ಧಾರವಾಡ

ಫೆಬ್ರವರಿಗೆ ಚತುಷ್ಪಥ ಪೂರ್ಣ: ಸಚಿವ ಲಾಡ್

Published On :

ಹುಬ್ಬಳ್ಳಿ: ಎಚ್‌ಡಿಬಿಆರ್‌ಟಿಎಸ್ ಯೋಜನೆಯನ್ನು ಈ ಹಂತದಲ್ಲಂತೂ ಕೈಬಿಡಲಿಕ್ಕಾಗುವುದಿಲ್ಲ. ಆದರೆ, ಹು-ಧಾ ಚತುಷ್ಪಥ ನಿರ್ಮಾಣ ಕಾಮಗಾರಿಗೆ ವೇಗ ನೀಡಿ ಮುಂದಿನ ವರ್ಷದ ಫೆಬ್ರವರಿ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ, ಬಿಆರ್‌ಟಿಎಸ್ ಬೇಡ, ಚತುಷ್ಪಥ ಸಾಕು ಎಂದು ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರನ್ನು ಭೇಟಿಯಾಗಿ ಮಾತನಾಡಿದ ಅವರು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರುವ ಸ್ಥಳ ಹೊರತುಪಡಿಸಿ ಉಳಿದೆಡೆ ಚತುಷ್ಪಥ ನಿರ್ಮಾಣ ಪೂರ್ಣಗೊಳಿಸಲಾಗುವುದು. ಸುಮಾರು 7-8 ಕಿ.ಮೀ. ಉದ್ದಕ್ಕೂ ಭೂಸ್ವಾಧೀನದ ಸಮಸ್ಯೆ ಇದೆ. ಈಗಾಗಲೇ ಬಿಆರ್‌ಟಿಎಸ್ ಯೋಜನೆಗೆ ಸಂಬಂಧಿಸಿದಂತೆ ಸಾಕಷ್ಟು ಕಾಮಗಾರಿ, ಯೋಜನಾ ವಿನ್ಯಾಸ ಸೇರಿದಂತೆ ಕೆಲಸಗಳು ಆಗಿವೆ. ಹೀಗಾಗಿ ಯೋಜನೆ ಜಾರಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಆದಾಗ್ಯೂ ಸರ್ಕಾರದ ಎದುರು ನಾಗರಿಕರಿಗೆ ಬೇಡವಾಗಿರುವ ಬಿಆರ್‌ಟಿಎಸ್ ಯೋಜನೆ ಜಾರಿ ಮಾಡಬೇಕೋ ಬೇಡವೋ ಎಂದು ಪ್ರಸ್ತಾಪ ಮಾಡಲಾಗುವುದು. ಒಂದು ವೇಳೆ ಸರ್ಕಾರದ ಮಟ್ಟದಲ್ಲಿ ಯೋಜನೆ ಜಾರಿಯಾಗಬೇಕು ಎಂದು ತೀರ್ಮಾನವಾದರೆ ಯೋಜನೆ ಜಾರಿಗೊಳಿಸಲಾಗುವುದು ಮತ್ತು ಸರ್ಕಾರ ಬೇಡ ಎಂದಲ್ಲಿ ಬಿಆರ್‌ಟಿಎಸ್ ಯೋಜನೆ ಕೈಬಿಡಲಾಗುವುದು ಎಂದರು.
ರು. 119 ಕೋಟಿ ಕೊಟ್ಟಿದ್ದೇಕೆ?: ಹು-ಧಾ ಮಧ್ಯೆ ಚತುಷ್ಪಥಕ್ಕೆ ಸರ್ಕಾರ ಮೂರು ವರ್ಷಗಳ ಹಿಂದೆ ರು. 119 ಕೋಟಿ ಬಿಡುಗಡೆ ಮಾಡಿದೆ. ಸರ್ಕಾರ ಈ ಹಣ ನೀಡಿದ್ದು ಯೋಜನೆ ಜಾರಿಗೆ ವಿನಃ 119 ಕೋಟಿಯನ್ನು ಬ್ಯಾಂಕ್‌ನಲ್ಲಿಟ್ಟು ಬಡ್ಡಿ ಪಡೆಯುವುದಕ್ಕಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅಧಿಕಾರಿಗಳ ಮೇಲೆ ಕಿಡಿ ಕಾರಿದ್ದಾರೆ.
ಬಿಆರ್‌ಟಿಎಸ್ ಬೇಡ ಎಂದು ಪ್ರತಿಭಟನೆ ಮಾಡುತ್ತಿದ್ದವರನ್ನು ಭೇಟಿಯಾದ ಬಳಿಕ ಬಿವಿಬಿ ಕಾಲೇಜಿನ ರಸ್ತೆ ಪರಿಶೀಸಿದ ಅವರು, ಚತುಷ್ಪಥ ಯೋಜನೆ ಅನುಗುಣವಾಗಿ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಿ ಎಂದರು.
ಕೆಆರ್‌ಡಿಎಲ್‌ನಿಂದ ರಸ್ತೆ ನಿರ್ಮಾಣ ಗುತ್ತಿಗೆ ಪಡೆದ ಜಿವಿಕೆ ಕಂಪನಿ ಯೋಜನಾ ವ್ಯವಸ್ಥಾಪಕ ವಿಜಯಕುಮಾರ್, ಕೆಆರ್‌ಡಿಎಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯೋಜನೆ ಅನುಷ್ಠಾನ ಏಕೆ ವಿಳಂಬವಾಗತ್ತಿದೆ ಎಂದು ಪ್ರಶ್ನಿಸಿದರು.
ಚತುಷ್ಪಥ ಯೋಜನೆಗೆ ನಂತರದ ದಿನಗಳಲ್ಲಿ ಬಿಆರ್‌ಟಿಎಸ್ ಯೋಜನೆ ಸೇರ್ಪಡೆಯಾಗಿದ್ದು, ಇದರಿಂದಾಗಿ ರಸ್ತೆ ವಿನ್ಯಾಸ, ಕ್ರಾಸ್ ಸೆಕ್ಷನ್‌ಗಳಲ್ಲಿ ಬದಲಾವಣೆಯಾಗಿರುವುದರಿಂದ ಯೋಜನೆ ಅನುಷ್ಠಾನ ಸ್ಥಗಿತಗೊಳಿಸುವಂತೆ ಬಿಆರ್‌ಟಿಎಸ್ ಸೂಚಿಸಿದೆ. ಈ ಕಾರಣದಿಂದಾಗಿ ಹೊಸೂರ ಸರ್ಕಲ್‌ನಿಂದ ಬಿವಿಬಿ ಕಾಲೇಜುವರೆಗೆ ಚತುಷ್ಪಥ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕುತ್ತರವಾಗಿ ಸಚಿವ ಲಾಡ್, ಸದ್ಯಕ್ಕೆ ಬಿಆರ್‌ಟಿಎಸ್ ಯೋಜನಾ ವಿನ್ಯಾಸ ಬದಿಗಿಟ್ಟು, ಮೊದಲಿನ ಚತುಷ್ಪಥ ನಿರ್ಮಾಣ ಕೈಗೆತ್ತಿಕೊಳ್ಳಿ, ಈ ನಿಟ್ಟಿನಲ್ಲಿ ಇಂದಿನಿಂದಲೇ ರಸ್ತೆ ನಿರ್ಮಾಣ ಆರಂಭವಾಗಬೇಕೆಂದರು.
ವಿಳಂಬಕ್ಕೆ ಗೊಂದಲ ಕಾರಣ
ಪಾಟೀಲ ಪುಟ್ಟಪ್ಪ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೂಲಸೌಕರ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಹು-ಧಾ ಚತುಷ್ಪಥ ಯೋಜನೆಗೆ ನಂತರ ಬಿಆರ್‌ಟಿಎಸ್ ಯೋಜನೆ ಸೇರ್ಪಡೆಯಾಗಿದ್ದರಿಂದ ಯೋಜನೆ ಅನುಷ್ಠಾನದಲ್ಲಿ ಒಂದಿಷ್ಟು ಗೊಂದಲಗಳಿವೆ. ಈ ಗೊಂದಲಗಳನ್ನು ಪರಿಹರಿಸಬೇಕಾಗಿದ್ದು, ಬಿಆರ್‌ಟಿಎಸ್ ಯೋಜನೆ ಜಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಕುರಿತು ಸ್ಪಷ್ಟ ಚಿತ್ರಣ ಬಿಆರ್‌ಟಿಎಸ್ ಅಧಿಕಾರಿಗಳಲ್ಲಿ ಇಲ್ಲ. ಹೀಗಾಗಿ ಮೊದಲು ಚತುಷ್ಪಥ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುವುದು. ಚತುಷ್ಪಥ ನಿರ್ಮಾಣಕ್ಕೆ ಕೇವಲ ಆರು ಎಕರೆ ಮಾತ್ರ ವಶಪಡಿಸಿಕೊಳ್ಳಬೇಕಾಗುತ್ತದೆ. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲಲ್ಲಿ ಹು-ಧಾ ಚತುಷ್ಪಥ ಫೆಬ್ರವರಿ ಹೊತ್ತಿಗೆ ಪೂರ್ಣಗೊಳಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.