ಧಾರವಾಡ

ವಾರ್ತಾ ಇಲಾಖೆ ಹುದ್ದೆಗಳು ಖಾಲಿ ಖಾಲಿ

Published On :

-ಬಸವರಾಜ ಹಿರೇಮಠ
ಧಾರವಾಡ: ಸರ್ಕಾರದ ಕಣ್ಣು, ಕಿವಿ, ಮೂಗು ಎಂದು ಕರೆಸಿಕೊಳ್ಳುವ ವಾರ್ತಾ ಮತ್ತು ಪ್ರಸಾರ ಇಲಾಖೆ ಇದೀಗ ವಿಕಲಾಂಗ.
ಹೌದು, ಸರ್ಕಾರದ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಬೇಕಾದ ಈ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ಉಂಟಾಗಿದ್ದು ಇಲಾಖೆಯು ಅಶಕ್ತತೆಯಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿರುವಂತೆ ಭಾಸವಾಗುತ್ತಿದೆ. ಸರ್ಕಾರದ ಪ್ರಮುಖ ಯೋಜನೆಗಳ ಪ್ರಚಾರ ಸೇರಿದಂತೆ ಆಡಳಿತದ ಪ್ರಮುಖ ಅಂಗವಾಗಿರುವ ಈ ಇಲಾಖೆಯಲ್ಲಿ ಎಲ್ಲ ಹಂತದ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ.
ರಾಜ್ಯದ ಪೈ1ಕಿ ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹಿರಿಯ ಸಹಾಯಕ ವಾರ್ತಾಧಿಕಾರಿ, ಸಹಾಯಕ ವಾರ್ತಾಧಿಕಾರಿ, ಪ್ರಥಮ ದರ್ಜೆ ಸಹಾಯಕರು, ವಾಹನ ಚಾಲಕರು ಹಾಗೂ ಇತರೆ ಹುದ್ದೆಗಳು ಬರಿ ನೆಪಕ್ಕೆ ಮಾತ್ರ. ಈ ಹುದ್ದೆಗಳನ್ನು ಭರ್ತಿ ಮಾಡಿ ಅದೆಷ್ಟೋ ವರ್ಷಗಳು ಉರುಳಿ ಹೋಗಿವೆ.
ಇರುವ ಅಧಿಕಾರಿಗಳ ಮೇಲೆ ಹೊರೆ: ಈ ಕಾರಣದಿಂದ ಇರುವ ಕೆಲವೇ ಅಧಿಕಾರಿಗಳ ಮೇಲೆ ಅತಿಯಾದ ಹೊರೆ ಬಿದ್ದಿದ್ದು, ಸರ್ಕಾರದ ಪ್ರಮುಖ ಯೋಜನೆಗಳ ಪ್ರಚಾರವೂ ಅಷ್ಟಕಷ್ಟೇ ಎನ್ನುವಂತಾಗಿದೆ. ಬೆಳಗಾವಿ ವಿಭಾಗದ ಗದಗ, ಧಾರವಾಡ, ಹಾವೇರಿ, ಬಾಗಲಕೋಟೆ, ಬಿಜಾಪುರ, ಉತ್ತರ ಕನ್ನಡ, ಬೆಳಗಾವಿ ಹಾಗೂ ಗುಲ್ಬರ್ಗ ವಿಭಾಗದ ಕೊಪ್ಪಳ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಹಿರಿಯ ಸಹಾಯಕ ವಾರ್ತಾಧಿಕಾರಿ ಹಾಗೂ ಸಹಾಯಕ ವಾರ್ತಾಧಿಕಾರಿಗಳ ಹುದ್ದೆಗಳು ಖಾಲಿ ಉಳಿದು ವರ್ಷಗಳು ಗತಿಸಿವೆ. ಪ್ರಸ್ತುತ ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರ ಹಾಗೂ ಧಾರವಾಡ ಜಿಲ್ಲೆಯನ್ನು ಹಿರಿಯ ಸಹಾಯಕ ನಿರ್ದೇಶಕ ಸಿ.ಪಿ. ಮಾಯಾಚಾರಿ ನೋಡಿಕೊಳ್ಳುತ್ತಿದ್ದರೆ, ಧಾರವಾಡದ ವಾರ್ತಾ ಸಹಾಯಕ ನವಲೆ ಅವರು ಹೆಚ್ಚುವರಿಯಾಗಿ ಗದಗ ಜಿಲ್ಲೆ ನಿಭಾಯಿಸಬೇಕಿದೆ. ಅದೇ ರೀತಿ ವಾರ್ತಾ ಸಹಾಯಕ ರವಿರಾಜ ಅವರು ಗುಲ್ಬರ್ಗ, ಯಾದಗಿರಿ, ಬೀದರ್ ಜಿಲ್ಲೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ವಾರ್ತಾ ಸಹಾಯಕ ಮಂಜುನಾಥ ಸುಳ್ಳೊಳ್ಳಿ ಅವರು ಬಾಗಲಕೋಟೆ, ಬಿಜಾಪುರ, ಕೊಪ್ಪಳ ಜಿಲ್ಲೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಹೀಗೆ ವಾರ್ತಾ ಸಹಾಯಕರು ಸಹ ಹಿರಿಯ ಸಹಾಯಕ ನಿರ್ದೇಶಕರ ಕೆಲಸ ಅದೂ ಎರಡ್ಮೂರು ಜಿಲ್ಲೆಗಳನ್ನು ನಿಭಾಯಿಸುವ ಸ್ಥಿತಿ ಉತ್ತರ ಕರ್ನಾಟಕದಲ್ಲಿದೆ.
ಇನ್ನು ಬೆಳಗಾವಿ ವಿಭಾಗದ ಉಪ ನಿರ್ದೇಶಕ ಬಸವರಾಜ ಕಂಬಿ ಅವರೇ ಗುಲ್ಬರ್ಗಕ್ಕೆ ಹೆಚ್ಚುವರಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 13 ವರ್ಷಗಳಿಂದ ಗುಲ್ಬರ್ಗ ವಿಭಾಗಕ್ಕೆ ಉಪ ನಿರ್ದೇಶಕರೇ ಇಲ್ಲ!
ವಾಹನ ಚಾಲಕರೇ ಪ್ರಚಾರಕರು!: ಬೆಳಗಾವಿ ಹಾಗೂ ಗುಲ್ಬರ್ಗ ವಿಭಾಗದ ಎಲ್ಲ ಜಿಲ್ಲೆಗಳಲ್ಲೂ ಪ್ರಥಮ ದರ್ಜೆ ಸಹಾಯಕರು, ವಾಹನ ಚಾಲಕರು, ಬೆರಳಚ್ಚುಗಾರರು, ಶೀಘ್ರ ಲಿಪಿಕಾರರ ಕೊರತೆ ಸಾಕಷ್ಟಿದೆ. ಸರ್ಕಾರದ ಪ್ರಮುಖ ಜನಪರ ಯೋಜನೆಗಳನ್ನು ಹಾಗೂ ಸಾಧನೆಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ವ್ಯವಸ್ಥೆ ಇಲಾಖೆಯಲ್ಲಿದೆ. ಅದರನುಸಾರ ತೊಗಲು ಬೊಂಬೆಯಾಟ, ಬಯಲಾಟ, ಜನಪದ ಹಾಡು, ಬೀದಿ ನಾಟಕ ಪ್ರದರ್ಶನಗಳನ್ನು ಏರ್ಪಡಿಸಬೇಕು. ಆದರೆ, ಈ ಕೆಲಸಕ್ಕೆ ಅಧಿಕಾರಿ ಇಲ್ಲದ್ದರಿಂದ ವಾಹನ ಚಾಲಕರೇ ಈ ಕೆಲಸ ನಿರ್ವಹಿಸುತ್ತಿದ್ದಾರೆ.
ಇತ್ತ ಗಮನಿಸಿ..: ಇಷ್ಟೆಲ್ಲ ಹುದ್ದೆಗಳು ಖಾಲಿ ಇವೆ ಎಂದ ಮಾತ್ರಕ್ಕೆ ಅಧಿಕಾರಿಗಳು ನೇಮಕವಾಗಿಲ್ಲ ಎಂದಲ್ಲ. ವಾರ್ತಾ ಇಲಾಖೆಯ ಬೆಂಗಳೂರು ವಿಭಾಗದ ಅಧಿಕಾರಿಗಳು ಈ ಭಾಗದ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬುದು ಸ್ಪಷ್ಟ. ವರ್ಗಾವಣೆಗೊಂಡರೂ ತಮ್ಮ ಪ್ರಭಾವ ಬೆಳೆಸಿ ತಮ್ಮ ಸ್ವಸ್ಥಾನಕ್ಕೆ ಹೋದ ಅನೇಕ ಉದಾಹರಣೆಗಳಿವೆ. ಇತ್ತೀಚೆಗೆ ಗದಗ ಜಿಲ್ಲೆಗೆ ಶಂಕ್ರಪ್ಪ ಎಂಬ ಅಧಿಕಾರಿ ವರ್ಗವಾಗಿ ಬಂದಿದ್ದರು. ನಾಲ್ಕೇ ದಿನಗಳಲ್ಲಿ ಮಾಧ್ಯಮ ಅಕಾಡೆಮಿಗೆ ನಿಯೋಜನೆ ಮೇಲೆ ತೆರಳಿದರು. ಇದೀಗ ಗದಗ ಜಿಲ್ಲೆಯ ಹುದ್ದೆ ಮತ್ತೆ ಖಾಲಿ.
ಇಲಾಖೆಯಲ್ಲಿ ಅಧಿಕಾರಿಗಳಿಗೆ ಕೊರತೆ ಇಲ್ಲ. ನಿಯೋಜನೆಗೊಂಡ ಸಿಬ್ಬಂದಿ ಮರಳಿ ಇಲಾಖೆಗೆ ಬಂದರೆ ಸಾಕು, ಇಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೆ ಅಧಿಕಾರಿಗಳು ಲಭ್ಯವಾಗುತ್ತಾರೆ. ಈ ಹಿನ್ನೆಲೆಯಲ್ಲಿ ನೂತನ ವಾರ್ತಾ ಮಂತ್ರಿ ರೋಷನ್ ಬೇಗ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ಗಮನ ಹರಿಸಬೇಕೆಂದು ವಾರ್ತಾ ಇಲಾಖೆಯ ಅಧಿಕಾರಿಯೊಬ್ಬರು ಪತ್ರಿಕೆ ಮೂಲಕ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.