ಧಾರವಾಡ

ಸ್ವಾಮೀಜಿಗಳಲ್ಲೇ ಒಮ್ಮತವಿಲ್ಲ: ಹೊರಟ್ಟಿ ಖೇದ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 16
ಸಮಾಜ ಮುನ್ನಡೆಸಬೇಕಾದ ಸ್ವಾಮೀಜಿಗಳೇ ಇಂದು ಒಗ್ಗಟ್ಟಾಗಿ ಉಳಿದಿಲ್ಲ. ಪರಸ್ಪರ ಬಹಿರಂಗ ಹೇಳಿಕೆ ನೀಡುವ ಪ್ರವೃತ್ತಿಯನ್ನು ಸ್ವಾಮೀಜಿಗಳು ನಿಲ್ಲಿಸಬೇಕು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.
ಬುಧವಾರ ಮೂರುಸಾವಿರ ಮಠದಲ್ಲಿ ಬಾಳೆಹೊಸುರಿನ ದಿಂಗಾಲೇಶ್ವರ ಶ್ರೀಗಳ ಜೀವನ ದರ್ಶನ ಪ್ರವಚನದ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಸಮಾಜವನ್ನು ತನ್ನೊಂದಿಗೆ ತೆಗೆದುಕೊಂಡು ಹೋಗುವ ತತ್ವ ರೂಢಿಸಿಕೊಂಡಿರುವ ಬಸವಣ್ಣನ ಅನುಯಾಯಿಗಳು ಇತರ ಸಮಾಜಗಳನ್ನು ತನ್ನೊಂದಿಗೆ ಸೇರಿಸಿಕೊಳ್ಳುವ ಪ್ರವೃತ್ತಿ ರೂಢಿಸಿಕೊಳ್ಳುತ್ತಿಲ್ಲ. ಜನರ ಮತ್ತು ಸಾಮಾಜಿಕ ಬದಲಾವಣೆಗೆ ಸ್ವಾಮೀಜಿಗಳಿಂದ ಪ್ರಾಮಾಣಿಕ ಪ್ರಯತ್ನವಾಗಬೇಕಿದೆ. ಈ ನಿಟ್ಟಿನಲ್ಲಿ ಬಾಳೆಹೊಸುರಿನ ದಿಂಗಾಲೇಶ್ವರ ಶ್ರೀಗಳು ಹಮ್ಮಿಕೊಂಡಿರುವ ಜೀವನ ದರ್ಶನ ಮಾದರಿ. ಇಂತಹ ಕಾರ್ಯಕ್ರಮಗಳನ್ನು ಇತರ ಮಠಾಧೀಶರು ಮಾಡಬೇಕು ಎಂದರು.  ದಿಂಗಾಲೇಶ್ವರ ಶ್ರೀಗಳ ಜೀವನದರ್ಶನ ಸಿಡಿ ಬಿಡುಗಡೆ ಮಾಡಿದ ಮಾಜಿ ಸಂಸದ, ಉದ್ಯಮಿ ವಿಜಯ ಸಂಕೇಶ್ವರ ಅವರು, ಓಶೋ ಅವರ ತತ್ವ ಸಿದ್ಧಾಂತ ಕೆಲವರಿಗೆ ಸಹ್ಯವಾಗದಿರಬಹುದು. ಆದರೆ, ಅವರಲ್ಲಿನ ವೈಚಾರಿಕ ಸಾಮರ್ಥ್ಯ ಇಂದಿನ ನೂರು ಸ್ವಾಮೀಜಿಗಳನ್ನು ಸೇರಿಸಿದರೂ ಆಗಲಿಕ್ಕಿಲ್ಲ. ಅದೇ ರೀತಿ ಬಾಬಾರಾಮದೇವ ಅವರಲ್ಲಿನ ವೈಚಾರಿಕತೆ ಓಶೋಗಿಂತ ಮೇಲು. ಸ್ವಾಮೀಜಿಗಳಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ಹೇಳಿದ ಅವರು, ಇಂದು ಸಮಾಜದ ಚಿಂತನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ತರುವುದು ಅನಿವಾರ್ಯವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಮೂರುಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮೋಹನ ಲಿಂಬಿಕಾಯಿ, ಮಲ್ಲಿಕಾರ್ಜುನ ಸಾವಕಾರ್ ಇನ್ನಿತರರು ಇದ್ದರು.

ಸ್ವಾಮೀಜಿಗಳಿಂದ ನಾಡು ಕಟ್ಟುವ ಕೆಲಸವಾಗಲಿ
ನಾಡು ಕಟ್ಟುವ ಕೆಲಸ ಮತ್ತು ಪ್ರವಚನಗಳ ಮುಖಾಂತರ ಸಮಾಜ ಕಟ್ಟುವ ಕೆಲಸವನ್ನು ಸ್ವಾಮೀಜಿಗಳು ಮಾಡಬೇಕು ಎಂದು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಮೂರುಸಾವಿರ ಮಠದಲ್ಲಿ ಬುಧವಾರ ಜರುಗಿದ ಜೀವನ ದರ್ಶನ ಸಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜ, ಮಠ ಒಂದಾದರೆ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಹೇಳಿದ ಶ್ರೀಗಳು, ಇಂದು ಸ್ವಾಮೀಜಿಗಳ ಕಾಲನ್ನು ಸ್ವಾಮೀಜಿಗಳೇ ಎಳೆಯುತ್ತಿದ್ದಾರೆ ವಿನಃ ಭಕ್ತರಲ್ಲ. ಹಾನಗಲ್‌ನ ಜಯದೇವ ಶ್ರೀಗಳ ಸಾಮಾಜಿಕ ಕಾರ್ಯಕ್ಕೆ ಪ್ರೇರಣೆಯಾದಂತಹ ಮಲ್ಲನಾರ್ಯರಂತಹ ಭಕ್ತರು ಇಂದು ಮಠಗಳಿಗೆ ಬೇಕಾಗಿದ್ದಾರೆ. ಸ್ವಾಮೀಜಿಗಳು ತಪ್ಪು ಮಾಡಿದ ಸಂದರ್ಭ ನೇರವಂತಿಕೆ ಮತ್ತು ಪ್ರಾಮಾಣಿಕತೆಯಿಂದ ಮಠ ಮತ್ತು ಸಮಾಜದ ಏಳಿಗೆಗೆ ಭಕ್ತರು ಮಾರ್ಗದರ್ಶನ ನೀಡಬೇಕು. ಆದರೆ, ಇಂದು ಮಲ್ಲನಾರ್ಯರಂತಹ ನೇರ, ಪ್ರಾಮಾಣಿಕರು ಸಿಗುವುದು ಅಪರೂಪವಾಗಿದೆ. ಎಲ್ಲರಲ್ಲಿ ವೈಚಾರಿಕತೆ ಮತ್ತು ಜ್ಞಾನ ಬೆಳೆದಿದೆ ಆದರೆ ಆಚಾರ ಕಡಿಮೆಯಾಗುತ್ತಿದೆ ಎಂದರು.  ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ನಾಡು ಮತ್ತು ಸಮಾಜ ಕಟ್ಟುವ ಕೆಲಸದಲ್ಲಿ ಸ್ವಾಮೀಜಿಗಳ, ಋಷಿ, ಮುನಿಗಳ ಪ್ರವಚನ ಪ್ರಮುಖ ಪಾತ್ರ ವಹಿಸಿವೆ. ಶತಶತಮಾನಗಳೀಂದ ನಡೆದು ಬಂದಿರುವ ಪ್ರವಚನ ಸಂಪ್ರದಾಯದಿಂದ ಸ್ವಾಮೀಜಿಗಳು ನಾಡು ಕಟ್ಟುವುದರ ಜೊತೆಗೆ ಧರ್ಮಪ್ರಚಾರದ ಮುಖಾಂತರ ಸಮಾಜ ಸಂಘಟಿಸುವ ಕೆಲಸ ಮಾಡಿದ್ದಾರೆ ಎಂದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.