ಬೆಳಗ್ಗೆ ಕರಾಟೆ; ದಿನವಿಡಿ ಎದುರಾಳಿಗಳ ತರಾಟೆ
11.30ಕ್ಕೆ ಮಿರ್ಜಾನ್ಗೆ ಬಂದಾಗ ಉರಿ ಬಿಸಿಲು. ಬೃಹತ್ ಆಲದ ಮರದ ನೆರಳಿನಲ್ಲಿ ಪುಟ್ಟ ಭಾಷಣ. ಅಲ್ಲಿಂದ 12 ಗಂಟೆಗೆ ಬರ್ಗಿ ಸಮೀಪದ ಕುರಿಗದ್ದೆಯಲ್ಲಿ ಚಿಕ್ಕ ಸಭೆ. 12.30ಕ್ಕೆ ಗೋಕರ್ಣದಲ್ಲಿ ರೋಡ್ ಶೋ ನಡೆಸುತ್ತಿದ್ದಂತೆ ವಿದೇಶಿಗರೂ ಅಚ್ಚರಿಯಿಂದ ವೀಕ್ಷಿಸಿದರು. ಮಹಾಗಣಪತಿ ದೇವಾಲಯಕ್ಕೆ ಪೂಜೆ ಸಲ್ಲಿಸಿ, ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದಾಗ ದೇವಾಲಯದ ಆಡಳಿತ ಮಂಡಳಿ ಶಾಲು ಹೊದೆಸಿ ಗೌರವಿಸಿತು. ಗೋಕರ್ಣದಿಂದ ಮರಳುವಾಗ ಇಬ್ಬರು ವಾಹನವನ್ನು ಅಡ್ಡಗಟ್ಟಿ, ಸಿಆರ್ಝಡ್ ಬಗ್ಗೆ ನಮ್ಮದೊಂದು ಪ್ರಶ್ನೆ ಇದೆ ಎಂದಾಗ ಸಿಡಿಮಿಡಿಗೊಂಡ ಅನಂತಕುಮಾರ್, 'ಏನ್ರೀ? ದಾರಿಯಲ್ಲಿ ಅಡ್ಡಹಾಕಿ ಕೇಳುವ ಪ್ರಶ್ನೆಗಳಿಗೆಲ್ಲ ನಾನು ಉತ್ತರ ನೀಡೋಲ್ಲ. ಬೇಕಿದ್ದರೆ ಸಭೆಗೆ ಬನ್ನಿ. ಎಷ್ಟು ಪ್ರಶ್ನೆಗಳನ್ನೂ ಬೇಕಾದರೆ ಕೇಳಿ' ಎಂದರು. ಚುನಾವಣೆ ಎದುರಿಗಿದ್ದರೂ ರಾಜಿಯಾಗದ ಸ್ವಭಾವ ಅನಂತಕುಮಾರ ಹೆಗಡೆ ಅವರಲ್ಲಿ ಮಾತ್ರ ಕಾಣಲು ಸಾಧ್ಯ.
ಮಧ್ಯಾಹ್ನ 1.30ಕ್ಕೆ ಗಂಗಾವಳಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರಿಗೆ 65 ವರ್ಷಗಳಿಂದ ಕೊಟ್ಟ ಸೌಲಭ್ಯ ಎಂದರೆ ಮಕ್ಕಳನ್ನು ಹೆರಲು ಪರ್ಮೀಶನ್. ಅದೂ ತನ್ನ ವೋಟ್ಬ್ಯಾಂಕ್ ಹೆಚ್ಚಳಕ್ಕಾಗಿ ಎಂದು ಗುಡುಗಿದರು. ಅಲ್ಲಿಂದ ಹೆಗಡೆ ಗ್ರಾಮಕ್ಕೆ 2.30ಕ್ಕೆ ಬಂದು ಆರೆಸ್ಸೆಸ್ ಹಾಗೂ ಇತರ ಸಂಘಟನೆಗಳ ಪ್ರಮುಖರೊಂದಿಗೆ ಗಂಟೆ ಕಾಲ ರಹಸ್ಯ ಮಾತುಕತೆ ನಡೆಸಿದರು. 4 ಗಂಟೆಗೆ ಹೆಗಡೆಯಲ್ಲಿ ಪುಟ್ಟ ಸಭೆ.
ಅಲ್ಪಸಂಖ್ಯಾತರ ವಿರುದ್ಧ ಗುಡುಗು: 4.30ಕ್ಕೆ ಕಾರಹಿತ್ತಲಿನಲ್ಲಿ ನಡೆದ ಬೃಹತ್ ಸಭೆಯಲ್ಲಿ ಅಲ್ಪಸಂಖ್ಯಾತರ ವಿರುದ್ಧ ತೀವ್ರ ವಾಗ್ದಾಳಿ. ಹಿಂದೂಗಳ ಮನೆಯಲ್ಲಿ ಅಲ್ಲಾ, ಏಸುವಿನ ಫೋಟೋ ಬೇಕಾದರೆ ಇಡುತ್ತಾರೆ. ಆದರೆ ಮುಸ್ಲಿಂರ ಮನೆಯಲ್ಲಿ ರಾಮ, ಕೃಷ್ಣನ ಫೋಟೋ ಕಾಣಲು ಸಾಧ್ಯವೇ? ದೇಶದಲ್ಲಿ ಶೇ. 85ರಷ್ಟಿರುವ ಹಿಂದುಗಳಿಗಿಂತ ಶೇ. 15ರಷ್ಟಿರುವ ಅಲ್ಪಸಂಖ್ಯಾತರೆ ಹೆಚ್ಚೇ? ಹಿಂದುತ್ವದ ಆಧಾರದಲ್ಲಿ ಮಾತ್ರ ಭಾರತವನ್ನು ಕಟ್ಟಲು ಸಾಧ್ಯ. ಅಲ್ಪಸಂಖ್ಯಾತರು ಬಿಜೆಪಿಯತ್ತಲೂ ಬರುತ್ತಿದ್ದಾರೆ. ಅವರು ಪ್ರೀತಿಯಿಂದ ಮತ ಕೊಟ್ಟರೆ ಓಕೆ. ಬೇರೆ ಭಾವನೆಯಿಂದ ಮತ ಕೊಡುವುದಾದರೆ ಬೇಡ ಎಂದು ಎಗ್ಗಿಲ್ಲದೆ ಮಾತನಾಡುತ್ತಿದ್ದಾಗ ಹಠಾತ್ತನೆ ಅಲ್ಲಿದ್ದ ಒಬ್ಬ ವ್ಯಕ್ತಿಯನ್ನು ಆಲಂಗಿಸಿದರು. ಅನಂತರ ಮಾತು ಮುಂದುವರಿಸಿ, 'ಇವರು ಈಶ್ವರ ಪಟಗಾರ. ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ಧ್ವಜಾರೋಹಣ ನಡೆಸುವಾಗ ತಮ್ಮೊಂದಿಗಿದ್ದವರು' ಎಂದು ಈದ್ಗಾ ಮೈದಾನದಲ್ಲಿ ನಡೆದ ಘಟನೆಯನ್ನು ಸ್ಮರಿಸಿದರು. ಈಶ್ವರ ಪಟಗಾರ ಅವರೊಂದಿಗೆ ಕೆಲ ನಿಮಿಷ ಆತ್ಮೀಯತೆಯಿಂದ ಮಾತನಾಡಿದರು.
ರಾತ್ರಿ 8 ಗಂಟೆಗೆ ಕರ್ಕಿ ದೈವಜ್ಞ ಮಠದ ಜಾತ್ರೆಯಲ್ಲಿ ಪಾಲ್ಗೊಂಡು, 9 ಗಂಟೆಗೆ ಕುಮಟಾದ ಗಾಂಧಿ ಚೌಕ್ನಲ್ಲಿ ಬೃಹತ್ ಸಭೆ. 9.45ಕ್ಕೆ ದೀವಗಿ ಮಠಕ್ಕೆ ಭೇಟಿ. ರಾತ್ರಿ 12 ಗಂಟೆ ತನಕ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಿಸಿಲ ಬೇಗೆ ತಡೆಯಲಾರದೆ ಹೆಗಡೆ ಆಗಾಗ ಎಳನೀರು, ತಂಪು ಪಾನೀಯದ ಮೊರೆ ಹೋದರು. ಮಧ್ಯಾಹ್ನ 2 ಗಂಟೆಗೆ ಅನ್ನ, ಸಾರು, ಮೊಸರು ಅಷ್ಟನ್ನೇ ಸೇವಿಸಿದರು. ಆಗಾಗ ಬಾಳೆಹಣ್ಣು ಕೇಳಿ ಪಡೆದರು.
ದೇಶಪಾಂಡೆ ವಿರುದ್ಧ ಪ್ರಹಾರ: ಪ್ರತಿ ಸಭೆಯಲ್ಲೂ ಆರ್.ವಿ. ದೇಶಪಾಂಡೆ ವಿರುದ್ಧ ಅನಂತಕುಮಾರ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. 36 ವರ್ಷ ಈ ಜಿಲ್ಲೆಯನ್ನು ಆಳಿದ ದೇಶಪಾಂಡೆ ಏನು ಕೊಟ್ಟಿದ್ದಾರೆ? ಹಳಿಯಾಳದ ರಸ್ತೆಯಲ್ಲಿ ಸಂಚರಿಸಿದರೆ ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ. ಉಬ್ಬು ತಗ್ಗು, ಸರೋವರಗಳಿಂದ ಕೂಡಿದ ಸುಂದರವಾದ ರಸ್ತೆ ಅಲ್ಲಿಯದ್ದು. ಅಭಿವೃದ್ಧಿ ಎಂದರೆ ಏನು ಎನ್ನುವುದಕ್ಕೆ ಗುಜರಾತ್ ಉದಾಹರಣೆಯಾದರೆ, ದುಸ್ಥಿತಿಗೆ ಹಳಿಯಾಳ ಉತ್ತಮ ನಿದರ್ಶನ ಎಂದು ಛೇಡಿಸಿದರು.
ಪ್ರಮುಖರಾದ ಸೂರಜ ನಾಯ್ಕ ಸೋನಿ, ಗಾಯತ್ರಿ ಗೌಡ, ವೆಂಕಟೇಶ ನಾಯಕ, ವೀಣಾ ನಾಯಕ, ಸಾಧನಾ ರಾವ್, ಜಯಶ್ರೀ ಬರ್ಗಿ ಮತ್ತಿತರರು ಹೆಗಡೆ ಅವರಿಗೆ ಸಾಥ್ ನೀಡಿದರು.
ಅನಂತಕುಮಾರ್ ಹೆಗಡೆ ದಿನಚರಿ
ನಿದ್ದೆ ಬಿಟ್ಟೆದ್ದ ಅನಂತಕುಮಾರ್, ಸತತ ಎರಡೂವರೆ ತಾಸು ಕರಾಟೆ ತಾಲೀಮು ನಡೆಸಿದರು.
ಸ್ನಾನ, ತಿಂಡಿಯಾಗಿ ಪ್ರಚಾರಕ್ಕೆ ರೆಡಿ
ಕಾರ್ಯಕರ್ತರೊಂದಿಗೆ ಚರ್ಚಿಸಿ ಪ್ರಯಾಣ
ಕತಗಾಲದಲ್ಲಿ ದಿನದ ಪ್ರಚಾರ ಆರಂಭ
ಮಿರ್ಜಾನ್ದಲ್ಲಿ ಆಲದ ಮರದ ನೆರಳಲ್ಲಿ ಭಾಷಣ
ಬರ್ಗಿ-ಕುರಿಗದ್ದೆಯಲ್ಲಿ ಪ್ರಚಾರ ಸಭೆ
ಗೋಕರ್ಣದಲ್ಲಿ ರೋಡ್ಶೋಗೆ ವಿದೇಶಿಯರೂ ಸಾಕ್ಷಿ
ಗಂಗಾವಳಿಯಲ್ಲಿ ಪ್ರಚಾರ ಸಭೆ
ಹೆಗಡೆ ಗ್ರಾಮದಲ್ಲಿ ಆರೆಸ್ಸೆಸ್ ಮುಖಂಡರೊಂದಿಗೆ ಚರ್ಚೆ
ಕಾರಹಿತ್ತಿಲಿನಲ್ಲಿ ಬೃಹತ್ ಸಭೆ
ಅಘನಾಶಿನಿಯಲ್ಲಿ ಪ್ರಚಾರ
ಕರ್ಕಿ ದೈವಜ್ಞ ಮಠದ ಜಾತ್ರೆಯಲ್ಲಿ ಭಾಗಿ
ಕುಮಟಾದ ಗಾಂಧಿ ಚೌಕ್ನಲ್ಲಿ ಬೃಹತ್ ಸಭೆ
ದೀವಗಿ ಮಠಕ್ಕೆ ಭೇಟಿ
ರಾತ್ರಿ 12ರ ವರೆಗೂ ಕಾರ್ಯಕರ್ತರು, ಮುಖಂಡರೊಂದಿಗೆ ಚರ್ಚೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

