ಧಾರವಾಡ

ಸ್ವಾಮೀಜಿ ಕಿವಿ ಹಿಂಡಿದ ಶೆಟ್ಟರ್, ಹೊರಟ್ಟಿ

Published On :

ಹುಬ್ಬಳ್ಳಿ: ಅಮೆರಿಕದ ಡಿವೈನ್ ಹ್ಯಾಂಡ್ ಇಂಟರ್‌ನ್ಯಾಷನಲ್ ಯೂನಿವರ್ಸಿಟಿ, ಡಾ.ಮಾತೆ ಮಹಾದೇವಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಭಾನುವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭ ರಂಭಾಪುರಿ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವ ವಿವಾದದ ಚರ್ಚಾ ವೇದಿಕೆಯಾಗಿ ಪರಿಣಮಿಸಿತು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಬಸವರಾಜ ಹೊರಟ್ಟಿ ಸ್ವಾಮೀಜಿಗಳ ಧೋರಣೆಗೆ ವಿರೋಧ ವ್ಯಕ್ತಪಡಿಸಿದರೆ, ಮಾತೆ ಮಹಾದೇವಿ, ಅಡ್ಡಪಲ್ಲಕ್ಕಿ ಲಿಂಗಾಯತ ಧರ್ಮಕ್ಕೆ ವಿರೋಧವಾದದ್ದು ಎಂದು ಕಿಡಿಕಾರಿದರು. ಸಮಾರಂಭಕ್ಕೆ ತಡವಾಗಿ ಬಂದರೂ ಇಡೀ ಸಭೆಯ ಗಮನ ಸೆಳೆದಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ ಬಸವರಾಜ ಹೊರಟ್ಟಿ ಮತ್ತು ಕಾರ್ಯಕ್ರಮದ ಕೇಂದ್ರಬಿಂದು ಡಾ. ಮಾತೆ ಮಹಾದೇವಿ.
ಮೊದಲು ಮಾತಿಗೆ ನಿಂತ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, 'ಭಕ್ತರಲ್ಲಿ ಆ ಸ್ವಾಮೀಜಿ ಈ ಸ್ವಾಮೀಜಿ ಎಂಬ ಬೇಧ ಇಲ್ಲ. ಭಕ್ತರು ಒಗ್ಗಟ್ಟಾಗಿದ್ದಾರೆ. ಆದರೆ, ಸ್ವಾಮೀಜಿಗಳೇ ಕಿತ್ತಾಟದಲ್ಲಿ ಕಳೆದು ಹೋಗಿದ್ದಾರೆ. ಒಗ್ಗಟ್ಟಿನಿಂದ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು. ಮಾಧ್ಯಮಗಳ ಮುಖಾಂತರ ಹೇಳಿಕೆ ನೀಡಿ ಇಡೀ ಸಮಾಜವನ್ನು ಕವಲು ದಾರಿಗೆ ತಂದು ನಿಲ್ಲಿಸುತ್ತಿರುವುದು ಸ್ವಾಮೀಜಿಗಳೇ ವಿನಾ ರಾಜಕಾರಣಿಗಳಲ್ಲ' ಎಂದರು.
ರಾಜಕಾರಣಿಗಳ ಒಗ್ಗಟ್ಟು: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ ವೇದಿಕೆಯಿಂದ ಇಳಿದು ಹೋಗುತ್ತಿದ್ದಂತೆಯೇ ನೇರಾನೇರ ಮಾತಿಗೆ ಇಳಿದ ಮಾಜಿ ಸಚಿವ ಬಸವರಾಜ ಹೊರಟ್ಟಿ, 'ಈ ವೇದಿಕೆ ಮೇಲೆ ಕಾಂಗ್ರೆಸ್‌ನವರು ಇದ್ದಾರೆ. ಬಿಜೆಪಿಯವರು ಇದ್ದಾರೆ. ಜೆಡಿಎಸ್‌ನವರು ಇದ್ದಾರೆ. ಈ ರೀತಿ ಒಂದೇ ಸಮಾಜದ ಸ್ವಾಮೀಜಿಗಳು ಕುಳಿತುಕೊಳ್ಳಲು ಸಾಧ್ಯವಾ ಎಂದು ಯೋಚಿಸಿ?' ಎಂದು ಪ್ರಶ್ನೆ ಹಾಕಿದರು. ವಿಧಾನಸಭೆಯಲ್ಲಿ, ಚುನಾವಣೆಯಲ್ಲಿ ಆರೋಪ ಪ್ರತ್ಯಾರೋಪ ಮಾಡುವ ರಾಜಕಾರಣಿಗಳು ಸಮಾಜದ ಕಳಕಳಿ ವಿಚಾರ ಬಂದರೆ ಒಗ್ಗಟ್ಟಾಗುತ್ತೇವೆ. ಸ್ವಾಮೀಜಿಗಳ ನಡುವೆ ರಾಜಕಾರಣಿಗಳಿಗಿಂತ ಹೆಚ್ಚು ರಾಜಕಾರಣವಿದೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದ ಸ್ವಾಮೀಜಿಗಳು ಒಗಟ್ಟಿನಿಂದ ಇದ್ದರೆ ಮಾತ್ರ ಸಮಾಜ ಸುಧಾರಣೆ ಸಾಧ್ಯ. ಸಾಮಾಜಿಕ ಬದ್ಧತೆ ವಿಚಾರದಲ್ಲಿ ಕನಿಷ್ಠ ರಾಜಕಾರಣಿಗಳಿಂದಾದರೂ ಕಲಿಯುವ ಪ್ರಯತ್ನ ಸ್ವಾಮೀಜಿಗಳಿಂದ ಆಗಬೇಕಿದೆ. ಭಕ್ತರಿಗಾಗಿ ಸ್ವಾಮೀಜಿಗಳು ಇರುತ್ತಾರೋ ವಿನಾ ಸ್ವಾಮೀಜಿಗಳಿಗಾಗಿ ಭಕ್ತರು ಇರುವುದಿಲ್ಲ. ಒಂದು ಹಂತದ ವರೆಗೆ ಮಾತ್ರ ಭಕ್ತರು ಸ್ವಾಮೀಜಿಗಳ ಮೇಲೆ ವಿಶ್ವಾಸವಿರಿಸಬಹುದು ಎಂದು ಹೇಳಿದರು.
ಲಿಂಗಾಯತ-ವೀರಶೈವ ಬೇರೆ ಬೇರೆ: ಇವರೆಲ್ಲರ ಮಾತಿನ ನಂತರ ಮಾತನಾಡಿದ ಡಾ. ಮಾತೆ ಮಹಾದೇವಿ, ಲಿಂಗಾಯತ ಧರ್ಮಕ್ಕೆ ವಿರುದ್ಧವಾದ ಆಚರಣೆ ವೀರಶೈವರಲ್ಲಿದೆ. ಇಳಕಲ್‌ನ ಚಿತ್ತರಗಿ ಸಂಸ್ಥಾನದ ಶ್ರೀಗಳು ಮತ್ತು ಗದುಗಿನ ತೋಂಟದಾರ್ಯ ಶ್ರೀಗಳು ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿರುವ ಅಡ್ಡಪಲ್ಲಕ್ಕಿ ಉತ್ಸವಕ್ಕೆ ತೆರೆ ಎಳೆದಿದ್ದಾರೆ. ಆದರೆ, ರಂಭಾಪುರಿ ಶ್ರೀಗಳು ಮಾತ್ರ ಈ ಪರಂಪರೆ ಬೆಳೆಸಿಕೊಂಡು ಬರುತ್ತಿದ್ದಾರೆ.
ಲಿಂಗಾಯತರೇ ಬೇರೆ, ವೀರಶೈವರೇ ಬೇರೆ ಎಂದು ಪ್ರತಿಪಾದಿಸಿದ ಅವರು, ಸಪ್ತಶೈವ ಪಂಥಗಳಲ್ಲಿ ವೀರಶೈವ ಪಂಥವೂ ಒಂದು. ಇಡೀ ಲಿಂಗಾಯತ ಧರ್ಮವನ್ನು ವೀರಶೈವ ಎಂದು ಕರೆಯುವುದು ತಪ್ಪು, ಅದಕ್ಕೆ ನಮ್ಮ ಒಪ್ಪಿಗೆ ಇಲ್ಲ. ಬೇಕಿದ್ದರೆ ವೀರಶೈವ ಅನುಯಾಯಿಗಳು ವೀರಶೈವ ಲಿಂಗಾಯತ ಎಂದು ಕರೆದುಕೊಳ್ಳಬಹುದು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.