ಧಾರವಾಡ

ಕಾಂಗ್ರೆಸ್ಸಿಗರಿಂದ ಮುಸ್ಲಿಂರಿಗೆ ಟೋಪಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 6
ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್ಸಿಗರಿಗೆ ಅಲ್ಪಸಂಖ್ಯಾತರು ನೆನಪಾಗುತ್ತಾರೆ. ಇವರು ಮುಸ್ಲಿಮರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಂತಹವರ ಮಾತಿಗೆ ಮುಸ್ಲಿಮರು ಮರುಳಾಗಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.
ನಗರದ ಸುಧರ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ಮುಗ್ಧ ಮುಸ್ಲಿಮರನ್ನು ಬಂಧಿಸಬೇಡಿ ಎಂದು ಕೇಂದ್ರ ಗೃಹ ಸಚಿವ ಸುಶೀಲಕುಮಾರ್ ಶಿಂದೆ ತುಷ್ಟೀಕರಣದ ಹೇಳಿಕೆ ನೀಡಿದರೆ, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಮುಸ್ಲಿಮರು ಸಾಲ ಮರುಪಾವತಿ ಮಾಡಬೇಕಿಲ್ಲ ಎನ್ನುವ ಹೇಳಿಕೆ ನೀಡಿದ್ದಾರೆ. ಇದು ಮುಸ್ಲಿಮರನ್ನು ಓಲೈಸುವ ಮಾತುಗಳೇ ವಿನಃ ಅವರಿಗೆ ಮುಸ್ಲಿಮರ ಬಗ್ಗೆ ನೈಜ ಕಾಳಜಿ ಇಲ್ಲ. ಇಂಥ ಹೇಳಿಕೆಗಳ ಮುಖಾಂತರ ದೇಶ ಒಡೆಯುವ, ಸಮಾಜದ ಮಧ್ಯೆ ಭೇದ ಹುಟ್ಟು ಹಾಕುವ ಹೇಯ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಣ ತೊಡಿ: ಭಾರತದ ಭ್ರಷ್ಟಾಚಾರ ಜಿಗುಪ್ಸೆ ಹುಟ್ಟಿಸಿದೆ. ದೇಶದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ತಿರುಪತಿ, ಶಿರಡಿಯಂತಹ ದೇವಸ್ಥಾನದ ಚಿನ್ನ ಮಾರಾಟ ಮಾಡಿ ದೇಶದ ಮಾನ ಕಾಪಾಡುವಂತ ಸ್ಥಿತಿ ಬಂದೊದಗಿದೆ. ಜಗತ್ತಿನ ಇನ್ನಿತರ ದೇಶಗಳೆದರು ಭಾರತ ಮಾನ ಕಳೆದುಕೊಳ್ಳುವಂತಾಗಿದೆ. ಭಾರತ ಕಠೋರ ಸಂಕಷ್ಟ ಎಂದುರಿಸುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂಥ ಕೆಟ್ಟ ಸ್ಥಿತಿ ಎಂದಿಗೂ ಬಂದಿರಲಿಲ್ಲ ಎಂದು ಜೋಶಿ ಕಳವಳ ವ್ಯಕ್ತಪಡಿಸಿದರು. ಭಾರತವನ್ನು ಸಂಕಷ್ಟದಿಂದ ಪಾರು ಮಾಡಲು ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ಅನಿವಾರ್ಯ. ನರೇಂದ್ರ ಮೋದಿಯವರನ್ನು ಪ್ರಧಾನಿ ಪಟ್ಟದಲ್ಲಿ ಕುಡಿಸಲು ಪಣ ತೊಡಬೇಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಕೇಂದ್ರ ಯುಪಿಎ ಸರ್ಕಾರ ವಿಪರೀತ ಭ್ರಷ್ಟಾಚಾರದಿಂದ ಮಾನ ಕಳೆದುಕೊಂಡಿದೆ. ಪ್ರಧಾನಿ ಮನಮೋಹನ ಸಿಂಗ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೈಗೊಂಬೆಯಾಗಿದ್ದಾರೆ. ಇಂಥ ಪ್ರಧಾನಿಯನ್ನು ಪಡೆದದ್ದು, ಭಾರತದ ದೌರ್ಭಾಗ್ಯ. ಈ ದೇಶವನ್ನು ಬಚಾವ್ ಮಾಡಲು ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿಸಬೇಕು ಎಂದರು.
ಕಾರ್ಯಕರ್ತರ ಮೇಲೆ ಜವಾಬ್ದಾರಿ: ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಯುವ ಮತದಾರರನ್ನು ಮತಪೆಟ್ಟಿಗೆಯತ್ತ ಒಯ್ಯುವ ಗುರುತರ ಜವಾಬ್ದಾರಿ ಪಕ್ಷದ ಕಾರ್ಯಕರ್ತರ ಮೇಲಿದೆ. ಯುವ ಮತದಾರರು ಮೋದಿ ಪರ ಒಲವು ಹೊಂದಿದ್ದಾರೆ. ಅದರಲ್ಲೂ ಸುಶಿಕ್ಷಿತ ಮತದಾರರೇ ಬಿಜೆಪಿಯ ಮತಬ್ಯಾಂಕ್. ಈ ಮತದಾರರು ಚಾಚೂ ತಪ್ಪದೇ ಮತ ಹಾಕುವಂತೆ ಮಾಡುವುದು ಹಾಗೂ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರಿಸುವ ಕಾರ್ಯ ಕಾರ್ಯಕರ್ತರು ಮಾಡಬೇಕಿದೆ ಎಂದರು. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಲಿಂಗರಾಜ ಪಾಟೀಲ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಸೀಮಾ ಮಸೂತಿ, ಮಾ. ನಾಗರಾಜ, ಮಹೇಶ ಟೆಂಗಿನಕಾಯಿ ಮತ್ತಿತರರು ಇದ್ದರು.

ನಮ್ಮ ಮೇಲೆ ಕಣ್ಣಿದೆ
ಬಿಜೆಪಿಯ ಇಮೇಜ್ ಹಾಳು ಮಾಡುವ ಪ್ರಯತ್ನ ಕಾಂಗ್ರೆಸ್ಸಿಗರಿಂದ ನಡೆದಿದೆ. ನಮ್ಮ ಮೇಲೆ ಎಲ್ಲರ ಕಣ್ಣಿದೆ. ನೀವು ಮಾಡುವ ಸಣ್ಣ ಅಚಾತುರ್ಯದಿಂದ ಬಿಜೆಪಿಯ ಮರ್ಯಾದೆ ಹೋಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ಮೈಮರೆಯದಿರಿ, ಹುಷಾರಾಗಿರಿ. ಷಡ್ಯಂತ್ರಕ್ಕೆ ಬಲಿಯಾಗದಿರಿ ಎಂದು ಬಿಜೆಪಿ ಪದಾಧಿಕಾರಿಗಳಿಗೆ ಜೋಶಿ ಕಿವಿಮಾತು ಹೇಳಿದರು.

ಮೋದಿ ಚಾಲನೆ
ಲೋಕಸಭೆ ಚುನಾವಣೆಯ ಅಧಿಕೃತ ಪ್ರಚಾರ ಕಾರ್ಯಕ್ರಮಕ್ಕೆ ಅಕ್ಟೋಬರ್ ತಿಂಗಳ ಕೊನೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಚಾಲನೆ ನೀಡಲಾಗುವುದು. ಈ ಪ್ರಚಾರ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲು ಯೋಜಿಸಲಾಗಿದ್ದು, ಸ್ವತಃ ನರೇಂದ್ರ ಮೋದಿಯವರೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆಂದು ಪ್ರಹ್ಲಾದ ಜೋಶಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.