ಧಾರವಾಡ

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ

Published On :

ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 16
ನಿತ್ಯ ಹತ್ತಾರು ಕೊಳವೆ ಬಾವಿಗಳ ಕೊರೆತ, ಕೃಷಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆ ಹಾಗೂ ಅಂತರ್ಜಲ ಮರುಪೂರಣಕ್ಕಿಂತ ಬಳಕೆ ಹೆಚ್ಚಾಗಿರುವ ಪರಿಣಾಮ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ  ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ.
ಜಿಲ್ಲೆಯ ಕಲಘಟಗಿ ಹಾಗೂ ನವಲಗುಂದ ತಾಲೂಕು ಹೊರತುಪಡಿಸಿ ಧಾರವಾಡ, ಹುಬ್ಬಳ್ಳಿ ಹಾಗೂ ಕುಂದಗೋಳ ತಾಲೂಕುಗಳಲ್ಲಿ ಕಳೆದ 13 ವರ್ಷಗಳ ಅವಧಿಯಲ್ಲಿ ಅಂತರ್ಜಲ ಮಟ್ಟ ತೀವ್ರಗತಿಯಲ್ಲಿ ಇಳಿಕೆ ಕಂಡಿರುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದ ಅಂಕಿ ಅಂಶಗಳು ಸಾಬೀತುಪಡಿಸುತ್ತವೆ.
2001-2013ರ ವರೆಗೆ ಅಂದರೆ 13 ವರ್ಷಗಳಲ್ಲಿ ಸರಿಯಾಗಿ ಮಳೆಯಾದ ವರ್ಷ ಅಥವಾ ಅಂತರ್ಜಲ ಮರುಪೂರಣವಾದ ವರ್ಷಗಳಲ್ಲಿ ಅಂತರ್ಜಲದಲ್ಲಿ ಏರಿಕೆ ಕಂಡಿದ್ದು, ಬರ ಪರಿಸ್ಥಿತಿ ವರ್ಷಗಳಲ್ಲಿ ತೀವ್ರ ಇಳಿಕೆ ಕಂಡಿದೆ. 2001ರಲ್ಲಿ ಧಾರವಾಡ ತಾಲೂಕಿನ ಅಂತರ್ಜಲ ಮಟ್ಟ 11.25 ಮೀಟರ್ ಕೆಳಗಿತ್ತು. 2013ರಲ್ಲಿ 13 ವರ್ಷಗಳ ಅವಧಿಯಲ್ಲಿ ಅದು 19.22 ಮೀ.ಗೆ ಇಳಿಕೆಯಾಗಿದೆ. ಅದೇ ರೀತಿ ಹುಬ್ಬಳ್ಳಿ ತಾಲೂಕಿನಲ್ಲಿ 2001ರಲ್ಲಿ 16.56 ಮೀ.ನಷ್ಟು ಆಳವಿದ್ದ ಅಂತರ್ಜಲ ಮಟ್ಟ 16.71 ಮೀ. ಇಳಿಕೆ ಕಂಡಿದೆ. ಕುಂದಗೋಳ ತಾಲೂಕಿನಲ್ಲಿ 2001ರಲ್ಲಿ 10.06 ಮೀ. ಆಳದಲ್ಲಿದ್ದ ಅಂತರ್ಜಲ 2013ರಲ್ಲಿ ಅದು 29.50 ಮೀ.ಗೆ ತಲುಪಿದೆ.
ಇನ್ನು ಕಲಘಟಗಿ ಹಾಗೂ ನವಲಗುಂದ ತಾಲೂಕಿನಲ್ಲಿ ಅಂತರ್ಜಲ ಮಟ್ಟ ಸಮಾಧಾನಕರ ಸಂಗತಿಯಲ್ಲಿದೆ. ಅಂದರೆ, ಕಲಘಟಗಿಯಲ್ಲಿ 2001ರಲ್ಲಿ 23.93 ಮೀಟರಿಗಿದ್ದ ಅಂತರ್ಜಲ 2013ಕ್ಕೆ 12.96ಕ್ಕೆ ಏರಿಕೆಯಾಗಿದೆ, ಹಾಗೆಯೇ, ನವಲಗುಂದ ತಾಲೂಕಿನಲ್ಲಿ 13.06ರಿಂದ 10.25ಕ್ಕೆ ಏರಿಕೆ ಕಂಡಿದೆ. ಒಟ್ಟು ಧಾರವಾಡ ಜಿಲ್ಲೆಯ ಅಂತರ್ಜಲ ಮಟ್ಟ 2001ರಲ್ಲಿ 15.09 ಮೀ. ಇದ್ದರೆ, 2013ರ ಹೊತ್ತಿಗೆ 17.73ಕ್ಕೆ ಇಳಿಕೆಯಾಗಿರುವುದು ತಿಳಿದು ಬಂದಿದೆ.
ಅಸಮತೋಲನ...
ೃ ಅಂತರ್ಜಲ ಬಳಕೆ ಎಷ್ಟು ಮುಖ್ಯವೋ ಅದರ ಮರು ಪೂರೈಕೆಯೂ ಅಷ್ಟೇ ಮುಖ್ಯ. ಇತ್ತೀಚಿನ ವರ್ಷಗಳಲ್ಲಿ ಮಳೆಗಾಲವೂ ಏರುಪೇರಾಗುತ್ತಿದೆ. ಇದರಿಂದ ಅಂತರ್ಜಲ ಮರುಪೂರಣವಾಗದೇ ಅಸಮತೋಲನ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಕೃತಕ ಮರುಪೂರಣ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕಿದೆ.
ೃ ಮಳೆ ನೀರು ಕೊಯ್ಲು, ಚೆಕ್ ಡ್ಯಾಂ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಕೆರೆ ಹೂಳು ತೆಗೆಯುವುದು, ಮಳೆ ನೀರು ವ್ಯರ್ಥವಾಗದಂತೆ ತಡೆದು ಒಂದೆಡೆ ನಿಲ್ಲಿಸುವುದು, ಕೃಷಿ ಭೂಮಿಯಲ್ಲಿ ತುಂತುರು, ಹನಿ ನೀರಾವರಿಗೆ ಒತ್ತು ನೀಡುವುದು ಸೇರಿದಂತೆ ಹಲವು ಉಪಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ.
ೃ ಅಂತರ್ಜಲ ಪುನರ್ ಮೌಲೀಕರಣ ಸಮಿತಿ ಸೂಚಿಸಿದ ನಿಯಮಾನುಸಾರ ಅಂತರ್ಜಲ ಲಭ್ಯತೆಯಲ್ಲಿ ಶೇ. 70ಕ್ಕಿಂತ ಕಡಿಮೆ ಬಳಕೆ ಇರುವ ಪ್ರದೇಶವನ್ನು ಸುರಕ್ಷಿತ ಪ್ರದೇಶಗಳು, ಶೇ. 70ರಿಂದ 90ರ ವರೆಗೆ ಅರೆ ಕ್ಲಿಷ್ಟಕರ ಹಾಗೂ ಶೇ. 90ರಿಂದ ಶೇ. 100ರ ವರೆಗೆ ಕ್ಲಿಷ್ಟಕರ, ಶೇ. 100ಕ್ಕಿಂತ ಹೆಚ್ಚು ಬಳಕೆ ಇರುವ ಪ್ರದೇಶವನ್ನು ಮಿತಿಮೀರಿದ ಪ್ರದೇಶವೆಂದು ವರ್ಗೀಕರಣಗೊಳಿಸಲಾಗಿದೆ. ಧಾರವಾಡ ಜಿಲ್ಲೆಯು ಸದ್ಯ ಅರೆ ಕ್ಲಿಷ್ಟಕರ ಸ್ಥಿತಿಯಲ್ಲಿದ್ದು, ಸರಿಯಾಗಿ ನೀರಿನ ಬಳಸಿದರೆ ಸುರಕ್ಷಿತ ಪ್ರದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಉಪಕ್ರಮಗಳ ಮೂಲಕ ನೀರಿನ ಬಳಕೆಯನ್ನು ಸರಿಯಾಗಿ ಮಾಡುವುದನ್ನು ಕಲಿಯಬೇಕಿದೆ.
ಕುಸಿತಕ್ಕೆ ಕಾರಣಗಳೇನು?
ಅಂತರ್ಜಲ ಮಟ್ಟ ಕುಸಿಯಲು ಕಾರಣಗಳೇನು ಎಂಬುದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಟಿ. ಮಹಾಂತೇಶ ಹೀಗೆ ಹೇಳುತ್ತಾರೆ - ಅರಣ್ಯ ಭೂಮಿ ನಾಶ, ಭೂಮಿ ಬಂಜರು ಆದ ಬಳಿಕ ಮೇಲಿನ ಮಣ್ಣು ಕೊಚ್ಚಿ ಹೋಗಿ ಅಂತರ್ಜಲ ಮರುಪೂರಣ ಕಡಿಮೆಯಾಗಬಹುದು. ಅನೇಕ ವರ್ಷಗಳ ಕಾಲ ಮಳೆ ಬೀಳದೆಯೂ ಕಡಿಮೆಯಾಗಬಹುದು. ಇವು ನೈಸರ್ಗಿಕ ಕಾರಣಗಳಾದರೆ, ತೀವ್ರಗೊಂಡ ಕೃಷಿ ಚಟುವಟಿಕೆ ಮತ್ತು ವಿಸ್ತಾರಗೊಂಡ ನೀರಾವರಿ ಪ್ರದೇಶದಲ್ಲಿ ಹೆಚ್ಚು ನೀರು ಬೇಡುವ ಬತ್ತ, ಕಬ್ಬು ಬೆಳೆಗಳನ್ನು ಬೆಳೆಯುವುದು, ವರ್ಷ ಪೂರ್ತಿ ನೀರಾವರಿ ಬೆಳೆಗಳನ್ನು ಬೆಳೆಯಲು ಯತ್ನಿಸುವುದು, ಅವೈಜ್ಞಾನಿಕ ಪದ್ಧತಿಯಿಂದ ಹೆಚ್ಚಿನ ನೀರು ಉಪಯೋಗ, ಒಂದೇ ಜಮೀನಿನಲ್ಲಿ ಹಲವು ಕೊಳವೆ ಬಾವಿಗಳ ಕೊರೆಯಿಸುವುದು ಸೇರಿದಂತೆ ಇನ್ನಿತರೆ ಕಾರಣಗಳು ಮಾನವ ಪ್ರೇರಿತವಾಗುತ್ತವೆ.

 ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.