ಮಾರಿಕಾಂಬಾ ಜಾತ್ರೆ ಶಿರಸಿಯಲ್ಲಿ ಭರದ ಸಿದ್ಧತೆ
ಕನ್ನಡಪ್ರಭ ವಾರ್ತೆ, ಶಿರಸಿ, ಫೆ. 24
ಶಿರಸಿ ಮಾರಿಕಾಂಬಾ ಜಾತ್ರೆ ಈ ವರ್ಷ ಮಾ. 11ರಿಂದ 18ರ ವರೆಗೆ ನಡೆಯಲಿದೆ. ಜಾತ್ರೆಯ ಪ್ರಯುಕ್ತ ಮಾರಿಕಾಂಬಾ ದೇವಸ್ಥಾನದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಜಾತ್ರೆಯಲ್ಲಿ 8 ದಿನಗಳ ಕಾಲ ಲಕ್ಷಾಂತರ ಭಕ್ತರು ಪಾಲ್ಗೊಂಡು ಮಾರಿಕಾಂಬಾ ದೇವಿಯ ದರ್ಶನ ಪಡೆಯಲಿದ್ದಾರೆ. ಇದಕ್ಕಾಗಿ ಆಗಮಿಸುವ ಭಕ್ತರಿಗೆ ನೀಡಲು ದೇವಾಲಯದಲ್ಲಿ ಕುಂಕುಮ ಪ್ರಸಾದ ಪೊಟ್ಟಣದ ತಯಾರಿ ಜೋರಾಗಿ ನಡೆಯುತ್ತಿದೆ. ಕುಂಕುಮ ಪೊಟ್ಟಣ ಸಿದ್ಧಪಡಿಸುವ ರು. 80 ಸಾವಿರ ಮೊತ್ತದ ಯಂತ್ರವೊಂದನ್ನು ಅಳವಡಿಸಲಾಗಿದೆ.
ಇಬ್ಬರು ಕೆಲಸಗಾರರು 15 ದಿನಗಳಿಂದ ಪ್ರಸಾದ ಪೊಟ್ಟಣ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಯಂತ್ರ ತಾಸಿಗೆ 2 ಸಾವಿರ ಕುಂಕುಮ ಪ್ಯಾಕೆಟ್ ರೆಡಿ ಮಾಡುತ್ತದೆ. ಈಗಾಗಲೇ 6 ಲಕ್ಷದಷ್ಟು ಪ್ಯಾಕೆಟ್ ತಯಾರಾಗಿದ್ದು, ಇನ್ನೂ ಆರೇಳು ಲಕ್ಷ ಪ್ಯಾಕೆಟ್ಗಳು ಬೇಕಾಗಬಹುದು ಎಂದು ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಎಂ. ಹೆಗಡೆ ಮಾಹಿತಿ ನೀಡಿದ್ದಾರೆ.
ಮೂವರು ಮಹಿಳೆಯರು ದೊಡ್ಡ ಪ್ರಮಾಣದ ಕುಂಕುಮ ಪೊಟ್ಟಣಗಳನ್ನು ಸಿದ್ಧಪಡಿಸುತ್ತಿದ್ದಾರೆ. ಚಿಕ್ಕ ಪ್ಯಾಕೆಟ್ಗಳನ್ನು ದೇವಾಲಯದ ವತಿಯಿಂದ ಭಕ್ತರಿಗೆ ಉಚಿತವಾಗಿ ನೀಡಲಾಗುತ್ತದೆ. ದೇವಾಲಯದ ಮಹಡಿ ಮೇಲಿನ ಸಭಾಂಗಣದ ಕಟ್ಟಿಗೆಗಳಿಗೆ ಈ ಬಾರಿ ಪೇಂಟಿಂಗ್ ಮಾಡಲಾಗಿದೆ. 150 ವರ್ಷ ಹಳೆಯದಾದ ಕಟ್ಟಿಗೆಗಳು ಗಟ್ಟಿಮುಟ್ಟಾಗಿದ್ದು, ಅವುಗಳಿಗೆ ಬಣ್ಣ ಬಳಿದು ಆಕರ್ಷಕಗೊಳಿಸಲಾಗಿದೆ.
ದೇವಾಲಯದ ಆವರಣದಲ್ಲಿ 40ಕ್ಕೂ ಹೆಚ್ಚು ಕೆಲಸಗಾರರು ಗೋಡೆಗೆ ಬಣ್ಣ ಬಳಿಯುವ, ದೇವಾಲಯದಲ್ಲಿರುವ ಅಪರೂಪದ ಕಾವಿಕಲೆಯ ಬಣ್ಣವನ್ನು ಅಚ್ಚುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನಾಲ್ಕೈದು ಶತಮಾನಗಳಷ್ಟು ಹಳೆಯದಾದ ದೇವಸ್ಥಾನ ವಿಶಿಷ್ಟವಾದ ಶೈಲಿಯಲ್ಲಿ ನಿರ್ಮಾಣವಾಗಿದೆ. ದೇವಾಲಯದ ಮುಂಭಾಗದಲ್ಲಿ ವಿಶೇಷ ಚಿತ್ತಾರಗಳಿದ್ದು, ಅವುಗಳಿಗೂ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಮಾರಿಕಾಂಬಾ ದೇವಿ ಆಸೀನಳಾಗುವ ಬಿಡಕಿ ಬೈಲಿನ ಜಾತ್ರಾ ಗದ್ದುಗೆಯಲ್ಲಿ ಚಪ್ಪರ ಕಟ್ಟುವ ಕೆಲಸ ಈಗಾಗಲೇ ಪ್ರಾರಂಭಗೊಂಡಿದೆ. ಜೊತೆಗೆ ಬಿಡಕಿ ಬೈಲಿನಲ್ಲಿರುವ ಅಂಗಡಿಕಾರರು ಜಾತ್ರೆ ಹಿನ್ನೆಲೆಯಲ್ಲಿ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಿದ್ದಾರೆ.
ಇದೇ ಮೊದಲ ಬಾರಿಗೆ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತರಿಗೆ ದೇವಾಲಯದ ವತಿಯಿಂದ ಮಧ್ಯಾಹ್ನದ ಅನ್ನಪ್ರಸಾದ ವ್ಯವಸ್ಥೆಗೊಳಿಸಲಾಗುತ್ತಿದೆ. ಅದಕ್ಕಾಗಿ 130 ಜನರ ತಂಡ ರಚನೆಯಾಗಿದ್ದು, ಪ್ರತಿದಿನ ದೇವಾಲಯದ ಅನ್ನ ಛತ್ರದ ಸಮೀಪ 15 ಸಾವಿರ ಜನರಿಗೆ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆಸಕ್ತ ಭಕ್ತರು ಅನ್ನದಾನಕ್ಕೆ ನೆರವು ನೀಡಲು ಸಹ ಅವಕಾಶ ಒದಗಿಸಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಜಾತ್ರೆಯ ಹಿನ್ನೆಲೆಯಲ್ಲಿ ಬಸ್ಗಳ ಸೇವೆಯನ್ನು ಕೆಲವೇ ದಿನಗಳಲ್ಲಿ ಹಳೆಯ ಬಸ್ ನಿಲ್ದಾಣದಿಂದ ವಿಕಾಸಾಶ್ರಮ ಬಯಲಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಾರದ ಸಂತೆಯನ್ನೂ ವಿಕಾಸಾಶ್ರಮ ಬಯಲಿನಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ತಿಳಿಸಿದ್ದಾರೆ.
ಜಾತ್ರೆಯ ಪ್ರಯುಕ್ತ ಶಿರಸಿ ಕಳೆಗಟ್ಟುತ್ತಿದ್ದು, ದಿನದಿಂದ ದಿನಕ್ಕೆ ರಂಗನ್ನು ಪಡೆದುಕೊಳ್ಳುತ್ತಿದೆ. ಜಾತ್ರೆಗೆ ಕೆಲವೇ ದಿನಗಳು ಉಳಿದಿದ್ದು, ಅದಕ್ಕಾಗಿ ಸಮರೋಪಾದಿಯ ಸಿದ್ಧತೆಗಳು ನಡೆದಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

