ಧಾರವಾಡ

ಹೆಚ್ಚುವರಿ ಭೂಸ್ವಾಧೀನಕ್ಕೆ ಹೈ ತಡೆಯಾಜ್ಞೆ

Published On :

ಹುಬ್ಬಳ್ಳಿ: ವಿಮಾನ ನಿಲ್ದಾಣ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುವರಿ ಜಮೀನು ವಶಪಡಿಸಿಕೊಂಡು ಖಾಸಗಿಯವರಿಗೆ ಮಾರಾಟ ಮಾಡಿದ ಕೆಐಎಡಿಬಿ ಕ್ರಮಕ್ಕೆ ಧಾರವಾಡ ಹೈಕೋರ್ಟ್ ಪೀಠ ತಡೆಯಾಜ್ಞೆ ನೀಡಿದೆ.
ಹೆಚ್ಚುವರಿಯಾಗಿ ವಶಪಡಿಸಿಕೊಂಡು ಉದ್ಯಮಿಗಳಿಗೆ ಹಸ್ತಾಂತರ ಮಾಡಿದ ಜಮೀನಿನಲ್ಲಿ ಯಾವುದೇ ರೀತಿಯ ನಿರ್ಮಾಣ ಚಟುವಟಿಕೆ ಕೈಗೆತ್ತಿಕೊಳ್ಳಬಾರದು ಎಂದು ಹೈಕೋರ್ಟ್ ನೀಡಿರುವ ತಡೆಯಾಜ್ಞೆಯಲ್ಲಿ ತಿಳಿಸಲಾಗಿದೆ. ರೈತರ ಜಮೀನನ್ನು ವಶಪಡಿಸಿಕೊಂಡು ಉದ್ಯಮಿಗಳಿಗೆ ಮಾರಾಟ ಪ್ರಕ್ರಿಯೆ ವಿರುದ್ಧ ಗೋಕುಲ ಗ್ರಾಮದ 11 ರೈತರು ಹೈಕೋರ್ಟ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸಂತ್ರಸ್ತರ ಪರ ನ್ಯಾಯವಾದಿ ಮಂಜುನಾಥ ದಾಟನಾಳ ಮತ್ತು ಡಿ.ಎಂ. ಮಂಜುನಾಥ ವಾದ ಮಂಡಿಸಿ, ಸರ್ಕಾರ ತನ್ನ ಮೂಲ ಉದ್ದೇಶಕ್ಕೆ ಹೊರತಾಗಿ ಹೆಚ್ಚುವರಿಯಾಗಿ ವಶಪಡಿಸಿಕೊಂಡಿರುವ ಜಮೀನನ್ನು ರೈತರಿಗೆ ಮರಳಿಸುವುದಕ್ಕೆ ಆದೇಶಿಸಬೇಕು ಎಂದು ನ್ಯಾಯಮೂರ್ತಿಗಳ ಎದುರು ವಾದ ಮಂಡಿಸಿದ್ದರು.
ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಸ್.ನಾರಾಯಣಸ್ವಾಮಿ ಅವರು, ಸರ್ಕಾರ, ಭೂಮಿ ಖರೀದಿಸಿದ ಇನ್ಫೋಸಿಸ್, ದೇಶಪಾಂಡೆ ಫೌಂಡೇಷನ್ ಮತ್ತು ಅನಂತ್ ರೆಸಿಡೆನ್ಸಿ ಮಾಲೀಕ ರಮೇಶ ಶೆಟ್ಟಿ ಅವರಿಗೆ ನೋಟಿಸ್ ಜಾರಿ ಮಾಡಿದೆ. ವಿಮಾನ ನಿಲ್ದಾಣದ ವಿಸ್ತರಣೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ದಿ ನಿಗಮ ಗೋಕುಲ ಗ್ರಾಮದ 707 ಎಕರೆ ಭೂಮಿಯನ್ನ್ನು ಸ್ವಾಧೀನ ಪಡಿಸಿಕೊಂಡು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 599 ಎಕರೆ ಜಮೀನು ನೀಡಿ ಇನ್ನುಳಿದ ನೂರಕ್ಕೂ ಹೆಚ್ಚು ಎಕರೆ ಜಮೀನನ್ನು ಇನ್ಫೋಸಿಸ್, ದೇಶಪಾಂಡೆ ಫೌಂಡೇಷನ್ ಮತ್ತು ಅನಂತ್ ರೆಸಿಡೆನ್ಸಿಗೆ ಎಕರೆಗೆ ರು. 50 ಲಕ್ಷ ಮಾರಾಟ ಮಾಡಿತ್ತು. ಕರ್ನಾಟಕ ಸರ್ಕಾರದ ಕೆಐಡಿಬಿ ಕಾಯ್ದೆ 1966ರ 28(8)ರ ಕಲಂ ಪ್ರಕಾರ ಸಾರ್ವಜನಿಕ ಹಿತಾಸಕ್ತಿಗಾಗಿ ವಶಪಡಿಸಿಕೊಂಡ ಜಮೀನು ನಿಗದಿತ ಉದ್ದೇಶಕ್ಕೆ ಬಳಕೆಯಾಗದಿದ್ದ ಪಕ್ಷದಲ್ಲಿ ಆ ಜಮೀನನ್ನ್ನು ಮೂಲ ಮಾಲೀಕರಿಗೆ ಒಪ್ಪಿಸಬೇಕು. ಆದರೆ, ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ ರೈತರಿಗೆ ರು. 26 ಲಕ್ಷ ನೀಡಿ ವಶಪಡಿಸಿಕೊಂಡಿದ್ದ ಹೆಚ್ಚುವರಿ ಜಮಿನನ್ನ್ನು ತಲಾ ಎಕರೆಗೆ ರು. 50 ಲಕ್ಷದಂತೆ ನಾರಾಯಣ ಮೂರ್ತಿಯವರ ಇನ್ಪೋಸಿಸ್ ಸಂಸ್ಥೆಗೆ 50 ಎಕರೆ, ಮತ್ತು ನಾರಾಯಣ ಮೂರ್ತಿ ಅಮೆರಿಕದಲ್ಲಿರುವ ಖ್ಯಾತ ಐ.ಟಿ. ಉದ್ಯಮಿ ಗುರುರಾಜ್ ದೇಶಪಾಂಡೆ ನೇತೃತ್ವದ ದೇಶಪಾಂಡೆ ಫೌಂಡೇಶನ್ಗೆ 12.26 ಎಕರೆ ಮತ್ತು ಹೋಟೆಲ್ ಉದ್ಯಮಿ ರಮೇಶ್ ಶೆಟ್ಟಿ ಅವರಿಗೆ 1.39 ಎಕರೆ ಜಮೀನು ಮಾರಾಟ ಮಾಡಲಾಗಿತ್ತು. ಕೇವಲ ಒಂದು ವರ್ಷದ ಅವಧಿಯೊಳಗೆ ರೈತರಿಗೆ 26 ಲಕ್ಷ ನೀಡಿ, ವಶಪಡಿಸಿಕೊಂಡಿದ್ದ ಜಮೀನನ್ನು ಕೆಐಎಡಿಬಿ ಕರೆಗೆ ರು. 50 ಲಕ್ಷಕ್ಕೆ ಮಾರಾಟ ಮಾಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.