ಜನಸಾಮಾನ್ಯರ ತೆರಿಗೆ ಹಣ ವ್ಯರ್ಥ: ವಿಜಯ ಸಂಕೇಶ್ವರ ವಿಷಾದ
ಹುಬ್ಬಳ್ಳಿ: ಸರ್ಕಾರ ತೆರಿಗೆ ಮೂಲಕ ಜನಸಾಮಾನ್ಯರಿಂದ ಸಂಗ್ರಹಿಸುವ ಹಣದ ಸಾಕಷ್ಟು ಭಾಗ ವ್ಯರ್ಥವಾಗುತ್ತಿದೆ ಎಂದು ವಿಆರ್ಎಲ್ ಲಾಜಿಸ್ಟಿಕ್ ಚೇರ್ಮನ್ ವಿಜಯ ಸಂಕೇಶ್ವರ ಖೇದ ವ್ಯಕ್ತಪಡಿಸಿದ್ದಾರೆ. ಆಶಾ ಹಾರ್ಟ್ ಹಾಗೂ ಡಯಾಬಿಟಿಸ್ ಫೌಂಡೇಶನ್, ಸತ್ತೂರ ಮೆಡಿಕಲ್ ಕೇರ್ ಹಾಗೂ ಮಜೇಥಿಯಾ ಫೌಂಡೇಶನ್ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಈವರೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಮಧುಮೇಹ ಅಧ್ಯಯನ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ತೆರಿಗೆಯಿಂದ ಸಂಗ್ರಹಿಸಿದ ಹಣ ಜನೋಪಯೋಗಿ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ತಿಳಿಸಿದರು. ಜನರಲ್ಲಿ ಆರೋಗ್ಯ ತಿಳಿವಳಿಕೆ ಮೂಡಿಸುವ ಅವಶ್ಯಕತೆ ಇದೆ. ಒತ್ತಡರಹಿತ ಜೀವನ ಅನುಕರಣೆಯಾಗಬೇಕು. ಹೆಚ್ಚು ವಿಟಾಮಿನ್ಗಳಿರುವ ತರಕಾರಿ, ಹಣ್ಣು ಹಾಗೂ ಮತ್ತಿತರ ಸಾತ್ವಿಕ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಮಧುಮೇಹ ತಜ್ಞ ವೈದ್ಯ ಡಾ ಜಿ.ಬಿ. ಸತ್ತೂರ, ಸುಮಾರು ಒಂದು ವರ್ಷದ ಅವಧಿಯ ಅಧ್ಯಯನದಲ್ಲಿ 1,03,780 ಜನರ ಮಧುಮೇಹ ತಪಾಸಣೆ ಮಾಡಲಾಯಿತು. ಅವಳಿ ನಗರದ ಪ್ರತಿ ಐವರಲ್ಲಿ ಒಬ್ಬರಿಗೆ ಮಧುಮೇಹ ಕಾಯಿಲೆ ಇರುವುದು ಸಾಬೀತಾಗಿದೆ. ಈ ಪೈಕಿ 30ರಿಂದ 50 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ನಿತ್ಯ ವ್ಯಾಯಾಮ, ಹಿತಮಿತವಾದ ಆಹಾರ ಸೇವಿಸಿ ಉತ್ತಮ ಜೀವನ ಶೈಲಿಯಿಂದ ಮಧುಮೇಹದಿಂದ ಮುಕ್ತರಾಗಲು ಸಾಧ್ಯ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ರೋಗಿಗಳ ಮಧುಮೇಹ ತಪಾಸಣೆ ಮಾಡಬೇಕೆಂದು ಹೇಳಿದರು. ಮಜೇಥಿಯಾ ಫೌಂಡೇಶನ್ನ ಜಿತೇಂದ್ರ ಮಜೇಥಿಯಾ ಮಾತನಾಡಿದರು. ಜಿ.ಸಿ. ಮಠದ, ಕೇಶವ ದೇಸಾಯಿ ಮತ್ತಿತರರು ಉಪಸ್ಥಿತರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

