ಸುವರ್ಣ ಸೌಧಕ್ಕೆ ಲಕ್ಷ ರೈತರ ಮುತ್ತಿಗೆ
ಹುಬ್ಬಳ್ಳಿ: ನ. 25ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನಕ್ಕೆ 1 ಲಕ್ಷ ರೈತರು ಮುತ್ತಿಗೆ ಹಾಕಿ ಕಳಸಾ-ಬಂಡೂರಿ ಯೋಜನೆ ಕುರಿತು ಸರ್ಕಾರದ ಸ್ಪಷ್ಟ ನಿಲುವಿಗೆ ಆಗ್ರಹಿಸಿ ಪ್ರತಿಭಟಿಸಲಿದ್ದಾರೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು.
ಚಳಿಗಾಲ ಅಧಿವೇಶನ ನಡೆಸುವುದಕ್ಕೆ ಸರ್ಕಾರ ಯಾವುದೇ ದಿನಾಂಕ ನಿಗದಿಪಡಿಸಿದರೂ ಅಂದು ರೈತರ ಪ್ರತಿಭಟನೆ ಶತಸ್ಸಿದ್ಧ. ಒಂದು ವೇಳೆ ಸರ್ಕಾರ ಅಧಿವೇಶನಕ್ಕೆ ಮುನ್ನ ಪ್ರತಿಭಟನೆ ಬೇಡ ಎಂದು ಮಾತುಕತೆಗೆ ಮುಂದಾದರೂ ಅದಕ್ಕೂ ನಾವು ಸಿದ್ಧ. ಆದರೆ, ಮಾತುಕತೆಯಲ್ಲಿ ಸರ್ಕಾರ ಭವಿಷ್ಯದಲ್ಲಿ ಯೋಜನೆ ಕುರಿತು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಸ್ಪಷ್ಟ ಭರವಸೆ ನೀಡಬೇಕು ಎಂದು ಹೇಳಿದರು.
ಹುಬ್ಬಳ್ಳಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 14ರಂದು ನಾಲ್ಕು ಜಿಲ್ಲೆಗಳ 9 ತಾಲೂಕು ಕೇಂದ್ರಗಳಲ್ಲಿ ಕಳಸಾ ಯೋಜನೆ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಬಂದ್ನಲ್ಲಿ ಪಾಲ್ಗೊಂಡಿದ್ದ ಜನಪರ ಸಂಘಟನೆಗಳು ಮತ್ತು ರೈತರು ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ಹುಬ್ಬಳ್ಳಿ-ಧಾರವಾಡ ನಾಗರಿಕರು ಮತ್ತು ಇಲ್ಲಿನ ಸಂಘಟನೆಗಳು ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.
ಚಳಿಗಾಲ ಅಧಿವೇಶನದ ಮೊದಲನೇ ದಿನ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದ್ದು, ನಂತರ ಸುವರ್ಣ ವಿಧಾನಸೌಧದ ಎದುರು ರೈತರ ಸಮಾವೇಶ ನಡೆಯಲಿದೆ. ಸುವರ್ಣಸೌಧ ಚಲೋ ಪ್ರತಿಭಟನೆಗೆ ಸಿದ್ಧತೆ ಆರಂಭವಾಗಿದ್ದು, ಗೋಕಾಕ ಸೇರಿದಂತೆ ಮತ್ತಿತರ ತಾಲೂಕುಗಳಲ್ಲಿ ರೈತರ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು ಎಂದರು.
ಕಳಸಾ ಬಂಡೂರಿ ಯೋಜನೆಯಡಿ ಕುಡಿಯುವ ನೀರಿಗಾಗಿ 7.56 ಟಿಎಂಸಿ ನೀರು ಪಡೆಯುವುದಕ್ಕೆ ಅವಕಾಶ ಆಗುವಂತೆ ನ್ಯಾಯಾಧೀಕರಣದಿಂದ ಮಧ್ಯಂತರ ತೀರ್ಪನ್ನು ಪಡೆಯುವ ನಿಟ್ಟಿನಲ್ಲೂ ಸರ್ಕಾರ ಪ್ರಯತ್ನ ಮಾಡಿಲ್ಲ. ಅ. 22ರಂದು ನ್ಯಾಯಾಧೀಕರಣ ಸಭೆ ಇರುವ ಸಂಗತಿ ಗೊತ್ತಿದ್ದರೂ ರಾಜ್ಯದ ಪರ ವಾದಿಸುವ ಫಾಲಿ ಎಸ್. ನಾರಿಮನ್, ರಾಜ್ಯದ ನ್ಯಾಯವಾದಿ ಮೋಹನ ಕಾತರಕಿ ಮತ್ತು ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್ ಒಟ್ಟಿಗೆ ಸೇರಿ ನ್ಯಾಯಾಧೀಕರಣದ ಎದುರು ಮಂಡಿಸಬೇಕಾದ ವಾದ ಹೇಗಿರಬೇಕು ಎಂದು ಇದುವರೆಗೂ ಚರ್ಚಿಸಿಲ್ಲ.
ಉತ್ತರ ಕರ್ನಾಟಕ ಹಿಂದುಳಿದಿದೆ ಎಂದು ಹೇಳುವ ರಾಜಕಾರಣಿಗಳು ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆಗೆ ಬೆಂಬಲ ನೀಡುವುದಕ್ಕೆ ತಯಾರಿಲ್ಲ. ಮಾತಿನಲ್ಲಿ ಮನೆ ಕಟ್ಟುವ ರಾಜಕಾರಣಿಗಳು ಕಳಸಾ ಬಂಡೂರಿ ಹೋರಾಟದ ಅಂಗವಾಗಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕ ಕೋನರೆಡ್ಡಿ ಹೊರತುಪಡಿಸಿದರೆ ಯಾರೂ ಬಂದಿಲ್ಲ. ರೈತರು, ಇಲ್ಲಿನ ಜನರ ಬಗ್ಗೆ ನಿಜವಾದ ಕಾಳಜಿ ಅವರಲ್ಲಿ ಇದ್ದಿದ್ದರೆ ಖಂಡಿತ ಹೋರಾಟಕ್ಕೆ ಮಾರ್ಗದರ್ಶನ ನೀಡುತ್ತಿದ್ದರು. ಆದರೆ, ದುರ್ದೈವವಶಾತ್ ರಾಜಕಾರಣಿಗಳು ಮಾತ್ರ ಈ ಕೆಲಸ ಮಾಡುತ್ತಿಲ್ಲ.
ರೈತರ ಕಡೆಗಣನೆ: ರೈತ, ಹಿಂದುಳಿದವರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ. ಪಾಟೀಲ ಮತ್ತು ಆಡಳಿತ ವರ್ಗ ಇಲ್ಲಿಯವರೆಗೂ ಒಂದು ಬಾರಿಯೂ ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚಿಸಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎನ್ನುವುದು ನಮ್ಮೆಲ್ಲರ ಕನಸಾಗಿತ್ತು. ಆ ಕನಸು ನನಸಾಗಿದೆ ಆದರೆ ಸಿದ್ದರಾಮಯ್ಯ ರೈತರನ್ನು ಕಡೆಗಣಿಸುವ ಮೂಲಕ ತಪ್ಪು ದಾರಿಯಲ್ಲಿ ಸಾಗುತ್ತಿದ್ದಾರೆ ಎಂದ್ದರು.
ಬಿಟಿ ಹತ್ತಿ ವಿಫಲ: ರಾಜ್ಯದಲ್ಲಿ ಇಂದು ಬಿಟಿ ಹತ್ತಿ ವಿಫಲವಾಗಿದೆ. 5.35 ಲಕ್ಷ ಹೆಕ್ಟೇರ್ನಲ್ಲಿ ಬೆಳೆಯಲಾಗಿದ್ದ ಬಿಟಿ ಹತ್ತಿ ರೈತರ ಕೈ ಹಿಡಿದಿಲ್ಲ. 20 ಸಾವಿರ ಹೆಕ್ಟೇರ್ನಲ್ಲಿ ದೇಶಿ ತಳಿಯ ಹತ್ತಿ ಬೆಳೆಯಲಾಗಿದೆ. ರೈತರ ಕೈಯಿಂದ ಬೀಜ ಸ್ವಾತಂತ್ರ್ಯ ಕಿತ್ತುಕೊಂಡು ಕಾರ್ಪೋರೇಟ್ ಕೈಗೆ ಹಸ್ತಾಂತರಿಸಲಾಗಿದೆ. ಇಂದಿನ ಈ ಸಮಸ್ಯೆಗೆ ಸರ್ಕಾರದ ಜೊತೆಗೆ ಕೃಷಿ ವಿಶ್ವವಿದ್ಯಾಲಯಗಳು ಕಾರಣ ಎಂದು ಆರೋಪಿಸಿದರು.
ಡಿಸಿಎಚ್-32 ಹತ್ತಿ ತಳಿ ಅಭಿವೃದ್ಧಿ ಪಡಿಸಿದ ನಂತರ ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳು ಹೊಸ ಸಂಶೋಧನೆ ಮಾಡಿಲ್ಲ. ಮಾನ್ಸಂಟೊ ಕಂಪನಿಯ ಏಜೆಂಟ್ಗಳಾಗಿ ಕೆಲಸ ಮಾಡುತ್ತಿವೆ. ನೇರವಾಗಿ ಕುಲಾಂತರಿ ಹತ್ತಿ ಬೀಜ ಮಾರಾಟ ಮಾಡದ ಮಾನ್ಸಾಂಟೊ, ಮಹಾರಾಷ್ಟ್ರದ ಮಹಿಕೊ ಕಂಪನಿ ಮುಖಾಂತರ ಕನಕ ಬಿಟಿ ಹತ್ತಿ ತಳಿ ಹೆಸರಿನಲ್ಲಿ ಮಾರುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ, ಸಂಯೋಜಕ ವಿಕಾಸ ಸೊಪ್ಪಿನ, ಕರವೇ ಅಧ್ಯಕ್ಷ ಅಮೃತ ಇಜಾರಿ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

