ತಾಪಂ ಅಧ್ಯಕ್ಷಗಿರಿ: ಕೆಜೆಪಿ ಸದಸ್ಯರ ಪೈಪೋಟಿ
ಕಲಘಟಗಿ: ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬಸವಣ್ಣಯ್ಯ ಹಿರೇಮಠ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಅ. 3ರಂದು ಚುನಾವಣೆ ನಡೆಯಲಿದೆ. ತಾಪಂನಲ್ಲಿ ಹೆಚ್ಚು ಸದಸ್ಯರನ್ನು ಹೊಂದಿರುವ ಕೆಜೆಪಿ ಪಕ್ಷದ ಇಬ್ಬರು ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.
13 ಸದಸ್ಯರ ಬಲವುಳ್ಳ ತಾಪಂನಲ್ಲಿ 9 ಸದಸ್ಯರು ಈ ಹಿಂದೆ ಬಿಜೆಪಿಯಲ್ಲಿದ್ದರು. ಸದ್ಯ ಕೆಜೆಪಿಗೆ ಸೇರಿದ್ದಾರೆ. ಅದರಲ್ಲಿ 4 ಸದಸ್ಯರು ಕಾಂಗ್ರೆಸ್ ಪಕ್ಷದವರಾಗಿದ್ದಾರೆ. ಇತ್ತೀಚೆಗೆ ಗಂಜಿಗಟ್ಟಿ ತಾಪಂ ಕ್ಷೇತ್ರದ ಸದಸ್ಯ ಚಿನ್ನಪ್ಪ ಕೊಪ್ಪದ ಗಾಣಿಗೇರ ಅವರ ಅಕಾಲಿಕ ನಿಧನದಿಂದಾಗಿ ಸ್ಥಾನ ತೆರುವುಗೊಂಡಿತ್ತು. ಅದಕ್ಕಾಗಿ ಸದ್ಯ ಚುನಾವಣೆಯ ಮತದಾನ ಸೆ. 29 ರಂದು ನಡೆದಿದೆ. ಆದರೂ ಉಳಿದ 12 ಸದಸ್ಯರುಳ್ಳ ತಾಪಂನಲ್ಲಿ ಉಪಾಧ್ಯಕ್ಷೆ ಕಾಶವ್ವ ಮುಂದಿನಮನಿ ಸೇರಿದಂತೆ 8 ಸದಸ್ಯರು ಕೆಜೆಪಿ ಪಕ್ಷದವರಿದ್ದಾರೆ. ಅದರಲ್ಲಿ ಸಂಗಮೇಶ್ವರ ತಾಪಂ ಕ್ಷೇತ್ರದ ಸದಸ್ಯ ಯಲ್ಲಾರಿ ಶಿಂಧೆ, ಬೆಲವಂತರ ತಾಪಂ ಕ್ಷೇತ್ರದ ಎಂ.ಎಫ್. ಜಾವೂರ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸಿದ್ದಾರೆ. ಕೆಜೆಪಿ ಧುರೀಣ ಸಿ.ಎಂ. ನಿಂಬಣ್ಣವರ ಸದಸ್ಯರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದು, ಜಿಜ್ಞಾಸೆಯನ್ನುಂಟು ಮಾಡಿದೆ.
ಆಪರೇಷನ್ ಹಸ್ತ?: ಈ ನಡುವೆ ಸ್ಥಳೀಯ ಕಾಂಗ್ರೆಸ್ ಶಾಸಕ ಸಂತೋಷ ಲಾಡ್ ಅವರ ಬೆಂಬಲಿಗರು ತಾಪಂ 4 ಸದಸ್ಯರೊಂದಿಗೆ ಉಳಿದ ಸದಸ್ಯರನ್ನು ತಮ್ಮೆಡೆಗೆ ಸೆಳೆದುಕೊಂಡು ಆಪರೇಷನ್ ಹಸ್ತ ಮಾಡುವ ರಾಜಕೀಯ ತಂತ್ರ ನಡೆಸಿದ್ದಾರೆ.
ಆ ಮೂಲಕ ತಾಪಂ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಮಡಿಲಿಗೆ ಹಾಕಿಕೊಳ್ಳುವ ಹರಸಾಹಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಲಿ ತಾಪಂ ಅಧ್ಯಕ್ಷರ 10 ತಿಂಗಳ ಅಧಿಕಾರವಧಿ ಮುಗಿದಿದ್ದು, ಬಾಕಿ 10 ತಿಂಗಳ ಅವಧಿಗಾಗಿ ಅಧ್ಯಕ್ಷರ ಆಯ್ಕೆ ಚುನಾವಣೆ ಅ. 3ಕ್ಕೆ ನಿಗದಿಯಾಗಿರುವ ಮುನ್ನವೇ ತಿಂಗಳಿಂದಲೂ ತಾಪಂ ವಲಯದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಸದಸ್ಯರ ಕುದುರೆ ವ್ಯಾಪಾರ ನಡೆದಿರುವ ಮಾತುಗಳು ತಾಲೂಕಿನಲ್ಲಿ ಹರಿದಾಡುತ್ತಿವೆ. ಆದರೆ ಸುಮಾರು ಎರಡು ತಿಂಗಳಿಂದಲೂ ತಾಪಂ ವ್ಯಾಪ್ತಿಯ ಜನತೆ ತಮ್ಮ ಕೆಲಸ ಕಾರ್ಯಗಳಿಗಾಗಿ, ಅಧ್ಯಕ್ಷರಿಲ್ಲದ ತಾಪಂ ಕಚೇರಿಗೆ ಎಡತಾಕುತ್ತಿದ್ದಾರೆ. ಅಧ್ಯಕ್ಷರಿಲ್ಲದ ತಾಪಂನಲ್ಲಿ ಕೆಲಸಕ್ಕಾಗಿ ಜನತೆ ಪರದಾಡುತ್ತಿದ್ದಾರೆ.
ಪುಢಾರಿಗಳದ್ದೇ ಕಾರುಬಾರು: ಇತ್ತ ಸದಸ್ಯರಿಗಾಗಿ ಸಾರ್ವಜನಿಕರು ಹುಡುಕಾಡುತ್ತಿದ್ದರೆ, ಅಭಿವೃದ್ಧಿ ಕೆಲಸಗಳು, ಕಳಪೆ ಕಾಮಗಾರಿ, ಕಾಮಗಾರಿಗಳ ವಿಳಂಬಗತಿಯಿಂದಾಗಿ ಸದ್ಯ ತಾಪಂ ಕಚೇರಿ ಗುರುವಿಲ್ಲದ ಮಠದಂತಾಗಿದೆ. ತಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ವರ್ಗದವರಿಗೂ ಹಲವು ಪುಡಾರಿಗಳು ಸ್ಥಳೀಯ ಶಾಸಕರ ಪ್ರಭಾವ ಬೀರುತ್ತ, ಅಭಿವೃದ್ಧಿ ಕೆಲಸಗಳನ್ನು ಮಾಡದೆ ಉದ್ಯೋಗ ಖಾತ್ರಿ ಯೋಜನೆಯ ಬಿಲ್ ಪಾವತಿಗೆ ಯತ್ನಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಆದರೂ ಅಂತಹ ಯಾವುದೇ ಅಕ್ರಮಕ್ಕೆ ಆಸ್ಪದ ನೀಡಿಲ್ಲ ಎಂದು ಹೆಸರನ್ನು ಹೇಳದ ತಾಪಂ ನೌಕರನೊಬ್ಬ 'ಕನ್ನಡಪ್ರಭ'ಕ್ಕೆ ತಿಳಿಸಿದರು. ಅಲ್ಲದೆ ಅಧ್ಯಕ್ಷರ ಚುಣಾವಣೆಯಾದರೆ ತಲೆಬಿಸಿ ಕಡಿಮೆಯಾಗುತ್ತದೆ ಎಂದು ಹೇಳಲು ಆತನು ಮರೆಯಲಿಲ್ಲ. ಒಟ್ಟಾರೆ ತಾಪಂ ಅಧ್ಯಕ್ಷರ ಆಯ್ಕೆ ಚುನಾವಣೆಗೆ ತಯಾರಿ ನಡೆದಿದ್ದರೆ ಇತ್ತ ಕೆಲಸ ಮಾಡಿಕೊಳ್ಳಲು ಜನತೆ ಕಾತರದಿಂದ ಕಾಯುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

