ಎಸ್ಸಿ, ಎಸ್ಟಿ ಅನುದಾನ ಬಳಕೆಗೆ ಇಚ್ಛಾಶಕ್ತಿ ಇರಲಿ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 20
ಸರ್ಕಾರಿ ಇಲಾಖೆಗಳಲ್ಲಿ ಎಸ್ಸಿ-ಎಸ್ಟಿಗೆ ನಿಗದಿಪಡಿಸಿದ ಅನುದಾನ ಏಕೆ ಬಳಕೆಯಾಗಿಲ್ಲ? ಎಸ್ಸಿ-ಎಸ್ಟಿ ಹುದ್ದೆಗಳ ನೇಮಕಾತಿಯಲ್ಲೂ ಅಧಿಕಾರಿಗಳು ಆಸಕ್ತಿ ತೋರಿಲ್ಲ. ಹೀಗಾಗಿ, ಸಾಕಷ್ಟು ಎಸ್ಸಿ-ಎಸ್ಟಿ ಹುದ್ದೆಗಳು ಖಾಲಿ ಇವೆ. ಜಿಲ್ಲಾಧಿಕಾರಿ ಈ ಕುರಿತು ಪರಿಶೀಲನೆ ನಡೆಸಿಲ್ಲವೇ?
ಭಾನುವಾರ ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಸದಸ್ಯರು ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪ್ಸಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳಿಗೆ ಈ ರೀತಿ ಪ್ರಶ್ನಿಸಿದರು.
ಜಿಲ್ಲೆಗೆ ಸರ್ಕಾರದಿಂದ ಒದಗಿ ಬಂದ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡದೇ ಉಳಿಸಿಕೊಂಡಿರುವುದು ಹಿಂದುಳಿದ ಜನಾಂಗದ ಅಭಿವೃದ್ಧಿ ಕುರಿತು ಸರ್ಕಾರಿ ಅಧಿಕಾರಿಗಳಿಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸಿ ಕೊಡುತ್ತದೆ. ಇಂತಹ ಮಹತ್ವದ ಸಭೆಗೆ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಹಣಕಾಸು ಸಂಸ್ಥೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಆಗಮಿಸದಿರುವುದು ಅವರ ನಿರ್ಲಕ್ಷ್ಯತನದ ಪರಮಾವಧಿ. ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಸಮಿತಿ ಸದಸ್ಯ ಗೋವಿಂದ ಕಾರಜೋಳ ಸೂಚಿಸಿದರು.
ತಮ್ಮ ಇಲಾಖೆಯಿಂದ ಎಸ್ಸಿ-ಎಸ್ಟಿಗೆ ನಿಗದಿ ಪಡಿಸಿದ ಅನುದಾನದ ವಿವರ ಸರಿಯಾಗಿ ಸಭೆಗೆ ತಿಳಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಯನ್ನು ಗೋವಿಂದ ಕಾರಜೋಳ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಅನುದಾನದ ಜಾಗದಲ್ಲಿ ಖಾಲಿ ಬಿಡಲಾಗಿದೆ. ಸರ್ಕಾರಿ ಯೋಜನೆ, ಅನುದಾನದ ಕುರಿತು ಗಂಭೀರತೆ ಇಲ್ಲದ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕೆಂದು ಹೇಳಿದರು.
ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಎಸ್ಸಿ-ಎಸ್ಟಿ ಹುದ್ದೆಗಳ ನೇಮಕಾತಿಯಾಗಿಲ್ಲ. ಏತಕ್ಕೆ ಭರ್ತಿ ಮಾಡಿಕೊಂಡಿಲ್ಲ ಎಂದು ಹು-ಧಾ ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ ಸಮಿತಿ ಸದಸ್ಯರು, ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ಮಾತ್ರ ಸರಿಯಾಗಿ ಕೆಲಸ ಮಾಡುತ್ತಾರೆ. ಇಲ್ಲದಿದ್ದರೆ ಈ ರೀತಿಯ ಉದಾಸೀನತೆ ತೋರುತ್ತಾರೆ. ಈ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ದೌರ್ಜನ್ಯ ಕಾಯ್ದೆ ಅಡಿ ದೂರು ಸಲ್ಲಿಸಬೇಕಾದೀತು ಎಂದು ಎಚ್ಚರಿಸಿದರು.
ಅಲ್ಲದೆ, ಅವಳಿ ನಗರದ ಎಸ್ಸಿ-ಎಸ್ಟಿ ಜನಾಂಗದವರಿಗೆ ನೀಡಬೇಕಾದ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಲು ಜಂಟಿ ಆಯುಕ್ತರಿಗೆ ಸೂಚಿಸಿದರು. ಕರ್ನಾಟಕ ವಿವಿಗೆ ಬಂದ ಅನುದಾನ ಹಾಗೂ ಎಸ್ಸಿ-ಎಸ್ಟಿಗೆ ಮೀಸಲಿರುವ ಹುದ್ದೆ, ಭರ್ತಿ ಕುರಿತು ವಿವಿ ಕುಲಸಚಿವರಾದ ಡಾ. ಚಂದ್ರಮಾ ಕಣಗಲಿ ಸಭೆಗೆ ಮಾಹಿತಿ ನೀಡಿದರು.
ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಇನ್ನೂ ದೇವದಾಸಿ ಪದ್ಧತಿ ಇದ್ದು, ಇದೊಂದು ಕೆಟ್ಟ ಪದ್ಧತಿ. ಇದರ ವಿಮೋಚನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತೀವ್ರ ರೀತಿಯ ಚಟುವಟಿಕೆ ಹಮ್ಮಿಕೊಳ್ಳುವಂತೆ ಸಹಾಯಕ ನಿರ್ದೇಶಕಿ ತ್ರಿಶೂಲಾ ಅಪ್ಪಣ್ಣವರಿಗೆ ಗೋವಿಂದ ಕಾರಜೋಳ ಸೂಚಿಸಿದರು.
ಎಸ್ಸಿ-ಎಸ್ಟಿ ಅನುದಾನ ಬಳಕೆ ಹಾಗೂ ಹುದ್ದೆಗಳ ನೇಮಕಾತಿಯಲ್ಲಿ ಸರ್ಕಾರದ ಕೆಲವು ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿವೆ. ಅಧಿಕಾರಿಗಳು ನಿಮ್ಮ ಜವಾಬ್ದಾರಿ ಅರಿತು ಕಾಲಮಿತಿಯಲ್ಲಿ ಕೆಲಸ ಮಾಡಿದರೆ ಮಾತ್ರ ಈ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಸಮಿತಿ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಹೇಳಿದರು. ಕೊನೆಗೆ ಜಿಲ್ಲೆಯ ವಿವಿಧೆಡೆಯಿಂದ ಬಂದ ಎಸ್ಸಿ-ಎಸ್ಟಿ ಜನತೆ ತಮ್ಮ ಅಹವಾಲುಗಳನ್ನು ಸಮಿತಿ ಅಧ್ಯಕ್ಷರಿಗೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

