ಧಾರವಾಡ

ರೈತರ ಮೇಳಕ್ಕೆ ಬಂದವರಿಗೆ ಟ್ರಾಫಿಕ್ ಜಾಮ್ ಬಿಸಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 22
ಕೃಷಿ ಮೇಳದ ಪ್ರಧಾನ ವೇದಿಕೆಯಿಂದ ತೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂರು ಗಂಟೆ ಅವಧಿಯಲ್ಲಿ ಬೆಂಗಳೂರು ಮುಟ್ಟಿರಬಹುದು ಅದೇ ವೇದಿಕೆಯಿಂದ ಹೊರಟ ಜನ ಸಾಮಾನ್ಯನಿಗೆ ಕೃಷಿ ವಿಶ್ವವಿದ್ಯಾಲಯದ ಮಹಾದ್ವಾರ ತಲುಪಲು ಮೂರೂವರೆ ಗಂಟೆ ಬೇಕಾಯಿತು.
ಇಂತಹ ಕಂಡು ಕೇಳರಿಯದ, ಅನುಭವಿಸದ ಟ್ರಾಫಿಕ್ ಅಧ್ವಾನಕ್ಕೆ ಕಾರಣವಾಗಿದ್ದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್‌ನ ಸಂಚಾರಿ ಪೊಲೀಸ್ ವಿಭಾಗ. ಎರ್ರಾಬಿರ್ರಿಯಾಗಿ ಬರುವ ವಾಹನಗಳನ್ನು ನಿಯಂತ್ರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಾದ ಪೊಲೀಸರು ಮತ್ತು ಪೊಲೀಸರೊಂದಿಗೆ ವಾದಕ್ಕೆ ಇಳಿದ ರೈತರಿಂದಾಗಿ ಇಡೀ ಧಾರವಾಡ ಕೃಷಿ ವಿಶ್ವವಿದ್ಯಾಲಯ ಟ್ರಾಫಿಕ್‌ನಿಂದ ಜಾಮ್ ಆಗಿತ್ತು. ಇದರ ಜೊತೆಗೆ ಎಡೆಬಿಡದೆ ಸುರಿಯುತ್ತಿದ್ದ ಮಳೆಯಲ್ಲಿಯೇ ಕೃಷಿ ಮೇಳ ವೀಕ್ಷಿಸಲು ಬಂದವರು ಅಡ್ಡಾದಿಡ್ಡಿ ನಿಂತ ವಾಹನಗಳ ಸಂದಿಗೊಂದಿಗಳಲ್ಲಿ ಮಳೆಯಲ್ಲಿ ನೆನೆದುಕೊಂಡು ವಾಹನ ಚಾಲಕರ ಹಾರ್ನ್‌ಗಳಿಗೆ ಹಿಡಿಶಾಪ ಹಾಕುತ್ತ ಹೋಗುತ್ತಿದ್ದರು.
ಕೃಷಿ ಮೇಳ ವೀಕ್ಷಿಸಲು ಬಂದಿದ್ದ ಮಹಿಳೆಯರು ತೇವಳುತ್ತಿದ್ದ ವಾಹನಗಳಲ್ಲಿ ಹತ್ತಿ ಪ್ಲೀಸ್ ಮೇನ್ ಗೇಟ್‌ವರೆಗೆ ಬಿಡಿ ಎಂದು ಗೊಗರೆಯುತ್ತಿದ್ದರು. ಆದರೆ, ಇದಾವುದಕ್ಕೂ ಕ್ಯಾರೇ ಎನ್ನದ ಕ್ರೂಸರ್ ವಾಹನಗಳು ಜಾಗ ಸಿಕ್ಕರೆ ಸಾಕು ಅಲ್ಲಿ ತೂರಿಕೊಂಡು ನಿಧಾನವಾಗಿ ಸಾಗುವ ವಾಹನ ಸಂಚಾರಕ್ಕೂ ಅಡ್ಡಿ ಮಾಡುತ್ತಿದ್ದರು.
ವಿಪರ್ಯಾಸ ಎಂದರೆ ಈ ಕುರಿತು ಪೊಲೀಸ್ ಕಮೀಷನರ್ ಬಿ.ಎ. ಪದ್ಮನಯನ, ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನಿಸಿದರೆ, ಸಿಎಂ ಬಂದಿದ್ದರು ಅದಕ್ಕಾಗಿ ಟ್ರಾಫಿಕ್ ಸಮಸ್ಯೆಯಾಗಿದೆ. ನಮ್ಮ ಸಿಬ್ಬಂದಿ ಬರುತ್ತಿದ್ದಾರೆ. ಸ್ವಲ್ಪ ತಾಳ್ಮೆ ವಹಿಸಿ ಎಂದು ಹೇಳುವುದನ್ನು ಬಿಟ್ಟು ಮತ್ತೇನು ಮಾಡಲಿಕ್ಕೆ ಅವರಿಂದ ಆಗಲಿಲ್ಲ.
ಕೃಷಿ ವಿಶ್ವವಿದ್ಯಾಲಯದಿಂದ ಹೊರ ಹೋಗುವ ವಾಹನಗಳನ್ನು ಸಕಾಲಕ್ಕೆ ನಿಯಂತ್ರಿಸದ ಪರಿಣಾಮ ನೇರವಾಗಿ ಬೈಪಾಸ್ ಹೆದ್ದಾರಿ ಮೇಲೆ ಆಯಿತು. ಟ್ರಾಫಿಕ್ ಸಮಸ್ಯೆ ನರೇಂದ್ರದ ವರೆಗೆ ವಿಸ್ತರಿಸಿದರೆ, ಇತ್ತ ಧಾರವಾಡದತ್ತ ಹೋಗುವ ರಸ್ತೆಯಲ್ಲಿ ಸುಮಾರು ಒಂದು ಕಿಲೋ ಮೀಟರ್‌ವರೆಗೆ ವಾಹನಗಳ ಸಾಲು ನಿಂತಿತ್ತು. ಆದರೆ, ಧಾರವಾಡ ನಗರದಲ್ಲಿ ಮಾತ್ರ ಟ್ರಾಫಿಕ್ ಕಿರಿಕಿರಿ ಏನೂ ಇರದಿದ್ದದ್ದು ವಿಚಿತ್ರವಾಗಿತ್ತು.
ಟ್ರಾಫಿಕ್ ಜಾಮ್ ಪೊಲೀಸ್ ವೈಫಲ್ಯ
ಧಾರವಾಡ ನಗರ ಬಹುಶಃ ಮೊದಲನೇ ಬಾರಿ ಇಂತಹ ಟ್ರಾಫಿಕ್ ಸಮಸ್ಯೆ ಎದುರಿಸಿತು. ವಾಹನಗಳನ್ನು ಬೇರೆ ಮಾರ್ಗದ ಮುಖಾಂತರ ಸಂಚರಿಸುವುದಕ್ಕೆ ಅವಕಾಶ ಕಲ್ಪಿಸಬೇಕಿದ್ದ ಟ್ರಾಫಿಕ್ ಪೊಲೀಸರು ಇದ್ದ ಸ್ಥಳದಲ್ಲಿಯೇ ನಿಂತುಕೊಂಡು ವಾಕಿಟಾಕಿ ಮುಖಾಂತರ ಇಲ್ಲಿಂದ ಒಂದೂ ವೆಹಿಕಲ್ ಮೂವ್ ಆಗ್ತಿಲ್ಲ ಎಂದು ಸ್ಟೇಟ್ ಬ್ಯಾಂಕ್ ಬಳಿ ಟ್ರಾಫಿಕ್ ನಿಯಂತ್ರಿಸುತ್ತಿದ್ದ ಸಿಬ್ಬಂದಿ ಹೇಳುತ್ತಿದ್ದರೆ, ಮೇನ್ ಗೇಟ್‌ನಲ್ಲಿ ಸಂಚಾರ ನಿರ್ವಹಿಸುವ ಸಿಬ್ಬಂದಿಯದ್ದು ಇಲ್ಲಿ ಏನೂ ಸಮಸ್ಯೆಯಿಲ್ಲ. ವೆಹಿಕಲ್ ಮೂವ್ ಆಗ್ತಿವೆ ಎಂದು ಸಂದೇಶ ರವಾನಿಸುವ ಮೂಲಕ ಇಡಿ ಟ್ರಾಫಿಕ್ ವ್ಯವಸ್ಥೆಯನ್ನು ಕೆಲವು ಗಂಟೆಗಳ ಅಧ್ವಾನಗೊಳಿಸಿ ತಾವು ಪರದಾಡಿದರು, ಜನರನ್ನು ಪರದಾಡುವಂತೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.