ಧಾರವಾಡ

ಇನ್ಕಾಮೆಕ್ಸ್ಗೆ ಉತ್ತಮ ಪ್ರತಿಕ್ರಿಯೆ: ಜವಳಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 8
ಸೆ. 13ರಿಂದ 16ರ ವರೆಗೆ ನಡೆಯಲಿರುವ ಉ-ಕದ ಕೈಗಾರಿಕಾ ವಸ್ತು ಪ್ರದರ್ಶನ ಇನ್ಕಾಮೆಕ್ಸ್ 2013ಕ್ಕೆ ಉತ್ತರ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಉದ್ದಿಮೆದಾರರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ ಎಂದು ಕೆಸಿಸಿಐ ಆಧ್ಯಕ್ಷ ಎನ್.ಪಿ. ಜವಳಿ ಹೇಳಿದರು.
ಅಮರಗೋಳ ಎಪಿಎಂಸಿಯಲ್ಲಿ ನಡೆಯಲಿರುವ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಒಟ್ಟು 295 ಮಳಿಗೆ ನಿರ್ಮಿಸಲಾಗಿತ್ತು, ಅದರಲ್ಲಿ 255 ಮಳಿಗೆ ವಿವಿಧ ಉದ್ಯಮಿ ಮತ್ತು ಉದ್ದಿಮೆಗಳು ಕಾಯ್ದಿರಿಸಿಕೊಂಡಿವೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಭಾಗದಲ್ಲಿ ಇನ್ನೂ ನಾಲ್ಕು ಮಳಿಗೆ ತೆರೆಯಲಾಗುತ್ತಿದ್ದು, ಉ-ಕದ ವೈವಿಧ್ಯತೆಯನ್ನು ತೋರಿಸುವ ಮಹಾಲಿಂಗಪುರದ ಬೆಲ್ಲ, ಐನಾಪುರದ ಫೇಡೆ, ಬೆಳಗಾವಿ ಕುಂದಾ, ಕೊಲ್ಹಾರ ಮೊಸರು ಮತ್ತು ಸವಣೂರಿನ ಖಾರದ ಪುಡಿಗೆ ಸಂಬಂಧಿಸಿದ ಉದ್ದಿಮೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.
ವಿಚಾರ ಸಂಕಿರಣ: ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗಾಗಿ ಹಮ್ಮಿಕೊಂಡಿರುವ ವೆಂಡರ್ ಡೆವಲಪ್ಮೆಂಟ್ ಕಾರ್ಯಕ್ರಮದಡಿ ವಿಚಾರ ಸಂಕಿರಣ, ಕಾರ್ಯಾಗಾರ ಏರ್ಪಡಿಸಲಾಗುತ್ತಿದೆ. ಸೆ. 14ರಂದು ಬೆಳಗ್ಗೆ 11:45ರಿಂದ 1:30ರ ವರೆಗೆ ನಿಮ್ಮ ವ್ಯವಹಾರದ ವೈಶಿಷ್ಟ್ಯತೆಯ ಬೆಳವಣಿಗೆ ಕುರಿತು ಚಿಕ್ಕೋಡಿ ಕೆಎಲ್ಇ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಬಸವರಾಜ ಕಟಗೇರಿ ಅವರು ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ತಯಾರಿಸುವ ಉತ್ಪನ್ನಗಳಲ್ಲಿ ವೈಶಿಷ್ಟ್ಯತೆ ಕುರಿತು ಉಪನ್ಯಾಸ ನೀಡಲಿದ್ದಾರೆ.
ಅದೇ ದಿನ ಮಧ್ಯಾಹ್ನ 2.30ಕ್ಕೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಾಹಿತಿ ತಂತ್ರಜ್ಞಾನದ ಉಪಯೋಗ ಕುರಿತು ವೀಜನ್ ಆರ್ಕ್ ಮತ್ತು ವರ್ನಾಜ್ ಸೋಲ್ಯುಷನ್ನ ದಿನೇಶ ಬಡಗಂಡಿ ಉಪನ್ಯಾಸ ನೀಡಲಿದ್ದಾರೆ. ಸೆ. 15ರಂದು ವ್ಯವಹಾರದಲ್ಲಿ ಕುಟುಂಬ ಮತ್ತು ಉದ್ಯೋಗಿಗಳನ್ನು ಸೇರಿಸಿಕೊಳ್ಳುವ ರೀತಿ ಮತ್ತು ವಿಧಾನ ಕುರಿತು ಮಹೇಶ ಮಾಶಾಳ ಉಪನ್ಯಾಸ ನೀಡಲಿದ್ದಾರೆ.
ಪಾಲುದಾರಿಕೆ ಉದ್ದಿಮೆಯಲ್ಲಿ ಪಾಲುದಾರರನ್ನು ಅರ್ಥೈಸಿಕೊಳ್ಳುವ ರೀತಿ ಕುರಿತು ಸೆ. 15ರಂದು ಮಧ್ಯಾಹ್ನ 2:30ಕ್ಕೆ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಡಾ. ಪ್ರಸಾದ್ ರೂಡಗಿ ನಡೆಸಿಕೊಡಲಿದ್ದಾರೆ.
ಉಪನ್ಯಾಸ: ಸೆ.16ರಂದು ಶೇರು ಮಾರುಕಟ್ಟೆಯಿಂದ ಸಣ್ಣ, ಮಧ್ಯಮ ಉದ್ದಿಮೆಗಳು ಬಂಡವಾಳ ಸಂಗ್ರಹಿಸುವ ವಿಧಾನ ಕುರಿತು ಐಐಎಂ ಅಹ್ಮದಾಬಾದ್ ಮತ್ತು ಮುಂಬೈ ಐಐಟಿಯ ಶಂಕರ ಜಾಧವ ಉಪನ್ಯಾಸ ನೀಡಲಿದ್ದಾರೆ.
ಇನ್ಕಾಮೆಕ್ಸ್ನಲ್ಲಿ ವಜ್ರಾಭರಣ ತಯಾರಕರು ಕೂಡ ಪಾಲ್ಗೊಳ್ಳುವುದಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ, ವಜ್ರಾಭರಣಗಳ ಸುರಕ್ಷತೆ ಕುರಿತು ಮತ್ತು ಅವರಲ್ಲಿ ಅಭದ್ರತಾ ಭಾವನೆ ಮೂಡಿದ ಹಿನ್ನೆಲೆಯಲ್ಲಿ ವಿವಿಧ ವಜ್ರಾಭರಣ ತಯಾರಕರು ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರು.


ಇನ್ಕಾಮೆಕ್ಸ್ನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟ್ಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹುಬ್ಬಳ್ಳಿಯ 3 ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸಿದ್ಧಪಡಿಸಿರುವ 15 ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳ ಸಂಶೋಧನೆಗೆ ವಾಣಿಜ್ಯ ಮಾರುಕಟ್ಟೆ ಒದಗಿಸುವುದು. ಒಂದು ವೇಳೆ ಬೃಹತ್ ಉದ್ಯಮಗಳು ಮುಂದೆ ಬಂದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಪಾಲುದಾರರನ್ನಾಗಿ ಮಾಡಿಕೊಂಡು ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಸಾದ್ ರೂಡಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂದಾನಪ್ಪ ಸಜ್ಜನರ, ಪ್ರಸಾದ ರೂಡಗಿ, ಕೆ.ಟಿ. ಪವಾರ, ಕರಿಕಟ್ಟಿ, ರಾಜೀವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.