ಧಾರವಾಡ

20 ನಿಮಿಷ 20 ಸುದ್ದಿ

Published On :

ಇಂದು ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಚುನಾವಣೆ
ಧಾರವಾಡ: ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ 13 ಜನ ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆಯಲಿರುವ ಅಖಂಡ ಚುನಾವಣೆ ರಂಗೇರಿದೆ. ಹಿಂದಿನ ಅಧ್ಯಕ್ಷರಾದ ಬಸವರಾಜ ಕಟಗಿ ಹಾಗೂ ಕೃಷಿ ಮತ್ತು ಜಲಾನಯನ ಇಲಾಖೆ ನೌಕರರ ಎಸ್.ಕೆ. ರಾಮದುರ್ಗ ನೇತೃತ್ವದ ಎರಡು ಗುಂಪುಗಳು ಈ ಬಾರಿ ತೀವ್ರ ಪೈಪೋಟಿ ನಡೆಸಿವೆ. ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆದು, ಸಂಜೆಯೇ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಈ ಮಧ್ಯೆ ಎಸ್.ಕೆ. ರಾಮದುರ್ಗ ಗುಂಪಿನ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಶನಿವಾರ ಸುದ್ದಿಗೋಷ್ಠಿ ನಡೆಸಿ, ಹಿಂದಿನ ಆಡಳಿತದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು ಪ್ರತಿ ಮತದಾರರಿಗೆ ಚೀಟಿ ನೀಡಲಾಗಿದ್ದು, ಕಟಗಿ ಅವರು ನಿವೃತ್ತಿಯಾದವರಿಗೂ ಮತದಾನದ ಹಕ್ಕು ಪಡೆಯುವಂತೆ ಮಾಡಿದ್ದಾರೆ.

ಖರೀದಿ ಕೇಂದ್ರಕ್ಕೆ ಶಾಸಕ ಕೋನರಡ್ಡಿ ಚಾಲನೆ
ಅಣ್ಣಿಗೇರಿ: ಕಡಲೆಗೆ ಬೆಂಬಲ ಬೆಲೆ ದೊರಕಬೇಕೆಂಬ ಉದ್ದೇಶದಿಂದ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಡಲೆ ಮಾರಾಟ ಕೇಂದ್ರ ಆರಂಭಿಸಲಾಗಿದ್ದು, ರೈತರ ಬಾಂಧವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಶಾಸಕ ಎನ್.ಎಚ್. ಕೋನರಡ್ಡಿ ವಿನಂತಿಸಿಕೊಂಡರು. ಶನಿವಾರ ನೂತನ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಮಧ್ಯಸ್ಥಿಕೆದಾರರ ಹಾವಳಿ ತಪ್ಪಿಸಿ ರೈತರ ಬೆಳೆ ಸೂಕ್ತ ಬೆಲೆ ದೊರಕುವಂತೆ ಕೃಷಿ ಅಧಿಕಾರಿಗಳು ಸಹಕರಿಸಬೇಕು ಎಂದೂ ಅವರು ಹೇಳಿದರು. ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲಾಗುವ ನವಲಗುಂದದ ಗೋದಾಮಿನಲ್ಲಿ ಸ್ಥಳದ ಅಭಾವವಿದೆ. ಈಗಾಗಲೇ ಖರೀದಿಸಲಾಗಿರುವ 2.55 ಲಕ್ಷ ಕ್ವಿಂಟಲ್ ಗೋವಿನ ಜೋಳವನ್ನು ಸರ್ಕಾರದ ನಿರ್ದೇಶನದಂತೆ ತೆರುವು ಮಾಡಲಾಗುವುದೆಂದರು. ಅಣ್ಣಪ್ಪ ಬಾಗಿ, ಎಂ.ವಿ. ಮೇಗೇರಿ ಮಾತನಾಡಿದರು. ಸುನೀಲ ಗೋಡಬೋಲೆ, ಪ್ರದೀಪ ಲೆಂಕಣ್ಣವರ, ಡಿ.ಎಂ. ಶಲವಡಿ, ಸುಧಾ ಭಂಡಿ, ಬಸನಗೌಡ ಕುರಹಟ್ಟಿ, ಶಿವಪ್ಪ ಅಬ್ಬಿಗೇರಿ ಇದ್ದರು.

ಅಣ್ಣಿಗೇರಿ ಬಂದ್ ಭಾಗಶಃ ಯಶಸ್ವಿ
ಅಣ್ಣಿಗೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ತಾಲೂಕುಗಳ ರಚನೆ ಅನುದಾನ ಕಾಯ್ದಿರಿಸದಿದ್ದನ್ನು ಖಂಡಿಸಿ ಶನಿವಾರ ಕರೆ ನೀಡಲಾಗಿದ್ದ ಅಣ್ಣಿಗೇರಿ ಬಂದ್ ಭಾಗಶಃ ಯಶಸ್ವಿಗೊಂಡಿತು. ಬಂದ್ ಅಂಗವಾಗಿ ಪಟ್ಟಣದಾದ್ಯಂತ ಶಾಲಾ-ಕಾಲೇಜ್ಗಳಿಗೆ ರಜೆ ಘೋಷಿಸಲಾಗಿತ್ತು. ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಂಗಡಿ-ಮುಂಗಟ್ಟು ಬಂದ್ ಮಾಡಿದ್ದರು. ಎನ್ಜಿಇಎಫ್ ಮಾಜಿ ಅಧ್ಯಕ್ಷ ಷಣ್ಮುಖ ಗುರಿಕಾರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹೊಸ ತಾಲೂಕುಗಳ ರಚನೆಗೆ ತಲಾ ರು. 5 ಲಕ್ಷ ಕಾಯ್ದಿರಿಸುವಂತೆ ಉತ್ತರ ಕರ್ನಾಟಕ ಭಾಗದ ಎಲ್ಲ ಪಕ್ಷಗಳ ಸಂಸದರು, ಶಾಸಕರು, ಮಂತ್ರಿಗಳು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು. ಷಣ್ಮುಖ ಗುರಿಕಾರ, ಶಶಿಧರ ಮುಖಂಡಮಠ, ಶಿವಶಂಕರ ಕಲ್ಲೂರ, ವೀರೇಶ ಶಾನಬೋಗರ, ಚಂಬಣ್ಣ ಹಾಳದೋಟರ ಇದ್ದರು.

 ಉಪನ್ಯಾಸಕರ ವೇತನ ಪರಿಷ್ಕರಣೆಗೆ ಒತ್ತಾಯ
ಹುಬ್ಬಳ್ಳಿ: ಪದವಿ ಪೂರ್ವ ಉಪನ್ಯಾಸಕರ ಮತ್ತು ಪ್ರಾಚಾರ್ಯರ ವೇತನ ತಾರತಮ್ಯ ನಿವಾರಣೆಗಾಗಿ ಸರ್ಕಾರ ಕಾಳಜಿ ತೋರುತ್ತಿಲ್ಲ ಎಂದು ದೂರಿರುವ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಜ್ವಲಂತ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ ಎಂದು ಆಗ್ರಹಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಪದವಿ ಪೂರ್ವ ಉಪನ್ಯಾಸಕರ ವೇತನ ತಾರತಮ್ಯ ಸಮಸ್ಯೆ ಹಾಗೆಯೇ ಮುಂದುವರಿದಿರುವುದು ವಿಷಾದನೀಯ. ಈ ಕುರಿತು ಸತತ 4 ವರ್ಷಗಳಿಂದ ಕಪ್ಪುಬಟ್ಟೆ ಧರಿಸಿ ವರ್ಗ ಪ್ರತಿಭಟನೆ, ಮೌಲ್ಯಮಾಪನ ಬಹಿಷ್ಕಾರ, ಬೆಂಗಳೂರು ಚಲೋ ಹೀಗೆ ಹತ್ತು ಹಲವು ಹೋರಾಟ ಮಾಡುತ್ತ ಬಂದಿದ್ದರೂ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ ಎಂದರು. ಗೋಷ್ಠಿಯಲ್ಲಿ ಶಿವಣ್ಣ ದೊಡ್ಡಮನಿ, ಆರ್. ಜಿ. ಮಠ, ಶ್ರೀಶೈಲ ಬೀರಕಬ್ಬಿ, ನಾಗರಾಜ ಗಾಂವಕರ ಮತ್ತಿತರರಿದ್ದರು.

 18ರಂದು ರಾಷ್ಟ್ರ ಮಟ್ಟದ ವಿಚಾರ ಸಂಕಿರಣ
ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ಎಚ್.ಎಸ್. ಕೋತಂಬ್ರಿ ವಿಜ್ಞಾನ ಸಂಸ್ಥೆಯಲ್ಲಿ ಫೆ. 18ರಂದು ವಿವಿ ಧನಸಹಾಯ ಆಯೋಗದ ಸಹಯೋಗದೊಂದಿಗೆ 'ಆಧುನಿಕ ಭಾರತೀಯ ಸಮಾಜದಲ್ಲಿ ಬಸವೇಶ್ವರ ತತ್ವಾದರ್ಶಗಳ ಅನ್ವಯಕತೆ' ವಿಷಯವಾಗಿ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಸಿ.ಬಿ. ಪಾಟೀಲ ತಿಳಿಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆ. 10ಕ್ಕೆ ವಿಚಾರ ಸಂಕಿರಣಕ್ಕೆ ಹುಕ್ಕೇರಿ ತಾಲೂಕಿನ ನಿಡಸೋಸಿಯ ಸಿದ್ಧ ಸಂಸ್ಥಾನ ಮಠದ ಶಿವಲಿಂಗೇಶ್ವರ ಶ್ರೀ ಚಾಲನೆ ನೀಡುವರು. ಡಾ. ವಿ. ಎಸ್. ಸಾಧುನವರ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಶಂಕರಣ್ಣ ಮುನವಳ್ಳಿ ಪಾಲ್ಗೊಳ್ಳುವರು. ಡಾ. ಎಂ.ಟಿ. ಕುರಣಿ, ಡಾ. ಎಂ. ಬಿ. ಪಾಟೀಲ, ಡಾ. ಬಿ.ಬಿ. ಹುಲಮನಿ, ಪ್ರೊ. ಪಿ.ಜಿ. ಪಾಟೀಲ, ಅರುಣಕುಮಾರ ಹಬ್ಬು, ಬಿ. ಎಸ್. ಮಾಳವಾಡ ಮತ್ತಿತರರಿದ್ದರು.

 ರೌಂಡ್ ಟೇಬಲ್ನಿಂದ 47 ಸಾವಿರ ಶಾಲಾ ಕೊಠಡಿ
ಹುಬ್ಬಳ್ಳಿ: ಶಿವಲಿಂಗಮ್ಮ ಶಂಕರಗೌಡ ಬಾಳನಗೌಡ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂದು ನಾಮಕರಣವಾಗಿದ್ದರೂ ಇದು ಹಮಾಲರ ಮಕ್ಕಳು ಓದು ಶಾಲೆ ಎಂದೇ ಪ್ರಸಿದ್ಧಿ ಪಡೆದಿದೆ. ಅಮರಗೋಳ ಎಪಿಎಂಸಿ ಆವರಣದಲ್ಲಿರುವ ಈ ಶಾಲೆ ಇದೀಗ ಹೈಸ್ಕೂಲ್ ಯೋಗ ಪಡೆಯಲಿದೆ ಎಂದು ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಎಲ್. ಹಂಚಾಟೆ ಹೇಳಿದರು. ಹುಬ್ಬಳ್ಳಿ ರೌಂಡ್ ಟೇಬಲ್ ನಿರ್ಮಿಸಿಕೊಟ್ಟಿರುವ ಎರಡು ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ರೌಂಡ್ ಟೇಬಲ್ ಚೇರ್ಮನ್ ಸುಶಾಂತ ಅಗರವಾಲ್ ಮಾತನಾಡಿ, ನಗರದ ವಿವಿಧ ಶಾಲೆಗಳಿಗೆ ರೌಂಡ್ ಟೇಬಲ್ ಸಹಾಯ ಮಾಡಿದೆ. ರು. 120 ಕೋಟಿ ವೆಚ್ಚದಲ್ಲಿ 1710 ಶಾಲೆಗಳ 47 ಸಾವಿರ ಕೊಠಡಿಗಳನ್ನು ನಿರ್ಮಿಸಿಕೊಟ್ಟಿರುವ ಹೆಗ್ಗಳಿಕೆ ಸಂಸ್ಥೆಗಿದೆ ಎಂದರು. ಗಿರೀಶ ಮಾನೆ, ಪ್ರಶಾಂತ ಹೆಬಸೂರ, ಸತ್ಯಜೀತ್ ಮೋರೆ, ಡಾ. ರಾಮು ಮುಲಗಿ, ಎಂ. ಐ. ತಳ್ಳಿಹಾಳ, ಗುರುರಾಜ, ಮಹೇಶ ಇದ್ದರು.

ಶ್ರೀ ಚನ್ನವೀರ ಶರಣರ 19ನೇ ಪುಣ್ಯಸ್ಮರಣೋತ್ಸವ
ಹುಬ್ಬಳ್ಳಿ: ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ 19ನೇ ಪುಣ್ಯಸ್ಮರಣೋತ್ಸವ ಹಾಗೂ ಧರ್ಮ ಚಿಂತನ ಗೋಷ್ಠಿಯಂಗವಾಗಿ ನವನಗರದ ಚಿಕೇನಕೊಪ್ಪ ಶ್ರೀ ಚನ್ನವೀರ ಶರಣರ ಅಂಧರ ಕಲ್ಯಾಣ ಆಶ್ರಮದಲ್ಲಿ ಫೆ. 17ರಿಂದ ಧರ್ಮ ಹಾಗೂ ಸಾಮಾಜಿಕ ಮೌಲ್ಯದ ಚಿಂತನೆಯ ಸಮಾರಂಭ ನಡೆಯಲಿದೆ ಎಂದು ಕೆ.ಪಿ. ಪಾಟೀಲ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಫೆ. 17ರಿಂದ 24ರ ವರೆಗೆ ಪ್ರತಿದಿನ ಸಂಜೆ 6.30ಕ್ಕೆ ಆಶ್ರಮದ ಪ್ರಾಂಗಣದಲ್ಲಿ ಚಿಕ್ಕಪೇಟೆ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಯವರಿಂದ ಅನುಭಾವ ನುಡಿ ಕಾರ್ಯಕ್ರಮ ನಡೆಯಲಿದೆ ಎಂದರು. 17ರಂದು ಸಂಜೆ 6.30ಕ್ಕೆ ಯುವ ಶೌರ್ಯ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ಅಂಗಡಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಡಾ. ಶಿವಾನಂದ ಶಿವಾಚಾರ್ಯ ಶ್ರೀ, ಬಳಗಾನೂರಿನ ಶಿವಶಾಂತವೀರ ಶರಣರು, ಶಾಸಕ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ, ಮಲ್ಲಿಕಾರ್ಜುನ ಹೊರಕೇರಿ, ಕರಿಯಪ್ಪ ಬಿಜಕಲ್, ಶಾಂತಪ್ಪ ದೇವಕಿ, ಚಂದ್ರಶೇಖರ ಮನಗುಂಡಿ ಪಾಲ್ಗೊಳ್ಳುವರು.

 ಕ್ರೀಡೆ ನಾಯಕತ್ವ ಗುಣ ಬೆಳೆಸುತ್ತದೆ: ಭೂಸದ
ಹುಬ್ಬಳ್ಳಿ: ಕ್ರೀಡೆ ಬದುಕಿನ ಅಂಗವಾಗಬೇಕು. ಕ್ರೀಡಾ ಸಾಧನೆ ಸಮಾಜದಲ್ಲಿ ಸ್ಥಾನಮಾನ ತಂದುಕೊಡುತ್ತದೆ. ಜೀವನದಲ್ಲಿ ಶಿಸ್ತು, ಸಮಯ ಪರಿಪಾಲನೆಯೊಂದಿಗೆ ನಾಯಕತ್ವ ಗುಣಗಳನ್ನು ಬೆಳೆಸುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಧಾರವಾಡ ವಿಭಾಗದ ಸಂಚಾಲಕ ಬಾಬಾ ಭೂಸದ ಹೇಳಿದರು. ಚೇತನ ಬಿಜಿನೆಸ್ ಸ್ಕೂಲಿನಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಮಟ್ಟದ ಎಂಬಿಎ ವಿದ್ಯಾರ್ಥಿಗಳ ಸಮರ್-14 ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಕ್ರೀಡಾಕೂಟದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ ಎಂದರು. ಡಾ. ವಿ. ಎಂ. ಕೊರವಿ ಮಾತನಾಡಿ, ಕಾರ್ಪೊರೇಟ್ ಜಗತ್ತಿನಲ್ಲಿ ವ್ಯವಹಾರ ನಿರ್ವಹಿಸುವಾಗ ಕ್ರೀಡಾ ಮನೋಭಾವನೆ ಸಹಾಯಕ್ಕೆ ಬರುತ್ತದೆ ಎಂದರು. ಪ್ರೊ. ಜಗದೀಶ ದ್ಯಾವಪ್ಪನವರ, ಹಡಗಲಿ, ಶ್ರೀನಿವಾಸ ಪಾಟೀಲ, ಪ್ರೊ. ಸುಚಿತ್ರಾ ಹೂಲಿ ಮತ್ತಿತರರಿದ್ದರು.

 ಹೆಗ್ಗೇರಿ ಕ್ರೀಡಾಂಗಣ ಸ್ವಚ್ಛಗೊಳಿಸಿ
ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಹೆಗ್ಗೇರಿಯಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಕ್ರೀಡಾಂಗಣವನ್ನು ಕೊಳಚೆ ಗುಂಡಿಯಂತೆ ಪರಿವರ್ತಿಸಿರುವ ವಲಯ ಕಚೇರಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರನ್ನು ಸಮತಾ ಸೇನಾ ಒತ್ತಾಯಿಸಿದೆ. ಈ ಕುರಿತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿರುವ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಈ ಕ್ರೀಡಾಂಗಣದಲ್ಲಿ ಕೋಕೋ, ಕ್ರಿಕೆಟ್, ವಾಲಿಬಾಲ್ ಮತ್ತಿತರ ಕ್ರೀಡೆಗಳು ನಿರಂತರವಾಗಿ ನಡೆಯುವ ಜತೆಗೆ ಸುತ್ತಲಿನ ಜನತೆಗೆ ವಾಯುವಿಹಾರಕ್ಕೆ ಅನುಕೂಲವಾಗಿತ್ತು. ಇದೀಗ ಕ್ರೀಡಾಂಗಣ ಕೊಳಚೆ ಪ್ರದೇಶದಂತಾಗಿರುವುದರಿಂದ ಈ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ದೂರಿದ್ದಾರೆ. 24 ತಾಸುಗಳಲ್ಲಿ ಈ ಕ್ರೀಡಾಂಗಣ ಸ್ವಚ್ಛಗೊಳಿಸಿ, ಅವ್ಯವಸ್ಥೆ ಸರಿಪಡಿಸದೆ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 ಟೋಲ್ ಸಂಗ್ರಹ ಸ್ಥಗಿತಗೊಳಿಸಿ: ಆಗ್ರಹ
ಹುಬ್ಬಳ್ಳಿ: ಉತ್ತರ ಕರ್ನಾಟಕವನ್ನು ಗೋವಾಕ್ಕೆ ಜೋಡಿಸುವ ಧಾರವಾಡದಿಂದ ಅಳ್ನಾವರ ಮಾರ್ಗದ ರಾಜ್ಯ ಹೆದ್ದಾರಿ ನಂ. 34 ಹಾಗೂ ರಾಜ್ಯದ ಇತರ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಸಂಗ್ರಹಿಸುತ್ತಿರುವ ಟೋಲ್ನ್ನು ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಗ್ರಹಿಸಿದೆ. ಈ ಹೆದ್ದಾರಿ ದುರಸ್ತಿ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಧಾರವಾಡದಿಂದ ರಾಮನಗರವರೆಗಿನ 60 ಕಿಮೀ ರಸ್ತೆಯಲ್ಲಿ ಎಲ್ಲಿಯೂ ಕಾಮಗಾರಿಗಳು ಪೂರ್ಣವಾಗಿ ಮುಗಿದಿಲ್ಲ. ಇನ್ನೂ ಮೂರು ಕಡೆ ರೇಲ್ವೆ ಮೇಲು ಸೇತುವೆ ಹಾಗೂ 3-4 ರಸ್ತೆ ಸೇತುವೆಗಳು ನಿರ್ಮಾಣ ಹಂತದಲ್ಲಿವೆ. ಇವು ಸಂಪೂರ್ಣವಾಗಿ ಮುಗಿಯಲು ಇನ್ನೂ 6 ತಿಂಗಳಿನಿಂದ ಒಂದು ವರ್ಷದ ಅವಧಿ ಬೇಕು. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರ್ನಾಲ್ಕು ತಿಂಗಳುಗಳು ಬೇಕೆಂದು ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ವಸಂತ ಲದವಾ ಮತ್ತಿತರರು ದೂರಿದ್ದಾರೆ.

 ಶ್ರೀ ಕಲ್ಪದ್ರುಮ ಮಹಾಮಂಡಲ ವಿಧಾನ ಮಹೋತ್ಸವ
ಹುಬ್ಬಳ್ಳಿ: ದಿಗಂಬರ ಜೈನ ಸಮಾಜದ ವತಿಯಿಂದ ವಿಶ್ವಶಾಂತಿ ಹಾಗೂ ಸಮೃದ್ಧಿಗಾಗಿ ಫೆ. 16ರಿಂದ 23ರ ವರೆಗೆ ನಗರದ ಮಹಾವೀರ ಗಲ್ಲಿಯ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಶ್ರೀ ಕಲ್ಪದ್ರುಮ ಮಹಾಮಂಡಲ ವಿಧಾನ ಮಹೋತ್ಸವ ಆಯೋಜಿಸಲಾಗಿದೆ. ಹೊಂಬುಜ ಜೈನ ಮಠದ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕರು, ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕರು, ನವಗ್ರಹ ತೀರ್ಥದ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕರು ಸಾನ್ನಿಧ್ಯ ವಹಿಸುವರು. ಫೆ. 16ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ ನೆರವೇರಲಿದ್ದು, ಇದಕ್ಕೂ ಮೊದಲು ಧಾರ್ಮಕ ಕಾರ್ಯಕ್ರಮಗಳು ನಡೆಯಲಿವೆ. ಫೆ. 23ರಂದು ವಿಧಾನ ಮಹೋತ್ಸವದ ಸಮಾರೋಪದಲ್ಲಿ ಬೆಳಗ್ಗೆ 7ಕ್ಕೆ ಜಿನೇಂದ್ರ ಅಭಿಷೇಕ, ಶಾಂತಿ ಮಂತ್ರಪಾಠ, ಹವನ, ವಿಶ್ವಶಾಂತಿ ಮಹಾಯಜ್ಞ, ಮಧ್ಯಾಹ್ನ 3ಕ್ಕೆ ಮೆರವಣಿಗೆ ನಡೆಯುವುದು. ಪ್ರತಿದಿನ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು, ಸಮಾಜ ಪ್ರಮುಖರು, ನಾಡಿನ ಗಣ್ಯರು ಪಾಲ್ಗೊಳ್ಳುವರು.

ಇಂದು ನೇಚರ್ ಕ್ಲಬ್ನ ಉದ್ಘಾಟನೆ
ಹುಬ್ಬಳ್ಳಿ: ಪರಿಸರ ರಕ್ಷಣೆ ಹಾಗೂ ಜಾಗೃತಿ ಮೂಡಿಸುವ ಹುಬ್ಬಳ್ಳಿ ನೇಚರ್ ಕ್ಲಬ್ನ ಉದ್ಘಾಟನಾ ಸಮಾರಂಭ ಫೆ. 16 ರಂದು ಬೆಳಗ್ಗೆ 11ಕ್ಕೆ ವಿದ್ಯಾನಗರದ ಬಿವಿಬಿ ಕ್ಯಾಂಪನ್ನಲ್ಲಿರುವ ಐಎಂಎಸ್ಆರ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ. ಪರಿಸರವಾದಿ ಸುರೇಶ ಹೆಬ್ಳೀಕರ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಯಾಗಿ ಪಕ್ಷಿ ತಜ್ಞ ಡಾ. ಎಸ್.ವಿ. ನರಸಿಂಹನ್ ಆಗಮಿಸಲಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಬಿವಿಬಿ ಎಂಜಿನಿಯರಿಂಗ್ ಕಾಲೇಜ್ ಪ್ರಾಚಾರ್ಯ ಅಶೋಕ ಶೆಟ್ಟರ್, ಐಎಂಎಸ್ಆರ್ ನಿರ್ದೇಶಕ ಡಾ. ಪ್ರಸಾದ ರೂಢಗಿ, ಡಾ. ವಿ.ಬಿ. ನಿಟಾಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಪರಿಸರ ಜಾಗೃತಿ ಕುರಿತು ಸುರೇಶ ಹೆಬ್ಳೀಕರ, ಪಕ್ಷಿ ಸಂಕುಲ ಕುರಿತು ನರಸಿಂಹನ್ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


18ಕ್ಕೆ ಡಾ. ಶಾಲಿನಿಗೆ ಅಭಿನಂದನೆ
ಧಾರವಾಡ: ಇತ್ತೀಚೆಗೆ ನಿವೃತ್ತರಾದ ಡಾ. ಶಾಲಿನಿ ರಘುನಾಥ ಅವರಿಗೆ ಕರ್ನಾಟಕ ವಿವಿ ಜನಪದ ವಿಭಾಗದಿಂದ ಫೆ. 18ರಂದು ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಅಭಿನಂದನಾ ಸಮಾರಂಭ, ದೇಸಿ ಸಂಪದ ಶಾಲಿನಿ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅಭಿನಂದನಾ ಸಮಿತಿಯ ಸಂಚಾಲಕ ಡಾ. ಶಿವಾನಂದ ಗಾಳಿ ಮಾಹಿತಿ ನೀಡಿದರು. ಜೆಎಸ್ಸೆಸ್ ಸಂಸ್ಥೆಯ ಡಾ. ಅಜಿತ ಪ್ರಸಾದ ಮಾತನಾಡಿ, ಮಹಿಳಾ ವಿವಿ ಕುಲಪತಿ ಡಾ. ಮೀನಾ ಚಂದಾವರಕರ ಗ್ರಂಥ ಬಿಡುಗಡೆ ಮಾಡಲಿದ್ದು, ಆಂಧ್ರಪ್ರದೇಶದ ಕುಪ್ಪಂ ವಿವಿಯ ಜನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಂ.ಎನ್. ವೆಂಕಟೇಶ, ನಾಡೋಜ ಡಾ. ಚನ್ನವೀರ ಕಣವಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕಿ ಡಾ. ಹಸೀನಾ ಬೀಳಗಿ ಭಾಗವಹಿಸುತ್ತಾರೆ ಎಂದರು. ಪ್ರೊ. ನಾಗರಾಜ, ಡಾ. ಜಿ.ಜಿ. ಗರಗ ಹಾಗೂ ಡಾ. ಪ್ರಜ್ಞಾ ಮತ್ತಿಹಳ್ಳಿ ಈ ಸಂದರ್ಭದಲ್ಲಿ ಹಾಜರಿದ್ದರು.

ರೋಡ್ ಮ್ಯಾನರ್ಸ್ ಟು ಬೈಕ್ ರೈಡರ್ಸ್
ಧಾರವಾಡ: ಇಲ್ಲಿಯ ಮೃತ್ಯುಂಜಯ ಕಲಾ, ವಾಣಿಜ್ಯ ಹಾಗೂ ಬಿಬಿಎ ಕಾಲೇಜಿನಲ್ಲಿ ಇತ್ತೀಚೆಗೆ ರೆಡ್ ಕ್ರಾಸ್ ಘಟಕ ಹಾಗೂ ಹಿತೈಷಿ ಫೌಂಡೇಶನ್ ವತಿಯಿಂದ ರೋಡ್ ಮ್ಯಾನರ್ಸ್ ಟು ಬೈಕ್ ರೈಡರ್ಸ್ ವಿಷಯದ ಮೇಲೆ ಕಾರ್ಯಾಗಾರ ನಡೆಯಿತು. ಜೆಎಸ್ಸೆಸ್ ಐಟಿಐ ಕಾಲೇಜಿನ ಪ್ರಾಂಶುಪಾಲ ಮಹಾವೀರ ಉಪಾಧ್ಯೆ ಕಾರ್ಯಕ್ರಮ ಉದ್ಘಾಟಿಸಿ, ಭಾರತ ಸಮೃದ್ಧವಾದ ಯುವ ಸಂಪನ್ಮೂಲ ಹೊಂದಿದೆ. ಆದರೆ ಸೂಕ್ತ ಮಾರ್ಗದರ್ಶನವಿಲ್ಲದೆ ಆ ಸಂಪನ್ಮೂಲ ದಾರಿ ತಪ್ಪುತ್ತಿರುವುದು ದೇಶಕ್ಕೆ ಮಾರಕ. ಪ್ರಸ್ತುತ ದೇಶದಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಹೆಚ್ಚು ಜನರು ಅಪಘಾತದಿಂದಾಗಿ ಮರಣ ಹೊಂದುತ್ತಿದ್ದಾರೆ. ಅದರಲ್ಲಿ ಯುವಕರ ಪ್ರಮಾಣವೇ ಹೆಚ್ಚು. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಅಪಘಾತಗಳದ್ದೆ ಸಿಂಹಪಾಲು ಎಂಬುದು ನೋವಿನ ಸಂಗತಿ ಎಂದರು. ಸಂಚಾರಿ ಪೊಲೀಸ್ ಅಧಿಕಾರಿ ಮೋಹನ ಕವಲೂರ, ಸಿ.ಎಚ್. ಶೆಟ್ಟರ, ವಿಜಯಕುಮಾರ, ಕಿರಣಕುಮಾರ, ಅಶೋಕ ಸಬರವ, ಡಾ. ಉಮೇಶ ಹಳ್ಳಿಕೇರಿ, ಕೆ.ಎನ್. ಪುರೋಹಿತ ಇದ್ದರು.

ಸಮಾನ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ
ಧಾರವಾಡ: ಗುತ್ತಿಗೆ ಕಾರ್ಮಿಕರ ಸೇವೆ ಕಾಯಂ ಹಾಗೂ ಸಮಾನ ವೇತನಕ್ಕೆ ಒತ್ತಾಯಿಸಿ ಧಾರವಾಡ ಜಿಲ್ಲಾ ಎಸ್ಸಿ-ಎಸ್ಟಿ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ರಾಜ್ಯದ ಎಲ್ಲ ನಗರಗಳ ಪಾಲಿಕೆ ವ್ಯಾಪ್ತಿಗಳಲ್ಲಿ ಸುಮಾರು 20 ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಈ ಬಗ್ಗೆ ಸಂಘವು ಜುಲೈ ತಿಂಗಳಲ್ಲಿ ವಿಧಾನಸೌಧ ಚಲೋ ಚಳವಳಿ ನಡೆಸಿತ್ತು. ಮುಖ್ಯಮಂತ್ರಿ ಈ ಬಜೆಟ್ನಲ್ಲಿ ನಗರ, ಸ್ಥಳೀಯ ಸಂಸ್ಥೆಗಳಲ್ಲಿ ಹಂತ ಹಂತವಾಗಿ ಗುತ್ತಿಗೆ ಆಧಾರದ ಪದ್ಧತಿ ಕೈ ಬಿಡುವುದಾಗಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಈ ಮೊದಲು ದುಡಿಯುತ್ತಿರುವವರನ್ನೇ ಕಾಯಂಗೊಳಿಸಿ, ಕಾಯಂಗೊಳಿಸುವ ತನಕ ಸಮಾನ ವೇತನಕ್ಕೆ ಸಮಾನ ಸಂಬಳ ನೀಡಬೇಕೆಂದು ಮುಖಂಡರಾದ ಕದಕಪ್ಪ ಕೋಟಬಾಗಿ, ನಾಗಮ್ಮ ಗೊಲ್ಲರ, ಸಾವಕ್ಕ ಮಾದರ, ಸೋಮು ಮೊರಬದ, ಲಕ್ಷ್ಮವ್ವಾ ಬಿಂದಗಿ ಮನವಿಯಲ್ಲಿ ಆಗ್ರಹಿಸಿದ್ದಾರೆ.

ರಾಜ್ಯ ಮಟ್ಟದ ಮಹಿಳಾ ಜಾಗೃತಿ ಕಾರ್ಯಕ್ರಮ
ಧಾರವಾಡ : ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ರಾಜ್ಯ ಪರಿವಾರ ಮಹಿಳಾ ರಕ್ಷಣಾ ವೇದಿಕೆ ಶನಿವಾರ ಆಯೋಜಿಸಿದ್ದ ರಾಜ್ಯ ಮಹಿಳಾ ಸಮಾವೇಶ ಹಾಗೂ ಮಹಿಳಾ ಜಾಗೃತಿ ರಾಜ್ಯ ಪ್ರಶಸ್ತಿ ಸಮಾರಂಭವನ್ನು ತಾಲೂಕಿನ ಮನ್ಸೂರಿನ ಬಸವರಾಜ ದೇವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸುವುದು ಕೇವಲ ಶ್ರೀಮಂತರಿಗೆ ಮಾತ್ರ ಎನ್ನುವ ಸ್ಥಿತಿ ಉಂಟಾಗಿದ್ದು, ಕುಟುಂಬ ರಾಜಕೀಯವೂ ನಡೆಯುತ್ತಿದೆ. ಸಮಾಜದಲ್ಲಿ ಶ್ರೀಮಂತ ಮಹಿಳೆ ಸ್ವಾತಂತ್ರಳಾಗಿದ್ದಾಳೆಯೇ ಹೊರತು, ಬಡ ವರ್ಗದ ಮಹಿಳೆ ಇನ್ನೂ ಅಸ್ಪೃಶ್ಯಳಂತೆ ಬದುಕುತ್ತಿದ್ದಾಳೆ ಎಂದರು. ಬೆಳಗಾವಿ ಜಿಪಂ ಅಧ್ಯಕ್ಷ ರಮೇಶ ಪರವಿನಾಯ್ಕರ್ ಮಾತನಾಡಿದರು. ಲಕ್ಷ್ಮೀಕಾಂತ ಬೀಳಗಿ, ಶ್ರೀಕಾಂತ ಜಮ್ಮಿನಾಳ, ಹೇಮಾಕ್ಷಿ ಕಿರೇಸೂರ, ಸುಧೀರ ಕ್ಷತ್ರಿಯ, ರಮೇಶ ಪರವೀನಾಯ್ಕರ, ರಾಜು ದಮ್ಮಳ್ಳಿ, ಶಾಂತೇಶ ಚಿಕ್ಕಲಕಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಂದು ಅಮ್ಮಿನಬಾವಿ ಶಾಲೆ ಸ್ನೇಹಸಮ್ಮೇಳನ
ಅಮ್ಮಿನಬಾವಿ: ಗ್ರಾಮದಲ್ಲಿರುವ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಸುಶಿಲಾತಾಯಿ ಹಿರೇಮಠ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 23ನೇ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಫೆ. 16ರಂದು ನಡೆಯಲಿದೆ. ಬೆಳಿಗ್ಗೆ 9ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯರು ವಹಿಸಲಿದ್ದು, ಕಿರಿಯಶ್ರೀ ಅಭಿನವ ಶಾಂತಲಿಂಗ ಶ್ರೀಗಳು ಅಧ್ಯಕ್ಷತೆ ವಹಿಸುವರು. ಗ್ರಾಮದ ಬಸವರಾಜ ಕೊಳ್ಳಿ, ಶಿವಪ್ಪ ರುದ್ರಾಪುರ, ಚಂದ್ರು ಶೆಟ್ಟರ ಹಾಗೂ ವಿಜಯಾನಂದ ಇಟಗಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಗುರುಮೂರ್ತಿ ಯರಗಂಬಳಿಮಠ ಉಪನ್ಯಾಸ ನೀಡುವರು. ಸಂಜೆ 4ಕ್ಕೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗ್ರಾಮೀಣ ಬಿಇಒ ಶ್ರೀಶೈಲ ಕರಿಕಟ್ಟಿ ಉದ್ಘಾಟಿಸುವರು. ಮಹಮ್ಮದ ಜಾಕೀರ ಯಲಿಗಾರ, ನೀಲವ್ವ ಗಡಾದ, ಎಂ.ಸಿ. ಹುಲ್ಲೂರ, ಶಿವಾನಂದ ಹಿರೇಮಠ, ವಿ.ಬಿ. ಕೆಂಚನಗೌಡರ ಭಾಗವಹಿಸುತ್ತಾರೆ ಎಂದು ಸಂಚಾಲಕ ಟಿ.ಎಂ. ದೇಸಾಯಿ ತಿಳಿಸಿದ್ದಾರೆ.

ಅಳ್ನಾವರದಲ್ಲಿ ಕಾನೂನು ಜಾಗೃತಿ
ಅಳ್ನಾವರ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಕಾನೂನು ಸಾಕ್ಷರತಾ ಕಾರ್ಯಾಗಾರಕ್ಕೆ ದಿವಾಣಿ ನ್ಯಾಯಾಧೀಶ ಎಂ. ರಮೇಶರಾವ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಕಾನೂನಿನ ಕನಿಷ್ಠ ಜ್ಞಾನದ ಅಗತ್ಯವಿದೆ. ಏಕಕಾಲದಲ್ಲಿ ಎಲ್ಲರನ್ನೂ ಸುಧಾರಣೆ ಮಾಡುವುದು ಅಸಾಧ್ಯ. ಅದಕ್ಕೆ ಪೂರಕವಾಗಿ ಜನರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಉದ್ದೇಶ ಎಂದರು. ನ್ಯಾಯಾಧೀಶ ಎ.ಎ. ಶ್ರೀನಾಥ, ವಿ.ಡಿ. ಕಾಮರೆಡ್ಡಿ, ಡಾ. ಕೆ.ಎಲ್. ಉಮಾಪತಿ ಮಾತನಾಡಿದರು. ಪ್ರಾಚಾರ್ಯ ಬಿ.ಎ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ವಿ.ಜಿ. ಭಟ್ ಹಾಗೂ ರಾಜೇಶ ನಾವಲಗಿಮಠ ಉಪನ್ಯಾಸ ನೀಡಿದರು. ಅಪ್ಪಣ್ಣ ಕಡಿ, ಕೆ. ಶಿವಪ್ಪ, ಎಂ.ಡಿ. ವಕ್ಕುಂದ, ಅನುಪಮಾ ಢವಳೆ, ಸಿ.ಎನ್. ಹೊಂಬಾಳೆ ಇದ್ದರು. ಶ್ರೀಪಾಲ ಕುರಕುರಿ ಸ್ವಾಗತಿಸಿದರು. ಅರವಿಂದ ಅಮಲಝರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.