ಧಾರವಾಡ ಹಳೇ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ
ಧಾರವಾಡ: ಧಾರವಾಡದ ಹಳೇ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಲಿರುವ ಹೊಸ ಯೋಜನೆಯು ಇಲ್ಲಿನ ಜನತೆಗೆ ಸಂತಸ ತಂದರೆ, ಲಕ್ಷಾಂತರ ರುಪಾಯಿ ಮುಂಗಡ ಹಣ ಕೊಟ್ಟು ಬಸ್ ನಿಲ್ದಾಣದಲ್ಲಿ ಅಂಗಡಿಗಳನ್ನು ನಿರ್ಮಿಸಿಕೊಂಡಿರುವ ಅಂಗಡಿಕಾರರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
2009-10ರಲ್ಲಿ ಈ ಬಸ್ ನಿಲ್ದಾಣದಲ್ಲಿ ಸುಮಾರು ರು. 5.5 ಕೋಟಿ ವೆಚ್ಚದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಾಣಿಜ್ಯ ಸಂಕೀರ್ಣದ ಅಂಗಡಿಕಾರರಿಂದ ಮುಂಗಡ ಹಣ ಪಡೆದು 110 ಅಂಗಡಿಗಳನ್ನು ನಿರ್ಮಿಸಿಕೊಟ್ಟಿತ್ತು. ನಾಲ್ಕೈದು ತಿಂಗಳ ಹಿಂದಷ್ಟೇ ಲಕ್ಷಾಂತರ ರು. ತೆತ್ತು ಮತ್ತೆ ಐದು ವರ್ಷಗಳ ಕಾಲ ಮರು ಟೆಂಡರ್ ಪಡೆದಿದೆ. ಆದರೆ, ತ್ವರಿತ ಬಸ್ ಸಂಚಾರ ವ್ಯವಸ್ಥೆ (ಬಿಆರ್ಟಿಎಸ್) ಯೋಜನೆ ನಿಯಮಾವಳಿಗೆ ತಲೆ ಬಾಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು, ಈ ಬಸ್ ನಿಲ್ದಾಣವನ್ನು ಪೂರ್ತಿ ತೆರವುಗೊಳಿಸಿ ರು. 7 ಕೋಟಿ ವೆಚ್ಚದಲ್ಲಿ ಮರು ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಅಲ್ಲದೇ, ಬಸ್ ನಿಲ್ದಾಣದ ಅಂಗಡಿಕಾರರಿಗೆ ಅಂಗಡಿಗಳನ್ನು ಖಾಲಿ ಮಾಡುವಂತೆ ನೋಟಿಸ್ಗಳು ಈಗಾಗಲೇ ಜಾರಿಯಾಗಿವೆ. ಇದು ಅಂಗಡಿಕಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ದಿಢೀರ್ ಖಾಲಿ ಮಾಡೋದಿಲ್ಲ: ಯಾವುದೇ ಮೂಲಸೌಕರ್ಯಗಳಿಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾದ ಈ ಬಸ್ ನಿಲ್ದಾಣಕ್ಕೆ ಹೊಸ ರೂಪ ಬರಲಿದೆ ಎಂಬ ಸಂತಸ ಅಂಗಡಿಕಾರರಲ್ಲಿ ಇದ್ದರೂ, ಸಾಲ-ಶೂಲ ಮಾಡಿ ಅಂಗಡಿಗಳನ್ನು ತೆರೆದುಕೊಂಡು ಉತ್ತಮ ವ್ಯಾಪಾರ ಕೈಗೆಟಕುವ ಸುಸಂದರ್ಭದಲ್ಲಿಯೇ ಅಂಗಡಿಗಳನ್ನು ನೆಲಸಮ ಮಾಡುತ್ತಿರುವ ಯೋಜನೆ ಹಲವು ಅಂಗಡಿಕಾರರಿಗೆ ಅಸಮಾಧಾನ ತಂದಿದೆ. ಅಭಿವೃದ್ಧಿ ವಿಷಯದಲ್ಲಿ ತಮ್ಮದು ಯಾವುದೇ ಚಕಾರವಿಲ್ಲ. ಆದರೆ, ದಿಢೀರ್ ಅಂಗಡಿಗಳನ್ನು ತೆರವುಗೊಳಿಸಿ ಎಂದು ತಾಕೀತು ಮಾಡಿರುವುದು ಸರಿಯಲ್ಲ. ಅಂಗಡಿ ಖಾಲಿ ಮಾಡಲು ನೀಡಿರುವ ಕಾಲಾವಧಿಯನ್ನು ಮೂರು ತಿಂಗಳು ನೀಡುವಂತೆ ಮನವಿ ಮಾಡಿದ್ದರೂ ಸಾರಿಗೆ ಸಂಸ್ಥೆ ಅಂಗಡಿಕಾರರಿಗೆ ನವೆಂಬರ್ 15ರೊಳಗೆ ಖಾಲಿ ಮಾಡುವಂತೆ ನೋಟಿಸ್ ಜಾರಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಅಂಗಡಿಕಾರರ ಅಳಲು. ಈ ಕುರಿತು ಪ್ರತಿಕ್ರಿಯೆ ಪಡೆಯಲು ಬಿಆರ್ಟಿಎಸ್ ಮುಖ್ಯಾಧಿಕಾರಿ ಹಾಗೂ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರೂ ಆದ ನೂರಮನ್ಸೂರ್ ಅವರಿಗೆ ಎರಡ್ಮೂರು ದಿನಗಳಿಂದ ದೂರವಾಣಿ ಮೂಲಕ ಸಂಪರ್ಕಿಸಿದರೆ ಸಂಪರ್ಕಕ್ಕೆ ಸಿಗುತ್ತಿಲ್ಲ.
ಮನವಿ: ಇಲ್ಲಿನ ಕೆಲವೊಂದು ಅಂಗಡಿಗಳ ಟೆಂಡರ್ ಅವಧಿ ಮುಗಿದಿದೆ. ಇನ್ನೂ ಹೆಚ್ಚಾನು ಹೆಚ್ಚು ಅಂಗಡಿಗಳ ಟೆಂಡರ್ ಪ್ರಕ್ರಿಯೆ ಅನ್ವಯ ಮೂರು ಅಥವಾ ನಾಲ್ಕು ವರ್ಷ ಬಾಕಿ ಇದೆ. ಅವಧಿ ಬಾಕಿ ಇರುವ ಅಂಗಡಿಕಾರರಿಗೆ ಮುಂಗಡ ಹಣ ವಾಪಸು ನೀಡಿದಾಗಲೇ ಅಂಗಡಿಗಳನ್ನು ಖಾಲಿ ಮಾಡುತ್ತೇವೆ ಎನ್ನುವ ಅಂಗಡಿಕಾರರು, ಈ ವಿಚಾರವಾಗಿ ಶಾಸಕ ವಿನಯ ಕುಲಕರ್ಣಿ ಹಾಗೂ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ. ಬಿಆರ್ಟಿಎಸ್ ಯೋಜನೆಯಂತೆ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿರುವ ಈ ಬಸ್ ನಿಲ್ದಾಣದ ಕಟ್ಟಡಕ್ಕೆ, ಕಳೆದ ಐದಾರು ವರ್ಷಗಳ ಹಿಂದಷ್ಟೇ ಕೋಟಿಗಟ್ಟಲೇ ಸುರಿಯಲಾಗಿದೆ. ಮುಂದಿನ ಯೋಜನೆ ಬಗ್ಗೆ ಅರಿವಿಲ್ಲದೇ ಕಟ್ಟಡ ನಿರ್ಮಾಣ ಮಾಡಿರುವ ಹಿನ್ನೆಲೆಯಲ್ಲಿ, ಇಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಲ್ಲ. ನಿಲ್ದಾಣಕ್ಕೆ ಬರುವ ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಅನೇಕ ಅಪಘಾತಗಳು ಬಸ್ ನಿಲ್ದಾಣಗಳಲ್ಲಿಯೇ ಸಂಭವಿಸಿವೆ. ಪ್ರಯಾಣಿಕರಿಗೂ ಯಾವ ಸೌಲಭ್ಯಗಳು ದೊರೆತಿಲ್ಲ ಎನ್ನುವುದು ಬೇಸರದ ಸಂಗತಿ.
ಬದಲಾವಣೆ ಬೇಕಿತ್ತು: ಧಾರವಾಡದ ಹಳೇ ಬಸ್ ನಿಲ್ದಾಣಗಳಲ್ಲಿ ಈ ಹಿಂದೆ ಮಾಡಲಾಗಿರುವ ಸುಧಾರಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅನಾನುಕೂಲಗಳೇ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಮಗ್ರ ಬದಲಾವಣೆ ಧಾರವಾಡ ಮಾತ್ರವಲ್ಲದೇ ಹುಬ್ಬಳ್ಳಿಯ ನಿಲ್ದಾಣಗಳಲ್ಲಿ ಅಗತ್ಯವಾಗಿತ್ತು. ಧಾರವಾಡಕ್ಕೆ ರು. 7 ಹಾಗೂ ಹುಬ್ಬಳ್ಳಿಗೆ ರು. 14 ಕೋಟಿ ಅನುದಾನ ನಿಗದಿಯಾಗಿದ್ದು, ಬಿಆರ್ಟಿಎಸ್ ಯೋಜನೆ ವಿಶ್ವಬ್ಯಾಂಕ್ ನೆರವಿನಿಂದ ಜಾರಿಯಾಗುತ್ತಿದೆ. ಆದ್ದರಿಂದ ನಿರ್ದಿಷ್ಟ ಮಾನದಂಡಗಳ ಪ್ರಕಾರ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕಾಗುತ್ತದೆ. ಹೀಗಾಗಿ ಎರಡೂ ಬಸ್ ನಿಲ್ದಾಣಗಳಲ್ಲಿ ಹೊಸ ಸೌಕರ್ಯ ನಿರ್ಮಾಣ ಅನಿವಾರ್ಯ ಎಂದು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ ಕನ್ನಡಪ್ರಭಕ್ಕೆ ತಿಳಿಸಿದರು.
-ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

