ಧಾರವಾಡ

ಫೆ. 24ರಿಂದ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯ

Published On :

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಧಾರವಾಡ ವಲಯ ಫೆ. 24ರಿಂದ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದೆ. ಕೆಎಸ್‌ಸಿಎ ಧಾರವಾಡ ವಲಯ ವ್ಯಾಪ್ತಿಯಲ್ಲಿ ಬರುವ ಧಾರವಾಡ, ಬೆಳಗಾವಿ, ಗದಗ, ಉತ್ತರ ಕನ್ನಡ ಮತ್ತು ಹಾವೇರಿ ಜಿಲ್ಲೆಗಳ ಆಸಕ್ತ ಕಾಲೇಜು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ನಾಕ್‌ಔಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ನಗರದ ಕೆಎಸ್‌ಸಿಎ ಮತ್ತು ಕರ್ನಾಟಕ ಜಿಮ್‌ಖಾನಾ ಮೈದಾನದಲ್ಲಿ ಅಂತರ್ ಕಾಲೇಜ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಆಸಕ್ತ ತಂಡಗಳು ಇಲ್ಲಿಯ ರಾಜನಗರದ ಕೆಎಸ್‌ಸಿಎ ಕಚೇರಿಯಿಂದ ಪ್ರವೇಶದ ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಫೆ. 20ರ ಸಂಜೆ 5ರೊಳಗೆ ಸಲ್ಲಿಸಬೇಕು. ಮಾಹಿತಿಗೆ ಮನೀಷ ಠಕ್ಕರ್ (ಮೊಸಂ 97425 77845) ಅಥವಾ ರಾಜನಗರದ ಕೆಎಸ್‌ಸಿಎ ಕಚೇರಿ (0836 2354372) ಸಂಪರ್ಕಿಸಿ.

 ಹಿಂದುಳಿದವರ ಅಭ್ಯುದಯಕ್ಕೆ ಬಿಜೆಪಿ ನೆರವು: ಸೋಮಲಿಂಗಪ್ಪ
ಹುಬ್ಬಳ್ಳಿ: ಬಿಜೆಪಿ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿ ಸಭೆ ಹುಬ್ಬಳ್ಳಿಯ ದೇಶಪಾಂಡೆ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆಯಿತು. ಎಸ್.ಟಿ. ಮೋರ್ಚಾದ ರಾಜ್ಯಾಧ್ಯಕ್ಷ ಸೋಮಲಿಂಗಪ್ಪ ಮಾತನಾಡಿ, ಕೆಜೆಪಿ-ಬಿಜೆಪಿ ಒಂದಾಗಿರುವುದರಿಂದ ಇದೀಗ ಪಕ್ಷಕ್ಕೆ ಆನೆ ಬಲ ಬಂದಿದೆ. ಎಲ್ಲರೂ ಒಟ್ಟಾಗಿ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಬೇಕೆಂದರು. ರಾಜ್ಯ ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಾಲೀಕಾರ, ಉಪಾಧ್ಯಕ್ಷ ಡಾ. ಕಲ್ಮೇಶ ಹಾವೇರಿಪೇಠ ಮಾತನಾಡಿದರು. ಲಿಂಗರಾಜ ಪಾಟೀಲ, ಎಂ. ಆರ್. ಪಾಟೀಲ, ಧಾರವಾಡ ವಿಭಾಗ ಪ್ರಭಾರಿ ಮಾ. ನಾಗರಾಜ, ಮೊಗಲಿ ಶೆಟ್ಟರ್, ರಂಗಾ ಬದ್ದಿ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಅರುಣಕುಮಾರ ಹುದಲಿ, ಎಲ್. ಬಿ. ಕಾಟಕರ, ವಿಠ್ಠಲ ಬ್ಯಾಹಟ್ಟಿ ಮತ್ತಿತರರಿದ್ದರು.

ಪವನ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಾರ್ಷಿಕೋತ್ಸವ
ಧಾರವಾಡ: ಇಲ್ಲಿಯ ಪವನ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 26ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೇರವೇರಿತು. ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ  ಜೆ.ಎನ್. ಪಾಟೀಲ ಸಮಾರಂಭ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ 2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ 51 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಶಂಕರ ಪಾಟೀಲ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ  ಪ್ರತಿಯೊಂದು ಮಗು ಅಭಿವೃದ್ಧಿ ಹೊಂದುತ್ತದೆ ಎಂದರು. ಪ್ರಾಚಾರ್ಯ ಶಂಭುಲಿಂಗಪ್ಪ ಹಗರಿ, ರತ್ನಾ ಪಾಟೀಲ ಇದ್ದರು. ಶೈಲಜಾ ಬೈಚವಾಳ ವರದಿ ವಾಚನ ಮಾಡಿದರು. ಅರ್ಪಿತಾ ಹುದ್ದಾರ, ನಸರೀನ್ ಅಧೋನಿ, ವೀಣಾ ತುಪ್ಪದ, ಪೂಜಾ ಕುಲಕರ್ಣಿ, ಲಕ್ಷ್ಮೀ ಅಂಗಡಿ, ಬನಶ್ರೀ ದಾಸರ ಕಾರ್ಯಕ್ರಮ ನಿರೂಪಿಸಿದರು. ಸ್ವರೂಪ ಹೊಸೂರ ಇದ್ದರು.

 ವಿಜ್ಞಾನ ಶಿಕ್ಷಕರಿಗೆ ಪುನಶ್ಚೇತನ ಕಾರ್ಯಾಗಾರ
ಧಾರವಾಡ: ಇಲ್ಲಿಯ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಆಕಾಡೆಮಿ ಜಂಟಿಯಾಗಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಆಯ್ದ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಇತ್ತೀಚೆಗೆ ಪುನಶ್ಚೇತನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಕೃಷಿ ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ. ವಿಜಯಕುಮಾರ ಗಿಡ್ನವರ,   ವಿಜ್ಞಾನ ಸಾಹಿತಿ ಸುರೇಶ ಕುಲಕರ್ಣಿ ಮಾತನಾಡಿದರು. ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ, ಪ್ರೊ.ಯು.ಎಸ್. ರಾಯಕರ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ರಮೇಶ ಸಿದ್ದಾಂತಿ, ಪ್ರೊ.ಎಸ್.ಡಿ. ದುಮ್ಮವಾಡ, ಆರ್.ಕೆ. ಮೋನೆ, ಚಂದ್ರಕಾಂತ ಚಂಡೂರ, ವಿಶಾಲಾಕ್ಷಿ ಎಸ್. ಜೆ., ಅನುರಾಧಾ ಸವದತ್ತಿ, ಗುರುರಾಜ ಪೋಲೀಸಪಾಟೀಲ, ನೀತಾ ಕರಿ, ಎಸ್.ಕೆ. ರಂಜಣಿಗಿ, ಎಸ್.ಎಫ್. ಆಡಿನ, ಆರ್.ಪಿ.ಗಾಳಿ ಮತ್ತಿತರರು ಇದ್ದರು.

ಸುಂದರ ಕೈಬರಹ ವ್ಯಕ್ತಿಯ ವ್ಯಕ್ತಿತ್ವಕ್ಕೆ ಕಿರೀಟವಿದ್ದಂತೆ
ಧಾರವಾಡ: ಸುಂದರ ಕೈಬರಹ ವ್ಯಕ್ತಿಯ ವ್ಯಕ್ತಿತ್ವಕ್ಕೆ ಒಂದು ಕಿರೀಟವಿದ್ದಂತೆ. ಜೊತೆಗೆ ಅದು ವ್ಯಕ್ತಿತ್ವದ ಒಂದು ಭಾಗವೇ ಆಗಿದೆ ಎಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ. ಎಸ್.ವಿ. ಜೋಗೂರ ಹೇಳಿದರು. ಇಲ್ಲಿಯ ಉಳವಿ ಚನ್ನಬಸವೇಶ್ವರ ನಗರದಲ್ಲಿರುವ ಪ್ರೊ. ಕಮಲಾ ಬಾಳೆಕುಂದ್ರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಗೋಲ್ಡನ್ ಸ್ಕೂಲ್ ಆಫ್ ಹ್ಯಾಂಡ್‌ರೈಟಿಂಗ್ ಸಂಸ್ಥೆ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ  ಉಚಿತ ಕೈಬರಹ ಸುಧಾರಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪಿಲ್ಲದೇ ಸ್ಫುಟವಾಗಿ ಬರೆಯುವುದನ್ನು ಗಾಂಧೀಜಿಯವರೂ ಬಹಳ ಪ್ರೀತಿಸುತ್ತಿದ್ದರು. ವಿದ್ಯಾರ್ಥಿ ಬಳಗ ಈ ನಿಟ್ಟಿನಲ್ಲಿ ನಿರಂತರ ಸಾಧನೆ ಮಾಡಬೇಕು ಎಂದರು. ಶಾಲಾ ಆಡಳಿತ ಮಂಡಳಿ ಸದಸ್ಯ ಡಾ.ಜಿ.ಸಿ. ಚಿಕ್ಕೂರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಮಂಜುನಾಥ ಹೊನ್ನಾಳಿ ದುಂಡು ಬರಹದ ಮಹತ್ವ ಕುರಿತು ಮಾತನಾಡಿದರು. ನಾಗಯ್ಯ ಹಿರೇಮಠ ಸ್ವಾಗತಿಸಿದರು. ಮಂಜುಳಾ ಅಗಡಿ ನಿರೂಪಿಸಿದರು. ಎಸ್.ಜಿ.ಮಡಿವಾಳರ ವಂದಿಸಿದರು.

 ಧಾರವಾಡ: ಇಂದು ಎಸ್‌ಎಫ್‌ಐ ಸಮ್ಮೇಳನ
ಧಾರವಾಡ: ಭಾರತ ವಿದ್ಯಾರ್ಥಿ ಫೆಡರೇಶನ್ ಫೆ. 9ರ ಬೆಳಗ್ಗೆ 10.30ಕ್ಕೆ ವಿದ್ಯಾವರ್ಧಕ ಸಂಘದಲ್ಲಿ ಸಮ್ಮೇಳನ ಹಮ್ಮಿಕೊಂಡಿದೆ. ಸಮಾಜದಲ್ಲಿ ಬೇರೂರಿರುವ ಭ್ರಷ್ಟಾಚಾರ, ನಿರುದ್ಯೋಗ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ಯುವತಿ-ಮಹಿಳಾ ದೌರ್ಜನ್ಯಗಳನ್ನು ತಡೆಯುವಂತೆ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ವೈಜ್ಞಾನಿಕ ವೈಚಾರಿಕ ಹಾಗೂ ರಾಜಕೀಯ ಪ್ರಜ್ಞೆ ಬೆಳೆಸುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಪ್ರಗತಿಪರ ಚಿಂತಕರು, ಲೇಖಕರು, ಸಾಹಿತಿಗಳು, ಶಿಕ್ಷಕ-ಉಪನ್ಯಾಸಕರು ಭಾಗವಹಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆಗಮಿಸಬೇಕೆಂದು ಎಂದು ಎಸ್‌ಎಫ್‌ಐ ಸಂಸ್ಥೆಯ ಮಾರುತಿ ಅಂಬಿಗೇರ, ಮಂಜುನಾಥ ಮಕರವಳ್ಳಿ, ಈರಪ್ಪ ನಾಯ್ಕ, ಸಂದೀಪ ಕೋಳೂರಗಿ ಮನವಿ ಮೂಲಕ ತಿಳಿಸಿದ್ದಾರೆ.

 ಕ್ರೀಡೆ ಮನೋವಿಕಾಸಕ್ಕೆ ದಾರಿ: ಡಾ. ಅಜಿತ ಪ್ರಸಾದ
ಧಾರವಾಡ: ಇಲ್ಲಿಯ ಜೆಎಸ್ಸೆಸ್ ಸಂಸ್ಥೆಯ ಆಶ್ರಯದಲ್ಲಿ ಜೆಎಸ್ಸೆಸ್ ಹಾಗೂ ಎಸ್‌ಡಿಎಂ ಉದ್ಯೋಗಿಗಳಿಗೆ ಹಮ್ಮಿಕೊಂಡಿದ್ದ ಮಾತೋಶ್ರೀ ಕ್ರಿಕೆಟ್ ಪಂದ್ಯಾವಳಿಯನ್ನು ಜೆಎಸ್ಸೆಸ್ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಶನಿವಾರ ಉದ್ಘಾಟಿಸಿದರು. ಈ ಪಂದ್ಯಾವಳಿ ಪರಸ್ಪರ ತಮ್ಮನ್ನು ತಾವು ಮತ್ತು ಸಹ ಉದ್ಯೋಗಿಗಳನ್ನು ಅರಿಯುವ, ಪರಿಚಯಿಸಿಕೊಳ್ಳುವ ಪ್ರಯತ್ನವಾಗಬೇಕು ಎಂದು ಡಾ. ಅಜಿತ ಪ್ರಸಾದ ಹೇಳಿದರು. ಎಸ್ ಡಿಎಂ ಕಾರ್ಯದರ್ಶಿ ಡಾ. ಜಿನೇಂದ್ರ ಪ್ರಸಾದ ಮಾತನಾಡಿ, ಕ್ರೀಡಾ ಮನೋಭಾವನೆ ಪರಸ್ಪರ ಸ್ನೇಹ, ಭಾಂಧ್ಯವ್ಯಕ್ಕೆ, ಪರಸ್ಪರ ತಿಳಿವಳಿಕೆಗೆ ದಾರಿಯಾಗುತ್ತದೆ. ದೈನಂದಿನ ಜಂಜಾಟಗಳಿಂದ ದೂರವಾಗಿ ದೈಹಿಕ ಹಾಗೂ ಮಾನಸಿಕ ಕ್ಷಮತೆಗೆ ಈ ರೀತಿಯ ಕ್ರೀಡೆಗಳು ಅವಶ್ಯ. ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಮಹಾವೀರ ಉಪಾಧ್ಯೆ, ಜೀನೇಂದ್ರ ಕುಂದಗೋಳ, ಶ್ರವಣಕುಮಾರ ಯೋಗಿ, ಸೂರಜ ಜೈನ, ಎಸ್.ಜಿ ಕೊಪ್ಪದ, ಶೋಧನ ಇದ್ದರು.

 ಧಾರವಾಡ: ಪುನರ್ ಮನನ ಶಿಬಿರಕ್ಕೆ ಚಾಲನೆ
ಧಾರವಾಡ: ಕವಿವಿ ಯು.ಜಿ.ಸಿ ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯ ಮಹಿಳಾ ಅಧ್ಯಯನದ ಪುನರ್ ಮನನ ಶಿಬಿರವನ್ನು ಶನಿವಾರ ವಿವಿ ಕುಲಸಚಿವ ಪ್ರೊ. ಮಲ್ಲಿಕಾ ಘಂಟಿ ಉದ್ಘಾಟಿಸಿದರು. ಪ್ರಾಚೀನ ಭಾರತ, ಜ್ಞಾನ ಭಾರತದಲ್ಲಿನ ಹೆಣ್ಣಿನ ಪಾತ್ರ, ಶೋಷಣೆ, ಅವಳಿಗಿರುವ ಮಹತ್ವದ ಬಗ್ಗೆ ತಿಳಿಸಿ, ಸಮಾಜದಲ್ಲಿ ಮಹಿಳೆಯ ಗಂಭೀರ ಸ್ಥಾನಮಾನದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮಹಿಳೆಯನ್ನು ದೇವತೆಯ ಸ್ಥಾನದಲ್ಲಿಟ್ಟರೂ, ವಾಸ್ತವವಾಗಿ ಆಕೆಗೆ ಆ ಸ್ಥಾನ ಸಿಗುತ್ತಿಲ್ಲ ಎಂದರು. ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮುಂದಿದ್ದರೂ ಸಹ ಆಕೆಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಕುಟುಂಬ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ ಎಂದು ವಿಷಾದಿಸಿದರು. ಶಿಬಿರದ ಸಂಯೋಜಕ ಪ್ರೊ.ಎಸ್.ಸಿ.ಶೆಟ್ಟರ್, ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಜೆ.ಎಂ. ನಾಗಯ್ಯ, ಶೈಕ್ಷಣಿಕ ಸಿಬ್ಬಂದಿ ವಿದ್ಯಾಲಯದ ಪ್ರಭಾರಿ ನಿರ್ದೇಶಕ ಪ್ರೊ. ಆರ್. ನಝೀರ್ ಅಹ್ಮದ್, ಎಸ್.ಜಿ. ಹಿರೇಮಠ, ವೆಂಕಟೇಶ ಗಿರಿ, ಡಾ. ಶಿವಶರಣ ಸಿ.ಟಿ ಇದ್ದರು.

ಸುರಭಿ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ
ಹುಬ್ಬಳ್ಳಿ: ಉಣಕಲ್‌ನ ನಾಗರಾಜ ಏಜ್ಯುಕೇಶನ್ ಸೊಸೈಟಿಯ ಸುರಭಿ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭ 'ಚಿಲಿಪಿಲಿ' ಫೆ. 9ರಂದು ದಾನಮ್ಮದೇವಿ ಗುಡಿ ರಸ್ತೆಯಲ್ಲಿರುವ ಶಾಲೆಯ ಆವರಣದಲ್ಲಿ ಸಂಜೆ 4ಕ್ಕೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಿಲ್ಪಾ ಶೆಟ್ಟರ್, ಪಿ. ಸಿ. ಜಾಬೀನ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಎಸ್. ಬಿ. ನಾಡಗೌಡ ಹಾಗೂ ನಗರ ಪಾಲಿಕೆ ಸದಸ್ಯೆ ಅಶ್ವಿನಿ ಮಜಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ನಾಗರಾಜ ಯಂಡಿಗೇರಿ ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಲೆಯ ಮುಖ್ಯಸ್ಥೆ ನಮ್ಯ ರಾಚೆಲ್ ತಿಳಿಸಿದ್ದಾರೆ.


ಉರೂಸ್ ನಿಮಿತ್ತ ತಾತ್ಕಾಲಿಕ ರೈಲು ನಿಲುಗಡೆ ಸೌಲಭ್ಯ
ಹುಬ್ಬಳ್ಳಿ: ಫೆ. 11ರಿಂದ 13ರವರೆಗೆ ನಾಗಲಾವಿಯಲ್ಲಿ ನಡೆಯಲಿರುವ ಹಜರತ್ ಷರೀಫ್ ಉರೂಸ್ ನಿಮಿತ್ತ ಈ ಮಾರ್ಗದಲ್ಲಿ ಸಂಚರಿಸುವ ಆರು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ನಾಗಲಾವಿ ಬಳಿ ಕಲ್ಪಿಸಲಾಗಿದೆ ಎಂದು ನೈಋತ್ಯ ರೇಲ್ವೆ ತಿಳಿಸಿದೆ. ಹುಬ್ಬಳ್ಳಿ ವಿಭಾಗದಿಂದ ಸಂಚರಿಸುವ ತಿರುಪತಿ ಕೊಲ್ಹಾಪುರ ಹರಿಪ್ರಿಯಾ ಎಕ್ಸ್‌ಪ್ರೆಸ್, ಹುಬ್ಬಳ್ಳಿ-ಮೀರಜ್-ಹುಬ್ಬಳ್ಳಿ ಪ್ಯಾಸೆಂಜರ್, ಹುಬ್ಬಳ್ಳಿ-ಲೋಂಡಾ ಎಕ್ಸ್ಸ್‌ಪ್ರೆಸ್ ರೈಲುಗಳಿಗೆ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ. ಹರಿಪ್ರಿಯಾ ಎಕ್ಸ್ಸ್‌ಪ್ರೆಸ್ ನಾಗಲಾವಿಗೆ ಬೆಳಗ್ಗೆ 9:24ಕ್ಕೆ ಬರಲಿದೆ. ಹುಬ್ಬಳ್ಳಿ-ಮೀರಜ್ ಪ್ಯಾಸೆಂಜರ್ ರೈಲು ಮಧ್ಯಾಹ್ನ 1:50ಕ್ಕೆ ಬರಲಿದೆ. ಹುಬ್ಬಳ್ಳಿ-ಲೋಂಡಾ ಎಕ್ಸ್‌ಪ್ರೆಸ್ ರೈಲು ನಾಗಲಾವಿಯಿಂದ ಸಂಜೆ 5:02ಕ್ಕೆ ಹೊರಡಲಿದೆ. ಹುಬ್ಬಳ್ಳಿಯತ್ತ ಬರುವ ಮೀರಜ್-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ನಾಗಲಾವಿಗೆ ಬೆಳಗ್ಗೆ 4:40ಕ್ಕೆ ಬರಲಿದೆ. ಮೀರಜ್-ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಮಧ್ಯಾಹ್ನ 1:22ಕ್ಕೆ ಬರಲಿದೆ. ಹರಿಪ್ರಿಯಾ ಎಕ್ಸ್ಸ್‌ಪ್ರೆಸ್ ಸಂಜೆ 6:05ಕ್ಕೆ ಬರಲಿದೆ.

ಇಂದು ಕೆ.ಎಚ್. ಪಾಟೀಲ ಪುಣ್ಯಸ್ಮರಣೆ
ಹುಬ್ಬಳ್ಳಿ: ಸಹಕಾರ ರಂಗದ ದಿಗ್ಗಜ ದಿ. ಕೆ.ಎಚ್. ಪಾಟೀಲ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಫೆ. 9ರ ಬೆಳಗ್ಗೆ 8:30ಕ್ಕೆ ಕೆ.ಎಚ್. ಪಾಟೀಲರ ಪುತ್ಥಳಿ ಬಳಿ ಸರ್ವಧರ್ಮ ಪ್ರಾರ್ಥನೆ ಜರುಗಲಿದೆ. ಅಂದು ಬೆಳಗ್ಗೆ 8:30ಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವರು. ಪ್ರತಿಷ್ಠಾನದ ಅಧ್ಯಕ್ಷ, ಮಾಚಿ ಸಚಿವ ಎ.ಎಂ ಹಿಂಡಸಗೇರಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲಾ ಪಂಚಾಯ್ತಿ, ಸಂಘ ಸಂಸ್ಥೆಗಳ ಚುನಾಯಿತ ಸದಸ್ಯರು, ಮಾಜಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಂ.ಎಂ. ಗೌಡರ ತಿಳಿಸಿದ್ದಾರೆ.

ವರೂರಿನ ನವಗ್ರಹ ತೀರ್ಥ ಕ್ಷೇತ್ರಕ್ಕೆ ಸಚಿವರ ಭೇಟಿ ಇಂದು
 ಹುಬ್ಬಳ್ಳಿ: ವರೂರಿನ ನವಗ್ರಹ ತೀರ್ಥ ಕ್ಷೇತ್ರಕ್ಕೆ ಫೆ. 9ರಂದು ಬೆಳಗ್ಗೆ 10ಕ್ಕೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಆರ್. ಗುಂಡೂರಾವ್ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಸಚಿವರಿಗೆ ಹಮ್ಮಿಕೊಳ್ಳಲಾಗಿರುವ ಸನ್ಮಾನ ಸಮಾರಂಭದ ಸಾನ್ನಿಧ್ಯವನ್ನು ರಾಷ್ಟ್ರಸಂತ ಯುವಾಚಾರ್ಯ ಶ್ರೀ 108 ಗುಣಧರನಂದಿ ಮಹಾರಾಜರು ಸಾನ್ನಿಧ್ಯವಹಿಸಲಿದ್ದಾರೆ. ಅಲ್ಲದೆ, ಎಜಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ ಎಂದು ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಧರ್ಮಸೇನ ಭಟ್ಟಾರಕ ಪಟ್ಟಾಚಾರ್ಯರು ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಧಾರವಾಡ ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ಹಾಗೂ ರಾಜಕೀಯ ಮುಖಂಡರು ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಹುಬ್ಬಳ್ಳಿ: ನಾಳೆ ಕಳಸಾ ಹೋರಾಟಗಾರರಿಂದ ಧರಣಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಪಡೆಯುವುದಕ್ಕೆ ಆಗ್ರಹಿಸಿ ಕಳಸಾ ಬಂಡೂರಿ ಹೋರಾಟ ಸಮಿತಿಯಿಂದ ಫೆ. 10ರಂದು ಹುಬ್ಬಳ್ಳಿ ಮಿನಿವಿಧಾನಸೌಧದ ಎದುರು ಧರಣಿ ಹಮ್ಮಿಕೊಳ್ಳಲಾಗಿದೆ. ಧರಣಿ ಸತ್ಯಾಗ್ರಹದ ಕುರಿತು ಪ್ರಕಟಣೆ ನೀಡಿರುವ ಕಳಸಾ ಬಂಡೂರಿ ಕೇಂದ್ರ ಹೋರಾಟ ಸಮಿತಿ ಸದಸ್ಯರು, ಅಂದು ಬೆಳಗ್ಗೆ 10:30ಕ್ಕೆ ಮಿನಿ ವಿಧಾನಸೌಧದ ಎದುರು ಧರಣಿ ನಡೆಸಲಾಗುತ್ತಿದ್ದು, ಹೋರಾಟದಲ್ಲಿ ಹುಬ್ಬಳ್ಳಿ ನಾಗರಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಭಾಗದ ಜನರ ಬಹುದಿನದ ಬೇಡಿಕೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಮನ್ನಣೆ ನೀಡಿ ಪ್ರಧಾನಿ ಮನ್‌ಮೋಹನ್ ಸಿಂಗ್ ಅವರು ಮಧ್ಯಪ್ರವೇಶಿಸಿ ನ್ಯಾಯಾಧೀಕರಣದಿಂದ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.


ಆಮರಣಾಂತ ಉಪವಾಸ ಸತ್ಯಾಗ್ರಹ ಹಿಂದಕ್ಕೆ
ಕುಂದಗೋಳ: ತಾಲೂಕಿನ ಕೂಬಿಹಾಳ ಗ್ರಾಪಂನಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ, ಗ್ರಾಪಂ ಆವರಣದಲ್ಲಿ ಗ್ರಾಮ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯಕರ್ತರು ನಡೆಸಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಶುಕ್ರವಾರ ಹಿಂದಕ್ಕೆ ಪಡೆದಿದ್ದಾರೆ. ಫೆ. 5ರಿಂದ ಆರಂಭಿಸಲಾಗಿದ್ದ್ದ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಎಚ್.ಎಂ. ಓಲೇಕಾರ, ಜಿಪಂ, ತಾಪಂ ಕಚೇರಿ ಅಧಿಕಾರಿಗಳು, ಗ್ರಾಪಂನಲ್ಲಿ ನಡೆದಿರುವ ಅವ್ಯವಹಾರ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ಧರಣಿ ಹಿಂದಕ್ಕೆ ಪಡೆಯಲಾಗಿದೆ ಎಂದು ಸಮಿತಿ ಅಧ್ಯಕ್ಷ ಜಿ.ಎನ್. ಹುರಟಳ್ಳಿ ತಿಳಿಸಿದ್ದಾರೆ. ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ಪೂಜಾರ, ಆರ್.ಪಿ. ಸಾಹೇಬನವರ, ಬಸವರಾಜ ರಡ್ಡೇರ, ಮಾನಪ್ಪ ಬಡಿಗೇರ, ಮಾದೇವಪ್ಪ ಅವರಾರಿ ಸೇರಿದಂತೆ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಬಸ್‌ಗೆ ದ್ವಿಚಕ್ರ ವಾಹನ ಡಿಕ್ಕಿ: ಸವಾರನ ಸಾವು
ನವಲಗುಂದ: ದ್ವಿಚಕ್ರ ವಾಹನವೊಂದು ಸಾರಿಗೆ ಸಂಸ್ಥೆಯ ಬಸ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಮತ್ತೊಬ್ಬ ಮಾರಣಾಂತಿಕ ಗಾಯಗೊಂಡ ಘಟನೆ ಇಲ್ಲಿನ ಕುಮಾರಕೊಪ್ಪ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ತಿರುವಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ತಿರ್ಲಾಪುರ ಗ್ರಾಮದ ಮುದಕಪ್ಪ ಹಳೆಮನಿ (47) ಎಂಬುವರೇ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಅಡಿವೆಪ್ಪ ನವಲಗುಂದ (48) ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಈ ಕುರಿತಂತೆ ನವಲಗುಂದ ಠಾಣೆ ಇನ್‌ಸ್ಪೆಕ್ಟರ್ ಎಸ್.ಎಸ್. ಪಡೋಳಕರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಹಿರೇಹೊನ್ನಳ್ಳಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕಲಘಟಗಿ: ಹುಬ್ಬಳ್ಳಿ ಅಂಗವಿಕಲರ ಆಸ್ಪತ್ರೆ ವತಿಯಿಂದ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ವೈದ್ಯಾಧಿಕಾರಿ ಡಾ. ವಸಂತ ಮ್ಯಾಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮದಲ್ಲಿ ಆಯೋಜಿಸಿರುವ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಜ್ಞ ವೈದ್ಯರ ಸೇವೆ ಲಭ್ಯವಿದ್ದು, ಗ್ರಾಮಸ್ಥರು ಶಿಬಿರದ ಉಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಕೆ. ಸುನೀತಾ, ಡಾ. ಚಿಂತೂರ, ಡಾ. ಕವಿತಾ ಚಿಂತೂರ, ಡಾ. ಶೈಲೇಂದ್ರ, ಡಾ. ಜಿ.ಎಸ್. ಹಿರೇಮಠ, ಎಸ್.ವಿ. ಜಕ್ಕಣ್ಣವರ, ರಮೇಶ, ಸಿಸ್ಟರ್ ಮಲ್ಲಿಕಾ, ಕರ್ನಾಟಕರತ್ನ್ನ ಡಾ. ರಾಜ್ ಕುಮಾರ ಕನ್ನ್ನಡ ಸಾಂಸ್ಕೃತಿಕ ವೇದಿಕೆ ಪದಾಧಿಕಾರಿಗಳಿದ್ದರು.

ಕಲಘಟಗಿ: ನಮೋ ಬ್ರಿಗೇಡ್ ಘಟಕ ಉದ್ಘಾಟನೆ
ಕಲಘಟಗಿ: ಪಟ್ಟಣದ ಎಪಿಎಂಸಿ ಆವರಣದಲ್ಲಿ ನಮೋ ಬ್ರಿಗೇಡ್ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು. ಪತ್ರಕರ್ತ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಕರ್ತರಲ್ಲಿ ನಮೋ ಬ್ರಿಗೇಡ್ ಕಾರ್ಯಕ್ರಮ ಪ್ರೇರಣೆ ನೀಡಲಿದೆ ಎಂದರು. ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಕೆ.ಬಿ. ಪಾಟೀಲ ಕುಲಕರ್ಣಿ, ಭಾರತೀಯ ಕಿಸಾನ ಘಟಕದ ಜಿಲ್ಲಾ ಕೋಶಾಧ್ಯಕ್ಷ ರಾಮಣ್ಣ ಮೋದೆನ್ನವರ, ಕ್ರೆಡೆಲ್ ಮಾಜಿ ಅಧ್ಯಕ್ಷ ಸಿ.ಎಂ. ನಿಂಬಣ್ಣವರ, ಜಿಪಂ ಸದಸ್ಯ ವೈ. ಬಿ. ದಾಸನಕೊಪ್ಪ, ಬಸವರಾಜ ಕರಡಿಕೊಪ್ಪ, ಗೀತಾ ಮರಲಿಂಗಣ್ಣವರ, ತಾಪಂ ಅಧ್ಯಕ್ಷ ಎಂ.ಎಫ್. ಜಾವೂರ ಮತ್ತಿತರರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು  ವಿವಿಧ ಗ್ರಾಮಗಳಿಂದ ನೂರಾರು ಚಕ್ಕಡಿಗಳಲ್ಲಿ ಆಗಮಿಸಿದ್ದ ನಮೋ ಬ್ರಿಗೇಡ್ ಕಾರ್ಯಕರ್ತರ ರ್ಯಾಲಿ ಗಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.