ಧಾರವಾಡ

ಜಿ 2 ಮನೆಗಳಿಗೆ ನಾಮ್‌ಕೆವಾಸ್ತೆ ಒಪ್ಪಿಗೆ!

Published On :

ಹುಬ್ಬಳ್ಳಿ: ಮಹಾನಗರ ಪಾಲಿಕೆ ಯಲ್ಲಾಪುರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಜಿ 2 ಅಪಾರ್ಟ್‌ಮೆಂಟ್‌ನ ಯೋಜನಾ ಗಾತ್ರ ಎಷ್ಟಿರಬೇಕು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲು ಎಂತಹ ಕಚ್ಚಾ ಸಾಮಗ್ರಿಗಳ ಬಳಕೆ ಮಾಡಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ.
ಸೂರುರಹಿತರಿಗೆ ಶಾಶ್ವತ ಹಾಗೂ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡುವುದಕ್ಕೆ ಮಹಾನಗರದಲ್ಲಿ ಪ್ರಥಮ ಬಾರಿಗೆ ಜಿ 2 ಮಾದರಿ ಅಪಾರ್ಟ್‌ಮೆಂಟ್ ನಿರ್ಮಿಸಲು ಪಾಲಿಕೆ ಮುಂದಾಗಿದ್ದು ಸಹಜವಾಗಿಯೇ ಫಲಾನುಭವಿಗಳಲ್ಲಿ ಸಂತಸವನ್ನುಂಟು ಮಾಡಿದೆ. ಪ್ರತ್ಯೇಕವಾಗಿ ವಾಸಿಸುವುದಕ್ಕಿಂತಲೂ ಅಪಾರ್ಟ್‌ಮೆಂಟ್‌ನಲ್ಲಿರುವುದು ಹೆಚ್ಚು ಸುರಕ್ಷಿತ ಎಂಬ ಭಾವನೆಯೂ ಇದಕ್ಕೆ ಮತ್ತೊಂದು ಕಾರಣ. ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭೆ ಕ್ಷೇತ್ರದಲ್ಲಿ ವಾಸವಾಗಿರುವ ಹಾಗೂ ಈ ಪೂರ್ವದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆ ಪಡೆದುಕೊಂಡವರೂ ಸಹಾ ಇದೀಗ ಅಪಾರ್ಟ್‌ಮೆಂಟ್‌ನಲ್ಲೂ ಇನ್ನೊಂದು ಮನೆ ಹೊಂದಬೇಕೆಂಬ ಉದ್ದೇಶದಿಂದ ಕುಟುಂಬದ ಬೇರೊಬ್ಬ ಸದಸ್ಯರ ಹೆಸರಿನಲ್ಲಿ ಅರ್ಜಿ ಪಡೆದು ಮನೆಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಮಾತುಕತೆ: ಜಿ 2 ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಸಾದ ಅಬ್ಬಯ್ಯ, ವಸತಿ ಸಚಿವರೊಂದಿಗೆ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಜಿ 2 ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಸರ್ಕಾರ ಎಷ್ಟು ಅನುದಾನ ನೀಡಲಿದೆ, ಫಲಾನುಭವಿಗಳು ಎಷ್ಟು ಹಣ ಸಂದಾಯ ಮಾಡಬೇಕು ಹಾಗೂ ಫಲಾನುಭವಿಗಳ ಆಯ್ಕೆಗೆ ಯಾವ ಮಾನದಂಡಗಳನ್ನು ಅನುಸರಿಸಬೇಕು ಎಂಬುದು ಸೇರಿದಂತೆ ಮತ್ತಿತರ ಅಂಶಗಳ ಬಗ್ಗೆ ಕಿಂಚಿತ್ತೂ ಚರ್ಚೆ ಆಗಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಆದರೆ, ಅಪಾರ್ಟ್‌ಮೆಂಟ್ ನಿರ್ಮಾಣಕಷ್ಟೇ ಸಚಿವರು ಗ್ರೀನ್ ಸಿಗ್ನಲ್ ತೋರಿದ್ದಾರೆ. ಇದೇ ಕಾರಣಕ್ಕಾಗಿಯೇ, ಶಾಸಕರ ನಿರ್ದೇಶನದಂತೆ ಪಾಲಿಕೆ ಜಿ 2 ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಪಡೆಯಲಿಚ್ಛಿಸುತ್ತಿರುವವರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಅರ್ಜಿಗಳನ್ನಾಧರಿಸಿ: 3 ಸಾವಿರ ಮನೆಗಳನ್ನು ನಿರ್ಮಿಸಬೇಕೆಂಬ ಉದ್ದೇಶ ಪಾಲಿಕೆ ಹೊಂದಿದೆ. ಆದರೆ, ಈ ಯೋಜನೆ ಅಡಿಯಲ್ಲಿ ಮನೆ ಗಿಟ್ಟಿಸಿಕೊಳ್ಳಬೇಕೆಂಬ ಉದ್ದೇಶದಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಬಹುದೆಂದು ಅಂದಾಜಿಸಲಾಗುತ್ತಿದೆ.
ಶಾಶ್ವತ ಮನೆ ಅಥವಾ ನಿವೇಶನಗಳನ್ನು ಹೊಂದದೇ ಇರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ ಎಂದು ಬೇರೆಯಾಗಿ ಹೇಳಬೇಕಾಗಿಲ್ಲ. ಈ ಪೈಕಿ ಕೇವಲ 3 ಸಾವಿರ ಫಲಾನುಭವಿಗಳಿಗಷ್ಟೇ ಮನೆ ನೀಡಲು ಪಾಲಿಕೆ ಮುಂದಾದರೆ ಸೂರುರಹಿತರಿಂದ ತೀವ್ರತರಹದ ಪ್ರತಿಭಟನೆ ಎದುರಿಸಬೇಕಾದ ಪರಿಸ್ಥಿತಿ ಎದುರಾದರೂ ಅಚ್ಚರಿಪಡಬೇಕಿಲ್ಲ.
ಸಚಿವರೊಂದಿಗೆ ಮುಖಾಮುಖಿ
ಇಷ್ಟೆಲ್ಲ ಪ್ರಕ್ರಿಯೆ ಮುಗಿದ ಬಳಿಕ ಶಾಸಕ ಅಬ್ಬಯ್ಯ, ವಸತಿ ಸಚಿವರನ್ನು ಭೇಟಿಯಾಗಿ ಜಿ 2 ಮಾದರಿಯಲ್ಲಿ ನಿರ್ಮಿಸುತ್ತಿರುವ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಧರಿಸಿರುವಂತೆ 3 ಸಾವಿರ ಫ್ಲ್ಯಾಟ್‌ಗಳನ್ನು ನಿರ್ಮಿಸಬೇಕೋ ಅಥವಾ ಆ ಸಂಖ್ಯೆ ಹೆಚ್ಚಿಸಬೇಕೋ ಎನ್ನುವುದು ನಿರ್ಧಾರವಾಗಲಿದೆ. ಪ್ರತಿ ಫ್ಲ್ಯಾಟ್ ಯಾವ ಅಳತೆಯದ್ದಾಗಿರಬೇಕು, ನೀಲನಕ್ಷೆ ತಯಾರಿಸಲು ಯಾವ ಏಜೆನ್ಸಿಗೆ ನೀಡಬೇಕು, ಫ್ಲ್ಯಾಟ್‌ಗಳು ಯಾವ ಸ್ವರೂಪದ್ದಾಗಿರಬೇಕು ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ.
ನೀತಿ ಸಂಹಿತೆ
ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಎದುರಾಗಲಿರುವುದರಿಂದ ಜಿ 2 ಅಪಾರ್ಟ್‌ಮೆಂಟ್‌ನ ನಿರ್ಮಾಣಕ್ಕೆ ಅಡ್ಡಿ ಮಾಡಲಿದೆ ಎಂದು ಬೇರೆ ಹೇಳಬೇಕಿಲ್ಲ. ಈ ಎಲ್ಲ ಸೂಕ್ಷ್ಮತೆ ಗಮನಿಸಿದಾಗ ಜನಪ್ರತಿನಿಧಿಗಳು ಸಾಕಷ್ಟು ಇಚ್ಛಾಶಕ್ತಿ ಪ್ರದರ್ಶಿಸಿದಾಗಲೂ ಉದ್ದೇಶಿಸಿತ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಕನಿಷ್ಠ ಒಂದೆರಡು ವರ್ಷ ಕಾಲವಕಾಶ ಬೇಕಾಗುವುದು ಗ್ಯಾರಂಟಿ. ಸೂರುರಹಿತರಿಗೆ ಶಾಶ್ವತ ಮನೆ ನಿರ್ಮಿಸಿಕೊಡಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ. ಅರ್ಹ ಎಲ್ಲ ಫಲಾನುಭವಿಗಳಿಗೂ ಈ ಯೋಜನೆ ತಲುಪುವಂತೆ ಶಾಸಕ ಪ್ರಸಾದ ಅಬ್ಬಯ್ಯ ಸೇರಿದಂತೆ ಅಧಿಕಾರಿಗಳು ಚಾಣಾಕ್ಷತನ ಪ್ರದರ್ಶಿಸಬೇಕಿದೆ.
28ರ ನಂತರ...
ಪ್ರತಿನಿತ್ಯ ಆಯಾ ವಲಯ ಕಚೇರಿಗಳಲ್ಲಿ ಹಾಗೂ ಶಾಸಕರ ಕಚೇರಿಯಿಂದ ವಿತರಣೆಯಾಗುತ್ತಿರುವ ಅರ್ಜಿಗಳ ಮಾಹಿತಿಯನ್ನು ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ. ಫೆ. 28ರ ವರೆಗೆ ಸಲ್ಲಿಕೆಯಾಗುವ ಒಟ್ಟು ಅರ್ಜಿಗಳನ್ನು ಪಾಲಿಕೆ ಅಧಿಕಾರಿಗಳ ತಂಡ, ಆಯಾ ಫಲಾನುಭವಿಗಳು ಸಲ್ಲಿಸಿರುವ ದಾಖಲಾತಿ ಹಾಗೂ ಅವರ ಶಾಶ್ವತ ಮನೆ ಅಥವಾ ನಿವೇಶನ ಹೊಂದದೇ ಇರುವುದನ್ನು ಖಚಿತಪಡಿಸಿಕೊಂಡು ಅಂತಿಮ ವರದಿಯನ್ನು ಶಾಸಕರಿಗೆ ಸಲ್ಲಿಸಲಿದ್ದಾರೆ.


-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.