ಧಾರವಾಡ

ಕಸ ಹೊಡೆಯೋ ನೌಕರಿ ಮಾತ್ರ ಕನ್ನಡಿಗರಿಗೆ

Published On :

ಸುವರ್ಣ ವಿಧಾನಸೌಧ, ಬೆಳಗಾವಿ, ನ. 25
ವಿಧಾನಪರಿಷತ್:  ಸರೋಜಿನಿ ಮಹಿಷಿ ವರದಿ ಅನುಷ್ಠಾನ ಮತ್ತು ಅಮೂಲ್ಯ ಔಷಧಿ ಸಸ್ಯ ಮತ್ತು ವನ್ಯ ಜೀವಿಗಳಿಗೆ ಆಶ್ರಯ ನೀಡಿರುವ ಗದಗ ಜಿಲ್ಲೆ ಕಪ್ಪತ ಗುಡ್ಡದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಚಾರ ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿ ತೀವ್ರ ಚರ್ಚೆಗೆ ದಾರಿ ಮಾಡಿಕೊಟ್ಟಿತು.
ಸರೋಜಿನಿ ಮಹಿಷಿ ವರದಿ 27 ವರ್ಷಗಳಾದರೂ ಅನುಷ್ಠಾನವಾಗುತ್ತಿಲ್ಲ. ಕೆಐಎಡಿಬಿ ಮೂಲಕ ಕಂಪನಿಗಳು ಎಷ್ಟು ಭೂಮಿ ಪಡೆದಿವೆ ಹಾಗೂ ಎಷ್ಟು ಕಂಪನಿಗಳು ಅಲ್ಲಿ ಉದ್ಯಮ ಸ್ಥಾಪಿಸಿವೆ ಹಾಗೂ ಎಷ್ಟು ಜನ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಟ್ಟಿವೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕಸ ಹೊಡೆಯಲು ನೌಕರಿ ಮಾತ್ರ ಕನ್ನಡಿಗರಿಗೆ ನೀಡಿ ಉನ್ನತ ಮಟ್ಟದ ಹುದ್ದೆಗಳನ್ನು ತಮ್ಮವರಿಗೆ ನೀಡುವ ಕಂಪನಿಗಳ ನೀತಿ ಎಷ್ಟರ ಮಟ್ಟಿಗೆ ಸರಿ. ಈ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ವರದಿ ಅನುಷ್ಠಾನವಾಗಲೇಬೇಕು ಎಂದು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದರು.
ವರದಿ ಅನುಷ್ಠಾನಕ್ಕಾಗಿ ಈಗಾಗಲೇ ನಾಲ್ಕಾರು ಸಮಿತಿಗಳನ್ನು ರಚಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಮತ್ತೊಂದು ಸಮಿತಿ ರಚಿಸಲು ಮುಂದಾಗಿದ್ದಾರೆ. ಹೀಗೆ ಸಮಿತಿಗಳನ್ನು ರಚಿಸೋದರಲ್ಲಿ ಕಾಲ ಕಳೆದರೆ ಕನ್ನಡಿಗರಿಗೆ ಅನ್ಯಾಯ ಮುಂದುವರಿಯುತ್ತದೆ. ಸರ್ಕಾರ ಈ ವಿಷಯದಲ್ಲಿ ನೀಡಿರುವ ಉತ್ತರ ಸಮರ್ಪಕವಿಲ್ಲ. ಈ ವರದಿ ಅನುಷ್ಠಾನ ಆಗುವುದೋ ಅಥವಾ ಇಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಲಿ ಎಂದು ಹೊರಟ್ಟಿ ಆಗ್ರಹಿಸಿದರು.
ಇದಕ್ಕೆ ಇತರೆ ಸದಸ್ಯರಾದ ಅಮರನಾಥ ಪಾಟೀಲ, ದೊಡ್ಡರಂಗೇಗೌಡ ಹಾಗೂ ಎಂ.ಸಿ. ನಾಣಯ್ಯ ಧ್ವನಿಗೂಡಿಸಿದರು.
ಸರ್ಕಾರದ ಪರವಾಗಿ ಮಾತನಾಡಿದ ಸಭಾನಾಯಕ ಎಸ್.ಆರ್. ಪಾಟೀಲ್, 27 ವರ್ಷಗಳಲ್ಲಿ ಅನೇಕ ಸರ್ಕಾರಗಳು ಆಡಳಿತ ನಡೆಸಿದ್ದು, ಎಲ್ಲರಿಗೂ ಈ ವರದಿ ಜಾರಿಯ ಹೊಣೆಗಾರಿಕೆ ಇದೆ. ಕನ್ನಡಿಗರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಪ್ರತಿಧ್ವನಿಸಿದ ಕಪ್ಪತ್ ಗುಡ್ಡ: ಇದಕ್ಕೂ ಮುಂಚೆ ತಾರಾ ಅನುರಾಧ ಅವರು ಕಪ್ಪತಗುಡ್ಡದಲ್ಲಿ ಅಕ್ರಮ ಗಣಿಗಾರಿಕೆಯಿಂದ ಅಲ್ಲಿನ ಔಷಧಿ ಸಸ್ಯಗಳಿಗೆ ಹಾಗೂ ವನ್ಯ ಜೀವಿಗಳಿಗೆ ಕುತ್ತು ಬಂದಿದೆ. 17 ಸಾವಿರ ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ 21 ಸಾವಿರಕ್ಕೂ ಹೆಚ್ಚು ಔಷಧಿ ಸಸ್ಯಗಳನ್ನು ಹೊಂದಿರುವ ಗುಡ್ಡ ಗಣಿಗಾರಿಕೆಯಿಂದ ನಲಗುತ್ತಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸಿ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಗಣಿಗಾರಿಕೆ ವಿರುದ್ಧ ಕ್ರಮ: ಸರ್ಕಾರದ ಪರವಾಗಿ ಉತ್ತರಿಸಿದ ಸಭಾನಾಯಕ ಎಸ್.ಆರ್. ಪಾಟೀಲ್, ಎಚ್.ಆರ್. ದೊಡ್ಡಣ್ಣವರ ಹಾಗೂ ಆಶಾ ಟ್ರಾನ್ಸಪೋರ್ಟ್ ಅವರಿಗೆ ಕಬ್ಬಿಣ ಅದಿರಿನ ಗಣಿಗಾರಿಕೆಗೆ ನಡೆಸಲು  30 ವರ್ಷಗಳ ಗುತ್ತಿಗೆ ನೀಡಲಾಗಿತ್ತು. ಈಗ ಅವಧಿ ಮುಗಿದಿದೆ. ಗುತ್ತಿಗೆ ನವೀಕರಣಕ್ಕೆ ಅರ್ಜಿ ಬಂದಿದ್ದು ಸರ್ಕಾರ ಅದನ್ನು ತಿರಸ್ಕರಿಸಿದೆ. 2010ರಲ್ಲಿ ಇಲ್ಲಿನ ಹಿರೇವಡ್ಡಹಟ್ಟಿ ಗ್ರಾಮದಲ್ಲಿ ನಡೆದ ಅನಧಿಕೃತ ಗಣಿಗಾರಿಕೆಯನ್ನು ಸರ್ಕಾರ ಜಪ್ತಿ ಮಾಡಿದೆ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
2 ಸಾವಿರ ಅಡಿ ತೆಗ್ಗು: ಗುಡ್ಡದಲ್ಲಿ ಅಕ್ರಮ ಗಣಿಕಾರಿಕೆ ಬಗ್ಗೆ ಅರಣ್ಯ ಅಧಿಕಾರಿಗಳಿಗೂ ಗೊತ್ತು. ಇತ್ತೀಚೆಗೆ ನಾನೇ ಭೇಟಿ ನೀಡಿದಾಗ ಅದು ತಿಳಿದು ಬಂದಿದೆ. ಬಲ್ದೋಟಾ ಕಂಪನಿ ತಮಗೆ ನೀಡಿದ ಭೂಮಿಯಲ್ಲಿ ಮಾತ್ರ ಬಂಗಾರದ ನಿಕ್ಷೇಪ ಹುಡುಕುವುದನ್ನು ಬಿಟ್ಟು, ಉಳಿದೆಲ್ಲಾ ಭೂಮಿಯಲ್ಲಿ ಸುಮಾರು 2 ಸಾವಿರ ಅಡಿ ತೆಗ್ಗು ತೆಗಿದಿದೆ. ಇದಕ್ಕೆ ಸರ್ಕಾರದ ಕ್ರಮವೇನೆಂದು ಬಸವರಾಜ ಹೊರಟ್ಟಿ ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, 243 ಕಿ.ಮೀ. ವಿಸ್ತೀರ್ಣದ ಈ ಗುಡ್ಡವು ಪಶ್ಚಿಮ ಘಟ್ಟದ ಬಗ್ಗೆ ಜನ ಹೊಂದಿರುವ ಭಾವನಾತ್ಮಕ ಸಂಬಂಧವನ್ನು ಗದಗ ಜನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಅಲ್ಲಿ ಅಕ್ರಮ ಗಣಿಕಾರಿಕೆ ನಡೆಸಲು ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.