ಸಂದಿಗ್ಧ ಸ್ಥಿತಿಯಲ್ಲಿ ಮಾಧ್ಯಮ ಕ್ಷೇತ್ರ: ಪಾಪು
ಧಾರವಾಡ: ದಾರಿ ಯಾವುದಯ್ಯ ವೈಕುಂಠಕೆ ಎಂದು ದಾಸರು ಪ್ರಶ್ನಿಸಿದಂತೆ ಪತ್ರಿಕೋದ್ಯಮ ಇಂದು ಸಂದಿಗ್ಧ ಸ್ಥಿತಿಯಲ್ಲಿದ್ದು, ಮಾಧ್ಯಮದ ಮಿತ್ರರೂ ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನಾಡೋಜ ಡಾ ಪಾಟೀಲ ಪುಟ್ಟಪ್ಪ ಹೇಳಿದರು.
ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ ಎ.ಎಸ್. ಬಾಲಸುಬ್ರಹ್ಮಣ್ಯ ಅವರ ನಿವೃತ್ತಿ ಹಿನ್ನೆಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಹಾಗೂ ಗುರುವಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ತಂತ್ರಜ್ಞಾದ ಪರಿಣಾಮವಾಗಿ ಪತ್ರಿಕೋದ್ಯಮ ಹಲವು ಸಂಕಷ್ಟ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಅವುಗಳನ್ನು ಪತ್ರಕರ್ತರು ಉಪಾಯವಾಗಿ ಎದುರಿಸಬೇಕು. ಅನೇಕರು ಅಡುಗೆ ಮಾಡುತ್ತಾರೆ. ಆದರೆ, ರುಚಿಕಟ್ಟಾಗಿ ಆಡುಗೆಯನ್ನೇ ಎಲ್ಲರೂ ಬಯಸುತ್ತಾರೆ. ಒಂದು ಪತ್ರಿಕೆ ಎಲ್ಲ ವರ್ಗದ ಜನರನ್ನು ಹಿಡಿದಿಟ್ಟು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
'ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮದ ಪಾತ್ರ' ಕುರಿತು ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಸುಗತ ಶ್ರೀನಿವಾಸರಾಜು ಮಾತನಾಡಿ, ಸಮಾಜವನ್ನೇ ಬದಲಾಯಿಸುವ, ತಿದ್ದುವ ಧ್ಯೇಯವಿಟ್ಟುಕೊಂಡು ಸಾಗುತ್ತಿರುವ ಮಾಧ್ಯಮಕ್ಕೆ ಏಕಸೂತ್ರವಿಲ್ಲದಂತಾಗಿದೆ. ಏನು ಸಂದೇಶ ನೀಡಬೇಕೆನ್ನುವ ನಿರ್ದಿಷ್ಟತೆಯೂ ಮಾಧ್ಯಮಕ್ಕಿಲ್ಲ. ತಂತ್ರಜ್ಞಾನದ ದೃಷ್ಟಿಯಿಂದ ಗಣನೀಯ ಬದಲಾವಣೆ ಕಂಡರೂ, ಗುಣಮಟ್ಟದಲ್ಲಿ ಮಾತ್ರ ಕ್ರಾಂತಿಕಾರಿಯಾಗಿಲ್ಲ. ಬದಲಾವಣೆ ಎಂದರೆ, ರಾಜಕೀಯಕ್ಕೆ ಸೀಮಿತವೆ? ಸಾಮಾಜಿಕ, ಶೈಕ್ಷಣಿಕ, ಖಾಸಗಿ ಬದುಕನ್ನು ಅದು ಒಳಗೊಂಡಿದೆಯೇ ಎಂಬ ಗೊಂದಲಗಳು ಎಲ್ಲ ಪತ್ರಕರ್ತರನ್ನು ಕಾಡುತ್ತಿವೆ ಎಂದರು. ಮಾಧ್ಯಮದ ಹರವು ಹೆಚ್ಚಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ಗಳಲ್ಲೂ ಮಾಹಿತಿಗಳು ಲಭ್ಯವಾಗುತ್ತಿದ್ದು, ಅವೂ ಮಾಧ್ಯಮದ ಭಾಗಗಳೇ ಆಗಿವೆ. ಈ ತಾಂತ್ರಿಕ ಆವಿಷ್ಕಾರಗಳ ಕುರಿತು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ಗಮನ ಹರಿಸುವುದು ಅಗತ್ಯ. ಬದಲಾವಣೆ ಎಂಬುದು ಇನ್ನೂ ಗೊಂದಲದ ಗೂಡಾಗೇ ಉಳಿಯುತ್ತದೆ ಎಂದು ಹೇಳಿದರು. ಬದಲಾಗುತ್ತಿರುವ ಭಾರತದಲ್ಲಿ ಮಾಧ್ಯಮವೂ ಬದಲಾಗುತ್ತಿದೆ. ಓದುಗರನ್ನು, ಆಕರ್ಷಿಸಲು ಅನೇಕ ಪುರವಣಿಗಳನ್ನೂ ಪ್ರಕಟಿಸುವ ಪತ್ರಿಕೆಗಳನ್ನು, ಸಮಾಜದ ಯುವಜನತೆ, ಮಕ್ಕಳು, ವೃದ್ಧರಾದಿಯಾಗಿ ಸಮಾಜದ ಎಲ್ಲ ಸ್ತರದವರನ್ನೂ ತಲುಪಲು ವಿಭಿನ್ನ ಪ್ರಯೋಗಕ್ಕೆ ಇಳಿಯುತ್ತಿದ್ದರೂ, ಮಾಧ್ಯಮದ ಮೂಲ ಪಾತ್ರದ ಕುರಿತು ಗೊಂದಲಗಳೇ ಇವೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳ ಮಾಹಿತಿಯುಳ್ಳ ನೂತನ ಜಾಲತಾಣ ಹಾಗೂ ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಅವರ ಅಭಿನಂದನ ಗ್ರಂಥ 'ಮಾಧ್ಯಮ ಮನ್ವಂತರ' ಬಿಡುಗಡೆಗೊಳಿಸಲಾಯಿತು. ಪ್ರೊ. ಎ.ಎಸ್. ಬಾಲಸುಬ್ರಹ್ಮಣ್ಯ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಎಂ.ಎಂ. ಪಾಟೀಲ್ ಸ್ವಾಗತಿಸಿದರು. ಡಾ. ಓಂಕಾರ ಕಾಕಡೆ ನಿರೂಪಿಸಿದರು. ಶ್ರೀಪಾದ ಯರೇಕುಪ್ಪಿ ವಂದಿಸಿದರು. ನಾಡೋಜ ಡಾ. ಚನ್ನವೀರ ಕಣವಿ, ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಸವರಾಜ ಕಂಬಿ, ಕುಲಪತಿ ಡಾ. ಎಚ್.ಬಿ. ವಾಲೀಕಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

