ಧಾರವಾಡ

ಬಡಮಕ್ಕಳಿಗೆ ಉನ್ನತ ಶಿಕ್ಷಣ ಗಗನಕುಸುಮ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 21
ಆ ಪದವಿಪೂರ್ವ ಸರ್ಕಾರಿ ಕಾಲೇಜಿಗೆ ಬರುವವರೆಲ್ಲ ಬಡ ಮಕ್ಕಳು. ಸರ್ಕಾರಿ ಪದವಿ ಶಿಕ್ಷಣವೂ ಇದೇ ಕಾಲೇಜ್ ಕ್ಯಾಂಪಸ್‌ನಲ್ಲಿ ಸಿಕ್ಕರೆ ಆ ಎಲ್ಲ ಮಕ್ಕಳ ಬದುಕು ಹಸನಾಗುತ್ತಿತ್ತು. ಆದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಅಂದು ಮಾಡಿದ ಸಣ್ಣದೊಂದು ಅಚಾತುರ್ಯದಿಂದ ಬಡ ವಿದ್ಯಾರ್ಥಿಗಳು ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸುವಂತಾಗಿದೆ.
ಇಂಥ ಸಂಕಷ್ಟಕ್ಕೆ ಎದುರಾಗಿರುವವರು ಗೋಪನಕೊಪ್ಪ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು. ಹುಬ್ಬಳ್ಳಿ ನಗರಕ್ಕೆ ಹೊಂದಿಕೊಂಡಿರುವ ಗೋಪನಕೊಪ್ಪ ಇಂದಿಗೂ ಅಕ್ಷರಶಃ ಹಳ್ಳಿ. ಇಲ್ಲಿ ಬಡಬಗ್ಗರು, ರೈತರು ವಾಸವಾಗಿದ್ದಾರೆ. ಇಂಥವರ ಪಾಲಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆ ಗಗನ ಕುಸುಮ. ಈ ಕಾರಣದಿಂದಾಗಿಯೇ ಗೋಪನಕೊಪ್ಪದಲ್ಲಿ ಸರ್ಕಾರಿ ಪ್ರೌಢ ಶಾಲೆಯೊಂದಿಗೆ ಪದವಿಪೂರ್ವ ಕಾಲೇಜನ್ನೂ ಆರಂಭಿಸಲಾಗಿತ್ತು. 1980ರಲ್ಲಿ ಸರ್ಕಾರಿ ಹೈಸ್ಕೂಲ್ ಆರಂಭವಾದರೆ 1982ರಲ್ಲಿ ಪಪೂ ಕಾಲೇಜು ಆರಂಭವಾಯಿತು. ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಇಂದಿಗೂ ಓದುತ್ತಿದ್ದಾರೆ.
ಸುತ್ತೂರಿಗೆ ಒಂದೇ ಕಾಲೇಜು: ಅಂದ ಹಾಗೆ, ಗೋಪನಕೊಪ್ಪಕ್ಕೆ ಹೊಂದಿಕೊಂಡಂತೆ ಬ್ಯಾಹಟ್ಟಿ, ಸುಳ್ಳ, ಮಂಟೂರ, ಹೆಬ್ಬಾಳ, ಕುಸುಗಲ್, ಶಿರಗುಪ್ಪ, ಕೇಶ್ವಾಪುರ, ದೇವಾಂಗಪೇಟ, ಬೆಂಗೇರಿ, ಉಣಕಲ್, ಸಾಯಿನಗರದಂತ ಹಿಂದುಳಿದ ಹಳ್ಳಿಗಳಿವೆ. ಇಂಥ ಪ್ರಸಂಗದಲ್ಲಿ ಸರ್ಕಾರ ಗೋಪನಕೊಪ್ಪ ಗ್ರಾಮವನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪದವಿ ಪೂರ್ವ ಕಾಲೇಜು ಆರಂಭಿಸಿತು. ಬಸ್ ಇನ್ನಿತರ ಸೌಲಭ್ಯ ಈ ಭಾಗಕ್ಕೆ ಲಭ್ಯವಿರುವುದರಿಂದ ಬಡ ವಿದ್ಯಾರ್ಥಿಗಳ ಪಾಲಿಗೆ ಈ ಕಾಲೇಜು ತುಂಬಾ ಅನುಕೂಲವಾಗಿ ಪರಿಣಮಿಸಿತು.
ಮುಂದೇನು ಎಂಬ ಪ್ರಶ್ನೆ?: ಆದರೆ ಪದವಿ ಪೂರ್ವ ವಿದ್ಯಾಭ್ಯಾಸ ಮುಗಿಸಿದ ಮಕ್ಕಳಿಗೆ ಮುಂದಿನ ಶಿಕ್ಷಣ ಎಲ್ಲಿ ಎನ್ನುವ ಪ್ರಶ್ನೆ ಉದ್ಭವವಾಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ತುಟ್ಟಿಯಾಗಿದ್ದರಿಂದ ಬಹುಪಾಲು ವಿದ್ಯಾರ್ಥಿಗಳು ಓದಿಗೆ ತಿಲಾಂಜಲಿಯನ್ನಿತ್ತರು. ಈ ಪೈಕಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಖಾಸಗಿ ಕಾಲೇಜು ಸೇರಿ ವಿದ್ಯಾಭ್ಯಾಸ ಮುಂದುವರಿಸಿದರು.
ಕಾಲೇಜು ಮಂಜೂರಾದರೂ: ಏತನ್ಮಧ್ಯೆ ಗ್ರಾಮಸ್ಥರು ಗೋಪನಕೊಪ್ಪದಲ್ಲಿರುವ ಪದವಿ ಪೂರ್ವ ಕಾಲೇಜು ಆವರಣದಲ್ಲಿಯೇ ಪದವಿ ಕಾಲೇಜನ್ನು ಆರಂಭಿಸಬೇಕೆಂಬ ಹೋರಾಟ ಕೈಗೊಂಡರು. ಪರಿಣಾಮ 2000ನೇ ಸಾಲಿನಲ್ಲಿ ಸರ್ಕಾರ ಹುಬ್ಬಳ್ಳಿ ತಾಲೂಕಿಗೆಂದು ಹೊಸ ಪದವಿ ಪೂರ್ವ ಕಾಲೇಜು ಮಂಜೂರಿ ಮಾಡಿತು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಹ ಈ ಕಾಲೇಜು ಗೋಪನಕೊಪ್ಪದಲ್ಲಿಯೇ ಆರಂಭಿಸಬೇಕೆಂಬ ಇಚ್ಛೆ ವ್ಯಕ್ತ ಪಡಿಸಿದರು. ಆದರೆ ದುರಾದೃಷ್ಟವಶಾತ ಹಾಲಿ ಇದ್ದ ಕಟ್ಟಡದಲ್ಲಿ ಪಾಠ ಮಾಡಲು ಕೊಠಡಿಗಳ ಕೊರತೆಯಿರುವುದರಿಂದ ಕೆಲ ಕಾಲ ಕಾಲೇಜನ್ನು ಬೇರೆ ಸ್ಥಳದಲ್ಲಿ ಆರಂಭಿಸಿ, ಆ ನಂತರ ಕಟ್ಟಡ ನಿರ್ಮಾಣವಾದ ಬಳಿಕ ಗೋಪನಕೊಪ್ಪಕ್ಕೆ ವರ್ಗಾವಣೆ ಮಾಡಿದರಾಯಿತು ಎಂಬ ನಿರ್ಧಾರಕ್ಕೆ ಬರಲಾಯಿತು.
ತದ ನಂತರ ಲ್ಯಾಮಿಂಗ್ಟನ್ ಶಾಲೆಯ ಆವರಣದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಗೊಂಡಿತು. ಈ ನಡುವೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೋಪನಕೊಪ್ಪದಲ್ಲಿ ಕೊಠಡಿಗಳು ನಿರ್ಮಾಣವಾಗಲೇ ಇಲ್ಲ. ಒಂದು ವರ್ಷವಾದ ಬಳಿಕ ಈ ಕಾಲೇಜನ್ನು ರಾಜನಗರದ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆದರೆ ರಾಜ್‌ನಗರ, ಗೋಪನಕೊಪ್ಪ ಸುತ್ತಮುತ್ತಲಿನ ಹಳ್ಳಿಗರಿಗೆ ದೂರವಾದ ಪರಿಣಾಮ ಮತ್ತಷ್ಟು ವಿದ್ಯಾರ್ಥಿಗಳು ಪದವಿ ಕಾಲೇಜು ಶಿಕ್ಷಣದಿಂದ ದೂರ ಸರಿದರು.
ಪ್ರಸ್ತುತ ಗೋಪನಕೊಪ್ಪ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವಿ ಕಾಲೇಜು ಆರಂಭಿಸಬಹುದೆಂಬ ಉದ್ದೇಶದಿಂದ 10 ಕೊಠಡಿಗಳು ನಿರ್ಮಾಣಗೊಂಡಿವೆ. ಸಾಲದಕ್ಕೆ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಮೈದಾನ ಸೇರಿದಂತೆ ಎಲ್ಲ ಸುಸಜ್ಜಿತ ವ್ಯವಸ್ಥೆ ಇದೆ. ಆದರೆ ತಾಂತ್ರಿಕ ಕಾರಣದಿಂದ ಪದವಿ ಕಾಲೇಜು ಮಾತ್ರ ಆರಂಭಗೊಂಡಿಲ್ಲ.
ಕಾಲ ಮಿಂಚಿ ಹೋಗಿದ್ದರಿಂದ ರಾಜ ನಗರ ವ್ಯಾಪ್ತಿಯಲ್ಲಿಯೇ ಸರ್ಕಾರಿ ಪದವಿ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಜಾಗ ಒದಗಿಸಿಕೊಟ್ಟಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ರು. 2.50 ಕೋಟಿ ಅನುದಾನ ಮಂಜೂರಿ ಮಾಡಿದೆ. ಹೀಗಾಗಿ ರಾಜನಗರದಿಂದ ಗೋಪನಕೊಪ್ಪಕ್ಕೆ ಪದವಿ ಕಾಲೇಜು ಸ್ಥಳಾಂತರವಾಗುವುದು ಕಷ್ಟಸಾಧ್ಯವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿಳಂಬ ಧೋರಣೆಯಿಂದ ಈ ಹಳ್ಳಿ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಪ್ರಸ್ತುತ ರಾಜನಗರದಲ್ಲಿನ ಕಾಲೇಜಿಗೆ ಹೋಗಲು ಅನಾಕೂಲವಾಗಿರುವುದರಿಂದ ಗೋಪನಕೊಪ್ಪದಲ್ಲಿಯೇ ಕಾಲೇಜು ಆರಂಭಿಸುವುದರೊಂದಿಗೆ, ಇದೀಗ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಅನುದಾನವನ್ನು ಗೋಪನಕೊಪಕ್ಕೇ ಬಳಕೆ ಮಾಡಬೇಕೆಂಬುದು ಗ್ರಾಮಸ್ಥರು, ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬಡ ಮಕ್ಕಳಿಗೆ ನೆರವಾಗಬೇಕಿದೆ.
-ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.