ಧಾರವಾಡ

ಸೋಂಕಿತರಿಗೆ ನೆರವಾಗಲು ವೈದ್ಯನಾಗುವ ಕನಸು

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 30
ಆಟವಾಡುತ್ತ ಕುಣಿದು ಕುಪ್ಪಳಿಸಬೇಕಾದ 11ರ ಎಳೆ ವಯಸ್ಸಿನಲ್ಲಿ ಅಂಟಿಕೊಂಡಿದ್ದು ಏಡ್ಸ್ ಎಂಬ ಹೆಮ್ಮಾರಿ. ಯಾವುದೇ ತಪ್ಪು ಮಾಡದೇ ಇದ್ದರೂ ತಂದೆ-ತಾಯಿಯ ಬಳುವಳಿಯಾಗಿ ಏಡ್ಸ್ ಈ ಮುಗ್ಧ ಬಾಲಕನನ್ನು ಆವರಿಸಿದೆ.
ಹುಬ್ಬಳ್ಳಿ ಬನ್ನಿಮಹಾಕಾಳಿ ನಗರದ ನಿವಾಸಿ ಅಬ್ದುಲ್ ರಾಯಚೂರ (ಹೆಸರು ಬದಲಾಯಿಸಲಾಗಿದೆ)ಗೆ ಈಗ 11ರ ಬಾಲ್ಯ. ಇಲ್ಲಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈತನಿಗೆ ಡಾಕ್ಟರ್‌ನಾಗಬೇಕೆಂಬ ಬಯಕೆ. ಮೇಲಿಂದ ಮೇಲೆ ಹದಗೆಡುವ ಆರೋಗ್ಯಕ್ಕೆ ಚಿಕಿತ್ಸೆ ಪಡೆಯುವುದಕ್ಕಾಗಿ ಆಸ್ಪತ್ರೆಗೆ ತೆರಳುವ ಅಬ್ದುಲ್, ಆಸ್ಪತ್ರೆಯಲ್ಲಿ ವೈದ್ಯರು ನಿರ್ವಹಿಸುವ ಕಾರ್ಯವೈಖರಿಯಿಂದ ಪ್ರಭಾವಿತನಾಗಿದ್ದಾನೆ. ತಾನು ದೊಡ್ಡವನಾದ ಮೇಲೆ ರೋಗಿಗಳಿಗೆ ಉಪಕಾರ ಮಾಡಬೇಕೆಂಬ ಆಶಯ ಈತನದ್ದು.
ಸರ್ಕಾರಿ ಶಾಲೆಯೊಂದರಲ್ಲಿ 5ನೇ ತರಗತಿಯಲ್ಲಿ ಓದುತ್ತಿರುವ ಅಬ್ದುಲ್ ಆಟೋಟದಲ್ಲಾಗಲಿ, ಶಿಕ್ಷಣದಲ್ಲಾಗಲಿ ಅಷ್ಟಕ್ಕಷ್ಟೇ. ಶಾಲೆಯಲ್ಲಿ ಇತರ ಮಕ್ಕಳೊಂದಿಗೆ ಸಾಮಾನ್ಯ ಮಕ್ಕಳಂತೆ ಬೆರೆತರೂ ಅಲ್ಲಿಯ ಶಿಕ್ಷಕರು ಈತನನ್ನು ಅಸ್ಪೃಶ್ಯನಂತೆ ಕಾಣುತ್ತಾರೆ. ಅಬ್ದುಲ್‌ನ ರೋಗದ ಬಗ್ಗೆ ಅರಿತಿರುವ ಇಲ್ಲಿಯ ಶಿಕ್ಷಕರು, ಅದೊಂದು ಅಂಟುರೋಗವೆಂಬಂತೆ ಭಾವಿಸುತ್ತಿರುವುದು ವಿಷಾದನೀಯ. ಏಡ್ಸ್‌ನಂಥ ರೋಗಗಳ ಬಗ್ಗೆ ಅರಿತಿರುವ ಈ ಸುಶಿಕ್ಷಿತರು ಇಂಥ ರೋಗಿಗಳಿಗೆ ಧೈರ್ಯ ತುಂಬುವ ಬದಲು ಇರುವ ಅರ್ಧಂಬರ್ಧ ಧೈರ್ಯವನ್ನೂ ಬುಡಮೇಲು ಮಾಡುವಂಥೆ ವರ್ತಿಸುವುದು ಖೇದಕರ. >
ಅಬ್ದುಲ್ 2 ತಿಂಗಳ ಹಸುಗೂಸಿದ್ದಾಗಲೇ ಈತನ ತಂದೆ-ತಾಯಿ ಏಡ್ಸ್ ರೋಗದಿಂದ ಮೃತಪಟ್ಟರು. ಅನಂತರ ಸಂಬಂಧಿಕರ ಮನೆಯಲ್ಲಿ ಬೆಳೆದ. ಇದೀಗ ಅಬ್ದುಲ್‌ನ ಇಬ್ಬರು ಹಿರಿಯ ಅಕ್ಕಂದಿರೇ ಈತನ ಜವಾಬ್ದಾರಿ ವಹಿಸಿದ್ದಾರೆ. ಇಬ್ಬರೂ ಅಕ್ಕಂದಿರು ಆರೋಗ್ಯದಿಂದ ಇದ್ದು, ಹುಬ್ಬಳ್ಳಿಯಲ್ಲಿಯೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಇವರ ವಾಸ. ಈ ಚಿಕ್ಕ ಕುಟುಂಬಕ್ಕೆ ಅಬ್ದುಲ್‌ನ ಆರೋಗ್ಯ ನಿರ್ವಹಣೆಯ ವೆಚ್ಚ ಭರಿಸಲು ಕಷ್ಟವಾಗಿದ್ದರಿಂದ ಇವರ ಸಹಾಯಕ್ಕೆ ಬಂದಿದ್ದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸುತ್ತಲಿನ ಕೆಲ ನಾಗರಿಕರು. ಕರವೇ ಕಾರ್ಯಕರ್ತರು ಈತನ ವೈದ್ಯಕೀಯ ವೆಚ್ಚ ಭರಿಸುತ್ತಿದ್ದರೆ, ಸುತ್ತಲಿನ ನಾಗರಿಕರು ಬಟ್ಟೆ ಹಾಗೂ ಮತ್ತಿತರ ವೆಚ್ಚ ನಿಭಾಯಿಸುತ್ತಿದ್ದಾರೆ.
ಸದಾ ತನ್ನ ಗುಂಗಿನಲ್ಲಿಯೇ ಇರುವ ಅಬ್ದುಲ್, ಇತರರೊಡನೆ ಬೆರೆತು ನಗುವುದು ಕಡಿಮೆಯೇ. ಈತ ಹಸನ್ಮುಖಿಯಾಗಿದ್ದನ್ನು ನೋಡಿದವರೂ ವಿರಳ. ಕೆಲ ಬಾರಿ ಶಾಲೆ ಬಿಟ್ಟು ಮನೆಯಲ್ಲಿಯೇ ಏಕಾಂತವಾಗಿರುತ್ತಾನೆ.
ಬಾಲಕ ಅಬ್ದುಲ್‌ನನ್ನು ಸರ್ಕಾರ ದತ್ತು ಪಡೆದು ಆತನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚ ಭರಿಸಬೇಕೆಂಬ ಆಗ್ರಹ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಈತನ ಮನೆಯ ಸುತ್ತಲಿನ ನಾಗರಿಕರದ್ದು. ಪ್ರತಿ ವರ್ಷ ಡಿಸೆಂಬರ್ 1ಕ್ಕೆ ವಿಶ್ವ ಏಡ್ಸ್ ದಿನ ಆಚರಿಸಿ, ಭಾಷಣ ಬಿಗಿಯುವ ಬದಲು ಏಡ್ಸ್ ಪೀಡಿತರನ್ನು ದತ್ತು ತೆಗೆದುಕೊಂಡು ಅವರ ವೈದ್ಯಕೀಯ ವೆಚ್ಚ ಭರಿಸುವ ಮೂಲಕ ಸರ್ಕಾರ ರೋಗಿಗಳಲ್ಲಿ ಮಾನಸಿಕ ಧೈರ್ಯ ತುಂಬಬೇಕೆಂಬ ಒತ್ತಾಯ ಕರವೇ ಕಾರ್ಯಕರ್ತರದ್ದು.


-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.