ಶೈಕ್ಷಣಿಕ ಹಕ್ಕು ಪಡೆಯುವುದೇ ಸಮಾನತೆ
ಧಾರವಾಡ: ಸಮಾಜದ ಎಲ್ಲರೂ ಸಮನಾಗಿ ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಕ್ಕುಗಳನ್ನು ಪಡೆದುಕೊಳ್ಳುವುದೇ ಸಾಮಾಜಿಕ ಸಮಾನತೆ ಎಂದು ಕರ್ನಾಟಕ ವಿವಿ ಇತಿಹಾಸ ಹಾಗೂ ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಶಿಲಾದಾರ ಮುಗಳಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಯುವಜನ ಮಂಟಪ ಆಯೋಜಿಸಿದ್ದ 'ಸಾಮಾಜಿಕ ನ್ಯಾಯ ಮತ್ತು ಸಮಾನತೆ' ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬುದ್ಧನ ಚರಿತ್ರೆ ಮತ್ತು ಬಸವೇಶ್ವರ ವಚನ ಸಾಹಿತ್ಯದಲ್ಲಿರುವ ಸಾಮಾಜಿಕ ಸಮಾನತೆಯನ್ನು ಇಂದಿನ ನಮ್ಮ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಣುತ್ತೇವೆ. ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ, ಡಾ. ಬಿ.ಆರ್. ಅಂಬೇಡ್ಕರ್ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಸಮಾನತೆಗಾಗಿ ಸಾಕಷ್ಟು ಕೊಡುಗೆಗಳನ್ನು ನೀಡಿದರು.
ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಭಾರತ ಜ್ಞಾನ-ವಿಜ್ಞಾನ ಸಮಿತಿ ಕಾರ್ಯದರ್ಶಿ ವೀರಣ್ಣ ಒಡ್ಡೀನ್, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಪರಸ್ಪರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳ ಇತಿಹಾಸವನ್ನು ಅವಲೋಕಿಸಿದಾಗ ಎಲ್ಲ ಕಡೆಗೂ ಅಸಮಾನತೆ ವಿರುದ್ಧ ಸಮಾನತೆಗಾಗಿ ನಡೆದ ಕ್ರಾಂತಿಗಳಾಗಿ ಸಾಮಾಜಿಕ ಬದಲಾವಣೆಯಾದ ಮಹತ್ವದ ತಿರುವುಗಳನ್ನು ಕಂಡಿದ್ದೇವೆ. ನಮ್ಮ ದೇಶದಲ್ಲಿ ಅಸ್ಪೃಶ್ಯತೆ ನಿವಾರಣೆ, ಜೀತ ಪದ್ಧತಿ, ವರದಕ್ಷಿಣೆ ಪದ್ಧತಿ ನಿರ್ಮೂಲನೆ, ಮಹಿಳೆಯರಿಗೆ ಆಸ್ತಿಯಲ್ಲಿ ಹಕ್ಕು ಸೇರಿದಂತೆ ಮುಂತಾದ ಹಲವಾರು ಸಾಮಾಜಿಕ ಸಮಾನತೆಯ ಕಾನೂನು ಬದ್ಧವಾದ ಬದಲಾವಣೆಯ ಅಂಶಗಳನ್ನು ಕಾಣಬಹುದು ಎಂದರು. ಚಿಕ್ಕ ಮಕ್ಕಳ ತಜ್ಞರಾದ ಡಾ. ಕವನ ದೇಶಪಾಂಡೆ ಮಾತನಾಡಿ, ಮಕ್ಕಳಲ್ಲಿ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಭ್ರೂಣ ಹತ್ಯೆಯಂತಹ ಹೇಯ ಕೃತ್ಯದಲ್ಲಿ ತೊಡಗಬಾರದು. ಸಮಾನ ದೃಷ್ಟಿಯಿಂದ ಪಾಲನೆ-ಪೋಷಣೆ ಮಾಡುವ ಹಾಗೂ ಹಕ್ಕು ಮತ್ತು ಕರ್ತವ್ಯಗಳೆರಡನ್ನೂ ಸರಿಯಾಗಿ ನಿರ್ವಹಿಸುವ ಹೊಣೆ ಮತ್ತು ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಯುವಜನ ಮಂಟಪದ ಸಂಚಾಲಕ ಗುರು ಹಿರೇಮಠ, ಶಿವಾನಂದ ಬಾವಿಕಟ್ಟಿ, ಸಿದ್ಧಲಿಂಗ ದೇಸಾಯಿ, ಶಂಕರ ಕುಂಬಿ, ಜಿ.ಬಿ. ಹೊಂಬಳ, ರಾಜೇಂದ್ರ ಸಾವಳಗಿ, ಕವಿತಾ ದೇಶಪಾಂಡೆ, ಎಂ. ಸುದರ್ಶನರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

