ಧಾರವಾಡ

ಏಕಲವ್ಯ ನಾಟಕ ಪರಿವರ್ತನೆ ಪ್ರತೀಕ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಅ. 7
ಶೋಷಣೆ ಮಾಡುವವರ ವಿರುದ್ಧ ಪ್ರತಿಭಟನೆಯ ವಿಚಾರ ವೈಖರಿಯೊಂದಿಗೆ ಏಕಲವ್ಯ ನಾಟಕವನ್ನು ಅದ್ಭುತವಾಗಿ ಡಾ. ಸಿದ್ದಲಿಂಗಯ್ಯನವರು ರಚಿಸಿದ್ದಾರೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಶಿವರುದ್ರಪ್ಪ ಕಲ್ಲೋಳಿಕರ ಹೇಳಿದರು.
ಸೋಮವಾರ ಇಲ್ಲಿನ ರಂಗಾಯಣ ಆವರಣದಲ್ಲಿ ನಡೆಯುತ್ತಿರುವ ಒಂಭತ್ತು ದಿನಗಳ ನವರಾತ್ರಿ ಯುವರಂಗೋತ್ಸವದ 3ನೇ ದಿನದ ಏಕಲವ್ಯ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಏಕಲವ್ಯ ನಾಟಕ ಸಾಮಾಜಿಕ ಪರಂಪರೆಯ ಪರಿವರ್ತನೆಯ ಪ್ರತೀಕ. ಅಂತೆಯೇ, ಏಕಲವ್ಯ ಸಾಮಾನ್ಯನಲ್ಲ, ಅಸಾಮಾನ್ಯ ವ್ಯಕ್ತಿ. ಅಂತಃಕರಣದಿಂದ ಗುರುಭಕ್ತಿ ಪಡೆದು, ಗುರು ಕಾಣಿಕೆ ನೀಡಿ ಇಡೀ ಮನುಕುಲಕ್ಕೆ ಮಾದರಿ ಆದವನು ಎಂದರು.
ಪ್ರತಿಭೆ ಪ್ರದರ್ಶಿಸಿ: ರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ಮಾತನಾಡಿ, ಕಾಲೇಜು ರಂಗಭೂಮಿ ಚಟುವಟಿಕೆಗಳು ಕೇವಲ ರಂಗಾಯಣಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳು ಇತರೆ ಕಲಾ ಸಂಘಟನೆಗಳೊಂದಿಗೆ ಭಾಗವಹಿಸಿ, ಪ್ರತಿಭೆಯನ್ನು ಪ್ರದರ್ಶಿಸಬೇಕು. ಕಾಲೇಜಿನಲ್ಲಿ ಈ ವಾತಾವರಣ ನಿರ್ಮಾಣ ಮಾಡಿ ಯುವಕರು ರಂಗಭೂಮಿಗೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ಡಾ. ಶಶಿಧರ ನರೇಂದ್ರ, ಏಕಲವ್ಯ ನಾಟಕ ಬದ್ಧತೆಯನ್ನು ಇಟ್ಟುಕೊಂಡ ಒಬ್ಬ ವ್ಯಕ್ತಿಯ ಚರಿತ್ರೆ. ರಂಗಭೂಮಿಯ ಅನೇಕ ಬದ್ಧತೆಯನ್ನು ಬಯಸುವ ಕ್ಷೇತ್ರ. ರಂಗ ಕಲಾವಿದರಲ್ಲಿಯೂ ಬದ್ಧತೆ ಇರಬೇಕು ಎಂದರು. ಪರಿಸರವಾದಿ ಶಂಕರ ಕುಂಬಿ, ರಂಗ ಕಲಾವಿದೆ ಪರಿಮಳಾ ಕಲಾವಂತ ಮಾತನಾಡಿದರು. ಸುರೇಶ ಬೇಟಗೇರಿ ಹಾಗೂ ಶಿವಾನಂದ ಹೂಗಾರ, ರಂಜಿತಾ ಜಾಧವ, ಆಡಳಿತಾಧಿಕಾರಿ ಕೆ.ಎಚ್. ಚನ್ನೂರ, ಎಫ್.ಬಿ. ಕಣವಿ, ಸಂಚಾಲಕ ಕೆ. ಜಗುಚಂದ್ರ ಇದ್ದರು. ನಂತರ ಮೋಹನ ಮೈಸೂರು ನಿರ್ದೇಶಿಸಿದ ಏಕಲವ್ಯ ನಾಟಕವನ್ನು ಧಾರವಾಡದ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಪಿಯು ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.

ಇಂದು 'ಕೊಂದವರಾರು' ನಾಟಕ
ಧಾರವಾಡ: ರಂಗಾಯಣ ಇಲ್ಲಿನ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 9 ದಿನಗಳ ನವರಾತ್ರಿ ಯುವ ರಂಗೋತ್ಸವದಲ್ಲಿ ಮಂಗಳವಾರ ಸಂಜೆ 6.30ಕ್ಕೆ ದೀಪಾ ಕುರವತ್ತಿ ನಿರ್ದೇಶನದ ಪ್ರಸನ್ನ ಹೆಗ್ಗೋಡು ರಚಿಸಿದ ಕೊಂದವರಾರು ನಾಟಕ ಪ್ರದರ್ಶನಗೊಳ್ಳಲಿದೆ. ಹಿರಿಯ ಸಾಹಿತಿ ಡಾ. ವೀಣಾ ಶಾಂತೇಶ್ವರ ಉದ್ಘಾಟಿಸಲಿದ್ದು, ರಂಗ ಕರ್ಮಿ ಅನಿಲ ದೇಸಾಯಿ ಅಧ್ಯಕ್ಷತೆ ವಹಿಸುತ್ತಾರೆ. ಅತಿಥಿಗಳಾಗಿ ರಂಗ ನಿರ್ದೇಶಕ ಮುಕುಂದ ಮೈಗೂರ, ವಾರ್ತಾ ಇಲಾಖೆ ನಿವೃತ್ತ ಹಿರಿಯ ನಿರ್ದೇಶಕ ಪಿ.ಎಸ್. ಹಿರೇಮಠ ಭಾಗವಹಿಸುತ್ತಾರೆ. ನಾಟಕವನ್ನು ಹುಬ್ಬಳ್ಳಿ ಮಹಿಳಾ ವಿದ್ಯಾಪೀಠ ಪದವಿ ಕಾಲೇಜು ವಿದ್ಯಾರ್ಥಿನಿಯರು ಪ್ರಸ್ತುತಪಡಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.