ಧಾರವಾಡ

ದಿಢೀರ್ ಮಳೆ: ಹುಬ್ಬಳ್ಳಿಯಲ್ಲಿ ಜನಜೀವನ ಅಸ್ತವ್ಯಸ್ತ

Published On :

ಹುಬ್ಬಳ್ಳಿ/ಮಡಿಕೇರಿ/ಮಂಗಳೂರು: ಕಳೆದ ಕೆಲವು ದಿನಗಳಿಂದ ತುಸು ಮರೆಯಾಗಿದ್ದ ಮಳೆ ಮಹಾನಗರ ಹುಬ್ಬಳ್ಳಿ, ಧಾರವಾಡ, ದಾವಣೆಗೆರೆ ಜಿಲ್ಲೆಯ ವಿವಿಧೆಡೆ, ದಕ್ಷಿಣ ಕನ್ನಡ, ಕೊಡಗು, ಹಾಸನ, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತ್ತು.
ಹುಬ್ಬಳ್ಳಿಯಲ್ಲಿ ಬೆಳಗ್ಗೆಯಿಂದ ಬಿಸಿಲು ಇತ್ತಾದರೂ ಮಧ್ಯಾಹ್ನ ಸುಮಾರು 3.30ರ ನಂತರ ಏಕಾಏಕಿ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ಕೆಲವು ನಿಮಿಷ ಗಾಳಿ ಬೀಸಿದ ನಂತರ ಏಕಾಏಕಿ ಭಾರಿ ಮಳೆ ಸುರಿದಿದ್ದರಿಂದ ಪಾದಚಾರಿಗಳು ಹಾಗೂ ಬೈಕ್ ಸವಾರರು ರಕ್ಷಣೆಗಾಗಿ ಸಮೀಪದ ಕಟ್ಟಡಗಳತ್ತ ಆಶ್ರಯಕ್ಕಾಗಿ ದೌಡಾಯಿಸಿದರು.  
ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದ ಬಳಿ ಮರವೊಂದು ನೆಲಕ್ಕುರುಳಿದ್ದು, ಶಹರ ಠಾಣೆ ವ್ಯಾಪ್ತಿಯ ಅರಳಿಕಟ್ಟಿ ಓಣಿಯಲ್ಲಿ ವಿದ್ಯುತ್ ಕಂಬವೊಂದು ಕೆಳಗೆ ಬಿದ್ದಿದೆ. ಯಾವುದೇ ಸಾವು-ನೋವು ಸಂಭವಿಸಿದ ವರದಿಯಾಗಿಲ್ಲ.
ಧಾರವಾಡದಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಸುರಿದರೆ, ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ರಭಸದ ಮಳೆ ಸುರಿಯಿತು. ಹುಬ್ಬಳ್ಳಿಯ ತಗ್ಗು ಪ್ರದೇಶಗಳಲ್ಲಿನ ಬಹುತೇಕ ಮನೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ನೀರು ನುಗ್ಗಿತು. ರಸ್ತೆಗಳು ಜಲಾವೃತಗೊಂಡಿದ್ದರಿಂದ ಪ್ರಮುಖ ಬೀದಿಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಕೆಲವೆಡೆ ವಾಹನಗಳು ಮುಂದೆ ಸಾಗದೇ, ರಸ್ತೆ ಪಕ್ಕ ನಿಂತಿದ್ದ ದೃಶ್ಯಗಳು ಕಂಡುಬಂದವು. ವಿದ್ಯಾನಗರ, ಕೊಪ್ಪಿಕರ್ ರಸ್ತೆ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಸೇರಿದಂತೆ ವಿವಿಧೆಡೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬೀದಿ ವ್ಯಾಪಾರಸ್ಥರು ತರಕಾರಿ, ಹಣ್ಣು, ಹೂವುಗಳನ್ನು ರಸ್ತೆ ಮೇಲೆಯೇ ಬಿಟ್ಟು ಆಶ್ರಯಕ್ಕಾಗಿ ಪಕ್ಕದ ಕಟ್ಟಡಗಳತ್ತ ದೌಡಾಯಿಸಿದ್ದರಿಂದ ಹಣ್ಣು ಮತ್ತಿತರ ಸಾಮಗ್ರಿಗಳು ಮಳೆ ನೀರಿನಲ್ಲಿ ತೇಲಿ ಹೋಗುತ್ತಿದ್ದದ್ದೂ ಕಂಡುಬಂದಿತು.
ದ.ಕ, ಕೊಡಗಲ್ಲಿ ವ್ಯಾಪಕ ಮಳೆ: ಮಡಿಕೇರಿ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಸಂಜೆ ಸುಮಾರು 4 ಗಂಟೆ ನಂತರ ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದ್ದು, ಇದರಿಂದ ಕೆಲವು ಭಾಗಗಳ ಕೃಷಿ ಪ್ರದೇಶಗಳಿಗೆ ನೀರು ನುಗ್ಗಿ ಆತಂಕ ಸೃಷ್ಟಿಸಿತು.
ದ.ಕ.  ಜಿಲ್ಲೆಯಾದ್ಯಂತ ಭಾನುವಾರ ಸಂಜೆ ಮೋಡ ಕವಿದ ವಾತಾವರಣವಿದ್ದು, ಸುಳ್ಯದಲ್ಲಿ ಗುಡುಗು ಸಹಿತ ಸುಮಾರು ಅರ್ಧ ಗಂಟೆ ಧಾರಾಕಾರ ಮಳೆಯಾಗಿದೆ. ಉಪ್ಪಿನಂಗಡಿ, ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದ್ದು, ಪುತ್ತೂರಿನಲ್ಲಿ ಮೋಡ ಕವಿದು ಗುಡುಗು, ಮಿಂಚು ಕಾಣಿಸಿಕೊಂಡಿತ್ತು.
ಹಾಸನ ಜಿಲ್ಲೆಯ ಹೊಳೆನರಸೀಪುರ ಹಾಗೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಮಳೆಯಾಗಿ, ಇಳೆ ತಂಪಾಯಿತು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಅಪಾರ ಬೆಳೆ ನಷ್ಟವಾಗಿದೆ. ದಾವಣೆಗೆರೆ ನಗರ ಹಾಗೂ ಜಿಲ್ಲೆಯ ಹರಪನಹಳ್ಳಿಯಲ್ಲಿಯೂ ಉತ್ತಮ ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.