ಮೋದಿ ರ್ಯಾಲಿಗೆ ಪೊಲೀಸ್ ಸರ್ಪಗಾವಲು: ರವೀಂದ್ರ
ಹುಬ್ಬಳ್ಳಿ: ಫೆ. 28ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ರ್ಯಾಲಿ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸಂಚಾರ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಹಾನಗರ ಪೊಲೀಸ್ ಆಯುಕ್ತ ರವೀಂದ್ರಪ್ರಸಾದ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ನ ಇಬ್ಬರು ಐಜಿಗಳು, ರಾಜ್ಯದ 7 ಎಸ್ಪಿ, 41 ಡಿವೈಎಸ್ಪಿ, 138 ಪೊಲೀಸ್ ಇನ್ಸ್ಪೆಕ್ಟರ್, 232 ಸಬ್ ಇನ್ಸ್ಪೆಕ್ಟರ್, 366 ಎಎಸ್ಐ, 872 ಮುಖ್ಯ ಪೇದೆ, 2200 ಪೇದೆ, 61 ಮಹಿಳಾ ಮುಖ್ಯ ಪೇದೆ, 127 ಮಹಿಳಾ ಪೇದೆ, 300 ಹೋಮ್ಗಾರ್ಡ್. ಇದಲ್ಲದೇ 20 ಕೆಎಸ್ಆರ್ಪಿ ಪ್ಲಟೂನ್, 7 ಚೆಕ್ಪೋಸ್ಟ್, 41 ಮೊಬೈಲ್ ಸಂಚಾರಿ ವಾಹನ ನಿಯೋಜಿಸಲಾಗುವುದು ಎಂದರು. ಇದಲ್ಲದೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ 4 ಸಿಸಿ ಕ್ಯಾಮೆರಾ, 10 ಬಾಂಬ್ ನಿಷ್ಕ್ರಿಯ ದಳ, 10 ಶ್ವಾನದಳ ಕರೆಸಿಕೊಳ್ಳಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ: ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹತ್ತಿರವಾಗಿ ನಾಲ್ಕು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಈ ಪಾರ್ಕಿಂಗ್ ಸ್ಥಳಕ್ಕೆ ಬರಲು ಮಾರ್ಗವನ್ನೂ ಸೂಚಿಸಲಾಗಿದೆ.
ಶಿಗ್ಗಾಂವಿ-ಹಾವೇರಿ ಮಾರ್ಗವಾಗಿ ಬರುವ ಭಾರಿ ವಾಹನಗಳು ಗಬ್ಬೂರ ಕ್ರಾಸ್ ನಂತರ ಕಾರವಾರ ರಸ್ತೆಯಲ್ಲಿ ಬಲಕ್ಕೆ ತಿರುವು ಪಡೆಯದೇ ನೇರವಾಗಿ ತಾರಿಹಾಳ ಬ್ರಿಜ್ ವರೆಗೆ ಬಂದು ಅಲ್ಲಿಂದ ಗೋಕುಲ ರಸ್ತೆ ಮುಖಾಂತರ ಹೊಸೂರ ವೃತ್ತ ಮಾರ್ಗವಾಗಿ ಚೆನ್ನಮ್ಮ ವೃತ್ತದಿಂದ ಸರ್ವೋದಯ ವೃತ್ತದ ಮೂಲಕ ಸುಳ್ಳ ಗ್ರಾಮದ ರಸ್ತೆಯ ಸಾಯಿ ಪಾರ್ಕ್ (ಪಾರ್ಕಿಂಗ್ ಸ್ಥಳ ನಂ.2 )ಖಾಲಿ ನಿವೇಶನದಲ್ಲಿ ವಾಹನ ನಿಲುಗಡೆ ಮಾಡಬೇಕು.
ಕಾರವಾರ ಹಾಗೂ ಬೆಳಗಾವಿ ಮಾರ್ಗವಾಗಿ ಬರುವ ವಾಹನಗಳು ತಾರಿಹಾಳ ಬ್ರಿಜ್ನಿಂದ ಗೋಕುಲ ರಸ್ತೆಯಲ್ಲಿ ಸಾಗಿ ಹೊಸೂರ ವೃತ್ತದ ಮೂಲಕವಾಗಿ ಸರ್ವೋದಯ ಸರ್ಕಲ್ನಿಂದ ಸುಳ್ಳ ರಸ್ತೆಗೆ ಆಗಮಿಸಿ ಸಾಯಿ ಪಾರ್ಕ್ (ಪಾರ್ಕಿಂಗ್ ಸ್ಥಳ ನಂ.2 )ಖಾಲಿ ನಿವೇಶನದಲ್ಲಿ ವಾಹನ ನಿಲುಗಡೆ ಮಾಡಬೇಕು.
ಪಿಬಿ ರಸ್ತೆಯಲ್ಲಿ ಧಾರವಾಡ ಮಾರ್ಗವಾಗಿ ಬರುವವರು ಉಣಕಲ್ ಶ್ರೀನಗರ ಕ್ರಾಸ್ನಿಂದ ಗಂಗೂಬಾಯಿ ಹಾನಗಲ್ ಗುರುಕುಲ ಮಾರ್ಗವಾಗಿ ಸುಳ್ಳ ರಸ್ತೆ ಹಾಯ್ದು ಕುಸುಗಲ್ ರಸ್ತೆಯ ಸಾಯಿ ಪಾರ್ಕ್ (ಪಾರ್ಕಿಂಗ್ ಸ್ಥಳ ನಂ.3)ನಲ್ಲಿ ವಾಹನ ನಿಲುಗಡೆ ಮಾಡಬೇಕು.
ಧಾರವಾಡ ಜಿಲ್ಲೆಯ ಸವದತ್ತಿ ಮಾರ್ಗವಾಗಿ ಬರುವವರು ಧಾರವಾಡ ಹೆಬ್ಬಳ್ಳಿ ಅಗಸಿಯಿಂದ ಶಿವಳ್ಳಿ ಮುಖಾಂತರ ಕುಸುಗಲ್ ರಸ್ತೆಗೆ ಬಂದು ಸಾಯಿ ಪಾರ್ಕ್ (ಪಾರ್ಕಿಂಗ್ ಸ್ಥಳ ನಂ.3)ನಲ್ಲಿ ವಾಹನ ನಿಲುಗಡೆ ಮಾಡಬೇಕು.
ಬಿಜಾಪುರ ಮಾರ್ಗವಾಗಿ ಬರುವ ವಾಹನಗಳನ್ನು ಕುಸುಗಲ್ ರಸ್ತೆಯ ಪಾರ್ಕಿಂಗ್ ಸ್ಥಳ ನಂ.1ರಲ್ಲಿ ವಾಹನ ನಿಲುಗಡೆ ಮಾಡಬೇಕು.
ಗದಗ ರಸ್ತೆಯಿಂದ ಬರುವ ವಾಹನಗಳು ಕುಸುಗಲ್ ರೇಲ್ವೆ ನಿಲ್ದಾಣ ರಸ್ತೆ ಮುಖಾಂತರ ಕುಸುಗಲ್ ರಸ್ತೆಯಲ್ಲಿ ನಿರ್ಮಿಸಿರುವ ಪಾರ್ಕಿಗ್ ಸ್ಥಳ ನಂ. 1ರಲ್ಲಿ ವಾಹನ ನಿಲುಗಡೆ ಮಾಡಬೇಕು.
ಹುಬ್ಬಳ್ಳಿ ನಗರದೊಳಗಿನ ವಾಹನ ಸವಾರರು ಹುಬ್ಬಳ್ಳಿ-ನವಲಗುಂದ ರಸ್ತೆಯಲ್ಲಿ ಸಾಗಿ ಶ್ರೀನಿವಾಸ ಗಾರ್ಡ್ನ್ ಪಕ್ಕದ ಪಾರ್ಕಿಂಗ್ ಸ್ಥಳ ನಂ. 4ರಲ್ಲಿ ವಾಹನ ನಿಲುಗಡೆ ಮಾಡಬೇಕು.
ಹುಬ್ಬಳ್ಳಿ-ಬಿಜಾಪುರ ರಸ್ತೆಯ ಆಕ್ಸ್ಫರ್ಡ್ ಕಾಲೇಜು ಮೈದಾನ ಮತ್ತು ಸುತ್ತಲಿನ 500 ಮೀಟರ್ ವ್ಯಾಪ್ತಿಯಲ್ಲಿ ಫೆ. 27ರ ಸಂಜೆ 6ರಿಂದ ಫೆ. 28ರಂದು ಸಂಜೆ ಕಾರ್ಯಕ್ರಮ ಮುಗಿವರೆಗೆ ಯಾವುದೇ ವಾಹನ ಪ್ರವೇಶ ನಿಷೇಧಿಸಲಾಗಿದೆ. ಫೆ. 28ರ ಮಧ್ಯಾಹ್ನ 12ರಿಂದ ಸಂಜೆ 7ರ ವರೆಗೆ ನವಲಗುಂದ, ಗದಗ ಹಾಗೂ ಕಾರವಾರ ಮಾರ್ಗದಲ್ಲಿ ಸಂಚರಿಸುವ ಭಾರಿ ಸರಕು ವಾಹನಗಳನ್ನು ಹುಬ್ಬಳ್ಳಿ ನಗರದೊಳಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಫೆ. 28ರ ಮಧ್ಯಾಹ್ನ 12ರಿಂದ ಸಂಜೆ 7ರ ವರೆಗೆ ಕೇಶ್ವಾಪುರ ಸರ್ವೋದಯ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳದ ವರೆಗೆ ವಾಹನ ನಿಲುಗಡೆ ನಿಷೇಧ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

