ನಾಳೆಯಿಂದ ವಿಜ್ಞಾನ ರಸಪ್ರಶ್ನೆ
ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಕಡೆಗಿನ ಒಲವು ಹೆಚ್ಚಿಸುವುದಕ್ಕಾಗಿ ರಾಜ್ಯ ವಿಜ್ಞಾನ ಪರಿಷತ್ ವತಿಯಿಂದ ಫೆ. 21 ಮತ್ತು 22ರಂದು ರಾಜ್ಯಾದ್ಯಂತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಈ ಹಮ್ಮಿಕೊಂಡಿರುವ ಈ ರಸಪ್ರಶ್ನೆ ಸ್ಪರ್ಧೆಯು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಫೆ. 21ರಂದು ಬೆಳಗ್ಗೆ 10ಕ್ಕೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್ನ ಅಧ್ಯಕ್ಷ ಪ್ರೊ. ಎಸ್.ವಿ. ಸಂಕನೂರ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ವರ್ಷ ಡಿಸೆಂಬರ್ನಲ್ಲಿ ಈ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಸರ್ಕಾರ ವಿಳಂಬವಾಗಿ ಅನುದಾನ ಮಂಜೂರು ಮಾಡಿದ್ದರಿಂದ ತಡವಾಯಿತು ಎಂದು ಸ್ಪಷ್ಟೀಕರಣ ನೀಡಿದ ಅವರು, ಲಿಖಿತ ಸುತ್ತಿನ ರಸಪ್ರಶ್ನೆಯನ್ನು ಗ್ರಾಮೀಣ ಹಾಗೂ ಶಹರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರುವ ಗ್ರಾಮೀಣ ಮತ್ತು ಶಹರ ವಿಭಾಗದ 4 ತಂಡಗಳನ್ನು ಫೆ. 22ರಂದು ಜರುಗುವ ಮೌಖಿಕ ಸುತ್ತಿನ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ತಲಾ ರು. 1 ಸಾವಿರ ಹಾಗೂ ತೃತೀಯ ಸ್ಥಾನ ಪಡೆದವರಿಗೆ ರು. 500 ನಗದು ಬಹುಮಾನದ ಜೊತೆಗೆ ಪ್ರಮಾಣ ಪತ್ರ ನೀಡಲಾಗುವುದು. ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಭಾಗದ ಒಂದು ತಂಡ ಹಾಗೂ ಶಹರ ವಿಭಾಗದ ಒಂದು ತಂಡವನ್ನು ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಪುರಸ್ಕರಿಸಲಾಗುವುದು. ರಾಜ್ಯಮಟ್ಟದ ಸ್ಪರ್ಧೆ ಮಾ. 1ರಂದು ಬೆಂಗಳೂರಿನ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ಮೆಂಟ್ ನಂ.-67, ಪದ್ಮನಾಭ ನಗರ, ಬನಶಂಕರಿ 2ನೇ ಹಂತದಲ್ಲಿ ನಡೆಸಲಾಗುವುದು. ಮೊದಲ ಮೂರು ಸ್ಥಾನ ಪಡೆಯುವ ತಂಡಗಳಿಗೆ ಕ್ರಮವಾಗಿ ರು. 10 ಸಾವಿರ, ರು. 7 ಸಾವಿರ ಹಾಗೂ ರು. 5 ಸಾವಿರ ನಗದು ಬಹುಮಾನ ನೀಡಿ, ಪ್ರಮಾಣ ಪತ್ರ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿ ಮತ್ತು ಶಿಕ್ಷಕರ ಪ್ರಯಾಣ ವೆಚ್ಚವನ್ನು ಶಾಲಾ ಸಂಚಿತ ನಿಧಿಯಿಂದ ಭರಿಸಲು ಡಿಎಸ್ಇಆರ್ಟಿ ನಿರ್ದೇಶಕರು ಅನುಮತಿ ನೀಡಿದ್ದಾರೆ. ರಾಜ್ಯಮಟ್ಟದಲ್ಲಿ ಭಾಗವಹಿಸುವ ವಿದ್ಯಾರ್ಥಿ, ಶಿಕ್ಷಕರ ಪ್ರಯಾಣ, ಊಟ, ವಸತಿ ವೆಚ್ಚವನ್ನು ರಾಜ್ಯ ವಿಜ್ಞಾನ ಪರಿಷತ್ ಭರಿಸಲಿದೆ ಎಂದು ಪ್ರೊ. ಸಂಕನೂರ ವಿವರಿಸಿದರು. ಪರಿಷತ್ತಿನ ರಾಜ್ಯ ಸಂಚಾಲಕ ಆರ್.ಎಸ್. ಪಾಟೀಲ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

