ಧಾರವಾಡ

ಬಿತ್ತನೆ ಬೀಜದಲ್ಲಿ ಸ್ವಾವಲಂಬಿಯಾಗಿ

Published On :

ಧಾರವಾಡ: ಆಹಾರ ಭದ್ರತೆಗಾಗಿ ಬೀಜದ ಭದ್ರತೆಯೂ ಅಗತ್ಯವಾಗಿದ್ದು, ರೈತರು ಬಿತ್ತನೆ ಬೀಜಕ್ಕಾಗಿ ಇನ್ನೊಬ್ಬರತ್ತ ಕೈಯೊಡ್ಡದೇ ಸ್ವತಃ ಬೀಜೋತ್ಪಾದನೆ ಮಾಡಿ ಸ್ವಾವಲಂಬಿಗಳಾಗಬೇಕೆಂದು ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆನಂದಕೃಷ್ಣ ಅಭಿಪ್ರಾಯಿಸಿದರು.
ಕೃಷಿ ವಿವಿಯಲ್ಲಿ ನಡೆಯುತ್ತಿರುವ 4 ದಿನಗಳ ಕೃಷಿ ಮೇಳದಲ್ಲಿ ಮೊದಲ ದಿನ ಶನಿವಾರ ನಡೆದ ಬೀಜ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಹಾಗೂ ಪ್ರಮಾಣಿಕೃತ ಬೀಜಗಳನ್ನು ಬಿತ್ತಿ ಅವುಗಳಿಗೆ ಹೆಚ್ಚಿನ ಪೋಷಕಾಂಶಗಳನ್ನು ನೀಡಿದರೆ ಮಾತ್ರ ಹೆಚ್ಚಿನ ಉತ್ಪಾದನೆ ಸಾಧ್ಯ. ಈ ಮೂಲಕ ಆಹಾರ ಭದ್ರತೆಯನ್ನೂ ಕಾಣಬಹುದು. ಬಿತ್ತುವ ಬೀಜಗಳೇ ಕಳಪೆಯಾಗಿದ್ದರೆ ರೈತರ ಶ್ರಮವೂ ವ್ಯರ್ಥ, ಉತ್ಪಾದನೆ ಕುಗ್ಗುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ರೈತರು ವಿವಿಧ ಕಂಪನಿಗಳು ನೀಡುವ ಪ್ಯಾಕೆಟ್ ಬೀಜಗಳಿಗೆ ಬೆನ್ನು ಹತ್ತದೇ ಸ್ವತ-ಉತ್ಪಾದಿಸಿಕೊಳ್ಳಿ ಅಥವಾ ಕೃಷಿ ವಿವಿಗಳಿಂದ ಖರೀದಿಸಿ ಗುಣಮಟ್ಟದ ಬೀಜಗಳನ್ನು ಬಿತ್ತಬೇಕು. ಈ ವಿಷಯದಲ್ಲಿ ಕೃಷಿ ವಿವಿಗಳು ಗುಣಮಟ್ಟದ ತಳಿಗಳನ್ನು ಸಂಶೋಧಿಸಿ ರೈತರಿಗೆ ಪರಿಚಯಿಸಬೇಕೆಂದರು.
ಹುಬ್ಬಳ್ಳಿಯ ಅಗಡಿ ಗ್ರಾಮದ ಬಸಯ್ಯ ಮಠಪತಿ, ಧಾರವಾಡ ತಡಕೋಡದ ವೀರನಗೌಡ ಪಾಟೀಲ, ಬೈಲಹೊಂಗಲದ ರೂಪೇಶ ಕಾಮತ ಅವರನ್ನು ಬಿಜೋತ್ಪಾದನೆ ಸಾಧನೆಗೆ ಸನ್ಮಾನಿಸಲಾಯಿತು. ಮೇಟಿ ಹೇಮಾಶ್ರೀ, ಮಹಾಂತೇಶ ಜಟೆನ್ನವರ, ಆನಂದ ದೇಸಾಯಿ ಅವರಿಗೆ ಸಾಂಕೇತಿಕವಾಗಿ ಹಿಂಗಾರಿ ಬೆಳೆಗಳ ಬೀಜಗಳನ್ನು ವಿತರಿಸಲಾಯಿತು.
ಡಾ.ವೈ.ಬಿ. ಪಾಟೀಲ, ಡಾ.ಡಿ. ರಾಜಗೋಪಾಲ, ಹೇಮಾಕ್ಷಿ ಕಿರೇಸೂರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೃಷಿ ವಿವಿ ಕುಲಪತಿ ಪ್ರಭಾರಿ ಡಾ.ಎಚ್.ಎಚ್. ವಿಜಯಕುಮಾರ, ಪ್ರಸಕ್ತ ವರ್ಷ ಕೃಷಿ ವಿವಿಯು 1.9 ಲಕ್ಷ ಕ್ವಿಂಟಾಲ್ ಬೀಜ ಉತ್ಪಾದನೆ ಗುರಿ ಸಾಧಿಸಿದೆ. ಈ ಅವಧಿಯಲ್ಲಿ 96,819 ವಿವಿಧ ಜಾತಿಯ ತೋಟಗಾರಿಕೆ ಸಸಿ ಉತ್ಪಾದಿಸಿ ರೈತರಿಗೆ ಮಾರಾಟ ಮಾಡಿ ಒಟ್ಟು ರು. 30,72,467 ಆದಾಯ ಗಳಿಸಿದೆ. 2013-14ನೇ ಸಾಲಿನಲ್ಲಿ 1.10 ಲಕ್ಷ ಕ್ವಿಂಟಾಲ್ ಬೀಜ ಹಾಗೂ 8.25 ಲಕ್ಷ ಉತ್ತಮ ಗುಣಮಟ್ಟದ ವಿವಿಧ ತಳಿಗಳ ತೋಟಗಾರಿಕೆ, ಔಷಧಿ ಮತ್ತು ಅರಣ್ಯ ಸಸಿ ಉತ್ಪಾದಿಸುವ ಗುರಿ ಇದೆ ಎಂದರು.
ಬೀಜ ಘಟಕದ ವಿಶೇಷಾಧಿಕಾರಿ ಡಾ.ಎನ್.ಕೆ. ಬೀರಾದಾರ ಪಾಟೀಲ ವಂದಿಸಿದರು. ಸಂಶೋಧನಾ ನಿರ್ದೇಶಕ ಡಾ.ಬಿ.ಎಂ. ಖಾದಿ ಸ್ವಾಗತಿಸಿದರು.
ಇಂದು ಉದ್ಘಾಟನೆ
ಕೃಷಿ ಮೇಳವು ಶನಿವಾರದಿಂದ ಆರಂಭವಾಗಿದ್ದರೂ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬಳಗ್ಗೆ 11ಕ್ಕೆ ಉದ್ಘಾಟನೆಗೊಳ್ಳಲಿದೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಇಲಾಖೆ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಅರಣ್ಯ ಹಾಗೂ ಪರಿಸರ ಸಚಿವ ರಮಾನಾಥ ರೈ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಸೇರಿದಂತೆ ಅನೇಕ ಸಚಿವರುಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಕೃಷಿ ಮೇಳದಲ್ಲಿಂದು...
ಮಧ್ಯಾಹ್ನ 2.30ಕ್ಕೆ ತೋಟಗಾರಿಕೆ ಬೆಳೆಗಳ ತಾಂತ್ರಿಕತೆಗಳು ಮತ್ತು ಆಹಾರ ಧಾನ್ಯಗಳ ಮೌಲ್ಯವರ್ಧನೆ ಕುರಿತು ಸಂವಾದ ನಡೆಯಲಿದೆ. ಬ್ಯಾಡಗಿ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮಿಗಳು ಸಾನಿಧ್ಯ ವಹಿಸುವರು. ಅತಿಥಿಗಳಾಗಿ ಡಾ.ಡಿ. ರಾಜಗೋಪಾಲ, ಡಾ. ಯೋಗಿರಾಜ ಪಾಟೀಲ ಹಾಗೂ ಪೂರ್ಣಾನಂದ ಭಟ್ ವಿಶೇಷ ಉಪನ್ಯಾಸ ನೀಡುವರು. ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.