ಬಡತನ ತಿಳಿದಿರುವ ನರೇಂದ್ರ ಮೋದಿಗೆ ಅಧಿಕಾರ ನೀಡಿ
ಕನ್ನಡಪ್ರಭ ವಾರ್ತೆ, ಧಾರವಾಡ, ಏ.14
ಬಡತನ ಏನು ಎಂಬುದನ್ನು ತಿಳಿದವರಿಂದ ಮಾತ್ರ ಬಡತನ ನಿರ್ಮೂಲನೆ ಮಾಡಲು ಸಾಧ್ಯ. ಇದನ್ನು ಕೇವಲ ಅಧ್ಯಯನದಿಂದ ನಿರ್ಮೂಲನೆ ಮಾಡುವುದು ಅಸಾಧ್ಯ ಎಂದು ಧಾರವಾಡ ಲೋಕಸಭೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ಇಲ್ಲಿಯ ನೌಕರ ಭವನದಲ್ಲಿ ಸೋಮವಾರ ನಡೆದ ಕುರುಬ ಸಮಾಜದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಮಸ್ಯೆಗಳ ಮಧ್ಯೆ ಬದುಕಿದವರಿಗೂ, ಸಮಸ್ಯೆಗಳನ್ನು ಸೆಮಿನಾರ್ ಹಾಗೂ ಲೇಖನಗಳಲ್ಲಿ ತಿಳಿದುಕೊಂಡವರಿಗೂ ತುಂಬಾ ವ್ಯತ್ಯಾಸವಿದೆ ಎಂದರು.
ಬಡವನ ಮಗನಾದ ನರೇಂದ್ರ ಮೋದಿ ಕೈಯಲ್ಲಿ ದೇಶವನ್ನು ನೀಡೋಣ. ಆಗ ಮಾತ್ರ ಬಡತನ ಬೇರು ಸಮೇತ ಕೀಳಲು ಸಾಧ್ಯ. 60 ವರ್ಷಗಳ ಕಾಲ ಕಾಂಗ್ರೆಸ್ ನವರ ಕೈಯಲ್ಲಿ ದೇಶವನ್ನು ನೀಡಿದ್ದೀರಿ. ಆದರೆ ಕೇವಲ 60 ತಿಂಗಳ ಕಾಲ ದೇಶವನ್ನು ಮೋದಿಗೆ ನೀಡಿ, ದೇಶದಲ್ಲಿನ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಭಯೋತ್ಪಾದನೆಯನ್ನೂ ಬೇರು ಸಮೇತವಾಗಿ ಕಿತ್ತೊಗೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದರು.
ಶಾಸಕ ಅರವಿಂದ ಬೆಲ್ಲದ, ಪ್ರಾಮಾಣಿಕತೆಗೆ ಹಾಗೂ ಶ್ರಮಕ್ಕೆ ಹೆಸರಾದ ಕುರುಬ ಜನಾಂಗದ ವ್ಯಕ್ತಿ ರಾಜ್ಯದ ಮುಖ್ಯಮಂತ್ರಿಯಾದರೂ ಆ ಜನಾಂಗದವರಿಗೆ ಏನೂ ಸಹಾಯ ಮಾಡಿಲ್ಲ ಎಂದು ದೂರಿದರು.
ಕಾಂಗ್ರೆಸ್ನವರು ಇದುವರೆಗೂ ಕುರುಬ ಜನಾಂಗವನ್ನು ಮತಕ್ಕಾಗಿ ಮಾತ್ರ ಬಳಿಸಿಕೊಂಡಿದೆಯೇ ಹೊರತು ಅವರ ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನಿಸಿಲ್ಲ ಎಂದು ಆರೋಪಿಸಿದರಲ್ಲದೆ, ಸಮಸ್ತ ಕುರುಬ ಸಮಾಜ ಬಾಂಧವರು ಬಿಜೆಪಿ ಅಭ್ಯರ್ಥಿ ಜೋಶಿ ಅವರನ್ನು ಬೆಂಬಲಿಸುವಂತೆ ವಿನಂತಿಸಿಕೊಂಡರು.
ಪ್ರಹ್ಲಾದ ಜೋಶಿ ಅವರಿಗೆ ಕಂಬಳಿ ಹೊದಿಸಿ ಸನ್ಮಾನಿಸಲಾಯಿತು.
ಮಾಜಿ ಶಾಸಕಿ ಸೀಮಾ ಮಸೂತಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ.ಎಂ. ನಾಗರಾಜ, ಮಾಜಿ ಶಾಸಕ ಮೋಹನ ಲಿಂಬಿಕಾಯಿ, ಮೇಯರ್ ಶಿವು ಹಿರೇಮಠ, ಸಿ.ಎನ್.ಶಾಗೋಟಿ, ಮಲ್ಲನಗೌಡ ಪಾಟೀಲ, ಶಶಿಮೌಳಿ ಕುಲಕರ್ಣಿ, ಶಿವಾಜಿ ಡೊಳ್ಳಿನ, ರಾಜೇಶ್ವರಿ ಸಾಲಗಟ್ಟಿ ಇದ್ದರು.
--
ಬಿಎಸ್ವೈ ಕೆಡವಿದ್ದು ಜೋಶಿ, ಅನಂತ್
ಅಣ್ಣಿಗೇರಿ: ಬಿಜೆಪಿಯನ್ನು ಹಾಳು ಮಾಡಿದ್ದಲ್ಲದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದು ಪ್ರಹ್ಲಾದ ಜೋಶಿ ಹಾಗೂ ಅನಂತಕುಮಾರ್ ಅವರೇ ಎಂದು ಧಾರವಾಡ ಲೋಕಸಭೆ ಪಕ್ಷೇತರ ಅಭ್ಯರ್ಥಿ ಪ್ರಮೋದ ಮುತಾಲಿಕ್ ಆರೋಪಿಸಿದ್ದಾರೆ. ಸೋಮವಾರ ಅಣ್ಣಿಗೇರಿಯಲ್ಲಿ ಮತಯಾಚಿಸಿದ ನಂತರ ಅವರು ಮಾತನಾಡಿದರು. ಜೋಶಿ ಗೆದ್ದರೆ ಈ ಬಾರಿ ಕೇಂದ್ರ ಮಂತ್ರಿಯಾಗುತ್ತಾರೆ ಎಂದು ಹೇಳುವ ಮೂಲಕ ಬಿಜೆಪಿಗರು ಜನರನ್ನು ಮರಳು ಮಾಡಿ ಮತಯಾಚಿಸುತ್ತಿದ್ದಾರೆ ಎಂದು ಕಿಡಿಕಾರಿದ ಅವರು, ಜೋಶಿ ಮಂತ್ರಿಯಾಗುವುದಿರಲಿ ಬಿಎಸ್ವೈ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದವರೇ ಇವರುಗಳೇ ಎಂದು ದೂರಿದರು. ನಮ್ಮ ಮನೆಗೆ ಬೆಂಕಿ ಹಂಚಿಕೊಂಡು ಇನ್ನೊಬ್ಬರ ಮನೆಗೆ ಬೆಳಕು ನೀಡುವುದು ಒಂದೆ, ಜೋಶಿ ಹಾಗೂ ಅನಂತಕುಮಾರಗೆ ಮತ ನೀಡುವುದೂ ಒಂದೇ ಎಂದರು. ಅನಂತಕುಮಾರ ಅತ್ಯಂತ ಅಪಾಯಕಾರಿ ಮನುಷ್ಯ. ತನ್ನ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ನರೇಂದ್ರ ಮೋದಿ ಪ್ರಖರ ಹಿಂದುತ್ವವಾದಿ. ತಾವೂ ಅದೇ ಹಾದಿಯಲ್ಲೇ ಬಂದವರೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

