ಧಾರವಾಡ

ಸರ್ಕಾರಕ್ಕೆ ನೀರಿಗಿಂತ ಕರೆಂಟ್ ಮುಖ್ಯವೇ?

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 25
ಮಹದಾಯಿ ನ್ಯಾಯಾಧೀಕರಣದಿಂದ ನೀರು ಪಡೆಯುವುದಕ್ಕಿಂತ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆ ಮುಖ್ಯವಾಗಿದೆ ಏನೋ ಎಂಬ ಭಾವನೆ ಕಳಸಾ-ಬಂಡೂರಿ ಹೋರಾಟಗಾರರನ್ನು ಇತ್ತೀಚೆಗೆ ಕಾಡುತ್ತಿರುವುದಂತೂ ಸತ್ಯ.
ಕುಡಿಯುವ ನೀರಿಗೆ ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಪಡೆದ ಅನೇಕ ಉದಾಹರಣೆಗಳಿವೆ. ಆದರೆ ರಾಜ್ಯ ಸರ್ಕಾರವಾಗಲಿ, ನ್ಯಾಯಾಧೀಕರಣದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ನ್ಯಾಯವಾದಿಗಳು ಈ ಸಂಬಂಧ ಪ್ರಯತ್ನಿಸದಿರುವುದನ್ನು ನೋಡಿದರೆ ಹೋರಾಟಗಾರರಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಭಾವನೆ ದಿಟ ಎನ್ನುವಂತಾಗಿದೆ. ಒಂದು ವೇಳೆ ಮಧ್ಯಂತರ ಆದೇಶದ ಮುಖಾಂತರ ಪಡೆದ ನೀರಿನ ಸಮರ್ಪಕ ಬಳಕೆಗೆ ನಮ್ಮಲ್ಲಿ ಯೋಜನೆ ಇಲ್ಲ ಎಂದು ಸರ್ಕಾರ ಹೇಳುತ್ತಿದ್ದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಯೋಜನೆಯಿಂದ ವಿದ್ಯುತ್ ಉತ್ಪಾದಿಸೋಣ ಎಂದುಕೊಂಡರೆ ಅದಕ್ಕೆ ಗೋವಾ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ವಾದಿಸುತ್ತಿದ್ದಾರೆ. ಒಟ್ಟಾರೆ ಮಹದಾಯಿ ನದಿಯಲ್ಲಿರುವ ಕರ್ನಾಟಕದ 50 ಟಿಎಂಸಿ ಪಾಲನ್ನು ಕುಡಿಯುವ ಮತ್ತು ನೀರಾವರಿ ಉದ್ದೇಶಕ್ಕೆ ಬಳಸದೇ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುವುದಕ್ಕೆ ಯೋಜನೆ ಸಿದ್ಧಪಡಿಸುತ್ತಿದೆಯೇ ಎಂಬ ಸಂಶಯ ಮೂಡುತ್ತಿದೆ. ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ 9 ತಾಲೂಕುಗಳ ಹಲವಾರು ನದಿ ತೀರದ ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಸಬಹುದು. ಆದರೆ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ವಿಚಾರ ಮಾಡದೇ, ಮಹಾದಾಯಿ ನ್ಯಾಯಾಧೀಕರಣದ ಆದೇಶ ಬರಲಿ, ಕುಡಿಯುವ ನೀರೂ ಆಗುತ್ತದೆ ವಿದ್ಯುತ್ ಉತ್ಪಾದನೆಯೂ ಆಗುತ್ತದೆ ಎಂದು ಕಾಯುತ್ತಿದೆ.
ಕಣ್ಣೊರೆಸುವ ತಂತ್ರ: ಇದರ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ವರ್ಷದ ಹೊತ್ತಿಗೆ ಕಳಸಾ ಹಳ್ಳದಿಂದ 1.5 ಟಿಎಂಸಿ ನೀರು ಪಡೆದು ಮಲಪ್ರಭೆಯ ಒಡಲು ತುಂಬಿಸಲಾಗುವುದು ಎಂದು ಹೇಳಿಕೊಳ್ಳುತ್ತಿದೆ. ಆದರೆ ವಾಸ್ತವದಲ್ಲಿ 1.5 ಟಿಎಂಸಿ ನೀರನ್ನು ಪಡೆಯುವುದಕ್ಕೆ ಸರ್ಕಾರ ಎಳ್ಳು ಕಾಳಿನಷ್ಟು ಪ್ರಯತ್ನ ಪಡಬೇಕಿಲ್ಲ. ಕಳಸಾ ಹಳ್ಳದಿಂದ ನೀರು ಪಡೆಯುವುದಕ್ಕೆ ಅಂದಿನ ಜೆಡಿಎಸ್-ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿರ್ಮಿಸಿರುವ 4.5 ಕಿ.ಮೀ. ಕಾಲುವೆ ಸ್ವಾಭಾವಿಕವಾಗಿ 1.5 ಟಿಎಂಸಿ ನೀರನ್ನು ತರುತ್ತದೆ ಎನ್ನುವುದು ಹೋರಾಟಗಾರರ ಅಭಿಪ್ರಾಯ. ಈಗ ಏನಿದ್ದರೂ ಕಳಸಾ ಹಳ್ಳದಿಂದ ಇನ್ನುಳಿದ 2 ಟಿಎಂಸಿ ನೀರು ಪಡೆಯುವುದಕ್ಕೆ ಅರಣ್ಯ ಪ್ರದೇಶದಲ್ಲಿ 456 ಮೀಟರ್ ಕಾಲುವೆ ನಿರ್ಮಾಣ ಮತ್ತು ಮಹದಾಯಿಯತ್ತ ನೀರು ಹರಿಯದಂತೆ ತಡೆಗೋಡೆ ನಿರ್ಮಿಸುವುದಕ್ಕೆ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದಿಂದ ಕಾಮಗಾರಿ ಮುಂದುವರಿಸಲು ಹಸಿರು ನಿಶಾನೆ ಪಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಒಂದೇ ಒಂದು ಹೆಜ್ಜೆ ಇಟ್ಟಿಲ್ಲ. ಸ್ವಾಭಾವಿಕವಾಗಿ ಹರಿದು ಬರುವ ನೀರನ್ನೇ ತನ್ನ ಸಾಧನೆ ಎಂದು ಸರ್ಕಾರ ಹೇಳಿಕೊಳ್ಳಲು ಹೊರಟಿದ್ದು, ಕಳಸಾ ಹಳ್ಳದಿಂದ ಪಡೆಯಬೇಕಿರುವ ಇನ್ನುಳಿದ ನೀರು ಮತ್ತು ಬಂಡೂರಿ ನಾಲಾ ಕುರಿತು ಸರ್ಕಾರ ಮತ್ತು ನ್ಯಾಯವಾದಿಗಳ ತಂಡ ಏನು ಮಾತನಾಡದಿರುವುದು ನೋಡಿದ ನಂತರ ಕಳಸಾ ಹೋರಾಟಗಾರರ ಮನಸ್ಸಿನಲ್ಲಿ ಸರ್ಕಾರದ ಉದ್ದೇಶವೇ ಬೇರೆ ಇದೆ ಎಂಬ ಅನುಮಾನ ಕಾಡ ತೊಡಗಿದೆ.
ಮತ್ತೆ ಕಾಮಗಾರಿ?: ಇಂತಹದ್ದೊಂದು ಪ್ರಶ್ನೆ ಉದ್ಭವಿಸಲು ಕಾರಣ ಸರ್ಕಾರ. ಈಗಾಗಲೇ 125 ಕೋಟಿ ವೆಚ್ಚ ಮಾಡಿ ಕಳಸಾ ಹಳ್ಳದಿಂದ ನೀರು ತರುವುದಕ್ಕೆ 4.5 ಕಿ.ಮೀ. ಉದ್ದದ ಸಿಂಗಲ್ ಸಿಮೆಂಟ್ ವೆಂಟ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆದರೆ ಇತ್ತೀಚೆಗೆ ಸರ್ಕಾರ ಸಿಂಗಲ್ ವೆಂಟ್ ಜತೆಗೆ ಡಬಲ್ ಸಿಮೆಂಟ್ ವೆಂಟ್ ಇರಲಿ ಎಂದು ಕ್ರಿಯಾಯೋಜನೆ ರೂಪಿಸಿದೆ. ಮೆದು ಭೂಸ್ತರ ಹೊಂದಿರುವ ಈ ಪ್ರದೇಶದಲ್ಲಿ ಸಿಂಗಲ್ ಸಿಮೆಂಟ್ ವೆಂಟ್ ಕಾಮಗಾರಿ ಪೂರ್ಣಗೊಂಡಿದೆ. ಮಣ್ಣುಕುಸಿತ ಸಾಮಾನ್ಯವಾಗಿರುವ ಈ ಪ್ರದೇಶದಲ್ಲಿ ಮತ್ತೆ ಕಾಮಗಾರಿ ಆರಂಭಿಸಿದಲ್ಲಿ ಯೋಜನೆಯ ಅನುಷ್ಠಾನ ಮತ್ತೆ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ. ಕಳಸಾ-ಬಂಡೂರಿ ನಾಲಾ ಹೋರಾಟಗಾರರು ಹೇಳುವಂತೆ ಸರ್ಕಾರಕ್ಕೆ ಮೊದಲನೆಯದಾಗಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇಚ್ಛಾಶಕ್ತಿ ಇಲ್ಲ. ಇದರ ಜತೆಗೆ ಖಾಸಗಿ ವಿದ್ಯುತ್ ಉತ್ಪಾದನಾ ಲಾಬಿ ಕೂಡ ಕೆಲಸ ಮಾಡುತ್ತಿದ್ದು, ಇದು ಮಲಪ್ರಭಾ ನದಿಗೆ ಹರಿದು ಬರಬೇಕಿರುವ ನೀರನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಆದ್ದರಿಂದ ಸರ್ಕಾರ ಮೊದಲು ನೀರು ಮುಖ್ಯವೋ ಅಥವಾ ವಿದ್ಯುತ್ ಮುಖ್ಯವೋ ಎನ್ನುವ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

 ಸತೀಶ ಪಾಗಾದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.