯಶಸ್ಸಾಗುತ್ತದೆಂಬುದು ಚಳಿಗಾಲ ಅಧಿವೇಶನದ ನಂತರ ಬಹಿರಂಗಗೊಳ್ಳಲಿದೆ.
- ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

