ಜೂಜಾಟ: 10 ಬಂಧನ
ಧಾರವಾಡ: ಜೂಜಾಡುತ್ತಿದ್ದ ಹತ್ತು ಜನರನ್ನು ತಾಲೂಕಿನ ಗೋವನಕೊಪ್ಪದಲ್ಲಿ ಗ್ರಾಮೀಣ ಠಾಣೆ ಪೊಲೀಸರು ಶುಕ್ರವಾರ ಸಂಜೆ ಬಂಧಿಸಿದ್ದಾರೆ. ಗ್ರಾಮದ ಬಸ್ ನಿಲ್ದಾಣ ಬಳಿ ಇಸ್ಪೀಟ್ ಆಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಪೊಲೀಸರು, ಇನಾಯತ್ ಮುಲ್ಲಾ, ದಾವಲಸಾಬ ದೊಡಮನಿ, ಬಸವರಾಜ ತಳವಾರ, ಚಂದ್ರಶೇಖರ ತಳವಾರ, ರಿಯಾಜ್ ಗಂಜಿಗಟ್ಟಿ, ನಾರಾಯಣ ಮಡ್ಡೆನ್ನವರ, ಸಿದ್ದಪ್ಪ ಗಡದೂರ, ಶಬ್ಬೀರ ಮುಜಾವರ ಮತ್ತು ಉಳವಪ್ಪ ಮುತ್ತಗಿ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ 16,120 ನಗದು ಮತ್ತು ಜೂಜಾಟ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಯುವಕರು ನಾಪತ್ತೆ
ಧಾರವಾಡ: ಅಂಗಡಿಗೆ ಹೋಗಿ ಬರುತ್ತನೆಂದು ಹೇಳಿದ ಯುವಕನೊಬ್ಬ ನಾಪತ್ತೆಯಾದ ಘಟನೆ ವಿದ್ಯಾಗಿರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ತೇಜಸ್ವಿನಗರದ ಗಾರ್ಡನ್ ಬಳಿಯ ಸೋನಿಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿನಾಯಕ ಪ್ರಜಾಪತಿ (20) ನಾಪತ್ತೆಯಾದ ಯುವಕ. ಮಾಳಮಡ್ಡಿಯಲ್ಲಿನ ಮೊಬೈಲ್ ಅಂಗಡಿಗೆ ಹೋಗಿದ್ದ ವಿನಾಯಕ ಮನೆಗೆ ವಾಪಸ್ಸಾಗಿಲ್ಲ. ಸೆ. 25ರಂದು ಅವರ ತಂದೆ ಛೇಡಿಲಾಲ ಪ್ರಜಾಪತಿ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಮನೆಯಿಂದ ಆಚೆ ಹೋದ ನಗರಕರ ಕಾಲನಿಯ ಬಸವರಾಜ ಅಂಬುವರ (25) ನಾಪತ್ತೆಯಾಗಿದ್ದು, ಈ ಬಗ್ಗೆ ಆತನ ತಂದೆ ಗಂಗಪ್ಪ ಹುಣಸಿಕಟ್ಟಿ ಸೆ. 25ರಂದು ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕೊಲೆ ಆರೋಪಿಗಳ ಸೆರೆ
ಹುಬ್ಬಳ್ಳಿ: ಉಣಕಲ್ ಗ್ರಾಮದ ದೇವೇಂದ್ರಪ್ಪ ಬಡಿಗೇರ ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ರೇಲ್ವೆ ಹಳಿ ಮೇಲೆ ಎಸೆದು ಹೋಗಿದ್ದ ಇಬ್ಬರು ಆರೋಪಿಗಳನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಸೆ. 13ರಂದು ಚೆನ್ನು ಪಾಟೀಲ ಎನ್ನುವವರ ಜಾಗದಲ್ಲಿ ಕೊಲೆ ಮಾಡಿ ಶವವನ್ನು ರೇಲ್ವೆ ಹಳಿ ಮೇಲೆ ಹಾಕಿ ಹೋಗಿದ್ದ ತಾವರಗೇರಾದ ಗಿರೀಶ ಅಯ್ಯಪ್ಪ ಬಡಿಗೇರ, ಉಣಕಲ್ ಗ್ರಾಮದ ಶಿವರಾಜ ಬಸವರಾಜ ಬ್ಯಾಹಟ್ಟಿ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಅಪಘಾತ: ಇಬ್ಬರ ಸಾವು
ನವಲಗುಂದ: ತಾಲೂಕಿನ ಯಮನೂರ ಬಳಿ ಅಂಬಾಸಿಡರ್-ಟ್ರಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟ ಘಟನೆ ಶನಿವಾರ ಮಧ್ಯರಾತ್ರಿ ಸಂಭವಿಸಿದೆ. ನವಲಗುಂದದಿಂದ ಮೊರಬಕ್ಕೆ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧರಿಯಪ್ಪ ಕಂಬಳಿ (45), ಟೋಪಣ್ಣ ಗಾಡದ (60) ಮೃತಪಟ್ಟಿದ್ದಾರೆ. ನಾಲ್ವರು ಗಾಯಾಳುಗಳನ್ನು ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ಕರೆದೊಯ್ಯಲಾಗಿದೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

