ಧಾರವಾಡ

ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ ಕನಕಾಪುರ ನಿಧನ

Published On :

ಧಾರವಾಡ: ಪಂ. ಮಲ್ಲಿಕಾರ್ಜುನ ಮನ್ಸೂರ್, ಪಂ. ಬಸವರಾಜ ರಾಜಗುರು, ಗಂಗೂಬಾಯಿ ಹಾನಗಲ್‌ರಂಥ ದೇಶದ ಅದ್ಭುತ ಹಿಂದೂಸ್ಥಾನಿ ಸಂಗೀತಗಾರರ ಗಾಯನಕ್ಕೆ ಹಾರ್ಮೋನಿಯಂ ಸಾಥ್ ನೀಡಿದ್ದ ಹಾರ್ಮೋನಿಯಂ ಮಾಂತ್ರಿಕ ಪಂ. ವಸಂತ್ ಕನಕಾಪುರ (76) ಇನ್ನಿಲ್ಲ. ಗುರುವಾರ ಸಂಜೆ ಧಾರವಾಡದ ಮಿಚಿಗಿನ್ ಕಂಪೌಂಡ್‌ನಲ್ಲಿನ ತಮ್ಮ ಸ್ವಗೃಹದಲ್ಲಿ ವಸಂತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಹುಬ್ಬಳ್ಳಿಯ ಆರ್.ಜಿ. ದೇಸಾಯಿ ಅವರ ಶಿಷ್ಯರಲ್ಲಿ ಒಬ್ಬರಾಗಿದ್ದು, ಕೇಸರಿಬಾಯಿ ಕೇಳಕರ್ ಅವರಿಂದ ಶಹಬ್ಬಾಶ್‌ಗಿರಿ ಪಡೆದ ಹಾರ್ಮೋನಿಯಂ ವಾದಕರಿವರು. 11ನೇ ವಯಸ್ಸಿನಿಂದಲೇ ಹಾರ್ಮೋನಿಯಂನಲ್ಲಿ ತಮ್ಮನ್ನು ತೊಡಗಿಸಿಕೊಂಡು ಪ್ರತಿಭೆ ಮೂಲಕವೇ ಇಡೀ ದೇಶದಲ್ಲಿ ಪ್ರಸಿದ್ಧರಾದರು. ಧಾರವಾಡದ ಆಕಾಶವಾಣಿಯಲ್ಲಿ ಸತತ 23 ವರ್ಷಗಳ ಕಾಲ ಉನ್ನತ ಶ್ರೇಣಿಯ ಸಂಗೀತ ಸಂಯೋಜಕರಾಗಿದ್ದ ಇವರಿಗೆ, ಹತ್ತಾರು ಜನ ಪ್ರಸಿದ್ಧ ಹಾರ್ಮೋನಿಯಂ ವಾದಕರ ಶಿಷ್ಯ ಬಳಗವಿದೆ. ದಾಸರ ರಚನೆ, ಶರಣರ ವಚನ, ಕನ್ನಡದ ಸುಪ್ರಿಸಿದ್ಧ ಕವಿಗಳ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ವಸಂತ್ ಕನಕಾಪುರ ಅವರು ಸುಗಮ ಸಂಗೀತದಲ್ಲಿ ಎತ್ತಿದ ಕೈ. ಮುಂಬೈನಲ್ಲಿ ನಡೆದ ಅಖಿಲ ಭಾರತ ಹಾರ್ಮೋನಿಯಂ ವಾದಕರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಪಂ. ಕನಕಾಪುರ ಅವರಿಗೆ ಇತ್ತೀಚೆಗೆ ಕನಕ ಪುರಂದರ ಪ್ರಶಸ್ತಿ ಲಭಿಸಿದ್ದು, ಕರ್ನಾಟಕ ರಾಜ್ಯೋತ್ಸವ, ಮಹಾರಾಷ್ಟ್ರದ ಮಂಜುಶರತ್ನ, ಕರ್ನಾಟಕ ಕಲಾಕಾರ ಮಂಡಳದಿಂದ ನಾದಶ್ರೀ ಮುಂತಾದಪ್ರಶಸ್ತಿಗಳು ಲಭಿಸಿವೆ. ಇವರ ನಿಧನಕ್ಕೆ ಪಂ. ವೆಂಕಟೇಶ ಕುಮಾರ್, ಅನಿಲ ದೇಸಾಯಿ ಸೇರಿದಂತೆ ಇಡೀ ಸಂಗೀತ ಲೋಕವೇ ಶ್ರದ್ಧಾಂಜಲಿ ಸಲ್ಲಿಸಿದೆ. ಧಾರವಾಡ ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ನ. 22ರ ಬೆಳಗ್ಗೆ 8.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬ ತಿಳಿಸಿದೆ.
ಇಂದು ರಾಜ್ಯ ಮಟ್ಟದ ಹೆಜ್ಜೆ ಮೇಳ
ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಹೈದರಲಿ ಯುವಕ ಸಂಘ ಹಾಗೂ ಆಝಾದ್ ಪುರುಷ ಸ್ವ-ಸಹಾಯ ಯುವಕ ಸಂಘದ ಸಂಯುಕ್ತ ಆಶ್ರಯದಲ್ಲಿ ಮೊಹರಂ ಹಬ್ಬದ ಅಂಗವಾಗಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಹೊನಲು ಬೆಳಕಿನ ಹೆಜ್ಜೆ ಮೇಳ ಸ್ಪರ್ಧೆಯನ್ನು ನ. 23ರಂದು ಸರ್ಕಾರಿ ಗಂಡು ಮಕ್ಕಳ ಶಾಲೆಯ ಅಗಸಿ ಮೈದಾನದ ಹತ್ತಿರ ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ ರು. 10001, ದ್ವಿತೀಯ ರು. 7501, ತೃತೀಯ ರು. 5001 ನೀಡಲಿದ್ದು, ಜೊತೆಗೆ ಶೀಲ್ಡ್ ಕೊಡಲಾಗುವುದು. ಶಿರಹಟ್ಟಿ ಶ್ರೀಫಕ್ಕೀರ ಸಿದ್ಧರಾಮ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಸದ ಪ್ರಹ್ಲಾದ್ ಜೋಶಿ ಉದ್ಘಾಟಿಸುವರು. ಶಾಸಕ ಸಿ.ಎಸ್. ಶಿವಳ್ಳಿ ಅಧ್ಯಕ್ಷತೆ ವಹಿಸುವರು. ಜಿಪಂ ಸದಸ್ಯೆ ನಿರ್ಮಲಾದೇವಿ ಉಪ್ಪಿನ ಹಾಗೂ ತಾಪಂ ಅಧ್ಯಕ್ಷೆ ಅಂಬಮ್ಮ ಪಾಟೀಲ ಕಾರ್ಯಕ್ರಮದ ಜ್ಯೋತಿ ಬೆಳಗಿಸುವರು. ಹೆಚ್ಚಿನ ಮಾಹಿತಿಗೆ 9945891528 ಸಂಪರ್ಕಿಸಬೇಕೆಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.