ದಸರಾ ಖರೀದಿಯಲ್ಲಿರಲಿಲ್ಲ ದರ್ಬಾರ್
ಹುಬ್ಬಳ್ಳಿ: ದಸರಾ ಹಬ್ಬವೆಂದರೆ ಎಲ್ಲೆಡೆ ಸಂಭ್ರಮ, ಸಂತಸ ಮನೆ ಮಾಡಿರುತ್ತಿತ್ತು. ಅದರಲ್ಲಿಯೂ ಹಬ್ಬಕ್ಕೆ ಹೊಸ ವಾಹನ ಖರೀದಿ, ಚಿನ್ನಾಭರಣ ಖರೀದಿ, ಸೈಟ್ ಖರೀದಿ ಬಲು ಜೋರಾಗಿರುತ್ತಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಸರಾ ಕಳೆಗುಂದಿತ್ತು. ಉ-ಕದ ವ್ಯಾಪಾರಿ ಕೇಂದ್ರವೆನಿಸಿಕೊಂಡ ಹುಬ್ಬಳ್ಳಿ ಮಾರುಕಟ್ಟೆಯಂತೂ ಹಿಂದೆಂದೂ ಕಂಡರಿಯದಷ್ಟು ಕುಸಿತಗೊಂಡಿತ್ತು.
ನಿಜ, ದಸರಾ ಹಬ್ಬವೆಂದರೆ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಅದರಲ್ಲಿಯೂ ಹುಬ್ಬಳ್ಳಿಯ ವ್ಯಾಪಾರಸ್ಥರಿಗಂತೂ ವರ್ಷ ಪೂರ್ತಿಯ ವ್ಯಾಪಾರ ತಂದು ಕೊಡುವ ಹಬ್ಬ ಇದಾಗಿತ್ತು. ಆದರೆ, ಈ ಬಾರಿ ಮಾತ್ರ ವ್ಯಾಪಾರಸ್ಥರು ಮಂಕಾಗಿದ್ದರು. ಗ್ರಾಹಕರಿಂದ ಗಿಜಿಗುಡುತ್ತಿದ್ದ ಅಂಗಡಿಗಳು ಖಾಲಿ ಖಾಲಿ ಕಾಣಿಸುತ್ತಿದ್ದವು.
ಹುಬ್ಬಳ್ಳಿಗೆ ಬರಲೇ ಇಲ್ಲ: ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿ ಉ-ಕದ ಪಾಲಿಗೆ ವ್ಯಾಪಾರಿ ಕೇಂದ್ರವೂ ಹೌದು. ಈ ಭಾಗದಲ್ಲಿ ಹುಬ್ಬಳ್ಳಿ ಬಿಟ್ಟರೆ ಇನ್ನಾವುದೇ ಇಷ್ಟೊಂದು ದೊಡ್ಡ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆ ಇಲ್ಲವೇ ಇಲ್ಲ. ಶ್ರೀಮಂತ ವರ್ಗಕ್ಕೆ ಬೇಕಾಗುವ ಬ್ರಾಂಡೆಡ್ ಕಂಪನಿಯ ವಸ್ತುಗಳಿಂದ ಹಿಡಿದು ಬಡಬಗ್ಗರಿಗೂ ಹಬ್ಬಕ್ಕಾಗುವ ವಸ್ತುಗಳು ಸಿಗುವ ಮಾರುಕಟ್ಟೆ ಹುಬ್ಬಳ್ಳಿ. ಅದರಲ್ಲಿಯೂ ಸೀರೆ, ಬಟ್ಟೆಬರೆಯಂತಹ ವಸ್ತುಗಳಿಗೆ ಹುಬ್ಬಳ್ಳಿ ಪ್ರಸಿದ್ಧ. ಹೀಗಾಗಿ ಗದಗ, ಹಾವೇರಿ, ಕೊಪ್ಪಳ, ಕಾರವಾರ, ಬಳ್ಳಾರಿ ಮತ್ತಿತರ ಜಿಲ್ಲೆಗಳಿಂದ ಖರೀದಿಗೆಂದೇ ಜನರು ಹುಬ್ಬಳ್ಳಿಗೆ ಬರುತ್ತಿದ್ದರು. ಅದರಲ್ಲಿಯೂ ದಸರಾ ಸಮೀಪಿಸುತ್ತಿದೆ ಎಂದ ಕೂಡಲೇ ಜನ ಖರೀದಿಗಾಗಿ ಹುಬ್ಬಳ್ಳಿಗೆ ಬರಲು ಮುಹೂರ್ತ ಫಿಕ್ಸ್ ಮಾಡುತ್ತಿದ್ದರು. ಆದರೆ, ಪ್ರಸಕ್ತ ವರ್ಷದ ದಸರಾ ಹಬ್ಬದ ಖರೀದಿಗೆಂದು ಬೇರೆ ಜಿಲ್ಲೆಯಿಂದ ಬಂದ ಜನ ಬೆರಳೆಣಿಕೆಯಷ್ಟು.
ಖರೀದಿ ಕುಸಿತ: ಅಕ್ಕಪಕ್ಕದ ಜಿಲ್ಲೆಯವರು ಬಿಟ್ಟು ಹುಬ್ಬಳ್ಳಿಗರೂ ದಸರಾ ಹಬ್ಬಕ್ಕೆಂದು ವಿಶೇಷ ಖರೀದಿ ಮಾಡುತ್ತಿದ್ದರು. ಆದರೆ, ಹುಬ್ಬಳ್ಳಿಗರೂ ಈ ಬಾರಿ ಖರೀದಿಗೆ ಆಸಕ್ತಿ ತೋರಲಿಲ್ಲ. ಕಾರ್, ಬೈಕ್ ಖರೀದಿ ಪ್ರಮಾಣವಂತೂ ತೀರಾ ಕಡಿಮೆಯಾಗಿದೆ. ಹುಬ್ಬಳ್ಳಿಯ ಆರ್ಎನ್ಎಸ್, ಬೆಲ್ಲದ, ಛಡ್ಡಾದಂತಹ ಪ್ರತಿಷ್ಠಿತ ಶೋರೊಮ್ಗಳಲ್ಲಿಯೂ ಗ್ರಾಹಕರ ಸಂಖ್ಯೆ ತೀರಾ ಇಳಿಮುಖವಾಗಿತ್ತು.
ಇನ್ನು ಟಿವಿ, ಫ್ರೀಜ್, ವಾಶಿಂಗ್ಮಷಿನ್, ಎಸಿಗಳಂತಹ ಮನೆ ಬಳಕೆಯ ವಸ್ತು ಖರೀದಿಸುವವರ ಸಂಖ್ಯೆಯೂ ಇಳಿಮುಖವಾಗಿತ್ತು. 'ದಸರಾ ಹಬ್ಬ ನಮಗೆ ಲಾಭ ತರುವ ಹಬ್ಬವಾಗಿತ್ತು. ಈ ದಿನಗಳಲ್ಲಿ ಗ್ರಾಹಕ ಬೇಡಿಕೆಯನ್ನು ಪೂರೈಸುವುದು ಕಷ್ಟವಾಗಿತ್ತು. ಆದರೆ, ಈ ಬಾರಿ ಮಾತ್ರ ಎಲ್ಲವೂ ಉಲ್ಟಾ. ದಿಢೀರ್ನೇ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. ತಾವು ಈ ರೀತಿಯ ಕುಸಿತ ಹಿಂದೆಂದೂ ಕಂಡಿರಲಿಲ್ಲ' ಎನ್ನುತ್ತಾರೆ ಜೆಟಿಕೆ ಶೋರೂಮ್ನ ಮಾಲೀಕ ರಮೇಶ.
ದಸರಾ ಕಾಲಘಟ್ಟದಲ್ಲಿ ಸೈಟ್, ಮನೆ ಖರೀದಿ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಜನರಲ್ಲಿ ಬಲವಾಗಿದೆ. ಈ ಕಾರಣಕ್ಕಾಗಿ ಜನ ಸೈಟ್ ಖರೀದಿಸಲು ಮುಗಿ ಬೀಳುತ್ತಿದ್ದರು. ಆದರೆ, ಹಬ್ಬದ ಹೆಸರಲ್ಲಿ ಸೈಟ್ ಖರೀದಿಸುವವರ ಸದ್ದೇ ಇದ್ದಿರಲಿಲ್ಲ. ಅದರಲ್ಲಿಯೂ ಕೆಲ ದಿನಗಳಿಂದ ರಿಯಲ್ ಎಸ್ಟೆಟ್ ದಂಧೆ ನೆಲ ಕಚ್ಚಿದ್ದು ಅದರ ಪರಿಣಾಮವನ್ನೂ ಹಬ್ಬದ ದಿನಗಳಲ್ಲಿಯೂ ಕಾಣುವಂತಾಗಿದೆ. ನೋಂದಣಿ ಕಚೇರಿಯಲ್ಲಿಯೂ ಸೈಟ್ ಖರೀದಿ ನೋಂದಣಿ ಮಾಡಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿತ್ತು ಎನ್ನುತ್ತಾರೆ ಅಧಿಕಾರಿಯೊಬ್ಬರು.
ನೋ ಆಫರ್: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ದಸರಾ ಹಬ್ಬದ ಸಂದರ್ಭ ಪ್ರತಿಯೊಂದು ವಸ್ತುಗಳ ಖರೀದಿಯ ಮೇಲೆ ಅನೇಕ ಆಫರ್ಗಳಿರುತ್ತಿತ್ತು. ಆದರೆ, ಈ ಬಾರಿ ಕೆಲವೇ ಕೆಲವು ವಸ್ತುಗಳಿಗೆ ಬಿಟ್ಟರೆ ಬಹುಪಾಲು ವಸ್ತುಗಳಿಗೆ ಆಫರ್ ಇದ್ದಿರಲೇ ಇಲ್ಲ. ಹೇಗಿದ್ದರೂ ವ್ಯಾಪಾರ ಕಡಿಮೆಯಾಗಿದೆ ಆಫರ್ ಕೊಟ್ಟು ನಷ್ಟ ಮಾಡಿಕೊಳ್ಳುವುದು ಬೇಡ ಎಂದು ವ್ಯಾಪಾರಸ್ಥರು ಲೆಕ್ಕ ಹಾಕಿದಂತಿತ್ತು.
ವ್ಯಾಪಾರ ಇಳಿಯಲು ಕಾರಣ: ಅಂದ ಹಾಗೆ ವ್ಯಾಪಾರ ಈ ದಸರಾ ಹಬ್ಬದ ಸಂದರ್ಭ ಕಡಿಮೆಯಾಗಲು ನಾನಾ ಸಂಗತಿಗಳು ಕಾರಣವಾಗಿವೆ. ಹಬ್ಬದ ಹೊಸ್ತಿಲಲ್ಲೇ ರುಪಾಯಿ ಬೆಲೆ ಕುಸಿತಗೊಂಡಿತ್ತು. ಇದರಿಂದಾಗಿ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಈ ಕಾರಣಕ್ಕಾಗಿಯೇ ಜನ ಖರೀದಿಗೆ ಹೆಚ್ಚಿನ ಆಸಕ್ತಿ ತೋರದಿರುವುದು ಪ್ರಮುಖ ಕಾರಣವೆನಿಸಿಕೊಂಡಿದೆ. ಜತೆಗೆ ಹಬ್ಬದ ಆಸುಪಾಸಿನಲ್ಲಿ ಸಾಲು ಸಾಲು ಸರ್ಕಾರಿ ರಜೆಗಳು ಬಂದಿವೆ. ಅದರಲ್ಲಿಯೂ ಇದೀಗ ಶಾಲಾ-ಕಾಲೇಜುಗಳಿಗೆ ಅಕ್ಟೋಬರ್ ರಜೆಯೂ ಬಂದಿದೆ. ಈ ಕಾರಣಕ್ಕೆ ಅನೇಕರು ಕುಟುಂಬ ಸಮೇತರಾಗಿ ಊರು, ಪ್ರವಾಸಿ ತಾಣಗಳನ್ನು ಸುತ್ತುತ್ತಿದ್ದಾರೆ. ಇದೂ ಹಬ್ಬದ ಖರೀದಿಯ ಮೇಲೆ ಪರಿಣಾಮ ಬೀರಿದೆ. ಇವೆಲ್ಲದರ ಒಟ್ಟಿಗೆ ಇತ್ತೀಚಿನ ದಿನಗಳಲ್ಲಿ ಹಬ್ಬ ಹರಿದಿನಗಳಲ್ಲಿ ಹಿಂದೆ ಇದ್ದಷ್ಟು ಸಂಭ್ರಮ ಕಾಣದಾಗಿದೆ. ಹಬ್ಬಕ್ಕೆಂದೇ ವಸ್ತುಗಳನ್ನು ಖರೀದಿಸಬೇಕೆಂಬ ಕ್ರೇಜ್ ಕೂಡ ಕಡಿಮೆಯಾಗಿದೆ. ಇದರ ಒಟ್ಟಾರೆ ಪರಿಣಾಮ ಮಾರುಕಟ್ಟೆಯ ಮೇಲಾಗಿದ್ದು, ದಸರಾ ಅವಧಿಯಲ್ಲಿ ವ್ಯಾಪಾರಸ್ಥರಲ್ಲಿದ್ದ ಮುಖದಲ್ಲಿದ್ದ ಸಂಭ್ರಮ ಮರೆಯಾಗಿದೆ.
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

