ಧಾರವಾಡ

ಕಚೇರಿ ದಾಳಿ: ಡಾ. ಪಾಟೀಲ ಪುಟ್ಟಪ್ಪ ಆಕ್ರೋಶ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ನ. 24
ಸಮಾಜ ಪರಿವರ್ತನಾ ಸಂಸ್ಥೆ ಮುಖ್ಯಸ್ಥ ಡಾ. ಎಸ್. ಆರ್. ಹಿರೇಮಠ ಅವರ ಕಚೇರಿ ಮೇಲೆ ದಾಳಿ ಮಾಡಿದ ಸಮಾಜ ವಿರೋಧಿಗಳನ್ನು ಸರ್ಕಾರ ಹಿಡಿದು ದಂಡಿಸಬೇಕೆಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಷ್ಟ್ರೀಯ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ಬಹುದೊಡ್ಡ ಹೋರಾಟ ಕೈಗೊಂಡಿರುವ ಎಸ್.ಆರ್. ಹಿರೇಮಠ, ಯಾರಿಗೂ ಮಣಿಯದೇ ಯಾವುದಕ್ಕೂ ಅಂಜದೇ ಕೈಗೊಂಡಿರುವ ಈ ಹೋರಾಟದಲ್ಲಿ ರಾಷ್ಟ್ರದ ಒಳ್ಳೆಯ ಜನರೆಲ್ಲರೂ ಅವರೊಂದಿಗೆ ಇದ್ದಾರೆ. ಸಂತೋಷ ಲಾಡ್ ಅವರ ವಿರುದ್ಧ ಅಗತ್ಯ ದಾಖಲೆಗಳನ್ನು ಮುಖ್ಯಮಂತ್ರಿಗಳ ಕೈಗೆ ಒಪ್ಪಿಸಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಹಿರೇಮಠ ಪಟ್ಟು ಹಿಡಿದಿದ್ದರು. ಅದರಂತೆ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ಒತ್ತಾಯ ಮೇರೆಗೆ ಸಂತೊಷ ಲಾಡ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ಹಿರೇಮಠ ಅವರ ಕಚೇರಿ ಮೇಲೆ ದಾಳಿ ಮಾಡಿದ್ದು, ಇದು ಸಮಾಜ ವಿರೋಧಿಗಳು ಮಾಡುವ ಕೆಲಸವಾಗಿದೆ. ಸಮಾಜ ವಿರೋಧಿ ಕಾರ್ಯದಲ್ಲಿ ತೊಡಗಿರುವ ಇಂತಹ ಜನರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರ ರಾಷ್ಟ್ರದ ಸಂಪತ್ತನ್ನು ಕಾಯಬೇಕೆನ್ನುವ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕು. ಸರ್ಕಾರ ಮಾಡಬೇಕಾದ ಕಾರ್ಯವನ್ನು ಹಿರೇಮಠ ಅವರು ಮಾಡುತ್ತಿದ್ದಾರೆ. ಅವರ ನಿಖರ, ನಿಸ್ವಾರ್ಥ ಸೇವೆಗೆ ಜನತೆ ಅವರನ್ನು ಅಭಿನಂದಿಸಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.