ಟೆಸ್ಟ್ ಫಲಿತಾಂಶಕ್ಕೆ ಹುಬ್ಬಳ್ಳಿಯೇ ನಿರ್ಣಾಯಕ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 5
ಹುಬ್ಬಳ್ಳಿ ರಾಜನಗರದ ಕೆಎಸ್ಸಿಎ ಮೈದಾನ ಭಾರತ ಹಾಗೂ ವೆಸ್ಟ್ಇಂಡೀಸ್ ಎ ತಂಡಗಳ ಟೆಸ್ಟ್ ಕ್ರಿಕೆಟ್ ಸರಣಿಯ ಫಲಿತಾಂಶ ನಿರ್ಧರಿಸಲಿದೆ.
ಮೈಸೂರಿನಲ್ಲಿ ನಡೆದ ಪ್ರಸಕ್ತ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ 1-0 ದಿಂದ ಮುನ್ನಡೆ ಸಾಧಿಸಿರುವ ವೆಸ್ಟ್ಇಂಡೀಸ್ ಎ ತಂಡವನ್ನು ಶಿವಮೊಗ್ಗದಲ್ಲಿ ನಡೆದ 2ನೇ ಪಂದ್ಯದಲ್ಲಿಯೂ ಕಟ್ಟಿ ಹಾಕುವಲ್ಲಿ ಭಾರತ ಎ ತಂಡ ವಿಫಲವಾಗಿದೆ. ಶಿವಮೊಗ್ಗದಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಅಂತಿಮಗೊಳ್ಳುವ ಮೂಲಕ ವೆಸ್ಟ್ಇಂಡೀಸ್ ಎ ತಂಡ 1-0 ಮುನ್ನಡೆ ಕಾಯ್ದುಕೊಂಡಿದೆ.
ಹೀಗಾಗಿ ಅ. 9 ರಿಂದ ನಾಲ್ಕು ದಿನಗಳವರೆಗೆ ಹುಬ್ಬಳ್ಳಿ ರಾಜನಗರದ ಕರ್ನಾಟಕ ಕ್ರಿಕೆಟ್ ಅಕಾಡೆಮಿಯ ಮೈದಾನದಲ್ಲಿ ನಡೆಯಲಿರುವ ಪ್ರಸಕ್ತ ಸರಣಿಯ ಅಂತಿಮ ಪಂದ್ಯ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ.
ಸರಣಿಯುದ್ದಕ್ಕೂ ಚೇತೇಶ್ವರ ಪೂಜಾರ ನಾಯಕತ್ವದ ಭಾರತ ಎ ತಂಡ ತೋರಿದ ಕಳಪೆ ಪ್ರದರ್ಶನ ಹಾಗೂ ವೆಸ್ಟ್ಇಂಡೀಸ್ ಎ ತಂಡದ ಸಂಘಟಿತ ಆಟ ಪ್ರಸಕ್ತ ಸರಣಿಯಲ್ಲಿ ವೆಸ್ಟ್ಇಂಡೀಸ್ ಎ ತಂಡವನ್ನು ಗೆಲುವಿನ ಸಮೀಪಕ್ಕೆ ತಂದು ನಿಲ್ಲಿಸಿದೆ. ಹುಬ್ಬಳ್ಳಿಯ ಮೈದಾನದಲ್ಲಿ ಪಂದ್ಯ ಡ್ರಾಗೊಂಡಲ್ಲಿ ಸಹಜವಾಗಿಯೇ ವೆಸ್ಟ್ಇಂಡೀಸ್ ಎ ತಂಡ ಗೆಲುವು ಸಾಧಿಸುತ್ತದೆ. ಆದರೆ, ಭಾರತ ಎ ತಂಡ ಇಲ್ಲಾದರೂ ಸ್ಪರ್ಧಾತ್ಮಕ ಮನೋಭಾವದಿಂದ ಮೈದಾನಕ್ಕಿಳಿದು ಗೆಲುವು ಸಾಧಿಸಿದಲ್ಲಿ 1-1 ಅಂಕ ಪಡೆಯುವ ಮೂಲಕ ಮಾನ ಕಾಪಾಡಿಕೊಳ್ಳಬಹುದು. ವೆಸ್ಟ್ಇಂಡೀಸ್ ಎ ತಂಡ ಗೆಲುವು ಸಾಧಿಸಿದಲ್ಲಿ ಸರಣಿ 2-0 ಮೂಲಕ ಆ ತಂಡದ ವಶವಾಗುತ್ತದೆ. ರಾಷ್ಟ್ರೀಯ ತಂಡಕ್ಕೆ ಸೇರಿಕೊಳ್ಳಲು ತಿಣುಕಾಡುತ್ತಿರುವ ವೀರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ ಮೈಸೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಮೊದಲ ಹಾಗೂ ದ್ವಿತೀಯ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದು, ಹುಬ್ಬಳ್ಳಿಯಲ್ಲಿ ನಡೆಯುವ ಅಂತಿಮ ಪಂದ್ಯದಲ್ಲಾದರೂ ರೋಚಕ ಪ್ರದರ್ಶನ ತೋರಿದಲ್ಲಿ ಸರಣಿ ಸಮ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹುಬ್ಬಳ್ಳಿಗೆ ಬರಲಿವೆ ತಂಡ: ಈ ಮಧ್ಯೆ ಭಾನುವಾರ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ಎರಡೂ ತಂಡಗಳು, ವಿಶೇಷ ಬಸ್ ಮೂಲಕ ಸಂಜೆ ಹುಬ್ಬಳ್ಳಿಗೆ ಆಗಮಿಸಲಿವೆ. ಸಂಜೆ ಹೋಟೆಲ್ ಗೇಟ್ವೇ ಗೆ ಆಗಮಿಸುವ ಎರಡೂ ತಂಡಗಳ ಆಟಗಾರರು ಸೋಮವಾರ (ಅ.7) ಮತ್ತು ಮಂಗಳವಾರ (ಅ. 8) ರಾಜನಗರದಲ್ಲಿ ಪೂರ್ವಾಭ್ಯಾಸದಲ್ಲಿ ತೊಡಗುವರು. ಶನಿವಾರ ದಿನವಿಡೀ ಸುರಿದ ಜಿಟಿಜಿಟಿ ಮಳೆ ಕ್ರಿಕೆಟ್ ಪ್ರೇಮಿಗಳಲ್ಲಿ ಒಂದಿಷ್ಟು ಆತಂಕ ಮೂಡಿಸಿದೆಯಾದರೂ, ಅಂತಿಮ ಪಂದ್ಯ ಪ್ರಾರಂಭಗೊಳ್ಳಲು ಇನ್ನೂ ಎರಡು ದಿನ ಬಾಕಿ ಇರುವುದರಿಂದ ಪಂದ್ಯ ನಡೆಯುವ ದಿನಗಳಲ್ಲಿ ಮಳೆಯಾಗದಿರಲೆಂದು ಪ್ರಾರ್ಥನೆ ಮಾಡದೇ ಬೇರೆ ದಾರಿ ಇಲ್ಲ.
-ಆನಂದ ಅಂಗಡಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

