ಧಾರವಾಡ

ಹುಬ್ಬಳ್ಳಿ: ಇಂದು ಬಿಜೆಪಿ ಕಾರ್ಯಕಾರಿಣಿ ಸಭೆ

Published On :

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ರಾಜ್ಯ ಮೋರ್ಚಾ ಕಾರ್ಯಕಾರಿಣಿ ಸಭೆ ಕುಸುಗಲ್ ರಸ್ತೆ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಡಿ. 1ರ ಬೆಳಗ್ಗೆ 11ಕ್ಕೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ರಾಜ್ಯ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಡಾ. ಎಂ. ಎಫ್. ಮೊಹಸ್ಸಿನ್, ಗೋಪಿನಾಥ ರೆಡ್ಡಿ, ಎಂ. ನಾಗರಾಜ, ಎಂ.ಎಂ. ಅಹ್ಮದ, ಲಿಂಗರಾಜ ಪಾಟೀಲ, ಪೀರಾಹುಸೇನ ಹೊಸಳ್ಳಿ, ಮಹೇಶ ಟೆಂಗಿನಕಾಯಿ ಮತ್ತಿತರರು ಪಾಲ್ಗೊಳ್ಳುವರು. ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು ಆಗಮಿಸಬೇಕು. ಚುನಾವಣೆ ಎದುರಿಸುವ ರಣನೀತಿ, ವಿವಿಧ ಸಮಿತಿ ರಚನೆ, ನೂತನ ಪದಾಧಿಕಾರಿಗಳ ಆಯ್ಕೆ, ಕಾರ್ಯಕರ್ತರ  ಜವಾಬ್ದಾರಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕುರಿತು ಪ್ರಮುಖರು ತಿಳಿ ಹೇಳಲಿದ್ದಾರೆ. ಸಭೆಯ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಭಾಗಗಳಿಂದ ಪದಾಧಿಕಾರಿಗಳು ನಗರಕ್ಕೆ ಆಗಮಿಸಿದ್ದಾರೆ.

ನಿವೃತ್ತ ನೌಕರರು ರಚನಾತ್ಮಕ ಕಾರ್ಯದಲ್ಲಿ ತೊಡಗಲಿ
ಹುಬ್ಬಳ್ಳಿ: ನಿವೃತ್ತ ನೌಕರರು ತಮ್ಮ ವಿಶ್ರಾಂತ ದಿನಗಳನ್ನು ಸುಖ-ಶಾಂತಿಯಿಂದ ಕಳೆಯಬೇಕು ಎಂದು ನಿವೃತ್ತ ಉಪ ಮಹಾದಂಡನಾಯಕ (ಲೆ.ಜನರಲ್) ಎಸ್. ಸಿ. ಸರದೇಶಪಾಂಡೆ ಸಲಹೆ ನೀಡಿದರು. ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಿವೃತ್ತರು ತಮ್ಮ ಉಳಿದ ಜೀವನವನ್ನು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಳೆಯಬೇಕು ಎಂದರು.  ತಜ್ಞ ವೈದ್ಯ ಡಾ. ಬಿ.ಆರ್. ಪಾಟೀಲ, ಡಾ. ಎನ್.ಎ. ಚರಂತಿಮಠ, ಧಾರವಾಡದ ಮನೋವೈದ್ಯ ಡಾ. ಆನಂದ ಪಾಂಡುರಂಗಿ, ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ. ಕರಮರಿ, ಕಾರ್ಯದರ್ಶಿ ಅಚ್ಯುತ ಲಿಮಯೆ, ಪ್ರೊ. ಸಿ. ಸಿ. ದೀಕ್ಷಿತ, ಮಾಧುರಿ ಕುಲಕರ್ಣಿ ಇತರರಿದ್ದರು.

ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಮನವಿ
ಹುಬ್ಬಳ್ಳಿ: ಎಸ್.ಎಂ. ಕೃಷ್ಣಾನಗರ ಆಶ್ರಯ ಬಡಾವಣೆಯಲ್ಲಿ ಮೀಸಲಿಟ್ಟ ಜಾಗೆಯಲ್ಲಿ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿ ಹುಬ್ಬಳ್ಳಿ-ಧಾರವಾಡ ರಹವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಶನಿವಾರ ಪಾಲಿಕೆ ಆಯುಕ್ತ ರಮಣದೀಪ ಚೌಧರಿಗೆ ಮನವಿ ನೀಡಿದರು. ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಎಸ್.ಎಂ. ಕೃಷ್ಣಾನಗರ ಆಶ್ರಯ ಬಡಾವಣೆಯಲ್ಲಿ ಕಾಯ್ದಿರಿಸಿದ ಜಾಗದಲ್ಲಿ 10 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಬೇಕೆಂದರು. ದಾದಾಪೀರ ಬೇಪಾರಿ, ಅನ್ವರ ಮುಧೋಳ, ಬಾಬಾಜಾನ ಮುಧೋಳ, ಮಹ್ಮದರಫೀಕ ದಂಡೋತಿ, ಸುಲೇಮಾನ ಶೇಖ, ನಜೀರ ಶೇಖ, ಶಫೀ ಮುದ್ದೇಬಿಹಾಳ, ಶಬ್ಬೀರ ನದಾಫ್ ಮುಂತಾದವರು ಇದ್ದರು.

ಕ್ರೀಡಾ ಕ್ಷೇತ್ರದಲ್ಲಿ ನಿಧಿ ಪಾಟೀಲ ಸಾಧನೆ
ಹುಬ್ಬಳ್ಳಿ: ಆಕ್ಸ್‌ಫರ್ಡ್ ಪದವಿಪೂರ್ವ ಕಾಲೇಜಿನ ಪಿಯು ದ್ವಿತೀಯ ವರ್ಷದ ವಿದ್ಯಾರ್ಥಿನಿ ನಿಧಿ ಪಾಟೀಲ ಟೇಬಲ್ ಟೆನ್ನಿಸ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಧಾರವಾಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗೋಕಾಕನಲ್ಲಿ ನಡೆದ ದಸರಾ ಕ್ರೀಡಾಕೂಟದ ಟೆನ್ನಿಸ್ ಪಂದ್ಯದಲ್ಲಿ ಬಂಗಾರದ ಪದಕ ಬಾಚಿಕೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ ದಸರಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಪಡೆದಿದ್ದು, ಮೈಸೂರು ದಸರಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ಗ್ರೂಪ್ ಟ್ರೋಫಿ ತಮ್ಮದಾಸಿಕೊಂಡಿದ್ದಾರೆ. ಪೈಕಾ ಆಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾಲೇಜಿನ ಸಾಧನೆ ಜತೆಗೆ ಕೀರ್ತಿಯನ್ನು ತಂದ ವಿದ್ಯಾರ್ಥಿನಿಯನ್ನು ಕಾಲೇಜಿನ ಅಧ್ಯಕ್ಷ ವಸಂತ ಹೊರಟ್ಟಿ, ಪ್ರಾಚಾರ್ಯ ಡಾ. ಆರೀಫಾ ಮಕಾನದಾರ, ಕ್ರೀಡಾ ವಿಭಾಗದ ಮುಖ್ಯಸ್ಥ ರವಿ ಅಂಬಿಗೇರ, ಪಿಯು ಮುಖ್ಯಸ್ಥ ನೀಲ ಪ್ರತಾಪನ, ಕಾಲೇಜಿನ ಸಿಬ್ಬಂದಿ ಇತ್ತೀಚೆಗೆ ಸನ್ಮಾನಿಸಿ ಅಭಿನಂದಿಸಿದರು.

ಮಂಗಳವಾರ ಪೇಟೆ ಓಣಿ ದ್ವಾರಬಾಗಿಲು ನಿರ್ಮಿಸಿ
ಹುಬ್ಬಳ್ಳಿ: ಇಲ್ಲಿನ ಮಂಗಳವಾರಪೇಟೆ ಓಣಿಯಲ್ಲಿ ದ್ವಾರಬಾಗಿಲು ಕಾಮಗಾರಿಶೀಘ್ರ ಮುಗಿಸಬೇಕೆಂದು ಒತ್ತಾಯಿಸಿ ಶ್ರೀ ಗಜಾನನ ಯುವಕ ಮಂಡಳನೇತೃತ್ವದಲ್ಲಿ ನಿವಾಸಿಗಳು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು. ದ್ವಾರಬಾಗಿಲು ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ತೀವ್ರಗೊಳಿಸಲು ಗುತ್ತಿಗೆದಾರರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ನಿವಾಸಿಗಳು ಓಣಿಯಲ್ಲಿ ಸುತ್ತಾಡಿ ಸಹಿ ಸಂಗ್ರಹಿಸಿ ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ. ಗಂಗಾಧರ ಉಕ್ಕಲಿ, ಬಸವರಾಜ ಬೆಲ್ಲದ, ದೊಡ್ಡಯ್ಯ ಹಿರೇಮಠ, ನಾಗರಾಜ ಹಡಗಲಿ, ವೀರೇಂದ್ರ ಪೋರಾಪುರ, ಭರಮಪ್ಪ ಹೂಗಾರ, ಜಗದೀಶ ಬುಳ್ಳಾನವರ, ಬಸವರಾಜ ಅಂಗಡಿ ಮತ್ತಿತರರಿದ್ದರು.

ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೊಳಗಾಗದಿರಿ
ಧಾರವಾಡ: ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವಕ್ಕೊಳಗಾಗಿ ಸ್ವತಂತ್ರ ಜೀವನದ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ನಿವೃತ್ತ ಜಿಲ್ಲಾ ಸರ್ಜನ್ ಡಾ. ವಿ.ಡಿ. ಕರ್ಪೂರಮಠ ಹೇಳಿದರು. ನಗರದ ಐಸಿಎಸ್ ಕಾಲೇಜಿನಲ್ಲಿ ವಿಶ್ವ ಏಡ್ಸ ದಿನಾಚರಣೆ ನಿಮಿತ್ತ ಗ್ರೀನ್ ಆರ್ಮಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಡ್ಸಗೆ ಔಷಧಿ ಇಲ್ಲ. ಮುನ್ನೆಚ್ಚರಿಕೆಯಿಂದಿರುವುದು ಮುಖ್ಯ ಎಂದರು. ಪತ್ರಕರ್ತ ಗುರುರಾಜ ಜಮಖಂಡಿ ಉದ್ಘಾಟಿದರು. ಐಸಿಎಸ್ ಕಾಲೇಜಿನ ಪ್ರಾಂಶುಪಾಲ ವಿ.ಸಿ. ಜಾನಕಾರ ಅಧ್ಯಕ್ಷತೆ ವಹಿಸಿದ್ದರು. ಗ್ರೀನ್ ಆರ್ಮಿ ಅಧ್ಯಕ್ಷ ಪ್ರಕಾಶ ಗೌಡರ ಸ್ವಾಗತಿಸಿ, ನಂದೀಶ ಕಡಕೋಳ ನಿರೂಪಿಸಿ, ಅನಿಲ ಅಳ್ಳೊಳ್ಳಿ ವಂದಿಸಿದರು.

ಕೌಟುಂಬಿಕ ದೌರ್ಜನ್ಯ ಕೇಸು ಹಿಂಪಡೆಯಲು ಜೀವ ಬೆದರಿಕೆ
ಹುಬ್ಬಳ್ಳಿ: ತನ್ನ ಮೇಲೆ ಹಾಕಿದ್ದ ಕೌಟುಂಬಿಕ ದೌರ್ಜನ್ಯ ದೂರನ್ನು ಹಿಂಪಡೆಯುವಂತೆ ಪತಿ ಜೀವ ಬೆದರಿಕೆ ಹಾಕಿದ್ದಾನೆಂದು ಗೋಪನಕೊಪ್ಪ ಸ್ವಾಗತ ಕಾಲನಿ ಮಹಿಳೆಯೊಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪತಿಯನ್ನು ಬಿಟ್ಟು ಸಹೋದರಿಯೊಂದಿಗೆ ವಾಸಿಸುತ್ತಿದ್ದ ಗೀತಾ ಉಮಾ ಮಹೇಶ್ವರರಾವ್ ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಪತ್ನಿ ಗೀತಾ ದಾಖಲಿಸಿದ ದೂರಿಗೆ ಪ್ರತಿಯಾಗಿ ಪತಿ ಉಮೇಶ ಅವರು ಗೀತಾ ವಾಸಿಸುತ್ತಿದ್ದ ಮನೆಗೆ ಬಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ದೈಹಿಕ ಹಿಂಸೆ ನೀಡಿ ಜೀವ ಬೆದರಿಕೆ ಹಾಕಿದ್ದಾನೆಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ವಯಸ್ಸಾದ್ರೂ ಮಾನಸಿಕವಾಗಿ ಚಟುವಟಿಕೆಯಿಂದಿರಿ
ಧಾರವಾಡ: ದೇಹಕ್ಕೆ ವಯಸ್ಸಾಗಿದ್ದರೂ ಮಾನಸಿಕವಾಗಿ ಸದಾ ಚಟುವಟಿಕೆಯಿಂದ ಇರಬೇಕು ಎಂದು  ಧಾರವಾಡ ಆಕಾಶವಾಣಿ ನಿಲಯ ನಿರ್ದೇಶಕ ಸಿ.ಯು. ಬೆಳ್ಳಕ್ಕಿ ಹೇಳಿದರು. ಹಿರಿಯ ನಾಗರಿಕರು ನಗರದ ಪ್ರೋಬಸ್ ಕ್ಲಬ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೆಪ್ಟೆಂಬರ್ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಎರಡು ಶಕ್ತಿಗಳ ಸದುಪಯೋಗವಾಗುತ್ತಿಲ್ಲ. ಒಂದು ವಯಸ್ಸಾದವರ ಜೀವನಾನುಭವಿಗಳು, ಮತ್ತೊಂದು ಗೃಹಿಣಿಯರ ಶಕ್ತಿ ಎಂದರು. ಸದಾ ಸಕಾರಾತ್ಮಕವಾಗಿ ವಿಚಾರ ಮಾಡಬೇಕು. ಮಾಡುವ ಕೆಲಸದ ಬಗ್ಗೆ ಅಭಿಮಾನವಿರಬೇಕು. ಸಂಗೀತ, ಚಿತ್ರಕಲೆ, ಕವನ ರಚನೆ ಮತ್ತಿತರ ರಂಗಗಳಲ್ಲಿ ತೊಡಗಿ ಎಂದರು. ಗೌರಮ್ಮ ಚಳಗೇರಿ, ಎಸ್. ಕೊತಂಬರಿ, ಎಂ.ಎಲ್. ವಿಜಾಪುರ ಇತರರಿದ್ದರು.

ಅಮೆರಿಕ ಸಮ್ಮೇಳನಕ್ಕೆ ಆನಂದ ಅಮರಶೆಟ್ಟಿ
ಧಾರವಾಡ: ಭಾರತೀಯ ಜೀವ ವಿಮಾ ನಿಗಮದ ಧಾರವಾಡ ಮುಖ್ಯ ಶಾಖೆಯ ವಿಮಾ ಸಲಹೆಗಾರ ಆನಂದ ಅಮರಶೆಟ್ಟಿ ಅವರು ಅಮೆರಿಕದಲ್ಲಿ ನಡೆಯುವ ಮಿಲಿಯನ್ ಡಾಲರ್ಸ್ ರೌಂಡ್ ಟೇಬಲ್ (ಎಂಡಿಆರ್‌ಟಿ) ಸಮ್ಮೇಳನದಲ್ಲಿ  ಪಾಲ್ಗೊಳ್ಳುವ ಅವಕಾಶ ಪಡೆದಿದ್ದಾರೆ. ಭಾರತೀಯ ಜೀವ ವಿಮಾ ನಿಗಮದ ಧಾರವಾಡ ವಿಭಾಗೀಯ ಕಚೇರಿಯಲ್ಲಿ ಈಚೆಗೆ ಆನಂದ ಅಮರಶೆಟ್ಟಿ ಅವರನ್ನು ಕರ್ನಾಟಕ ರಾಜ್ಯ ಪ್ರಾದೇಶಿಕ ವ್ಯವಸ್ಥಾಪಕ ಕೆ.ಕೆ. ದಾಸ್, ಹಿರಿಯ ವಿಭಾಗೀಯ ಮಂಡಲಾಧಿಕಾರಿ ಎಂ. ಜಗನ್ನಾಥ, ಮಾರುಕಟ್ಟೆ ವ್ಯವಸ್ಥಾಪಕ ಜೆ. ಜಗದೀಶ ಸನ್ಮಾನಿಸಿದರು. ವಿ. ಸತೀಶಕುಮಾರ, ಎಂ. ಸುಬ್ರಮಣ್ಯನ್, ಎ.ಆರ್. ಗಡಕರ, ಅಜಯ ಕುಲಕರ್ಣಿ, ಶ್ರೀಧರಸ್ವಾಮಿ ಇತರರಿದ್ದರು.

ಎಂಬಿಎಗೆ ಪ್ರವೇಶ ಪಡೆಯಲು ಸಿಮ್ಯಾಟ್ ಪರೀಕ್ಷೆ ಕಡ್ಡಾಯ
ಹುಬ್ಬಳ್ಳಿ: ಸಿಮ್ಯಾಟ್-2 ಪರೀಕ್ಷೆ 2014 ಫೆ. 20ರಿಂದ 24ರ ವರೆಗೆ ನಡೆಸಲು ಎಐಸಿಟಿಇ ಆದೇಶಿಸಿದೆ. ವ್ಯವಹಾರ ಅಧ್ಯಯನ-ಎಂಬಿಎಗೆ ಪ್ರವೇಶ ಪಡೆಯಲು, ಮೆರಿಟ್ ಅಥವಾ ಸರ್ಕಾರಿ ಕೋಟಾದಡಿ ಎಐಸಿಟಿಇಯಿಂದ ಪ್ರಮಾಣಿತಗೊಂಡ ಕಾಲೇಜುಗಳಲ್ಲಿ ಅರ್ಹತೆ ಪಡೆಯಲು ಸಿಮ್ಯಾಟ್ ಪರೀಕ್ಷೆ ಕಡ್ಡಾಯ. ಸಿಮ್ಯಾಟ್ -2 ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, 2014 ಜ. 2ರಂದು ಮುಗಿಯಲಿದೆ. ಮಾಹಿತಿಗೆ ಚೇತನ ಬಿಸಿನೆಸ್ ಸ್ಕೂಲ್, ಉಣಕಲ್ ಅಥವಾ ಮೊ. 9945129088, 7829357257 ಸಂಪರ್ಕಿಸಲು ದ್ಯಾವಪ್ಪನವರ-ಕೊರವಿ-ಸಿದ್ನಾಳ ಟ್ರಸ್ಟ್‌ನ ಚೇತನ ಬಿಸಿನೆಸ್ ಸ್ಕೂಲ್, ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆ್ಯಂಡ್ ರಿಸರ್ಚ್ ನಿರ್ದೇಶಕ ಡಾ.ವಿ.ಎಂ. ಕೊರವಿ ತಿಳಿಸಿದ್ದಾರೆ.

ಇಂದು ಯುವ ಮೋರ್ಚಾ ಬಿಜೆಪಿ ಕಾರ್ಯಕಾರಿಣಿ ಸಭೆ
ಹುಬ್ಬಳ್ಳಿ: ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಡಿ. 1ರಂದು ಗಂಗಿವಾಳ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಉದ್ಘಾಟಿಸುವರು. ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ಎಂ.ಆರ್. ಪಾಟೀಲ, ಬಸನಗೌಡ ಶಿವನಗೌಡ್ರ, ಮಹೇಶಗೌಡ ಪಾಟೀಲ, ಈರಣ್ಣ ಜಡಿ, ಜಿ.ಟಿ. ಬಾಲಣ್ಣವರ, ಪಿ. ರಾಘವೇಂದ್ರ, ಮಹೇಂದ್ರ ಕೌತಾಳ, ದೊಡ್ಡೇಶಿ ಬೇಗೂರ, ಅಶೋಕ ಪಿ. ಹೊಸಮನಿ, ಸಿದ್ದಪ್ಪ ಕೊಳ್ಳೂರ, ಪರಶುರಾಮ ಮಡಿವಾಳರ, ಸೋಮಶೇಖರ ಸೋಲಾರಕೊಪ್ಪ, ಶಿವು ರೆಡ್ಡೇರ, ಮಂಜುನಾಥ ದ್ಯಾಮಕ್ಕನವರ, ರುದ್ರಗೌಡ ಸಂಕನಗೌಡ್ರ, ದೇವರಾಜ ಪಾಟೀಲ, ಈಶ್ವರ ರಾಚನಗೌಡ್ರ, ಸೋಮನಗೌಡ್ರ ಹನಮಂತಗೌಡ್ರ ಪಾಲ್ಗೊಳ್ಳುತ್ತಾರೆಂದು ಯುವ ಮೋರ್ಚಾ ಹುಬ್ಬಳ್ಳಿ ಗ್ರಾಮೀಣ ಪ್ರಧಾನ ಕಾರ್ಯದರ್ಶಿ ಅರುಣ ಸಾಳುಂಕೆ ತಿಳಿಸಿದ್ದಾರೆ.

ರಿಕ್ರಿಯೆಷನ್‌ನಿಂದ ಆದೇಶ ಉಲ್ಲಂಘನೆ: ಆರೋಪ
ಹುಬ್ಬಳ್ಳಿ: ಜಿಮಖಾನಾ ಮೈದಾನಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಡಿಸಿ ಶುಕ್ಲ ಆದೇಶಿಸಿದ್ದರೂ ಮತ್ತೆ ರಿಕ್ರಿಯೆಷನ್ ಕ್ಲಬ್ ಪದಾಧಿಕಾರಿಗಳು ಆದೇಶ ಉಲ್ಲಂಘಿಸುತ್ತಿದ್ದಾರೆಂದು ಗ್ರೌಂಡ್ ಬಚಾವೋ ಸಮಿತಿ ಆರೋಪಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಮಿತಿ ಅಧ್ಯಕ್ಷ ಸಿಬಿಎಲ್ ಹೆಗ್ಡೆ, ನ. 4ರಂದು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಡಿಸಿ ಆದೇಶಿಸಿದ್ದಾರೆ. ಈ ಹಿಂದೆಯೂ ಡಿಸಿ ಆದೇಶ ಉಲ್ಲಂಘನೆಯಾಗಿದೆ. ಈಗ ಮತ್ತೇ ಜಿಮಖಾನಾ ಮೈದಾನದಲ್ಲಿ ಡಿ. 2ರಿಂದ ಯೋಗ ಶಿಬಿರ ನಡೆಸಲು ರಿಕ್ರಿಯೆಷನ್ ಕ್ಲಬ್ ಸಿದ್ಧತೆ ನಡೆಸಿದೆ. ಜಿಮಖಾನಾ ಮೈದಾನದಲ್ಲಿ ಯೋಗ ಶಿಬಿರ ನಡೆಯದಂತೆ ಡಿಸಿ ಕ್ರಮ ಕೈಗೊಳ್ಳಬೇಕೆಂದು ಕಾಡಯ್ಯ ಹಿರೇಮಠ, ಹೂವಪ್ಪ ದಾಯಗೋಡಿ, ಎ.ಎನ್ ಮಡಿವಾಳ, ಅಮೃತ ಇಜಾರಿ ಆಗ್ರಹಿಸಿದ್ದಾರೆ.

ಇಂದು ವಿಶ್ವ ಏಡ್ಸ್ ದಿನಾಚರಣೆ
ಹುಬ್ಬಳ್ಳಿ: ಹುಬ್ಬಳ್ಳಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ- ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಡಿ. 1ರ ಸಂಜೆ 5ಕ್ಕೆ ಬ್ಯಾಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತಕಾನೂನು ಅರಿವು-ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್.ಬಿ. ದಯಣ್ಣವರ ಉದ್ಘಾಟಿಸುವರು. ವೀರನಗೌಡ ಮರಿಗೌಡ್ರ ಅಧ್ಯಕ್ಷತೆ ವಹಿಸುವರು. ಡಾ. ಕರ್ಲವಾಡ, ಎಸ್.ಬಿ. ಮಾಸಮಡ್ಡಿ, ಶಶಿಧರ ಬೆಂಗೇರಿ ಉಪನ್ಯಾಸ ನೀಡುವರು. ಎಸ್.ವೈ. ದುಂಡರೆಡ್ಡಿ, ಕೆ.ಬಿ. ಶಿವಕುಮಾರ, ಐ.ಎಸ್. ತಿಗಡಿ, ಎಸ್.ಎಸ್. ತಟ್ಟಿಮನಿ, ಮಮ್ತಾಜ್ ನದಾಫ, ಮಹೇಶ ಅಳಗವಾಡಿ ಅತಿಥಿಗಳಾಗಿ ಭಾಗವಹಿಸುವರು.

ಆಫರ್‌ನಲ್ಲಿ ಮೋಸ: ದೂರು ದಾಖಲು
ಹುಬ್ಬಳ್ಳಿ: ಎಕ್ಸ್‌ಚೆಂಜ್ ಆಫರ್‌ನಲ್ಲಿ ಹಳೇ ಕಾರನ್ನು ರು. 1.50 ಲಕ್ಷಕ್ಕೆ ಖರೀದಿಸಿ ಹೊಸ ಕಾರು ಮಾರಾಟ ಮಾಡಿದ್ದ ಹುಬ್ಬಳ್ಳಿ ನಗರದ ಹರೀಶ ರೇವಣಕರ್ ಎಂಬ ವ್ಯಕ್ತಿಯು ಹಳೇ ಕಾರಿನ ಹಣ ನೀಡದೆ ವಂಚನೆ ಮಾಡಿದ ಕುರಿತು ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹುಬ್ಬಳ್ಳಿ ಕೊಪ್ಪಿಕರ್ ರಸ್ತೆ ನಿವಾಸಿ ಸಂಜಯ ದೇಶಪಾಂಡೆ ಅವರು ತಮ್ಮ ಹಳೇ ಕಾರನ್ನು ರು. 1.50 ಲಕ್ಷಕ್ಕೆ ಹರೀಶ ರೇವಣಕರ್ ಅವರಿಗೆ ಮಾರಾಟ ಮಾಡಿದ್ದರು. ಅದಕ್ಕೆ ಬದಲಿಯಾಗಿ ಹರೀಶ ರೇವಣಕರ್ ಅವರು ಹೊಸ ಕಾರಿನ ಬೆಲೆಯಲ್ಲಿ ರು. 1.50 ಲಕ್ಷ ಹಣ ಕಳೆಯದೇ ಹೊಸ ಕಾರಿನ ಬೆಲೆ ಪಡೆದು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.