ಧಾರವಾಡ

ಇಲ್ಲಿಲ್ಲ ನಿಲ್ದಾಣ, ಜನರಂತೂ ಹೈರಾಣ...

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಸೆ. 28
ಲಕ್ಷಾಂತರ ರುಪಾಯಿ ವೆಚ್ಚ ಮಾಡಿ ನಿರ್ಮಿಸಿರುವ ಬಸ್ ಶೆಲ್ಟರ್ (ತಂಗುದಾಣ)ಗಳಲ್ಲಿ ಪ್ರಯಾಣಿಕರು ನಿಲ್ಲಲೂ ಅಸಹ್ಯಪಡುವಂತಿದ್ದರೆ, ಪ್ರಯಾಣಿಕರು ಬಸ್ಗಾಗಿ ಬಿಸಿಲು ಮಳೆಯಲ್ಲಿ ಕಾಯುವ ಸ್ಥಳಗಳಲ್ಲಿ ನಿಲ್ದಾಣಗಳೇ ಇಲ್ಲ.
ಹುಬ್ಬಳ್ಳಿಯ ಪ್ರಮುಖ ಪ್ರದೇಶಗಳಲ್ಲಿ ಬಸ್ಗಾಗಿ ಕಾಯುತ್ತ ರಸ್ತೆ ಪಕ್ಕದ ಫುಟ್ಪಾತ್ನಲ್ಲಿ ನಿಂತಿರುವ ಜನದಟ್ಟಣೆ ನಿತ್ಯದ ಸಾಮಾನ್ಯ ದೃಶ್ಯ. ನಿಗದಿತ ಸ್ಥಳದಲ್ಲಿ ಬಸ್ ನಿಲ್ಲುತ್ತಿದ್ದರೂ ಅಲ್ಲಿ ಶೆಲ್ಟರ್ಗಳೇ ಇಲ್ಲದಂತಾಗಿದೆ. ಸಮರ್ಪಕ ಬಸ್ ಶೆಲ್ಟರ್ಗಳಿಲ್ಲದೇ ಜನರು ರಸ್ತೆ ಪಕ್ಕ ನಿಲ್ಲುತ್ತಿದ್ದರೂ ವಾಯವ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾತ್ರ ಇಂತಹ ಸ್ಥಳದಲ್ಲಿ ಶೆಲ್ಟರ್ ನಿರ್ಮಿಸುವ ಗೊಡವೆಗೆ ಹೋಗಿಲ್ಲ.
ಇನ್ನೂ ಈಗಿರುವ ಬಸ್ ಶೆಲ್ಟರ್ಗಳ ಸ್ಥಿತಿಯಂತೂ ಭಗವಂತನಿಗೇ ಪ್ರೀತಿ..!
ವಿವಿಧೆಡೆ ರಸ್ತೆ ಪಕ್ಕ ನಿರ್ಮಿಸಿರುವ ಬಸ್ ಶೆಲ್ಟರ್ ಪ್ರಯಾಣಿಕರು ನಿಲ್ಲಲು ಅಯೋಗ್ಯವಾಗಿವೆ. ಈ ಶೆಲ್ಟರ್ಗಳನ್ನು ಬೀದಿ ನಾಯಿ, ದನಗಳು ಅತಿಕ್ರಮಿಸಿಕೊಂಡು ಗಲೀಜಾಗಿಸಿವೆ. ಕೆಲವೆಡೆ ಖಾಸಗಿ ಸಹಭಾಗಿತ್ವದ ಸಹಯೋಗದಿಂದ ನಿರ್ಮಿಸಿರುವ ಬಸ್ ಶೆಲ್ಟರ್ಗಳನ್ನು ಮಾತ್ರ ಪ್ರಯಾಣಿಕರು ಉಪಯೋಗಿಸುತ್ತಿದ್ದು, ಸಾರಿಗೆ ಸಂಸ್ಥೆ ಶೆಲ್ಟರ್ಗಳತ್ತ ಪ್ರಯಾಣಿಕರು ಹೆಜ್ಜೆಯೂ ಹಾಕುತ್ತಿಲ್ಲ.
ಉಣಕಲ್ ಕ್ರಾಸ್, ಗೋಕುಲ ಮಾರ್ಗದಲ್ಲಿರುವ ಹೊಸೂರು ವೃತ್ತ, ಕೇಶ್ವಾಪುರ ರಮೇಶ ಭವನ ಎದುರು ಸೇರಿದಂತೆ ವಿವಿಧೆಡೆ ಸಾರಿಗೆ ಸಂಸ್ಥೆ ನಿರ್ಮಿಸಿರುವ ಬಸ್ ಶೆಲ್ಟರ್ಗಳು ಗಲೀಜಿನಿಂದ ಕೂಡಿದ್ದು, ಪ್ರಯಾಣಿಕರು ಶೆಲ್ಟರ್ ಬದಲು ಫುಟ್ಪಾತ್ನಲ್ಲಿಯೇ ನಿಂತು ಬಸ್ಗಾಗಿ ಕಾಯುವುದು ನಿತ್ಯದ ಅನಿವಾರ್ಯ ಸ್ಥಿತಿ. ಕೆಲ ಶೆಲ್ಟರ್ಗಳಂತೂ ಕುಡುಕರ ತಾಣಗಳಾಗಿ ಬದಲಾಗಿವೆ. ಇನ್ನೂ ಕೆಲವು ನಿರ್ಮಾಣಗೊಂಡು ದಶಕಗಳೇ ಕಳೆದಿದ್ದರೂ ಒಂದು ಬಾರಿಯೂ ಕಸ ಗೂಡಿಸಿಲ್ಲ ಎನ್ನುವಂತಿವೆ.
ರೇಲ್ವೆ ಸ್ಟೇಶನ್, ಪ್ರಧಾನ ಅಂಚೆ ಕಚೇರಿ, ಕೋರ್ಟ್ ವೃತ್ತ, ಸರ್ವೋದಯ ವೃತ್ತ, ಹೊಸೂರು ಕೆನರಾ ಹೋಟೆಲ್ ಬಳಿ, ಉಣಕಲ್ ಕ್ರಾಸ್, ಉಣಕಲ್, ಶ್ರೀನಗರ ಕ್ರಾಸ್ ಸೇರಿದಂತೆ ಹು-ಧಾ ಮಧ್ಯೆ, ಗದಗ, ಕಾರವಾರ, ನವಲಗುಂದ ಮಾರ್ಗದ ಬಹುತೇಕ ಸ್ಥಳಗಳಲ್ಲಿ ಬಸ್ ಶೆಲ್ಟರ್ಗಳೇ ಇಲ್ಲ. ಬಾಗಲಕೋಟದತ್ತ ತೆರಳಲು ಕೋರ್ಟ್ ವೃತ್ತ ಹಾಗೂ ಸರ್ವೋದಯ ವೃತ್ತ, ಗದಗನತ್ತ ತೆರಳಲು ರೇಲ್ವೆ ಬ್ರಿಜ್ ಪಕ್ಕದ ರಸ್ತೆ, ಧಾರವಾಡದತ್ತ ತೆರಳಲು ಕೆನರಾ ಹೋಟೆಲ್, ಉಣಕಲ್ ಕ್ರಾಸ್, ಉಣಕಲ್ ಸೇರಿದಂತೆ ಮಾರ್ಗದುದ್ದಕ್ಕೂ ಪ್ರಯಾಣಿಕರ ಹಿಂಡು ನಿತ್ಯವೂ ಕಾಣುತ್ತದೆ.
ಮಳೆ ನೀರಿನಿಂದ ಸೋರುವ, ಅವಧಿ ಮುಗಿದಿದ್ದರೂ ರಸ್ತೆಗಳಿಯುವ ಬಸ್ಗಳ ಬಗ್ಗೆ ಜನಸಾಮಾನ್ಯರಿಂದ ವ್ಯಾಪಕ ಟೀಕೆಗೆ ಗುರಿಯಾಗಿರುವ ವಾಯವ್ಯ ಸಾರಿಗೆ ಸಂಸ್ಥೆ, ಸಮರ್ಪಕ ಬಸ್ ಶೆಲ್ಟರ್ಗಳನ್ನೂ ನಿರ್ಮಿಸಲಾಗದಷ್ಟು ಹೀನಾಯ ಸ್ಥಿತಿ ಅನುಭವಿಸುತ್ತಿದೆಯೇ ಎಂಬ ಆಕ್ರೋಶಕ್ಕೂ ಒಳಗಾಗುತ್ತಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರು. ತೆರಿಗೆ ವಿನಾಯಿತಿ ಪಡೆದಿದ್ದಲ್ಲದೇ, ಈಗಿನ ಸರ್ಕಾರದಿಂದಲೂ ತೆರಿಗೆ ವಿನಾಯಿತಿ ನೀಡುವ ಭರವಸೆ ವಾಯವ್ಯ ಸಾರಿಗೆ ಸಂಸ್ಥೆಗೆ ದೊರಕಿದೆ. ಈ ಹಿಂದಿನ ಸರ್ಕಾರ ವಾಯವ್ಯ ಸಾರಿಗೆ ಸಂಸ್ಥೆಗೆ ವಿಶೇಷ ಅನುದಾನದ ರೂಪದಲ್ಲಿ ಕೋಟ್ಯಂತರ ರು. ಹಣವನ್ನೂ ನೀಡಿದೆ. ನಗರ ಸಾರಿಗೆ ಬಸ್ ನಿಲ್ದಾಣ (ಸಿಬಿಟಿ) ನವೀಕರಣಕ್ಕೂ ಸರ್ಕಾರ ಕೋಟ್ಯಾಂತರ ರು. ಅನುದಾನ ಬಿಡುಗಡೆ ಮಾಡಿದೆ. ಆದರೂ ವಾಯವ್ಯ ಸಾರಿಗೆ ಸಂಸ್ಥೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಬಸ್ ಶೆಲ್ಟರ್ ನಿರ್ಮಾಣ ಕಾರ್ಯ ಅಸಾಧ್ಯವಾದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.