ಧಾರವಾಡ

ಜಾತಿ ಆಧಾರಿತ ಶಿಕ್ಷಣ ಸಂಸ್ಥೆ ಹುಟ್ಟಬಾರದು

Published On :

ಹುಬ್ಬಳ್ಳಿ: ಈ ಹಿಂದೆ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಘನ ಉದ್ದೇಶದಿಂದ ಹುಟ್ಟಿಕೊಳ್ಳುತ್ತಿದ್ದವು. ಆದರಿಂದು ಜಾತಿಗೊಂದು, ಸಮಾಜಕ್ಕೆ ಮತ್ತೊಂದರಂತೆ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಳ್ಳುತ್ತಿರುವುದು ಸ್ವಾಸ್ಥ್ಯಕರ ಬೆಳವಣಿಗೆಯಲ್ಲ ಎಂದು ಕೆಎಲ್ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಬೇಸರ ವ್ಯಕ್ತಪಡಿಸಿದರು.
ಇಲ್ಲಿನ ಜಗದ್ಗುರು ಗಂಗಾಧರೇಂದ್ರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ 2012-13ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಜಾತಿ ಆಧಾರಿತವಾಗಿ ಹುಟ್ಟಿಕೊಳ್ಳುವುದು ಉತ್ತಮ ಬೆಳವಣಿಗೆಯಲ್ಲ. ಇದಕ್ಕೆ ಕಡಿವಾಣ ಬೀಳಬೇಕಿದೆ ಎಂದರು.
ಸಪ್ತಋಷಿಗಳಿಂದ ಕೆಎಲ್ಇ ಶಿಕ್ಷಣ ಸಂಸ್ಥೆ 98 ವರ್ಷಗಳ ಹಿಂದೆ ಹುಟ್ಟಿತ್ತು. ಇದು ಹೆಸರಿಗೆ ಮಾತ್ರ ಲಿಂಗಾಯತ ಸೊಸೈಟಿ. ಆದರೆ ಇದು ಜಾತ್ಯತೀತ ಶಿಕ್ಷಣ ಸಂಸ್ಥೆ. ಎಲ್ಲ ಜಾತಿ, ಧರ್ಮೀಯರು ಕೆಎಲ್ಇಯಲ್ಲಿ ಓದುತ್ತಿದ್ದಾರೆ. ಕೆಎಲ್ಇಯಲ್ಲಿ ಓದಿರುವ ಲಕ್ಷಾಂತರ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದರು.
ಜಗದ್ಗುರು ಗಂಗಾಧರೇಂದ್ರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎಂಟು ರ್ಯಾಂಕ್ ಪಡೆದುಕೊಂಡಿರುವುದು ಕಾಲೇಜಿನ ಗುಣಮಟ್ಟಕ್ಕೆ ಹಿಡಿದ ಕನ್ನಡಿಯಾಗಿದೆ. ಇಲ್ಲಿನ ಶಿಕ್ಷಕರು ಬದ್ಧತೆಯಿಂದ ಸೇವೆ ಸಲ್ಲಿಸಿದ್ದರ ಪರಿಣಾಮವಾಗಿ ವಿದ್ಯಾರ್ಥಿಗಳು ಸಾಧನೆ ಗೈಯಲು ಸಾಧ್ಯವಾಗಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗುವಂತೆ ಶಿಕ್ಷಕರ ಹಾಗೂ ಪಾಲಕರ ಪ್ರೋತ್ಸಾಹಿಸಬೇಕು. ಆರೋಗ್ಯ ಸರಿಯಾಗಿದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಬೆಳಗಾವಿ ಕೆಎಲ್ಇ ಕಾಲೇಜ್ ಕ್ಯಾಂಪಸ್ನಲ್ಲಿ ಈಜುಗೊಳ ನಿರ್ಮಿಸಲಾಗುತ್ತಿದೆ. ಮುಂದಿನ ವರ್ಷ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ನಲ್ಲಿಯೂ ಈಜುಗೊಳ ನಿರ್ಮಿಸಲಾಗುವುದು ಎಂದರು.
ಸ್ಥಾನಿಕ ಆಡಳಿತ ಮಂಡಳಿ ನಿರ್ದೇಶಕ ಎಂ. ಎಸ್. ಬೆಂಬಳಗಿ, ಅನಿಲ್ ಪಟ್ಟೇದ, ಬಾಬಣ್ಣ ಮೆಟಗುಡ್ಡ, ವಿ. ವಿ. ಪಾಟೀಲ, ಮುಳಗುಂದ ಮತ್ತಿತರರಿದ್ದರು.

ದುಬೈನಲ್ಲಿ ಕೆಎಲ್ಇ ಕಾಲೇಜ್
ಕೆಎಲ್ಇ ಶಿಕ್ಷಣ ಸಂಸ್ಥೆ ದೇಶದಲ್ಲಷ್ಟೇ ವಿದೇಶದಲ್ಲಿಯೂ ವ್ಯಾಪಿಸಿದೆ. ಇದೀಗ ದುಬೈನಲ್ಲಿ ಕಾಲೇಜು ತೆರೆಯಲು ಮುಂದಾಗಿದೆ. ಶರದ ಪವಾರ್ ದುಬೈನ ಕಾಲೇಜು ಉದ್ಘಾಟನಾ ಸಮಾರಂಭಕ್ಕೆ ಬರಲು ಒಪ್ಪಿದ್ದಾರೆಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.